ಯುಎಸ್‌ಎನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ ಆಯ್ಕೆಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರ ಅಧಿಕೃತ ಅಭ್ಯರ್ಥಿಯಾಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದಾರೆ. ಕೇವಲ 33 ವರ್ಷದ ಮಮ್ದಾನಿಯು ತಮ್ಮದೇ ಡೆಮಾಕ್ರಟಿಕ್ ಪಕ್ಷದ ಪ್ರಬಲ ಸ್ಪರ್ಧಿ 67 ವರ್ಷದ ಯಾಂಡ್ರೂ ಕೂಮೊ ಅವರನ್ನು 8% ಮತಗಳ ಅಂತರದಿಂದ ಸೋಲಿಸಿದ್ದಾರೆ.

Photo: Reuters

ಚುನಾವಣೆಯ ಹಿಂದಿನ ದಿನದವರೆಗೂ ಸಮೀಕ್ಷೆಗಳಲ್ಲಿ ಮುಂದೆ ಇದ್ದ ಯಾಂಡ್ರೂ ಕುಮೋ, ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿ ಮೂರು ಬಾರಿ ಆಯ್ಕೆಯಾಗಿದ್ದರು ಹಾಗೂ ತಮ್ಮ ಮೇಲಿನ ಆಪಾದನೆಗಳ ಕಾರಣದಿಂದ ಆಗಸ್ಟ್ 2021 ರಲ್ಲಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಡೆಮಾಕ್ರಟಿಕ್ ಪಕ್ಷದ ಪ್ರಬಲ ನಾಯಕರಾದ ಕುಮೋ ತಮ್ಮ ರಾಜಕೀಯ ಪುನರ್ಜನ್ಮವನ್ನು ನ್ಯೂಯಾರ್ಕ್ ಮೇಯರ್ ಆಗುವ ಮೂಲಕ ಪುನ:ಸ್ಥಾಪಿಸುವ ಪ್ರಯತ್ನದಲ್ಲಿದ್ದರು. ಪ್ರಬಲ ರಾಜಕೀಯ ಕುಟುಂಬದ ಯಾಂಡ್ರೂ ಕುಮೋ ಅವರ ತಂದೆ ಮಾರಿಯೊ ಕುಮೋ ಸಹ ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿ 1983ರಿಂದ 1994ರವರೆಗೆ 11 ವರ್ಷ ಆಡಳಿತ ನಡೆಸಿದ್ದರು. ಈ ಹಿನ್ನೆಲೆಯನ್ನು ನೋಡಿದಾಗ ಝೊಹ್ರಾನ್ ಮಮ್ದಾನಿಯ ಯಾಂಡ್ರೂ ಕುಮೋ ವಿರುದ್ಧದ ಗೆಲುವು ಮಹತ್ವವನ್ನು ಪಡೆಯುತ್ತದೆ.

ವಿಶ್ವದ ಅತಿ ಶ್ರೀಮಂತ ನಗರವಾದ ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಯು ಪ್ರಬಲ ಹಾಗೂ ಪ್ರತಿಷ್ಟಿತ ಸ್ಥಾನ ಹೊಂದಿದೆ. ಡೆಮಾಕ್ರಟಿಕ್ ಪಕ್ಷದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ನ್ಯೂಯಾರ್ಕ್ ನಗರವು, ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಯಾರೇ ನಿಂತರೂ ಗೆಲ್ಲುವುದು ಖಚಿತ. ಮತದಾರರ ಪಟ್ಟಿಯಲ್ಲಿ ಪಕ್ಷದ ನಿಷ್ಟೆಯ ಮೇಲೆ ನೊಂದಾಯಿಸಿರುವ ಮತದಾರರಲ್ಲಿ ಪ್ರತಿ ಒಬ್ಬ ರಿಪಬ್ಲಿಕನ್ ಮತದಾರನಿಗೆ, ಎಂಟು ಡೆಮಾಕ್ರಟಿಕ್ ಮತದಾರರಿದ್ದಾರೆ!! ಇದರಿಂದ ಡೆಮಾಕ್ರಟಿಕ್ ಪಕ್ಷ ನ್ಯೂಯಾರ್ಕ್ ನಗರದಲ್ಲಿ ಎಷ್ಟು ಪ್ರಬಲವಾಗಿದೆ ಹಾಗೂ ನಿಷ್ಟಾವಂತ ಮತದಾರರನ್ನು ಹೊಂದಿದೆಯೆಂದು ಅರಿಯಬಹುದು. ಅಮೇರಿಕದ ಅಧ್ಯಕ್ಷ ಟ್ರಂಪ್ ಸಹ ನ್ಯೂಯಾರ್ಕ್ ನಗರದಲ್ಲೇ ಹುಟ್ಟಿ, ಬೆಳೆದು, ತಮ್ಮ ವ್ಯವಹಾರಗಳನ್ನು ಅಲ್ಲಿಯೇ ಅಭಿವೃದ್ಧಿ ಪಡಿಸಿದರು. ಆದರೆ, ತಮ್ಮ ವ್ಯವಹಾರಗಳ ತನಿಖೆ, ದುರ್ನಡತೆಯ ತನಿಖೆ, ಅಪರಾಧಗಳ ತನಿಖೆಗಳು ಡೆಮಾಕ್ರಟಿಕ್ ಪಕ್ಷದ ರಾಜ್ಯದ ಆಡಳಿತದಿಂದ ಹೆಚ್ಚು ಗರಿಗೆದರಿದಾಗ ತಮ್ಮ ಮೂಲ ನಿವಾಸದ ವಿಳಾಸವನ್ನು ಫ್ಲಾರಿಡಾ ರಾಜ್ಯಕ್ಕೆ 2019ರಲ್ಲಿ ಬದಲಾಯಿಸಿಕೊಂಡಿದ್ದಾರೆ. ಅಷ್ಟು ಪ್ರಬಲವಾಗಿ ಡೆಮಾಕ್ರಟಿಕ್ ಪಕ್ಷ ನ್ಯೂಯಾರ್ಕ್ ನಲ್ಲಿ ಬೇರೂರಿದೆ.

Photo: Reuters

ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿಯ ತಾಯಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್. “ಮಿಸ್ಸಿಸಿಪ್ಪಿ ಮಸಾಲ”, “ಸಲಾಂ ಬಾಂಬೆ”, “ಮಾನ್ಸೂನ್ ವೆಡ್ಡಿಂಗ್” ಹಾಗೂ ಇನ್ನಿತರ ಚಲನಚಿತ್ರಗಳನ್ನು ನಿರ್ದೇಶಿಸಿ ಮೀರಾ ನಾಯರ್ ಪ್ರಸಿದ್ಧರಾಗಿದ್ದಾರೆ. ಇಸ್ರೇಲ್ ದೇಶವು ಪ್ಯಾಲೆಸ್ತೀನ್ ಜನರ ಮೇಲೆ ನಡೆಸುತ್ತಿರುವ ಹತ್ಯಾಕಾಂಡದ ವಿರುದ್ಧ ಮೀರಾ ನಾಯರ್ ಪ್ರಬಲ ಧ್ವನಿಯಾಗಿದ್ದಾರೆ.

ಪಂಜಾಬಿ ಮೂಲದ ಮೀರಾ ನಾಯರ್, ಪ್ರಸ್ತುತ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಚಲನಚಿತ್ರ ವಿಭಾಗದ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಝೊಹ್ರಾನ್ ಮಮ್ದಾನಿ ತಂದೆ ಗುಜರಾತ್ ಮೂಲದವರು. ಮಹಮೂದ್ ಮಮ್ದಾನಿ ಚಿಕ್ಕ ಮಗುವಾಗಿದ್ದಾಗ ಅವರ ತಂದೆ ಉಗಾಂಡಕ್ಕೆ ವಲಸೆ ಹೋಗಿ(ವ್ಯಾಪಾರ)ನೆಲಸಿದ್ದರು. ಅವರು ಖ್ಯಾತ ಸಮಾಜಶಾಸ್ತ್ರದ(Anthropology) ಪ್ರೊಫೆಸರ್ ಆಗಿ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Photo: PTI

ಝೊಹ್ರಾನ್ ಮಮ್ದಾನಿಯು 2014ರಲ್ಲಿ ಲಿಬರಲ್ ಆರ್ಟ್ಸ್ ಗೆ ಪ್ರಖ್ಯಾತಿ ಪಡೆದ ಮೈನ್ ರಾಜ್ಯದಲ್ಲಿರುವ ಪ್ರತಿಷ್ಟಿತ ‘ಬೊಡನ್ ಕಾಲೇಜಿನಿಂದ’ (Bowdoin) ಪದವಿ ಪಡೆದಿದ್ದಾರೆ. ನವೆಂಬರ್ 4, 2025ರಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಮಮ್ದಾನಿ ಎದುರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕರ್ಟಿಸ್ ಸಿಲ್ವಾ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗಿ ಪ್ರಸ್ತುತ ಮೇಯರ್ ಆಗಿರುವ ಎರಿಕ್ ಆಡಮ್ಸ್ ಸ್ಪರ್ಧಿಸಲಿದ್ದಾರೆ. ಎರಿಕ್ ಆಡಮ್ಸ್ ಕಳೆದ ಬಾರಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ಭ್ರಷ್ಟಾಚಾರದ ಆಪಾದನೆಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದು, ಈ ಬಾರಿ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಲಿಲ್ಲ. ಇವರಿಬ್ಬರಲ್ಲದೆ ಯಾಂಡ್ರೂ ಕುಮೋ ಸಹ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೂ, ಝೊಹ್ರಾನ್ ಮಮ್ದಾನಿಯ ಗೆಲವು ಬಹುತೇಕ ನಿಶ್ಚಿತವೆಂದು ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ.

ಮಮ್ದಾನಿ ನವೆಂಬರ್ ಚುನಾವಣೆಯಲ್ಲಿ ಗೆದ್ದರೆ, ಹಲವು ಇತಿಹಾಸ ಸೃಷ್ಟಿಸಲಿದ್ದಾರೆ. ನ್ಯೂಯಾರ್ಕ್ ನಗರದ ಪ್ರಥಮ ಮುಸ್ಲಿಂ, ದಕ್ಷಿಣ ಏಷ್ಯಾ ಮೂಲದ ಪ್ರಥಮ, ಹಾಗೂ ಈ ಶತಮಾನದ ಅತಿ ಚಿಕ್ಕ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಇದು ಭಾರತದ ಮೂಲದವರೆಲ್ಲರಿಗೂ ಹೆಮ್ಮೆಯ ಸಂಗತಿ.

ಕೆ.ಆರ್.ಶ್ರೀನಾಥ್, ಅಟ್ಲಾಂಟ

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

ದುಬೈಯ ಕರಾನಿ ಇಂಟೀರಿಯರ್’ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ...

Related Articles

Popular Categories