ಯುಎಸ್‌ಎನಿಲ್ಲದ ಕ್ಯಾಲಿಫೋರ್ನಿಯಾ ಅಗ್ನಿ ದುರಂತ! ಬೆಂಕಿ ಹರಡಲು ಕಾರಣಗಳೇನು?

ನಿಲ್ಲದ ಕ್ಯಾಲಿಫೋರ್ನಿಯಾ ಅಗ್ನಿ ದುರಂತ! ಬೆಂಕಿ ಹರಡಲು ಕಾರಣಗಳೇನು?

ಕನ್ನಡಿಗನ ಕಣ್ಣಲ್ಲಿ ಕಂಡ ಅಮೆರಿಕ ಕಾಡ್ಗಿಚ್ಚು....

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜೆಲಿಸ್ ನಗರದ ಸುತ್ತ ಜನವರಿ 7, 2025 ರಂದು ಭುಗಿಲೆದ್ದ ಭೀಷಣ ಅಗ್ನಿಯು 9ನೇ ದಿನಕ್ಕೆ ಕಾಲಿಡುತ್ತಿದ್ದರೂ ಸಹ ಇನ್ನೂ ಉಗ್ರತೆಯಿಂದ ಮುಂದುವರೆದಿದೆ.

ಈ ಅಗ್ನಿಯನ್ನು ಮಣಿಸಲು ಅಮೆರಿಕ ಸರಕಾರದ ಪ್ರಯತ್ನಗಳೆಲ್ಲವೂ ನಿಸರ್ಗದ ಕೋಪದ ಮುಂದೆ ಇಲ್ಲಿಯವರೆಗೂ ವಿಫಲವಾಗಿವೆ. ಪ್ರತಿದಿನವೂ 70 ರಿಂದ 100 ಮೈಲಿ ವೇಗದಲ್ಲಿ ಹೆಚ್ಚುತ್ತಿರುವ ಗಾಳಿಯ ತೀವ್ರತೆ ಅಗ್ನಿಶಾಮಕ ಯೋಧರ ಪ್ರಯತ್ನವನ್ನು ಜಟಿಲ ಮಾಡಿದೆ.

Photo: PTI

ಲಾಸ್ ಏಂಜೆಲಿಸ್ ನಗರವು ಕ್ಯಾಲಿಫೋರ್ನಿಯಾದ ದಕ್ಷಿಣ ಭಾಗದಲ್ಲಿದ್ದು ಹಾಲಿವುಡ್ ಚಲನಚಿತ್ರರಂಗದ ಹೃದಯ ಭಾಗವಾಗಿದೆ.ಉತ್ತಮ ಹವಾಗುಣ ಹಾಗೂ ನೈಸರ್ಗಿಕ ಸೌಂದರ್ಯತೆಗೆ ಹೆಸರುವಾಸಿಯಾದ ಲಾಸ್ ಏಂಜಿಲಿಸ್ ವಿಶ್ವದ ಅತಿ ಶ್ರೀಮಂತರ ತಾಣವಾಗಿರುವುದಲ್ಲದೆ ಇಲ್ಲಿನ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರಿದೆ.

ಹಾಲಿವುಡ್ ಪ್ರಸಿದ್ಧ ನಟ ನಟಿಯರು, ತಂತ್ರಜ್ಞರು, ಸಂಗೀತ ಕ್ಷೇತ್ರದ ಹಾಡುಗಾರರು, ಪ್ರಪಂಚದ ಹಣವಂತರ ಮನೆಗಳನ್ನೊಳಗೊಂಡಂತಹ ಲಾಸ್ ಏಂಜಿಲಿಸ್ ನಗರದ ‘ಪ್ಯಾಲಿಸೆಡ್ಸ್, ‘ಈಟನ್’ ಮತ್ತು ‘ಹರ್ಸ್ಟ್’ ಈ ಮೂರು ಭಾಗಗಳು ಸುಟ್ಟು ಕರಕಲಾಗುತ್ತಿವೆ. ಹಲವಾರು ಮಿಲಿಯನ್ ಡಾಲರ್ ಬೆಲೆಬಾಳುವ ಮನೆಗಳು, ಮಹಲುಗಳು, ಸ್ಟುಡಿಯೋಗಳು, ನೈಸರ್ಗಿಕ ಎಸ್ಟೇಟ್ ಗಳು, ವ್ಯಾಪಾರ ಮುಂಗಟ್ಟುಗಳು ಬೂದಿಯಾಗುತ್ತಿವೆ. ಈ ಹಣವಂತರು ಜೀವ ಉಳಿಸಿಕೊಳ್ಳಲು ತಮ್ಮ ಆಸ್ತಿಗಳನ್ನು ಬಿಟ್ಟು ಓಡಿ ಹೋಗಿ ಬಾಡಿಗೆ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಬಾಡಿಗೆ ಮನೆಗಳಿಗೆ ಬೇಡಿಕೆ ಎಷ್ಟು ಜಾಸ್ತಿಯಾಗಿದೆಯೆಂದರೆ, ಕೆಲವೊಂದು ಬಾಡಿಗೆ ಮಾಲೀಕರು ತಿಂಗಳಿಗೆ 40 ಸಾವಿರ ಡಾಲರ್ ಬಾಡಿಗೆ ಕೇಳುತ್ತಿದ್ದಾರೆಂದು ವರದಿಯಾಗುತ್ತಿದೆ!

Photo: PTI

ಜನವರಿ 15ರಯುವವರೆಗೂ 25 ಜನರು ಈ ಅಗ್ನಿಗೆ ಆಹುತಿಯಾಗಿದ್ದಾರೆ ಹಾಗೂ ಒಟ್ಟು ನಷ್ಟವು 50 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಇಲ್ಲಿಯವರೆಗೂ ಬೆಂಕಿಯಲ್ಲಿ ಸುಮಾರು 40,588 ಎಕರೆ ಪ್ರದೇಶ ಹಾಗೂ 12,300 ಕಟ್ಟಡಗಳು ನಾಶವಾಗಿವೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಈ ಅವಘಢದ ತೀವ್ರತೆಯ ಅಂದಾಜು ತಿಳಿಯಬೇಕೆಂದರೆ, ಈ ಬೆಂಕಿಯು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯ ಪೂರ್ಣ ಒಟ್ಟಳತೆ ಅಥವಾ ಫಿಲಡೆಲ್ಫಿಯಾ ರಾಜ್ಯದ ಅರ್ಧ ಭಾಗ ಅಥವಾ ನ್ಯೂಯಾರ್ಕ್ ನಗರದ 1/5 ಭಾಗದಷ್ಟು ಅಥವಾ ಲಾಸ್ ಏಂಜಿಲಿಸ್ ನಗರದ 1/8 ಭಾಗ ಅಥವಾ 30 ಸಾವಿರ ಫುಟ್ಬಾಲ್ ಕ್ರೀಡಾಂಗಣದಷ್ಟು ಅಗಲವಾದ ಜಾಗವನ್ನು ಸುಟ್ಟು ಹಾಕಿದೆ. ಪ್ರತಿ ನಿಮಿಷಕ್ಕೆ 3 ಫುಟ್ಬಾಲ್ ಮೈದಾನದಷ್ಟು ಭೂಮಿಯನ್ನು ಈ ಬೆಂಕಿಯು ನಾಶ ಮಾಡುತ್ತಿದೆಯೆಂದರೆ ಇದರ ತೀವ್ರತೆಯು ಎಷ್ಟಿದೆಯೆಂದು ನೀವು ಊಹಿಸಬಹುದು.

Photo: PTI

ಕ್ಯಾಲಿಫೋರ್ನಿಯಾ ರಾಜ್ಯವು ಒಟ್ಟು ಅಮೆರಿಕ ದೇಶದ 14 .14 %($3.9ಟ್ರಿಲಿಯನ್) ಆದಾಯವನ್ನು ಉತ್ಪಾದಿಸಿ ನಂಬರ್1 ನೇ ಸ್ಥಾನದಲ್ಲಿದೆ. ಪೆಸಿಫಿಕ್ ಸಮುದ್ರದ ಅಂಚಿನಲ್ಲಿರುವ ಲಾಸ್ ಏಂಜಿಲಿಸ್ ನಗರವು ಕೆಲವು ತಿಂಗಳಿನಿಂದ ಮಳೆಯಿಲ್ಲದೆ ಬರಪೀಡಿತವಾಗಿದೆ. ಕಳೆದ ಅಕ್ಟೋಬರ್ 1 ನೇ ತಾರೀಕಿನಿಂದ ಇಲ್ಲಿ ಮಾಮೂಲಿಗಿಂತ ಕೇವಲ 10% ಮಳೆ ಆಗಿದ್ದು, ಹುಲ್ಲು ಹಾಗೂ ಮರಗಳು ಒಣಗಿ ಸಣ್ಣ ಅಗ್ನಿ ಕಿಡಿಯೂ ಬೆಂಕಿಗೆ ಆಹ್ವಾನ ನೀಡಿದಂತಾಗುತ್ತದೆ. ಇದಕ್ಕೆ ಜೋರಾಗಿ ಬೀಸುವ ಗಾಳಿಯು ಸಹ ಸೇರಿ ಉಗ್ರ ಸ್ವರೂಪ ತಾಳಿದೆ. ಈ ಬೆಂಕಿ ಹರಡಲು ಕಾರಣಗಳನ್ನು ಅಧಿಕಾರಿಗಳು ಇನ್ನೂ ಕಂಡುಹಿಡಿಯುತ್ತಿದ್ದಾರೆ. ಖಚಿತವಾಗಿ ಏನು ಕಾರಣವೆಂದು ಇನ್ನೂ ಗೊತ್ತಿಲ್ಲದೆ ಊಹಾಪೋಹಗಳು ಹರಿದಾಡುತ್ತಿವೆ.

ಕೆಲವು ಊಹೆಯಂತೆ ವಿದ್ಯುತ್ ತಂತಿಗಳ ಕಿಡಿಯಿಂದ, ಹೊಸ ವರ್ಷದ ಆಚರಣೆಯ ಸಮಯದಲ್ಲಿ ಸಿಡಿಸಿದ ಪಟಾಕಿಗಳಿಂದ ಉಳಿದ ಕೆಂಡಗಳಿಂದ, ಆರಿಸದೆ ಬಿಸಾಕಿದ ಸಿಗರೇಟು ತುoಡು, ಕಿಡಿಗೇಡಿಗಳ ಕೃತ್ಯ ಅಥವಾ ನಂದಿಸದೆ ಉಳಿದ ಕ್ಯಾಂಪ್ ಫೈರ್ ಇವು ಯಾವುದರಿಂದಲೂ ಈ ಬೆಂಕಿಯು ಪ್ರಾರಂಭವಾಗಿರಬಹುದೆಂದು ಹೇಳಲಾಗುತ್ತಿದೆ.

ಲಾಸ್ ಏಂಜಿಲಿಸ್ ನಗರವು ಕಡಿಮೆ ಅಗ್ನಿಶಾಮಕ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿದೆ. ಇಲ್ಲಿ ಸರಾಸರಿ ಪ್ರತಿ 1000 ಜನಸಂಖ್ಯೆಗೆ ಒಬ್ಬ ಅಗ್ನಿಶಾಮಕ ಯೋಧ ಇದ್ದಾರೆ. ಅದೇ ಶಿಕ್ಯಾಗೊ, ಹ್ಯುಸ್ಟನ್, ಡಲ್ಲಾಸ್ ನಗರಗಳಲ್ಲಿ ಪ್ರತಿ 1000 ಜನಸಂಖ್ಯೆಗೆ ಇಬ್ಬರು ಅಗ್ನಿಶಾಮಕ ಯೋಧರಿದ್ದಾರೆ. ಕ್ಯಾಲಿಫೋರ್ನಿಯಾದ ಉತ್ತರ ಭಾಗದಲ್ಲಿರುವ ಸ್ಯಾನ್ಫ್ರಾನ್ಸಿಸ್ಕೋ ನಗರವು 1.5 ಮಿಲಿಯನ್ (15 ಲಕ್ಷ) ಜನಸಂಖ್ಯೆ ಹೊಂದಿದ್ದು ಅಲ್ಲಿ ಸುಮಾರು 1800 ಅಗ್ನಿಶಾಮಕ ಸಿಬ್ಬಂದಿ ಇದೆ. ಆದರೆ 4 ಮಿಲಿಯನ್ ಜನಸಂಖ್ಯೆ ಹೊಂದಿರುವ ದಕ್ಷಿಣ ಭಾಗದಲ್ಲಿರುವ ಲಾಸ್ ಏಂಜಿಲಿಸ್ ನಗರವು ಅತಿ ಹೆಚ್ಚು ಬೆಂಕಿ ಅವಘಢಗಳು ಸಂಭವಿಸುತ್ತಿದ್ದರೂ ಸಹ ಕೇವಲ 3500 ಅಗ್ನಿಶಾಮಕ ಸಿಬ್ಬಂದಿ ಹೊಂದಿದೆ.

ನಗರದ ಆಡಳಿತ ನಡೆಸುವವರು ಇಂತಹ ದುರಂತಗಳನ್ನು ನಿಯಂತ್ರಿಸಲು ಹೆಚ್ಚು ಹಣವನ್ನು ವಾರ್ಷಿಕ ಬಜೆಟ್ ನಲ್ಲಿ ಮೀಸಲಿಟ್ಟು ಹೆಚ್ಚು ಸಿಬ್ಬಂದಿ, ನೀರಿನ ಟ್ರಕ್, ಹೆಲಿಕ್ಯಾಪ್ಟರ್, ಮೆಷಿನ್ ಗಳಿಗೆ ಹಾಗೂ ಜನರಿಗೆ ಮುಂಚಿತವಾಗಿ ಎಚ್ಚರಿಕೆಯ ಅರಿವು ಮೂಡಿಸುವಲ್ಲಿ ವ್ಯಯ ಮಾಡಿದ್ದರೆ ಇಷ್ಟು ಭೀಕರ ಸ್ಥಿತಿ ಎದುರಿಸಬೇಕಿರಲಿಲ್ಲ. ಈಗ ಲಾಸ್ ಏಂಜಿಲಿಸ್ ಜೈಲಿನಲ್ಲಿ ಕೆಲವಾರು ಶಿಕ್ಷೆಗಳಿಂದ ಬಂಧಿಗಳಾಗಿರುವ ಮಾಜಿ ಅಗ್ನಿಶಾಮಕ ಸಿಬ್ಬಂದಿಗಳನ್ನು ಈ ಬೆಂಕಿಯನ್ನು ಆರಿಸಲು ಬಳಸಿಕೊಳ್ಳಲಾಗುತ್ತಿದೆ. ಅವರಿಗೆ ಒಂದು ದಿನಕ್ಕೆ ಕೇವಲ 24 ಡಾಲರ್ ಸಂಬಳ ನೀಡುತ್ತಿರುವುದನ್ನು ಹಲವಾರು ಪ್ರಸಿದ್ಧ ನಟ ನಟಿಯರು ಖಂಡಿಸಿದ್ದಾರೆ. ಇದಲ್ಲದೆ ಹಲವು ಹಣವಂತರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ತಮ್ಮದೇ ಹಣದಿಂದ ಖಾಸಗಿ ಅಗ್ನಿಶಾಮಕ ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ಈ ಖಾಸಗಿ ಅಗ್ನಿಶಾಮಕ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಇದೇ ಕೆಲಸದಿಂದ ನಿವೃತ್ತಿ ಹೊಂದಿದವರಾಗಿರುತ್ತಾರೆ. ಈ ಖಾಸಗಿ ಅಗ್ನಿಶಾಮಕ ಸಿಬ್ಬಂದಿಗೆ ಒಂದು ದಿನಕ್ಕೆ 2500 ಡಾಲರ್ ನಿಂದ 14 ಸಾವಿರ ಡಾಲರ್ ವರೆಗೂ ಖರ್ಚಾಗುತ್ತದೆ.

ಹೆಚ್ಚು ಹಣವಂತರಿರುವ ಲಾಸ್ ಏಂಜಿಲಿಸ್ ನ ಈ ಭಾಗಗಳ ನಡುವೆ ಹಲವು ದಶಕಗಳಿಂದ ಶ್ರಮ ಪಟ್ಟು ತಮ್ಮ ಮನೆ ಕಟ್ಟಿಕೊಂಡಿರುವ ಹೆಚ್ಚು ಕಪ್ಪು ಜನರು ವಾಸಿಸುವ ‘ಅಲ್ಟಾಡಿನ’ ಎಂಬ ಪ್ರದೇಶವು ಈಗ ಬೆಂಕಿಗೆ ಸುಡುತ್ತಿದ್ದರೆ ಅಗ್ನಿಶಾಮಕ ಸಿಬ್ಬಂದಿ ಈ ಪ್ರದೇಶಕ್ಕೆ ಸರಿಯಾದ ಆಸಕ್ತಿ ತೋರಿಸುತ್ತಿಲ್ಲವೆಂಬ ಆಪಾದನೆ ಸಹ ಇದೆ. ಕೇವಲ ಹಣವಂತರು, ಪ್ರಸಿದ್ಧ ವ್ಯಕ್ತಿಗಳು ವಾಸಿಸುವ ಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆಯೆಂದು ‘ಅಲ್ಟಾಡಿನ’ ನಿವಾಸಿ ಕಪ್ಪು ಜನರ ಆರೋಪವಾಗಿದೆ. ಈ ಮಧ್ಯೆ ಕೆಲವು ಹೃದಯಹೀನ ದುಷ್ಕರ್ಮಿಗಳು ಸುಟ್ಟಿರುವ ಮನೆಗಳಿಂದ ಬೆಲೆಬಾಳುವ ವಸ್ತುಗಳ ಕಳ್ಳತನ, ಲೂಟಿ ಮಾಡುತ್ತಿರುವ ವರದಿಗಳೂ ಬಂದಿವೆ. ಕೆಲವು ರಿಯಲ್ ಎಸ್ಟೇಟ್ ದಂಧೆಯ ತಿಮಿಂಗಲಗಳು ಈ ಅವಘಢವನ್ನೇ ಲಾಭಕ್ಕೆ ಬಳಸಿಕೊಂಡು ಅರ್ಧ ಬೆಲೆಗೆ ಆಸ್ತಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕೆಲವೇ ಕೆಲವು ಮಾಧ್ಯಮಗಳು ಇಂತಹ ಸಣ್ಣ ಪುಟ್ಟ ಘಟನೆಗಳಿಗೆ ಉಪ್ಪು ಖಾರ ಹಚ್ಚಿ ಸುದ್ದಿ ಮಾಡಲು ಪ್ರಯತ್ನಿಸಿವೆ. ಆದರೆ ಇಂತಹ ನೀಚ ಕೆಲಸಗಳು ಅತಿ ವಿರಳ.

ಇಂತಹ ನಕಾರಾತ್ಮಕ ಸುದ್ದಿಗಳ ನಡುವೆ ಹಲವಾರು ಮಾನವೀಯ ನಡೆಗಳು ಈ ದುರಂತದಲ್ಲಿಯೂ ಆಶಾಕಿರಣವಾಗಿದೆ.ಅಮೆರಿಕನ್ ಜನರು ತಮ್ಮ ಉದಾರತೆಯನ್ನು ತೋರಿ ಇಂತಹ ನಿರಾಶ್ರಿತರಿಗೆ ತಮ್ಮ ಮನೆಯನ್ನು ಹಾಗೂ ಮನವನ್ನು ತೆರದು ಸಹಾಯ ಹಸ್ತ ನೀಡಿದ್ದಾರೆ. ಮಿಲಿಯನ್ ಗಟ್ಟಲೆ ಡಾಲರ್ ಹಣವು ದಾನದ ರೂಪದಲ್ಲಿ ಹರಿದು ಬರುತ್ತಿದೆ. ಉಡುಪುಗಳು, ವಸ್ತ್ರಗಳು, ಆಹಾರ, ದಿನಸಿ, ಹೊದಿಕೆಗಳು, ವಾಹನಗಳು, ವಸತಿ – ಹೀಗೆ ಅನೇಕ ರೀತಿಯಲ್ಲಿ ಜನರು ಸಹಾಯ ಮಾಡುತ್ತಿದ್ದಾರೆ. ದೊಡ್ಡ ಕಾರ್ಪೊರೇಟ್ ಕಂಪನಿಗಳು ಮಿಲಿಯನ್ ಗಟ್ಟಲೆ ಹಣ ನೀಡುತ್ತಿವೆ. ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ಗ್ರಾಹಕರಿಂದ ಅಗ್ನಿ ದುರಂತಕ್ಕೆಂದೇ ಹಣವನ್ನು, ವಸ್ತುಗಳನ್ನು ಸಂಗ್ರಹಿಸಿ ಲಾಸ್ ಏಂಜಿಲಿಸ್ ನಗರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಪುಟ್ಟ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್ ಉಳಿತಾಯದ ಹಣವನ್ನು ದಾನ ಮಾಡುತ್ತಿರುವ ಹಲವಾರು ಸುದ್ದಿಗಳು ಬಂದಿವೆ. ಈ ದುರಂತದಿಂದ ಲಾಸ್ ಏಂಜಲೀಸ್ ನಗರದ ಜನತೆ ಮತ್ತೆ ಪುಟಿದೇಳುವುದರಲ್ಲಿ ಸಂಶಯವೇ ಇಲ್ಲ.

ಕೆ.ಆರ್. ಶ್ರೀನಾಥ್
ಅಟ್ಲಾಂಟಾ, ಯು.ಎಸ್.ಎ

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories