ರಿಯಾದ್: ಸೌದಿ ಅರೇಬಿಯಾದ ಹಲವು ಕಡೆಗಳಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆ-ಗಾಳಿ ಬೀಸುತ್ತಿದ್ದು, ಹಠಾತ್ ಪ್ರವಾಹಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹವಾಮಾನ ಇಲಾಖೆ(NCM) ರೆಡ್ ಅಲರ್ಟ್ ಘೋಷಿಸಿದೆ.

ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಸೋಮವಾರ ಆಲಿಕಲ್ಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಕ್ಕಾ, ಮದೀನಾ, ಜಿದ್ದಾ ಸೇರಿದಂತೆ ಹಲವು ನಗರಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದ ಜನ ಪರದಾಟ ನಡೆಸುವಂತಾಯಿತು.

ಮಳೆಯಿಂದಾಗಿ ಇಲ್ಲಿನ ಹಲವು ನಗರಗಳ ರಸ್ತೆಗಳು ಜಲಾವೃತಗೊಂಡಿದ್ದು, ಬಲವಾಗಿ ಬೀಸುತ್ತಿರುವ ಗಾಳಿಯೊಂದಿಗೆ ಧೂಳು ಎದ್ದ ಕಾರಣ ಕಡಿಮೆ ಗೋಚರತೆ ಕಾರಣದಿಂದ ವಾಹನ ಸವಾರರು ಸಂಕಷ್ಟವನ್ನು ಎದುರಿಸಬೇಕಾಯಿತು. ಗುಡುಗು ಸಹಿತ ಭಾರೀ ಮಳೆ, ಧೂಳು-ಗಾಳಿ ಜನವರಿ 10ರ ಬುಧವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಪ್ರಾಂತ್ಯದ ಅಲ್-ಜೌಫ್, ಹೈಲ್, ಮದೀನಾ, ಖಾಸಿಮ್, ಪೂರ್ವ ಪ್ರಾಂತ್ಯದ ಮಕ್ಕಾ, ಅಲ್-ಬಹಾ ಮತ್ತು ತಬೂಕ್ ಸೇರಿದಂತೆ ಹಲವೆಡೆ ಆಲಿಕಲ್ಲು ಮತ್ತು ಧೂಳು ಗಾಳಿಯೊಂದಿಗೆ ಭಾರೀ ಗುಡುಗು ಸಹಿತ ಮಳೆ ಸುರಿದಿದೆ.
ಗಲ್ಫ್ ಮಾಧ್ಯಮದ ವರದಿಗಳ ಪ್ರಕಾರ, ಸೌದಿ ಅರೇಬಿಯಾದ ಮಕ್ಕಾ ಹಾಗು ಮದೀನಾದಲ್ಲಿ ಭಾರೀ ಮಳೆ, ಗಾಳಿ ಮತ್ತು ಹಠಾತ್ ಪ್ರವಾಹದಿಂದ ಬೀದಿಗಳೆಲ್ಲಾ ಜಲಾವೃತಗೊಂಡಿದ್ದು, ನದಿಗಳಂತೆ ಭಾಸವಾಗುತ್ತಿದೆ. ಇಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆ, ಗಾಳಿ, ಜಲಾವೃತಗೊಂಡಿರುವ ರಸ್ತೆಗಳಿಂದ ವಾಹನ ಚಾಲಕರು ಮತ್ತು ಜನರಿಗೆ ಅಪಾಯವಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳತ್ತ ಹೋಗದಂತೆ ಇಲ್ಲಿನ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.