ದುಬೈ: ಅನಿವಾಸಿ ಕನ್ನಡಿಗರ ಯುವ ಪೀಳಿಗೆಯನ್ನು ಕನ್ನಡ ಭಾಷಾ ಸಾಕ್ಷರರನ್ನಾಗಿಸುವ ಉದ್ದೇಶದಿಂದ “ಕನ್ನಡ ಮಿತ್ರರು ಯುಎಇ” ಕಳೆದ 11 ವರ್ಷಗಳಿಂದ ಉಚಿತವಾಗಿ ನಡೆಸುತ್ತಿರುವ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆ ಎಂಬ ಖ್ಯಾತಿಗೆ ಒಳಗಾಗಿರುವ “ಕನ್ನಡ ಪಾಠ ಶಾಲೆ ದುಬೈ”ಯ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 27ರಂದು ದುಬೈನಲ್ಲಿ ಆಯೋಜಿಸಲಾಗಿದೆ.

ದುಬೈಯ ಅಲ್ ನಾಸರ್ ಲೀಶರ್ ಲ್ಯಾಂಡ್’ನಲ್ಲಿ ಬೆಳಗ್ಗೆ 10:30ರಿಂದ ಸಂಜೆ 6:30ರ ವರಗೆ ನಡೆಯಲಿದ್ದು, ‘ಕನ್ನಡ ಮಿತ್ರ ಪ್ರಶಸ್ತಿ’ ಪ್ರದಾನ ಹಾಗು ಚತುರಶಾಲಾ ಯೋಜನೆ ದೇಣಿಗೆ ಕಾರ್ಯಕ್ರಮವು ನಡೆಯಲಿದೆ.

ಪ್ರಸ್ತುತ 1250 ಮಕ್ಕಳಿಗೆ ದುಬೈನಲ್ಲಿ ಕನ್ನಡ ಭಾಷೆ ಕಲಿಸುತ್ತಿರುವ ದುಬೈ ಕನ್ನಡ ಪಾಠ ಶಾಲೆಯ ಈ ವಾರ್ಷಿಕೋತ್ಸವದಲ್ಲಿ ಶಾಲೆಯ ಮಕ್ಕಳು ಮತ್ತು ಶಿಕ್ಷಕಿಯರು ಸಂಪೂರ್ಣ ಕಾರ್ಯಕ್ರಮಗಳನ್ನು ಕನ್ನಡ ಭಾಷೆಯಲ್ಲಿಯೇ ನಡೆಸಿಕೊಡಲಿದ್ದಾರೆ ಎಂದು ದುಬೈ ಕನ್ನಡ ಪಾಠ ಶಾಲೆ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದ್ದಾರೆ.