ವಿಶೇಷ ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಇದು ಅಂತಿಂಥ ಗ್ರಂಥಾಲಯ ಅಲ್ಲ, ನೋಡಲು ಐಷಾರಾಮಿ ಹೋಟೆಲ್-ಮಾಲ್ ನಂತೆ ಕಾಣುವ ಈ ಭವ್ಯ ಗ್ರಂಥಾಲಯದ ಹೆಸರು ‘ಮೊಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ’. ಇದು ಇರುವುದು ದುಬೈಯಲ್ಲಿ. ಈ ಗ್ರಂಥಾಲಯ ಕಟ್ಟಡದ ವಾಸ್ತುಶಿಲ್ಪ, ಒಳಗಿನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಬಳಕೆಯ ಜೊತೆ ಇನ್ನಿತರ ಕಾರಣಗಳಿಗೂ ಈ ಗ್ರಂಥಾಲಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸಲಾಗುತ್ತಿದೆ. ಇದರ ಸೊಬಗನ್ನೊಮ್ಮೆ ಪುಸ್ತಕ ಪ್ರೇಮಿಗಳು, ಓದುಗರು, ಪ್ರವಾಸಿಗರು ಕಣ್ತುಂಬಿಸಿಕೊಳ್ಳಲೇಬೇಕು.





ದುಬೈ ನಗರದ ಹೃದಯ ಭಾಗವಾಗಿರುವ ಅಲ್ ಜದ್ದಾಫ್ ಕ್ರೀಕ್(ನದಿ) ಪಕ್ಕದಲ್ಲಿನ ಸುಂದರವಾದ ತಾಣದಲ್ಲಿ ಈ ಭವ್ಯ, ಐಷಾರಾಮಿ ‘ಮೊಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ’ ತಲೆ ಎತ್ತಿ ನಿಂತಿದೆ. ದುಬೈ ನಗರದಲ್ಲಿರುವ ಗಗನಚುಂಬಿ ಕಟ್ಟಡ, ಮಾಲ್ ಗಳಿಗೆ ಠಕ್ಕರ್ ನೀಡುವಂತೆ ಈ ಭವ್ಯ ಗ್ರಂಥಾಲಯವನ್ನು ಯುಎಇ ಉಪಾಧ್ಯಕ್ಷ, ದುಬೈಯ ಪ್ರಧಾನ ಮಂತ್ರಿ ಹಾಗು ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ನಿರ್ಮಿಸಿದ್ದಾರೆ. ಈ ಕಾರಣದಿಂದಲೇ ಈ ಗ್ರಂಥಾಲಯಕ್ಕೆ ಅವರದ್ದೇ ಹೆಸರನ್ನು ನಾಮಕರಣ ಮಾಡಲಾಗಿದೆ.
ಸೃಜನಶೀಲತೆ, ಜ್ಞಾನ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜೊತೆಗೆ ಇಂದಿನ ಆಧುನಿಕ ಯುಗದ ಜನರಲ್ಲಿ ಓದುವ, ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಇಟ್ಟುಕೊಂಡು 2022ರ ಜೂನ್ 16ರಂದು ಈ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. 1 ಬಿಲಿಯನ್ ಅರಬ್ ದಿರ್ಹಮ್ ವೆಚ್ಚದಲ್ಲಿ ಈ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಕುರ್‌ಆನ್ ಓದಲು ಬಳಸುವ ಸಾಂಪ್ರದಾಯಿಕ ಮರದ “ರಹ್ಲ್”(Rehl) ಆಕಾರದ ವಾಸ್ತುಶಿಲ್ಪದ ಆಕರ್ಷಕ ವಿನ್ಯಾಸದಲ್ಲಿ ಈ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು, ಜಗತ್ತಿನ ವಿವಿಧೆಡೆಗಳಿಂದ ಜನರನ್ನು ಆಕರ್ಷಿಸುತ್ತಿದೆ.





ದುಬೈಯ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತೆಂದೇ ಹೇಳಲಾಗುತ್ತಿರುವ ಈ ಗ್ರಂಥಾಲಯವು, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA) ಪ್ರದೇಶದ ಅತಿದೊಡ್ಡ ಗ್ರಂಥಾಲಯವೆಂಬ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದು, ಜ್ಞಾನವನ್ನು ಉತ್ತೇಜಿಸುವ ಮತ್ತು ಅರೆಬಿಕ್ ಸಂಸ್ಕೃತಿಯನ್ನು ಸಂರಕ್ಷಿಸುವ ಧ್ಯೇಯವನ್ನು ಹೊಂದಿದೆ.
ದುಬೈಯ ಹೃದಯ ಭಾಗವಾಗಿರುವ ಅಲ್ ಜದ್ದಾಫ್ ಕ್ರೀಕ್ ನದಿಯ ಬದಿಯಲ್ಲಿರುವ ಈ ‘ಮೊಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ’ವು ಕ್ರೀಕ್ ಗ್ರೀನ್ ಲೈನ್ ಮೆಟ್ರೋ ಸ್ಟೇಷನ್ ನಿಂದ ಕೇವಲ 200 ಮೀಟರ್ ದೂರದಲ್ಲಿದೆ. ಇಲ್ಲಿಗೆ ನಡೆದುಕೊಂಡು ಬರಲು ಕಾಲು ದಾರಿಯ ವ್ಯವಸ್ಥೆ ಕೂಡ ಮಾಡಲಾಗಿದೆ.
ಈ ಗ್ರಂಥಾಲಯದ ಒಳಗೆ ಕಾಲಿಡುತ್ತಿದ್ದಂತೆಯೇ ಎರಡು ಬದಿಗಳಲ್ಲಿ ಬೃಹತ್ ಗಾತ್ರದ ಸಾವಿರಾರು ಪುಸ್ತಕಗಳನ್ನು ಇಟ್ಟಿರುವ 4 ಕಪಾಟುಗಳು ನಿಮಗೆ ಭವ್ಯ ಸ್ವಾಗತವನ್ನು ನೀಡುತ್ತವೆ. ಜೊತೆಗೆ ಪ್ರದರ್ಶನಕ್ಕಿಟ್ಟಿರುವ ಪೇಂಟಿಂಗ್ಸ್ ಎಲ್ಲರ ಗಮನ ಸೆಳೆಯುತ್ತದೆ. ತಂತ್ರಜ್ಞಾನದ ಜೊತೆ ಇಲ್ಲಿರುವ ಎಲ್ಲ ಆಸನ ವ್ಯವಸ್ಥೆಗಳು ಒಂದಕ್ಕಿಂತ ಒಂದು ಮಿಗಿಲು ಎಂಬಂತಿದೆ. ದೊಡ್ಡ ದೊಡ್ಡ ಎಲ್ಇಡಿ ಪರದೆಗಳು, ನೀರಿನ ಕಾರಂಜಿ, ಲೈಟಿಂಗ್ಸ್ ವ್ಯವಸ್ಥೆ ಗ್ರಂಥಾಲಯವನ್ನು ಮದುವಣಗಿತ್ತಿಯಂತೆ ಸಿಂಗರಿಸಿವೆ.





ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಅವರ ವಿಶ್ವ ದೂರದರ್ಶಿತ್ವದ ಶಿಕ್ಷಣ ಮತ್ತು ಜ್ಞಾನದ ಸಂದೇಶಕ್ಕೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿರುವ ಈ ಗ್ರಂಥಾಲಯದಲ್ಲಿ ಅರೆಬಿಕ್, ಹಿಂದಿ, ಕನ್ನಡ, ಮಲಯಾಳಂ ಸೇರಿದಂತೆ ಜಗತ್ತಿನ 70ಕ್ಕೂ ಹೆಚ್ಚು ಭಾಷೆಗಳ 15 ಲಕ್ಷಕ್ಕಿಂತ ಹೆಚ್ಚು ಮುದ್ರಿತ ಮತ್ತು ಡಿಜಿಟಲ್ ಕೃತಿಗಳು (ಇ–ಪುಸ್ತಕ) ಇವೆ. ಸಾಹಿತ್ಯ, ಮನೋರಂಜನೆ, ವಿಜ್ಞಾನ, ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳಿಗೆ ಸಂಬಂಧಿಸಿದಂಥ ಪುಸ್ತಕಗಳು ಇಲ್ಲಿವೆ. 60 ಲಕ್ಷ ಸಂಶೋಧನಾ ಪ್ರಬಂಧಗಳು, 73 ಸಾವಿರಕ್ಕಿಂತ ಹೆಚ್ಚು ಸಂಗೀತ ಸಂಗ್ರಹಗಳು(music scores), 75 ಸಾವಿರ ವೀಡಿಯೋಗಳು, 325 ವರ್ಷಗಳ ಇತಿಹಾಸವಿರುವ 5 ಸಾವಿರಕ್ಕೂ ಹೆಚ್ಚು ಐತಿಹಾಸಿಕ ನಿಯತಕಾಲಿಕಗಳು (historical periodicals), 13 ಸಾವಿರ ಲೇಖನಗಳು ಮತ್ತು ಜಗತ್ತಿನ ನಾನಾ ಕಡೆಗಳ 35 ಸಾವಿರಕ್ಕೂ ಹೆಚ್ಚು ಪತ್ರಿಕೆಗಳು ಹಾಗು ಸಾವಿರಾರು ಅಪರೂಪದ ಐತಿಹಾಸಿಕ ವಸ್ತುಗಳ ಸಂಗ್ರಹಗಳಿವೆ. ಜೊತೆಗೆ ಅಂಧರು ಮತ್ತು ದೃಷ್ಟಿಹೀನರಿಗೆ ಸಾಹಿತ್ಯ, ಇತಿಹಾಸ ಮತ್ತು ಕಾದಂಬರಿಗಳಂತಹ ವಿಷಯಗಳನ್ನು ಒಳಗೊಂಡ ಅರೆಬಿಕ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿನ 2,550 ಬ್ರೈಲ್ ಪುಸ್ತಕಗಳಿವೆ.
ಪರಿಸರ ಸ್ನೇಹಿ ವಿನ್ಯಾಸದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ. ಇದರೊಳಗೆ ಪುಸ್ತಕಗಳನ್ನು ಸ್ವಯಂ ಸಂಗ್ರಹಣಾ ಮಾಡುವ ವ್ಯವಸ್ಥೆ (Automated Storage), ಕಂಪ್ಯೂಟರ್‌ನ ಸಹಾಯದಿಂದ ಪುಸ್ತಕವನ್ನು ಸ್ವಯಂಚಾಲಿತವಾಗಿ ಹುಡುಕಿ ತರುವ ವ್ಯವಸ್ಥೆ(Book Retrieval System), ಸ್ವಯಂ ಸೇವಾ ಕಿಯೋಸ್ಕ್‌ಗಳು, ಪುಸ್ತಕ ಡಿಜಿಟಲೀಕರಣ ಪ್ರಯೋಗಾಲಯ (Book Digitisation Lab), ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ರೋಬೋಟ್‌ಗಳು ಕೂಡ ಇಲ್ಲಿವೆ.
ಇದು ಪರಿಸರ ಸ್ನೇಹಿ ಕಟ್ಟಡವೂ ಆಗಿದ್ದು, ಅದರ 10% ಶಕ್ತಿ ಸೌರ ಪ್ಯಾನೆಲ್‌ಗಳಿಂದ ಬರುತ್ತಿದೆ. ಕಟ್ಟಡದ ವಿನ್ಯಾಸವು ಅಂತರಿಕ ತಾಪಮಾನವನ್ನು ನಿಯಂತ್ರಿಸಲು, ನೀರು ಬಳಕೆಯನ್ನು 50% ಕಡಿಮೆ ಮಾಡಲು ಹಾಗೂ ಏರ್‌ಕಂಡೀಷನರ್‌ನ ನೀರನ್ನು ಪುನಃಬಳಕೆ ಮಾಡಿ ತೋಟಗಳಿಗೆ ಬಿಡಲು ಸಹಾಯ ಮಾಡುತ್ತದೆ.
ಇಂದಿನ ಕಾಲಘಟ್ಟದಲ್ಲಿ ಪುಸ್ತಕಗಳು ಓದುಗರಿಲ್ಲದೆ ಕಪಾಟು ಸೇರುತ್ತಿರುವಾಗ, ಅತ್ಯಾಧುನಿಕ ತಂತ್ರಜ್ಞಾನಗಳ ಭಂಡಾರವನ್ನೇ ತಂದು ನಿರ್ಮಿಸಲಾಗಿರುವ ಈ ಗ್ರಂಥಾಲಯ, ಓದುಗರಿಗೆ ನೀಡುವ ಸೇವೆ, ಸವಲತ್ತು, ಪ್ರವೇಶ ಉಚಿತವಾಗಿದ್ದು, ಎಲ್ಲೋ ಐಷಾರಾಮಿ ಬಂಗಲೆಯಲ್ಲಿ ಕುಳಿತು ಓದಿದಂತಹ ಅನುಭವ ಇಲ್ಲಿಗೆ ಭೇಟಿ ಕೊಡುವವರಿಗೆ ಆಗುತ್ತೆ. ಇಲ್ಲಿ ಪುಸ್ತಕ ಸೇರಿದಂತೆ ಕೆಲವೊಂದು ಸೇವೆಗಳಿಗೆ ಸಣ್ಣ ಶುಲ್ಕವನ್ನು ವಿಧಿಸಲಾಗಿದೆ.





ಸಂದರ್ಶಕರ ಸಮಯ
ಈ ಗ್ರಂಥಾಲಯವು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ, ಶುಕ್ರವಾರ ಮಧ್ಯಾಹ್ನ 2 ರಿಂದ ರಾತ್ರಿ 9:00 ರವರೆಗೆ ತೆರೆದಿರುತ್ತದೆ. ರವಿವಾರ ಬಂದ್ ಆಗಿರುತ್ತದೆ.
7 ಮಹಡಿಗಳಿರುವ ಈ ಭವ್ಯ ಕಟ್ಟಡವು ಸುಮಾರು 54 ಸಾವಿರ ಚದರ ಮೀಟರ್ ವಿಸ್ತೀರ್ಣವಿದ್ದು, ಸಾವಿರಾರು ವಾಹನಗಳನ್ನು ನಿಲ್ಲಿಸಲು ಬೃಹತ್ತಾದ ಪಾರ್ಕಿಂಗ್ ವ್ಯವಸ್ಥೆ, ಗಾರ್ಡನ್ ಏರಿಯಾ ಇದೆ. 5 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಗ್ರಂಥಾಲಯ ಪ್ರವೇಶಕ್ಕೆ ಅವಕಾಶವಿದ್ದು, ಕಟ್ಟಡ, ಗ್ರಂಥಾಲಯ ಕೊಠಡಿಗಳು ಮತ್ತು ಸೌಲಭ್ಯಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಹಾಗೂ ಆನಂದಿಸಬಹುದಾದಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಕಟ್ಟಡವು ವಿಕಲಚೇತನರು ಸೇರಿದಂತೆ ಎಲ್ಲ ಸಂದರ್ಶಕರಿಗೆ ಸೂಕ್ತವಾದ ಸೌಲಭ್ಯಗಳನ್ನು ಒದಗಿಸುವಂತೆ ನಿರ್ಮಾಣಗೊಂಡಿದೆ.





ಇಲ್ಲಿ 9 ವಿಶೇಷ ಗ್ರಂಥಾಲಯ ವಿಭಾಗಗಳಿವೆ
ಸಾಮಾನ್ಯ ಗ್ರಂಥಾಲಯ (General Library), ಎಮಿರೇಟ್ಸ್ ಗ್ರಂಥಾಲಯ (Emirates Library), ಯುವ ವಿಭಾಗ (Young Adults Library), ಮಕ್ಕಳ ಗ್ರಂಥಾಲಯ (Children’s Library), ವಿಶೇಷ ಸಂಗ್ರಹಣಾ ಗ್ರಂಥಾಲಯ (Special Collection Library), ನಕ್ಷೆಗಳು ಮತ್ತು ಅಟ್ಲಾಸ್‌ಗಳ ಗ್ರಂಥಾಲಯ (Maps & Atlases Library), ಮಾಧ್ಯಮ ಮತ್ತು ಕಲಾ ಗ್ರಂಥಾಲಯ (Media & Arts Library), ವ್ಯವಹಾರ ಗ್ರಂಥಾಲಯ (Business Library), ನಿಯತಕಾಲಿಕೆಗಳ ಗ್ರಂಥಾಲಯ (Periodicals Library).
7 ಮಹಡಿಗಳಿರುವ ಭವ್ಯ ಕಟ್ಟಡದಲ್ಲಿ ಏನೆಲ್ಲಾ ಇವೆ ನೋಡಿ….
ಕಟ್ಟಡದ ಬೇಸ್ಮೆಂಟ್ ನಲ್ಲಿ ರೊಬೊಟಿಕ್ ಲ್ಯಾಬ್, ಪ್ರೇಯರ್ ರೂಮ್(ನಮಾಜು ಮಾಡುವ ಸ್ಥಳ) ಇವೆ. ನೆಲ ಮಹಡಿ(Ground Floor)ಯಲ್ಲಿ ಸಾಮಾನ್ಯ ಗ್ರಂಥಾಲಯ (General Library), ಮಕ್ಕಳ ಗ್ರಂಥಾಲಯ(Children’s Library), ರಿಸೆಪ್ಶನ್, ಮಾಹಿತಿ ಕೇಂದ್ರ, ಪತ್ರಿಕೆಗಳ ಗ್ರಂಥಾಲಯ, ಆಡಿಟೋರಿಯಂ, ಉಪಹಾರ ಗೃಹ(cafe), ಪುಸ್ತಕ ವಾಪಸಿ ಕೇಂದ್ರ(Book Return Points), ಪುಸ್ತಕಗಳನ್ನು ಸ್ವಯಂ-ಪರಿಶೀಲನೆ ಮಾಡುವ ಕಿಯೋಸ್ಕ್‌ಗಳು ಮತ್ತು ಸಾವಿರಾರು ಪುಸ್ತಕಗಳನ್ನು ಜೋಡಿಸಿಟ್ಟಿರುವ ಗೋಡೆಗೆ ಅಂಟಿಕೊಂಡಿರುವ 4 ಬೃಹತ್ ಗಾತ್ರದ ಸ್ಮಾರ್ಟ್ ಶೆಲ್ಫ್‌ಗಳಿವೆ.





ಸರಿಸುಮಾರು 423,225 ಪುಸ್ತಕಗಳನ್ನು ಹೊಂದಿರುವ ದಿ ಜನರಲ್ ಲೈಬ್ರರಿ(ಸಾಮಾನ್ಯ ಗ್ರಂಥಾಲಯ) ಅತಿದೊಡ್ಡ ಸಂಗ್ರಹಗಳಲ್ಲಿ ಒಂದಾಗಿದೆ. ಇಲ್ಲಿ ಇತಿಹಾಸ, ಭೌಗೋಳಿಕತೆ, ತತ್ವಶಾಸ್ತ್ರ, ರಾಜಕೀಯ, ಕಾನೂನು, ಸಮಾಜಶಾಸ್ತ್ರ, ಧಾರ್ಮಿಕ ಅಧ್ಯಯನಗಳು, ವೈದ್ಯಕೀಯ, ಖಗೋಳಶಾಸ್ತ್ರ, ಗಣಿತ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿವಿಧ ಭಾಷಗಳ ಪುಸ್ತಕಗಳು ಕಾಣಲು ಸಿಗುತ್ತೆ.
ನಿಯತಕಾಲಿಕ ಪತ್ರಿಕಾ ಗ್ರಂಥಾಲಯ (The Periodicals Library)
ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಮತ್ತು ಸಂಶೋಧಕರಿಗಾಗಿ ವಿನ್ಯಾಸಗೊಳಿಸಲಾದ ಈ ಗ್ರಂಥಾಲಯದಲ್ಲಿ 26,854 ಮುದ್ರಿತ ಮಾಸಪತ್ರಿಕೆಗಳು (printed periodicals) ಇವೆ. ಇವುಗಳಲ್ಲಿ ವಿಶೇಷ ಶೈಕ್ಷಣಿಕ ಪತ್ರಿಕೆಗಳು (academic journals) ಮತ್ತು ಸಾಮಾನ್ಯ ಆಸಕ್ತಿ ಪತ್ರಿಕೆಗಳು (general-interest magazines) ಒಳಗೊಂಡಿವೆ. ಕಲಾ (art), ಮಹಿಳೆಯರು (women), ಅರ್ಥಶಾಸ್ತ್ರ (economics), ಪರಂಪರೆ (heritage), ರಾಜಕೀಯ (politics), ಸಂಸ್ಕೃತಿ (culture) ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಮಾಸಪತ್ರಿಕೆಗಳು ಇಲ್ಲಿ ಕಾಣಸಿಗುತ್ತದೆ.
ಇದಲ್ಲದೆ, ಈ ಗ್ರಂಥಾಲಯದಲ್ಲಿ ಸ್ಥಳೀಯ ಅಲ್ ಬಯಾನ್ (Al Bayan), ಅಲ್ ಖಲೀಜ್ (Al Khaleej), ಅಲ್ ಅಹ್ರಾಮ್ (Al Ahram), ಗಲ್ಫ್ ನ್ಯೂಸ್ (Gulf News) ಮತ್ತು ದಿ ನ್ಯಾಷನಲ್ (The National) ಮುಂತಾದ ದೈನಂದಿನ ಮತ್ತು ವಾರಪತ್ರಿಕೆಗಳು ಕೂಡ ಇವೆ.



ಮಕ್ಕಳನ್ನು ತನ್ನತ್ತ ಸೆಳೆಯುತ್ತಿರುವ ‘ಮಕ್ಕಳ ಗ್ರಂಥಾಲಯ’
ಇನ್ನೊಂದೆಡೆ ಮಕ್ಕಳ ಗ್ರಂಥಾಲಯ(Children’s Library)ವು ಮಕ್ಕಳನ್ನು ತನ್ನೆಡೆಗೆ ಸೆಳೆಯಲು ನವನವೀನ ಮಾದರಿಯಲ್ಲಿ ನಿರ್ಮಿತವಾಗಿದೆ. 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ಮೋಜಿನ ವಾತಾವರಣದೊಂದಿಗೆ ವಿನ್ಯಾಸಗೊಳಿಸಲಾದ ಮತ್ತು ಸುಸಜ್ಜಿತವಾದ ಮಕ್ಕಳ ಗ್ರಂಥಾಲಯ ಇದಾಗಿದೆ. ಸಣ್ಣಪುಟ್ಟ ಜನಪ್ರಿಯ ಕಥೆಗಳ, ವಿಜ್ಞಾನ, ಕಾದಂಬರಿ, ಸಾಹಿತ್ಯ, ಮನರಂಜನೆ ಮತ್ತು ಕಲೆಯಂತಹ ವಿಷಯಗಳನ್ನು ಒಳಗೊಂಡ ವಿವಿಧ ಭಾಷೆಗಳಲ್ಲಿನ 84,097ಕ್ಕೂ ಹೆಚ್ಚು ಪುಸ್ತಕಗಳನ್ನು ಇಲ್ಲಿ ಕೇವಲ ಮಕ್ಕಳಿಗಾಗಿ ಇಡಲಾಗಿದೆ.
ಇಲ್ಲಿ ಮಕ್ಕಳಿಗೆ ಆಟದ ಜೊತೆ ಪಾಠ ಎಂಬಂತಹ ವಾತಾವರಣವಿದೆ. ಒಂದೆಡೆ ಸಾಲು ಸಾಲು ಮಕ್ಕಳಿಗೆ ಸಂಬಂಧಿಸಿದ ಸಣ್ಣಪುಟ್ಟ ಜನಪ್ರಿಯ ಕಥೆಗಳ, ಸಾಹಿತ್ಯ, ವಿಜ್ಞಾನ, ಕಾರ್ಟೂನುಗಳಿರುವ ವಿವಿಧ ಭಾಷೆಗಳ ಪುಸ್ತಕಗಳು ಇದ್ದರೆ, ಅದಕ್ಕೆ ತಾಗಿಕೊಂಡಂತೆಯೇ ಮಕ್ಕಳು ಆಡುವಂಥ ಆಟಿಕೆ, ಪ್ಲೇ ಏರಿಯಾವನ್ನು ನಿರ್ಮಿಸಲಾಗಿದ್ದು, ಇದು ಮಕ್ಕಳನ್ನು ಇನ್ನಷ್ಟು ಖುಷಿ ಕೊಡುವಂತೆ ಮಾಡುತ್ತಿದೆ. ಇಲ್ಲಿ ಮಕ್ಕಳು ಕುಳಿತುಕೊಂಡು ಪುಸ್ತಕ ಓದಲು ವಿವಿಧ ಭಂಗಿಯ ಆಸನದ ವ್ಯವಸ್ಥೆ ಕೂಡ ಇದೆ. ಮಕ್ಕಳೊಂದಿಗೆ ಪೋಷಕರು ಕೂಡ ಈ ಮಕ್ಕಳ ಗ್ರಂಥಾಲಯಕ್ಕೆ ಹೋಗಿ ಓದಬಹುದು.





ಗ್ರಂಥಾಲಯದ ಒಳಾಂಗಣ ಆಟದ ಪ್ರದೇಶವು “ಪೆಪ್ಪರ್” ರೋಬೋಟ್, ಸಂವಾದಾತ್ಮಕ ಕಥೆಪುಸ್ತಕ ಪರದೆ, ಶೈಕ್ಷಣಿಕ ಆಟಗಳು ಮತ್ತು ಆಕರ್ಷಕ ಕಥೆಗಳನ್ನು ಹೊಂದಿರುವ ಟ್ಯಾಬ್ಲೆಟ್‌ಗಳನ್ನು ಸಹ ಒಳಗೊಂಡಿದೆ. ಜೊತೆಗೆ ಇಲ್ಲಿ ಅಂಧ ವ್ಯಕ್ತಿಗಳಿಗೆ ಬ್ರೈಲ್ ಕಥೆಗಳ ಸಂಗ್ರಹ ಕೂಡ ಇದೆ.
ಯಾವಲ್ಲ ಮಹಡಿಯಲ್ಲಿ ಏನೆಲ್ಲಾ ಇದೆ ನೋಡಿ…
ಮೊದಲ ಮಹಡಿಯಲ್ಲಿ (1st Floor) ನಕ್ಷೆಗಳು ಮತ್ತು ಅಟ್ಲಾಸಸ್, ಮಾಧ್ಯಮ ಮತ್ತು ಕಲಾ ಗ್ರಂಥಾಲಯ, ಯುವ ವಯಸ್ಕರ ಗ್ರಂಥಾಲಯದಂತಹ ವಿಷಯಾಧಾರಿತ ಗ್ರಂಥಾಲಯಗಳಿವೆ. ಇಲ್ಲಿನ ವಿನ್ಯಾಸ ಕೂಡ ಓದುಗರು ಓದಿನಲ್ಲಿ ತಲ್ಲೀನರಾಗುವಂತೆ ಮಾಡುತ್ತೆ.
12ರಿಂದ 17 ವರ್ಷದ ಯುವಕರಿಗಾಗಿ ವಿನ್ಯಾಸಗೊಳಿಸಲಾದ ಈ ಯುವ ಗ್ರಂಥಾಲಯದಲ್ಲಿ ಒಟ್ಟು 18,106 ಪುಸ್ತಕಗಳು ಇವೆ. ಇವುಗಳಲ್ಲಿ ವಿಜ್ಞಾನ, ಕಲ್ಪನಾ ಕಾದಂಬರಿಗಳು(Science Fiction), ಜನಪ್ರಿಯ ಕಾದಂಬರಿಗಳು(Popular Novels), ಜೀವನಚರಿತ್ರೆಗಳು(Biographies), ಅನುವಾದಿತ ಕೃತಿಗಳು(Translations) ಮತ್ತು ಕಾರ್ಟೂನ್ ಪುಸ್ತಕಗಳು(Comics) ಸೇರಿದಂತೆ ಹಲವಾರು ಭಾಷೆಗಳಲ್ಲಿರುವ ಪುಸ್ತಕಗಳು ಸೇರಿವೆ.
2ನೇ ಮಹಡಿಯಲ್ಲಿ(2nd Floor) ವಿದ್ಯಾರ್ಥಿಗಳಿಗೆ ಸ್ಟಡಿ ರೂಮ್ ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಕೂತು ಓದಬಹುದು, ಅಭ್ಯಾಸ ನಡೆಸಬಹುದು. ಯಾವುದೇ ರೀತಿಯ ಶಬ್ದದ ಕಿರಿಕಿರಿ ಆಗದಂತೆ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಜೊತೆ ಒಬ್ಬರು ಅಥವಾ ಇಬ್ಬರು ಕೂತು ಓದುವಂತ ಕೊಠಡಿಗಳು ಕೂಡ ಇಲ್ಲಿ ಕಾಣಸಿಗುತ್ತೆ. ಈ ಎಲ್ಲ ವ್ಯವಸ್ಥೆ, ಸೇವೆಯನ್ನು ವಿದ್ಯಾರ್ಥಿಗಳು ಉಚಿತವಾಗಿ ಪಡೆಯಬಹುದಾಗಿದೆ.





3ನೇ ಮಹಡಿಯಲ್ಲಿ(3rd Floor) ಆಡಳಿತ ಕಚೇರಿ ಇದೆ. ಇಲ್ಲಿ ಗ್ರಂಥಾಲಯದ ಅಧಿಕಾರಿಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. 4ನೇ ಮಹಡಿಯಲ್ಲಿ(4th Floor) ಕಾನ್ಫರೆನ್ಸ್ ಹಾಗು ಮೀಟಿಂಗ್ ರೂಮ್ ಗಳಿವೆ. ಇಲ್ಲಿ ಯಾರು ಕೂಡ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಇದಕ್ಕೆ ಶುಲ್ಕವಿದ್ದು, ಮುಂಚಿತವಾಗಿ ಬುಕ್ ಮಾಡಬೇಕಾಗುತ್ತೆ.
5ನೇ ಮಹಡಿಯಲ್ಲಿ(5th Floor) ವಿಶೇಷ, ಅಪರೂಪದ ಪುಸ್ತಕಗಳ, ಹಸ್ತಪ್ರತಿಗಳ ಗ್ರಂಥಾಲಯವಿದೆ. ಇಲ್ಲಿರುವ ಖಾಸಗಿ ಸಂಗ್ರಹಣಾ ಗ್ರಂಥಾಲಯ(Private Collections Library)ದಲ್ಲಿ ಒಟ್ಟು 2,828 ಅಪರೂಪದ ವಸ್ತುಗಳು ಇವೆ. ಇವುಗಳಲ್ಲಿ ಹಸ್ತಪ್ರತಿಗಳು (Manuscripts), ಹಳೆಯ ಮಾಸಪತ್ರಿಕೆಗಳು(Old Magazines) ಮತ್ತು 1950ಕ್ಕೂ ಹಿಂದಿನ ಮೊದಲ ಆವೃತ್ತಿಯ ಪುಸ್ತಕಗಳು (First-edition Books) ಸೇರಿವೆ. ಈ ವಸ್ತುಗಳಲ್ಲಿ ಹಲವಾರು ಸಾರ್ವಜನಿಕ ಪ್ರದರ್ಶನಕ್ಕೆ ನಿರ್ಬಂಧಿತವಾಗಿದ್ದರೂ, ಕೆಲವು ಪ್ರಮುಖ ವಸ್ತುಗಳನ್ನು “ಗ್ರಂಥಾಲಯದ ಖಜಾನೆ” ಪ್ರದರ್ಶನದಲ್ಲಿ (Treasures of the Library Exhibition) ವೀಕ್ಷಿಸಬಹುದು. ಹಸ್ತಪ್ರತಿಗಳು ಮತ್ತು ಅಪರೂಪದ ಪುಸ್ತಕಗಳು ಸಂಶೋಧನೆಗಾಗಿ ಸಿಬ್ಬಂದಿ ಮೇಲ್ವಿಚಾರಣೆಯಡಿ ಮಾತ್ರ ಲಭ್ಯವಿದೆ.
6ನೇ ಮಹಡಿಯಲ್ಲಿ(6th Floor) ಎಮಿರೇಟ್ಸ್ (The Emirates Library) ಗ್ರಂಥಾಲಯ ಇದೆ. ಯುಎಇಗೆ ಸಂಬಂಧಿಸಿದ ಪುಸ್ತಕಗಳು, ಸಂಗ್ರಹಗಳು, ಇಲ್ಲಿನ ಸಾಹಿತ್ಯ, ಕಾದಂಬರಿಗಳು, ಐತಿಹಾಸಿಕ ಪಠ್ಯಗಳು, ಹಸ್ತಪ್ರತಿಗಳು ಇಲ್ಲಿವೆ. ನಿಶ್ಯಬ್ದ ಓದುವಿಕೆ / ಸಂಶೋಧನೆಗೆ ಬೇಕಾದ ರೀತಿಯಲ್ಲಿ ಸಣ್ಣಸಣ್ಣ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಪುಸ್ತಕಗಳನ್ನು ತಂದು ಓದುವ, ಅಭ್ಯಾಸ ಮಾಡುವಂತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.





ಈ ಗ್ರಂಥಾಲಯದಲ್ಲಿ ಸುಮಾರು 68,052 ಪುಸ್ತಕಗಳು ಇವೆ. ಇವು ಯುಎಇ (UAE) ದೇಶದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಕುರಿತು ಮಾಹಿತಿ ಒದಗಿಸುತ್ತವೆ. ಈ ಪುಸ್ತಕಗಳಲ್ಲಿ ಎಮಿರಾತಿ ವಸ್ತ್ರಶೈಲಿ (Emirati fashion), ಜನಪದ ಕಥೆಗಳು (folk tales), ಕವಿತೆಗಳು (poetry), ಹಸ್ತಕಲೆಗಳು (handicrafts), ಜೊತೆಗೆ ಪುರಾತತ್ವಶಾಸ್ತ್ರ (archaeology) ಮತ್ತು ಕಲಾ ಕ್ಷೇತ್ರ (arts) ಕುರಿತಾದ ವಿಷಯಗಳನ್ನು ಒಳಗೊಂಡಿವೆ.
7ನೇ ಮಹಡಿ ಅಪರೂಪದ ಅಮೂಲ್ಯ ಸಂಗ್ರಹಗಳ ಆಗರ
7ನೇ ಮಹಡಿಯಲ್ಲಿ(7th Floor) ಗ್ರಂಥಾಲಯದ ಅಮೂಲ್ಯ ಸಂಗ್ರಹಗಳಿದ್ದು, ನೂರಾರು ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದು ಜನರನ್ನು ತನ್ನತ್ತ ಸೆಳೆಯುವ ಪ್ರಮುಖ ಕೇಂದ್ರಬಿಂದು ಆಗಿದೆ. ಗ್ರಂಥಾಲಯದಲ್ಲಿ ಸಂಗ್ರಹಿಸಲಾದ ಹಳೆಯ ಪುಸ್ತಕಗಳು, ಅಪರೂಪದ ಹಸ್ತಪ್ರತಿಗಳು, ನಕ್ಷೆಗಳು, ಐತಿಹಾಸಿಕ ಕಲಾಕೃತಿಗಳು, ಹಳೆಯ ಅಟ್ಲಾಸ್‌ಗಳು, ಕ್ಯಾಲಿಗ್ರಫಿ ಪರಿಕರಗಳು, ಕೆಲವೊಂದು ಆರಂಭಿಕ ಶತಮಾನಗಳ ಕೃತಿಗಳು ಇತ್ಯಾದಿ ಅಮೂಲ್ಯ ಸಂಪತ್ತನ್ನು ಇಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ.
ಅವುಗಳಲ್ಲಿ ಕೆಲವು 13ನೇ ಶತಮಾನಕ್ಕೂ ಹಿಂದಿನವು. ಇಲ್ಲಿನ ಸಂಗ್ರಹಗಳಲ್ಲಿ ಪವಿತ್ರ ಕುರ್‌ಆನ್‌ನ ವಿಶಿಷ್ಟ ಪ್ರತಿಗಳು, ಸಾಹಿತ್ಯಿಕ ಶ್ರೇಷ್ಠ ಕೃತಿಗಳ ಆರಂಭಿಕ ಮುದ್ರಣ ಆವೃತ್ತಿಗಳು ಮತ್ತು ಇಸ್ಲಾಮಿಕ್ ಸುವರ್ಣ ಯುಗದ ವಿದ್ವತ್ಪೂರ್ಣ ಕೃತಿಗಳ ಲ್ಯಾಟಿನ್ ಅನುವಾದಗಳನ್ನು ಒಳಗೊಂಡಿದೆ. ಜೊತೆಗೆ ವಾಲ್ಮೀಕಿ ರಾಮಾಯಣವನ್ನು ಕೂಡ ಇಲ್ಲಿ ನೋಡಬಹುದಾಗಿದೆ.


ಅಪರೂಪದ ಪ್ರದರ್ಶನಗಳಲ್ಲಿ 17ನೇ ಶತಮಾನದ ಪ್ರಸಿದ್ಧ ಡಚ್ ನಕ್ಷೆಶಾಸ್ತ್ರಜ್ಞ ಜೋಹಾನ್ಸ್ ಬ್ಲೇಯು ಅವರ ಅಟ್ಲಾಸ್ ಮೇಯರ್ ಆಫ್ ಬ್ಲೇಯುವಿನ ಮೊದಲ ಆವೃತ್ತಿಯೂ ಸೇರಿದೆ. ಜೊತೆಗೆ ಇಲ್ಲಿ 18ನೇ ಶತಮಾನದಲ್ಲಿನ ಈಜಿಪ್ಟಿನ ಪ್ರಾಚೀನ ವಸ್ತುಗಳು ಮತ್ತು ಈಜಿಪ್ಟ್ ಇತಿಹಾಸದ ವಿಶ್ವಕೋಶ ದಾಖಲೆಯಾದ ನೆಪೋಲಿಯನ್‌ನ ಡಿಸ್ಕ್ರಿಪ್ಷನ್ ಡಿ ಐ’ಈಜಿಪ್ಟ್‌ನ ಮೊದಲ ಆವೃತ್ತಿ ಕೂಡ ಇದೆ.
ಈ ಪ್ರದರ್ಶನದಲ್ಲಿ ಅರಬ್ ಮತ್ತು ಜಗತ್ತಿನ ಸಂಸ್ಕೃತಿಗಳ ಮೊದಲ ಆವೃತ್ತಿಯ ಪುಸ್ತಕಗಳು, ಅರಬ್ ರಾಷ್ಟ್ರಗಳು ಮತ್ತು ವಿದೇಶದಲ್ಲಿನ ಅರಬ್ ಸಮುದಾಯಗಳಿಂದ ಪ್ರಕಟವಾದ ಅಪರೂಪದ ನಿಯತಕಾಲಿಕಗಳು ಹಾಗೂ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಸಹಿ ಸಂಗ್ರಹಗಳು ಸಹ ಒಳಗೊಂಡಿವೆ.






ಭಾಷೆಗಳ ಉದ್ಯಾನವನ (The Languages Garden)
‘ಮೊಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ’ದ ಪಕ್ಕದಲ್ಲಿರುವ ಕ್ರೀಕ್‌ನ ಸುಂದರ ತಾಣದ ಮಧ್ಯೆ ನಿರ್ಮಿಸಲಾದ ಭಾಷೆಗಳ ಉದ್ಯಾನವನವು ಎಲ್ಲರನ್ನು ಕೈಬೀಸಿ ಕರೆಯುವಂತಿದೆ. ಈ ಉದ್ಯಾನವನದಲ್ಲಿ ನೂರಾರು ಸ್ತಂಭಗಳು (pillars) ಇವೆ. ಪ್ರತಿಯೊಂದು ಸ್ತಂಭದ ಮೇಲೂ ಶೇಖ್ ಮೊಹಮ್ಮದ್ ಅವರ ನಾಯಕತ್ವ, ಆಡಳಿತ, ರಾಷ್ಟ್ರ ನಿರ್ಮಾಣ, ಅಧ್ಯಯನ ಮತ್ತು ಜ್ಞಾನದ ಕುರಿತ ಉಲ್ಲೇಖಗಳು ಅಚ್ಚುಕಟ್ಟಾಗಿ ಕೆತ್ತಲಾಗಿದೆ. ಈ ಉಲ್ಲೇಖಗಳು ಅರೆಬಿಕ್, ಹಿಂದಿ, ಕನ್ನಡ ಸೇರಿದಂತೆ ಜಗತ್ತಿನ 170ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಈ ಲ್ಯಾನ್ಗ್ವೇಜಸ್ ಗಾರ್ಡನ್ ರಾತ್ರಿ ನೋಡಲು ಬೆಳಕಿನೊಂದಿಗೆ ಅದ್ಭುತವಾಗಿ ಕಂಗೊಳಿಸುತ್ತಿರುತ್ತದೆ.


