ದುಬೈ: ಇಲ್ಲಿನ ಮಿಲೇನಿಯಮ್ ಏರ್‌ಪೋರ್ಟ್ ಹೋಟೆಲ್‌ನ ಅಲ್ ಗರ್ಹೌದ್‌ನಲ್ಲಿ ರವಿವಾರ ಸಂಘಟಕ ಶೋಧನ್ ಪ್ರಸಾದ್ ಸಾರಥ್ಯದ ಸಂಧ್ಯಾ ಕ್ರಿಯೇಷನ್ಸ್ ಈವೆಂಟ್ ನೆಟ್‌ವರ್ಕ್ ತಂಡ (SCENT) “ಆಟಿಡೊಂಜಿ ದಿನ-2025” ಸೀಸನ್ 4 ಅನ್ನು ಬಹಳ ಯಶಸ್ವಿಯಾಗಿ ಆಯೋಜಿಸಿತ್ತು.





ಯುಎಇಯಾದ್ಯಂತ 2,000ಕ್ಕೂ ಹೆಚ್ಚು ತುಳುವರು ಮತ್ತು ಕನ್ನಡಿಗರು ಆಟಿಡೊಂಜಿ ದಿನವನ್ನು ಹಬ್ಬದ ರೀತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ಮಕ್ಕಳು, ಹಿರಿಯರು, ಕಿರಿಯರು ಭೇದ ಭಾವವಿಲ್ಲದೆ ಒಟ್ಟು ಸೇರುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟರು.
ಮಿಲೇನಿಯಮ್ ಏರ್‌ಪೋರ್ಟ್ ಹೋಟೆಲ್‌ನ ಹೊರಗಿನಿಂದ ಭವ್ಯ ಮತ್ತು ವರ್ಣರಂಜಿತ ಮೆರವಣಿಗೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ತುಳು ಸಾಂಪ್ರದಾಯವನ್ನು ಮೆಲುಕು ಹಾಕುವಂತಿತ್ತು.











ಕಾರ್ಯಕ್ರಮವನ್ನು ಗಣ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಉಡುಪಿಯ ತೊಟ್ಟಂ ಚರ್ಚ್‌ನ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಡೆನಿಸ್ ಡೇಸಾ ಹಾಗು ಚೊಕ್ಕಬೆಟ್ಟು ಮಸೀದಿ ಇಮಾಮ್ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಭಾಗವಹಿಸಿದ್ದರು. ಇದೇ ವೇಳೆ “ಪಿಂಗಾರ” ಅನಾವರಣ, ಮಲ್ಲಿಗೆ ಗಿಡಕ್ಕೆ ನೀರು ಸುರಿಯುವ ಕಾರ್ಯವನ್ನು ಅತಿಥಿಗಳು ನೆರವೇರಿಸಿದರು.
ಸಮಾರಂಭದಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂ ಮತ್ತು ಯುಎಇ ಬಂಟ್ಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ತನ್ವಿ ಗ್ರೂಪ್ ಆಫ್ ಕಂಪನಿಯ ದೇವಿಕಾ ಆಚಾರ್ಯ, ವಿ3 ಇಂಟಿಗ್ರೇಟೆಡ್ ಸೊಲ್ಯೂಷನ್ಸ್‌ನ ವಿಶ್ವನಾಥ ಪ್ರಭು ಮತ್ತು ಜಯಶ್ರೀ ಪ್ರಭು, ನ್ಯೂ ಶೀಲ್ಡ್ ಇನ್ಶುರೆನ್ಸ್ ಬ್ರೋಕರ್‌ನ ಅರವಿಂದ್ ಉಚ್ಚಿಲ್ ಮತ್ತು ಸಚಿನ್ ಸಿ.ಎ., ಮೊಸಾಕೊ ಶಿಪ್ಪಿಂಗ್ & ಫಾರ್ವರ್ಡ್ ಕಂಪನಿಯ ಎಂಡಿ ಡಾ. ಫ್ರಾಂಕ್ ಡೆವಿಡ್ ಫೆರ್ನಾಂಡಿಸ್, ಸಾಹೇಬನ್ ವೆಲ್ಫೇರ್ ಟ್ರಸ್ಟ್‌ನ ಸಿರಾಜ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.










ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಮಳಿಗೆಗಳು ಎಲ್ಲರ ಗಮನ ಸೆಳೆಯಿತು. ತುಳುನಾಡಿನ ವಿವಿಧ ಸಮುದಾಯಗಳ ಸಂಘಟನೆಗಳ ಮಳಿಗೆಗಳು ಆಹಾರ ಮಳಿಗೆಯಲ್ಲಿ ರಾರಾಜಿಸುತ್ತಿದ್ದವು. ಸಾಂಪ್ರದಾಯಿಕ ಸವಿಯಾದ “ಮೆಥೆ ಗಂಜಿ” ಜೊತೆಗೆ ವಿವಿಧ ರೀತಿಯ ಚಟ್ನಿ, ಬಗೆಬಗೆಯ ತಿಂಡಿ-ತಿನಸುಗಳು ಆಹಾರ ಮಳಿಗೆಗಳಲ್ಲಿ ಘಮಘಮ ಅನಿಸುವಂತಿತ್ತು.
ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನರಂಜನೆಯನ್ನು ನೀಡಿತು. ವಿದುಷಿ ಶಶಿ ರೇಖಾ ಅವರು ತಮ್ಮ ಶಿಷ್ಯರೊಂದಿಗೆ ವಿಶೇಷ ‘ಆಟಿ ನೃತ್ಯ’ ಪ್ರದರ್ಶನವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಯುಎಇ ಮೂಲದ ತುಳುನಾಡಿನ ಪ್ರಸಿದ್ಧ ಗಾಯಕರಿಂದ ಲೈವ್ ಸಂಗೀತ ಪ್ರದರ್ಶನ ಕೂಡ ಆಯೋಜಿಸಲಾಗಿತ್ತು. ಯುಎಇ ಬಂಟ್ಸ್‌ನಿಂದ “ಆಟಿದ ಗೌಜಿ” ಎಂಬ ಸುಂದರ ಸಾಂಸ್ಕೃತಿಕ ಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು. ಸೋನಿಯಾ ಲೋಬೊ ಅವರ ಆಕರ್ಷಕ ಶಾಸ್ತ್ರೀಯ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.
ಬೆಳಗ್ಗೆಯಿಂದ ಸಂಜೆಯ ವರಗೆ ನಡೆದ ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮ ರೂವಾರಿ, ಸಂಘಟಕ ಶೋಧನ ಪ್ರಸಾದ್ ಸ್ವಾಗತಿಸಿದರು. ಪ್ರಶಾಂತ್ ಸಿಕೆ ಹಾಗು ಶ್ರಾವ್ಯ ಕಾರ್ಯಕ್ರಮವನ್ನು ಆರಂಭದಿಂದ ಕೊನೆಯ ವರಗೆ ಅಚ್ಚುಕಟ್ಟಾಗಿ ನಿರೂಪಿಸಿದರು.
























