ದುಬೈ: ವಿಶ್ವದಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲು ಜನ ಕಾತುರದಲ್ಲಿ ಕಾಯುತ್ತಿದ್ದು, ಹತ್ತಲವು ಕಾರ್ಯಕ್ರಮಗಳ ಮೂಲಕ ಹೊಸ ವರ್ಷವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಈ ಮಧ್ಯೆ ಯುಎಇಯಲ್ಲಿ 2025ಅನ್ನು ಸ್ವಾಗತಿಸಲು ಪ್ರವಾಸಿಗರು ಸೇರಿದಂತೆ ಇಲ್ಲಿನ ಜನ ಕಾತುರದಿಂದ ಸಜ್ಜಾಗಿದ್ದಾರೆ. ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಉಮ್ಮುಲ್ ಖುವೈನ್, ರಾಸ್ ಅಲ್ ಖೈಮಾ ಮತ್ತು ಫುಜೈರಾದಲ್ಲಿ ಮಂಗಳವಾರ ರಾತ್ರಿ ಸಿಡಿಮದ್ದು ಪ್ರದರ್ಶನ, ಲೇಸರ್ ಪ್ರದರ್ಶನಗಳು ಮತ್ತು ಡ್ರೋನ್ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೊಸ ವರ್ಷವನ್ನು ದುಬೈ, ಅಬುಧಾಬಿ ಸೇರಿದಂತೆ ಯುಎಇಯ ನಾನಾ ಭಾಗಗಳಲ್ಲಿ ವಿಭಿನ್ನವಾಗಿ ಸ್ವಾಗತಿಸಲು ವೇದಿಕೆಗಳು ಈಗಾಗಾಲೆ ಸಿದ್ಧಗೊಂಡಿವೆ. ವಿಶ್ವದ ನಾನಾ ಭಾಗಗಳಿಂದ ಬರುವ ಪ್ರವಾಸಿಗರು ದುಬೈಯಲ್ಲಿ ಹೊಸ ವರ್ಷ ಆಚರಿಸಲು ಸಿದ್ಧರಾಗಿದ್ದು, ಅದರಲ್ಲಿಯೂ ದುಬೈಯ ಬುರ್ಜ್ ಖಲೀಫಾದಲ್ಲಿ ನಡೆಯುವ ಸಿಡಿಮದ್ದು ಪ್ರದರ್ಶನವನ್ನು ಕಣ್ತುಂಬಿಸಿಕೊಳ್ಳಲು ಜನ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ವಿಶ್ವದ ಅತೀ ಎತ್ತರದ ಕಟ್ಟಡವೆಂಬ ಬಿರುದು ಹೊತ್ತ ದುಬೈಯಯ ಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟುತ್ತದೆ. ಬುರ್ಜ್ ಖಲೀಫಾದಲ್ಲಿ ಪ್ರತಿ ವರ್ಷವೂ ಹೊಸ ವರ್ಷದ ಆಚರಣೆಯನ್ನು ವಿಶಿಷ್ಟವಾಗಿ, ವಿನೂತನವಾಗಿ ಆಚರಿಸಲಾಗುತ್ತದೆ. ಹೊಸ ವರ್ಷದಂದು ಇಲ್ಲಿ ನಡೆಯುವ ಸಿಡಿಮದ್ದು ಪ್ರದರ್ಶನ, ಲೇಸರ್ ಲೈಟ್’ನ ವಿಸ್ಮಯವನ್ನು ನೋಡಲು ಲಕ್ಷ ಲಕ್ಷ ಮಂದಿ ಸೇರುತ್ತಾರೆ.

ವಿಶಿಷ್ಟವಾಗಿ ಹೊಸ ವರ್ಷದ ಆಚರಣೆಯಿಂದಲೇ ಬುರ್ಜ್ ಖಲೀಫಾ ಗಿನ್ನಿಸ್ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಆಚರಣೆ ಅತೀ ವಿಜ್ರಂಭನೆಯಿಂದ ನಡೆಸಲು ಈಗಾಗಲೇ ಸಿದ್ಧತೆ ಕೈಕೊಳ್ಳಲಾಗಿದೆ. ಅದನ್ನು ಕಣ್ತುಂಬಿಕೊಳ್ಳಲು ಬುರ್ಜ್ ಖಲೀಫಾ ಹಾಗು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ರೂಮ್ ಬುಕ್ ಮಾಡಲಾಗುತ್ತಿದೆ.

ಬುರ್ಜ್ ಖಲೀಫಾದಲ್ಲಿ 11 ದೇಶಗಳ 110 ತಜ್ಞರಿಂದ 9 ನಿಮಿಷಗಳ ಲೇಸರ್ ಲೈಟ್ ಪ್ರದರ್ಶನ
ಬುರ್ಜ್ ಖಲೀಫಾದಲ್ಲಿ ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ‘ಬಿಯಾಂಡ್ ಡ್ರೀಮ್ಸ್’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸಂಗೀತ ಕಾರ್ಯಕ್ರಮ, 200 ಅತ್ಯಾಧುನಿಕ ಲೇಸರ್ ಲೈಟ್’ಗಳ ಚಿತ್ತಾರ ಮೂಡಿಬರಲಿದ್ದು, 11 ದೇಶಗಳ 110 ತಜ್ಞರಿಂದ 9 ನಿಮಿಷಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಇನ್ನುಳಿದಂತೆ ದುಬೈಯ ಅಟ್ಲಾಂಟಿಸ್ ದಿ ಪಾಮ್, ಅಲ್ ಸೀಫ್, ದುಬೈ ಮರೀನಾ ಬೀಚ್, ಬ್ಲೂವಾಟರ್ಸ್ ಐಲ್ಯಾಂಡ್’ನಲ್ಲಿಯೂ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ. ಹತ್ತ, ಗ್ಲೋಬಲ್ ವಿಲೇಜ್, ದುಬೈ ಫ್ರೇಮ್, ದುಬೈ ಡಿಸೈನ್ ಡಿಸ್ಟ್ರಿಕ್ಟ್, ದುಬೈ ಫೆಸ್ಟಿವಲ್ ಸಿಟಿ, J1 ಬೀಚ್’ನಲ್ಲಿ ಹೊಸ ವರ್ಷದ ಕಾರ್ಯಕ್ರಮ ನಡೆಯಲಿದೆ.
ಅಬುಧಾಬಿ ಕೊರ್ನಿಶ್’ನ 8 ಕಿಮೀ ವರಗೆ ಸಿಡಿಮದ್ದು ಪ್ರದರ್ಶನ
ಅಬುಧಾಬಿಯಲ್ಲಿ ಅಬುಧಾಬಿ ಕೊರ್ನಿಶ್’ನ ಸಮುದ್ರ ತೀರದ 8 ಕಿಮೀ ವರಗೆ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ. ಜೊತೆಗೆ ಪ್ರೇಕ್ಷಣೀಯ ಸ್ಥಳಗಳಾದ ಲುಲು ದ್ವೀಪದಲ್ಲಿರುವ ‘ಮದರ್ ಆಫ್ ದಿ ನೇಷನ್ ಫೆಸ್ಟಿವಲ್’, ಬೀಚ್ ಹಾಗು ಮನಾರ್ ಅಬುಧಾಬಿಯಲ್ಲೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಯಾಸ್ ದ್ವೀಪದ ಎರಡು ಕಡೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಶೇಖ್ ಝಾಯಿದ್ ಉತ್ಸವದಲ್ಲಿ ವಿಶ್ವದ ಅತಿದೊಡ್ಡ ಸಿಡಿಮದ್ದು ಪ್ರದರ್ಶನ
ಅಬುಧಾಬಿಯ ಅಲ್ ವತ್ಬಾದಲ್ಲಿ ನಡೆಯುತ್ತಿರುವ ಶೇಖ್ ಝಾಯಿದ್ ಉತ್ಸವದಲ್ಲಿ 50 ನಿಮಿಷಗಳ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಇದು ವಿಶ್ವದ ಅತಿದೊಡ್ಡ ಸಿಡಿಮದ್ದು ಪ್ರದರ್ಶನವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈವರೆಗಿನ ಆರು ಗಿನ್ನೆಸ್ ವರ್ಲ್ಡ್ ರೆಕಾರ್ಡನ್ನು ಮುರಿಯುವ ಉದ್ದೇಶದಿಂದ ಈ ಸಿಡಿಮದ್ದು ಪ್ರದರ್ಶನವನ್ನು ಆಯೋಜಿಸಲಾಗಿದೆ. ಜೊತೆಗೆ 20 ನಿಮಿಷಗಳ ಕಾಲ ಆಕಾಶದಲ್ಲಿ ವೈಮಾನಿಕ ಚಿತ್ರಗಳನ್ನು ಮೂಡಿಸುವ 6,000-ಡ್ರೋನ್ ಪ್ರದರ್ಶನವು ನಡೆಯಲಿದೆ.

ಅಬುಧಾಬಿಯ ಲಿವಾ ಎಂಬಲ್ಲಿ ‘ಲಿವಾ ಫೆಸ್ಟಿವಲ್’, ಅಲ್ ಮರಿಯಾ ದ್ವೀಪದಲ್ಲಿ ಸಿಡಿಮದ್ದು ಹಾಗು ಲೇಸರ್ ಪ್ರದರ್ಶನ ನಡೆಯಲಿದೆ. ಅಲ್ ಐನ್’ನ ಹಝಾ ಬಿನ್ ಝಾಯೆದ್ ಸ್ಟೇಡಿಯಂನಲ್ಲಿ, ಅಲ್ ದಫ್ರಾದ ಮದೀನತ್ ಝಾಯಿದ್ ಪಬ್ಲಿಕ್ ಪಾರ್ಕ್ ಹಾಗು ಘಿಯಾಥಿಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿದೆ.



ಶಾರ್ಜಾದ ಅಲ್ ಮಜಾಝ್ ಅಥವಾ ಖೋರ್ಫಕ್ಕನ್ ಬೀಚ್’ನಲ್ಲಿ 10 ನಿಮಿಷಗಳ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಅಜ್ಮಾನ್ ಕೊರ್ನಿಶ್, ಬೊಲೆ ವರ್ಡ್ ಎದುರಿನ ಅಲ್ ಜರ್ಫ್ ಪ್ರದೇಶದಲ್ಲಿ, ರಾಸ್ ಅಲ್ ಖೈಮಾ’ದ ಅಲ್ ಮರ್ಜಾನ್ ದ್ವೀಪ ಮತ್ತು ಅಲ್ ಹಮ್ರಾದಲ್ಲಿ ಹೊಸ ವರ್ಷದ ಆಚರಣೆ ವೇಳೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಜೊತೆಗೆ ಉಮ್ಮುಲ್ ಖುವೈನ್, ಫುಜೈರಾದಲ್ಲಿ ಕೂಡ ಹೊಸ ವರ್ಷ ಆಚರಣೆಗೆ ಸಿದ್ಧತೆಗಳು ನಡೆಸಲಾಗಿದೆ.