ಆಸ್ಟ್ರೇಲಿಯಆಸ್ಟ್ರೇಲಿಯಾದ 'ಮೆಲ್ಬರ್ನ್‌ ಕನ್ನಡ ಭವನ'ಕ್ಕೆ ರಾಜ್ಯ ಸರಕಾರದಿಂದ ಆರ್ಥಿಕ...

ಆಸ್ಟ್ರೇಲಿಯಾದ ‘ಮೆಲ್ಬರ್ನ್‌ ಕನ್ನಡ ಭವನ’ಕ್ಕೆ ರಾಜ್ಯ ಸರಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ: ‘ಮೆಲ್ಬರ್ನ್‌ ಕನ್ನಡ ಸಂಘ’ದ ಅಧ್ಯಕ್ಷ ಗಂಗಾಧರ್ ಬೇವಿನಕೊಪ್ಪ

➡️ ಕಾಂಗರೂ ನಾಡಲ್ಲಿ 'ಕನ್ನಡದ ಕಹಳೆ' ಮೊಳಗಿಸುತ್ತಿರುವ 'ಮೆಲ್ಬರ್ನ್‌ ಕನ್ನಡ ಸಂಘ' ➡️ 300ಕ್ಕೂ ಹೆಚ್ಚು ಮಂದಿ ಮಕ್ಕಳು ಇಲ್ಲಿ ಕನ್ನಡ ಕಲಿಯುತ್ತಿದ್ದಾರೆ ➡️ ಇಲ್ಲಿನ ಗ್ರಂಥಾಲಯದಲ್ಲಿ 3 ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳಿವೆ

ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ ‘ಮೆಲ್ಬರ್ನ್‌ ಕನ್ನಡ ಸಂಘ’ವು ‘ಕನ್ನಡದ ಕಹಳೆ’ ಮೊಳಗಿಸುವ ಮೂಲಕ ಕನ್ನಡ ನಾಡು-ನುಡಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಬಹಳಷ್ಟು ಹಳೆಯ ಕನ್ನಡಪರ ಸಂಘಟನೆಗಳಲ್ಲೊಂದು ಎಂಬ ಖ್ಯಾತಿಗೆ ಭಾಜನವಾಗಿರುವ ‘ಮೆಲ್ಬರ್ನ್‌ ಕನ್ನಡ ಸಂಘ’ವು ಆಸ್ಟ್ರೇಲಿಯಾದ ವಿಕ್ಟೊರಿಯಾದ ಮೆಲ್ಬರ್ನ್‌ನಲ್ಲಿರುವ ಹೀದರ್ಟನ್ ರಸ್ತೆಯ ನೋಬಲ್ ಪಾರ್ಕಿನಲ್ಲಿ ‘ಮೆಲ್ಬರ್ನ್‌ ಕನ್ನಡ ಭವನ’ವನ್ನು ನಿರ್ಮಿಸುವ ಮೂಲಕ ಕನ್ನಡವನ್ನು ಇಡೀ ಜಗತ್ತಿಗೆ ಪರಿಚಯಿಸಿ ಕೊಟ್ಟಿದೆ. ಪಾಶ್ಚಿಮಾತ್ಯ ದೇಶದಲ್ಲಿನ ಮೊದಲ ಕನ್ನಡ ಭವನ ಎಂಬ ಖ್ಯಾತಿಗೂ ಒಳಗಾಗಿದೆ. ಈ ‘ಮೆಲ್ಬರ್ನ್‌ ಕನ್ನಡ ಸಂಘ’ವನ್ನು ಕಟ್ಟಿ ಬೆಳೆಸಿರುವವರಲ್ಲಿ ಈಗಿನ ಅಧ್ಯಕ್ಷರೂ ಆಗಿರುವ ಗಂಗಾಧರ್ ಬೇವಿನಕೊಪ್ಪ ಹಾಗು ಸಂಚಾಲಕರಾಗಿರುವ ಶ್ರೀನಿವಾಸ್ ಶರ್ಮ ಪ್ರಮುಖರು.

ಗಂಗಾಧರ್ ಬೇವಿನಕೊಪ್ಪ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರು ಎಂಬ ಹಳ್ಳಿಯವರು. 1990ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಉದ್ಯೋಗಕ್ಕಾಗಿ ಆಗಮಿಸಿದ ಗಂಗಾಧರ್ ಬೇವಿನಕೊಪ್ಪ, ಆರಂಭದಲ್ಲಿ ಎಂಜಿನಿಯರ್ ಆಗಿ ಉದ್ಯೋಗ ಆರಂಭಿಸಿ ಈಗ ಸ್ವಂತ ಉದ್ಯಮವನ್ನು ಕಟ್ಟಿಕೊಂಡಿದ್ದಾರೆ. ಕನ್ನಡ ನಾಡು-ನುಡಿ ಬಗ್ಗೆ ಅಪಾರ ಕಾಳಜಿ ಜೊತೆಗೆ ಆಸ್ಟ್ರೇಲಿಯಾಕ್ಕೆ ಬರುವ ಕನ್ನಡಿಗರಿಗೆ ಸಹಾಯ, ಸಹಕಾರವನ್ನು ನೀಡುತ್ತಲೇ ಬಂದಿದ್ದಾರೆ.

ಶ್ರೀನಿವಾಸ್ ಶರ್ಮ ಅವರು ಮೂಲತಃ ಬೆಂಗಳೂರಿನವರು. ಕಳೆದ 30 ವರ್ಷಗಳಿಂದ ಮೆಲ್ಬರ್ನ್‌ನಲ್ಲಿ ನೆಲೆಸಿದ್ದು, ಖಾಸಗಿ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೊಂದಿಗೆ globalkannadiga.com ನಡೆಸಿದ ಸಂದರ್ಶನ ಹೀಗಿದೆ.

ಪ್ರಶ್ನೆ: ಆಸ್ಟ್ರೇಲಿಯಾದಲ್ಲಿ ಮೆಲ್ಬರ್ನ್‌ ಕನ್ನಡ ಸಂಘವನ್ನು ಯಾವಾಗ ಸ್ಥಾಪಿಸಲಾಯಿತು? ಯಾವ ಉದ್ದೇಶಕ್ಕಾಗಿ ಆರಂಭಿಸಲಾಯಿತು…? ಈ ಬಗ್ಗೆ ಸಣ್ಣ ವಿವರಣೆ ನೀಡುತ್ತೀರಾ….

ಗಂಗಾಧರ್ ಬೇವಿನಕೊಪ್ಪ: ಮೆಲ್ಬರ್ನ್‌ ಕನ್ನಡ ಸಂಘವು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ 1986ರ ಏಪ್ರಿಲ್ 10ರಂದು ಆರಂಭವಾಯಿತು. 1968ರಿಂದ ಆಸ್ಟ್ರೇಲಿಯಾಕ್ಕೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಹುದ್ದೆಗಳನ್ನು ಹುಡುಕಿಕೊಂಡು ಬರುತ್ತಿದ್ದ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. 1980ರ ನಂತರ ಕನ್ನಡಿಗರ ಸಂಖ್ಯೆ ಹೆಚ್ಚುತ್ತಾ ಬಂತು. ಈ ವೇಳೆ ಸುಮಾರು 50 ಕನ್ನಡಿಗರ ಕುಟುಂಬಗಳು ಮೆಲ್ಬರ್ನ್‌ನಲ್ಲಿತ್ತು. ಅವರೆಲ್ಲ ಆಗಾಗ್ಗ ಭೇಟಿಯಾಗಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಜೊತೆಗೆ ಹಬ್ಬ ಹರಿದಿನಗಳನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ಆಚರಿಸುತ್ತಿದ್ದರು. 1986ರಲ್ಲಿ ಸ್ನೇಹಕೂಟವೊಂದನ್ನು ರಚಿಸಿದಾಗ ಅಲ್ಲಿ ಕನ್ನಡ ಸಂಘ ರಚನೆಯ ಪರಿಕಲ್ಪನೆ ಹುಟ್ಟಿಕೊಂಡಿತು. ಅನಂತರ 1986ರ ಏಪ್ರಿಲ್ 10ರ ಯುಗಾದಿ ಸಮಯದಲ್ಲಿ ಮೆಲ್ಬರ್ನ್‌ ಕನ್ನಡ ಸಂಘವನ್ನು ಸ್ಥಾಪಿಸಲಾಯಿತು.

ಪ್ರಶ್ನೆ: ಯಾವೆಲ್ಲ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಂಘ ಆರಂಭಿಸಿದ್ದೀರಿ…?

ಗಂಗಾಧರ್ ಬೇವಿನಕೊಪ್ಪ: ಮೆಲ್ಬರ್ನ್‌ ಕನ್ನಡ ಸಂಘದ ಮೂಲ ಧ್ಯೇಯೋದ್ದೇಶ ಕನ್ನಡ ಭಾಷೆ-ಸಂಸ್ಕೃತಿಯನ್ನು ಉಳಿಸುವುದು, ಬಳಸುವುದು, ಬೆಳೆಸುವುದು. ಈ ನಿಟ್ಟಿನಲ್ಲಿ ಹತ್ತಲವು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಸಂಘಟನೆಯನ್ನು ಆಸ್ಟ್ರೇಲಿಯಾ ಸರಕಾರದಲ್ಲಿ ನೋಂದಾವಣೆ ಮಾಡಿದ್ದೀರಾ ? ಯಾವಾಗ? ಯಾವ ವಿಭಾಗದಲ್ಲಿ ನೋಂದಾವಣೆ ಮಾಡಲಾಗಿದೆ ?

ಗಂಗಾಧರ್ ಬೇವಿನಕೊಪ್ಪ: ಆಸ್ಟ್ರೇಲಿಯಾದಲ್ಲಿರುವ ಮೆಲ್ಬರ್ನ್‌ ನಗರ ವಿಕ್ಟೋರಿಯಾ ಎಂಬ ರಾಜ್ಯದಲ್ಲಿದೆ. ನಮ್ಮ ಮೆಲ್ಬರ್ನ್‌ ಕನ್ನಡ ಸಂಘವನ್ನು ವಿಕ್ಟೋರಿಯಾ ರಾಜ್ಯದಲ್ಲಿ 2005ರ ಜೂನ್ 5ರಂದು ನೋಂದಣಿ ಮಾಡಿದ್ದೇವೆ. ಲಾಭರಹಿತ ಸಂಸ್ಥೆಯಾಗಿರುವ ಮೆಲ್ಬರ್ನ್‌ ಕನ್ನಡ ಸಂಘಕ್ಕೆ ಅದರದ್ದೇ ಆದ ಸ್ವಂತ ಸಂವಿಧಾನವೂ ಇದೆ. ಅದಲ್ಲದೆ ಪ್ರತಿ ವರ್ಷ ವಾರ್ಷಿಕ ವರದಿಯನ್ನು ಸಂಕ್ಷಿಪ್ತವಾಗಿ ಮಂಡಿಸುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಸಂಘಟನೆ ಮೂಲಕ ಏನೇನು ಪ್ರಮುಖ ಕಾರ್ಯಕ್ರಮಗಳು ಈವರೆಗೆ ನಡೆದಿವೆ ?

ಗಂಗಾಧರ್ ಬೇವಿನಕೊಪ್ಪ: ಮೆಲ್ಬರ್ನ್‌ ಕನ್ನಡ ಸಂಘ ಆರಂಭದಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ಬಹಳ ಜೋರಾಗಿಯೇ ಆಚರಿಸುತ್ತಿದ್ದೇವೆ. 1996ರಲ್ಲಿ 10ನೇ ವರ್ಷ, 2011ರಲ್ಲಿ 20ನೇ ವರ್ಷವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಿದೆವು. ಮೆಲ್ಬರ್ನ್‌ ಕನ್ನಡ ಸಂಘದ ಆಶ್ರಯದಲ್ಲಿ 2004ರಲ್ಲಿ ಗ್ರಂಥಾಲಯವನ್ನು ಆರಂಭ ಮಾಡಿ, ಅದರಲ್ಲಿ 3 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನಿಟ್ಟು ಎಲ್ಲ ಕನ್ನಡಿಗರಿಗೆ ಓದುವುದಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಜೊತೆಗೆ ಗ್ರಂಥಾಲಯದ ಗ್ರಂಥಪಾಲಕರು ಒಂದು ಕ್ಲಬ್’ನ್ನು ಮಾಡಿಕೊಂಡು ಪ್ರತಿ 2-3 ತಿಂಗಳಿಗೊಮ್ಮೆ ಪುಸ್ತಕವನ್ನು ತೆಗೆದುಕೊಂಡು ಓದಿ ಚರ್ಚೆ ಮಾಡುತ್ತಾರೆ. ಅದು ಇಲ್ಲಿನ ಕನ್ನಡಾಭಿಮಾನಿಗಳಿಗೆ ಹೆಮ್ಮೆಯ ವಿಷಯ ಹಾಗು ಕನ್ನಡವನ್ನು ಬೆಳಸುವಲ್ಲಿಯೂ ಪೂರಕವಾಗಿದೆ.

ಪ್ರಶ್ನೆ: ಆಸ್ಟ್ರೇಲಿಯಾದಲ್ಲಿ ಕನ್ನಡಿಗರ ಮಕ್ಕಳಿಗೆ ಆರಂಭಿಸಿರುವ ಕನ್ನಡ ಶಾಲೆ ಯಾವ ಮಟ್ಟದಲ್ಲಿದೆ…? ಎಷ್ಟು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ..? ಇದಕ್ಕೆ ಸ್ಥಳೀಯ ಸರಕಾರದಿಂದ ಸಹಕಾರ ಇದೆಯೇ…?

ಗಂಗಾಧರ್ ಬೇವಿನಕೊಪ್ಪ: ಮೆಲ್ಬರ್ನ್‌ನಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ 2011ರಿಂದ ಕನ್ನಡವನ್ನು ಕಲಿಸಲು ಆರಂಭಿಸಿದ್ದೇವೆ. ವಿಕ್ಟೋರಿಯ ರಾಜ್ಯದಲ್ಲಿ ವಿಕ್ಟೋರಿಯನ್ ಸ್ಕೂಲ್ ಆಫ್ ಲ್ಯಾಂಗ್ವೇಜಸ್(VSL) ಎಂಬ ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗವಿದ್ದು, ಆ ವಿಭಾಗದ ಮೂಲಕ ಬೇರೆ ಬೇರೆ ದೇಶಗಳ ಜನರಿಗೆ ಅವರವರ ಭಾಷೆಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಇಲ್ಲಿನ ಸರಕಾರವೇ ಒಬ್ಬ ಶಿಕ್ಷಕರನ್ನು ನೇಮಿಸಲು ಅವಕಾಶ ಮಾಡಿಕೊಟ್ಟಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ನಾವು ಪ್ರತೀ ಶನಿವಾರದಂದು ಸುಮಾರು 4 ಗಂಟೆಗಳ ಕಾಲ ಇಲ್ಲಿರುವ ಕನ್ನಡಿಗರ ಮಕ್ಕಳಿಗೆ 4 ಕೇಂದ್ರಗಳಲ್ಲಿ ಕನ್ನಡವನ್ನು ಕಲಿಸುತ್ತಾ ಬಂದಿದ್ದೇವೆ. 300ಕ್ಕೂ ಹೆಚ್ಚು ಮಂದಿ ಮಕ್ಕಳು ಈ ಕೇಂದ್ರಗಳಲ್ಲಿ ಕನ್ನಡವನ್ನು ಬಹಳ ಆಸಕ್ತಿಯಿಂದ ಕಲಿಯುತ್ತಿದ್ದು, ಇವರೆಲ್ಲರಿಗೂ ಕನ್ನಡವನ್ನು ಸ್ಪಷ್ಟವಾಗಿ ಓದಲು, ಬರೆಯಲು ಬರುತ್ತಿದೆ. ಸಾಕಷ್ಟು ಕನ್ನಡ ಪುಸ್ತಕವನ್ನು ಓದುತ್ತಾರೆ, ಕನ್ನಡ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಪ್ರಶ್ನೆ: ಮೆಲ್ಬರ್ನ್‌ ಕನ್ನಡ ಸಂಘದಿಂದ ನಡೆಯುವ ಪ್ರಮುಖ ಕಾರ್ಯಕ್ರಮಗಳೇನು…?

ಗಂಗಾಧರ್ ಬೇವಿನಕೊಪ್ಪ: ಮೆಲ್ಬರ್ನ್‌ ಕನ್ನಡ ಸಂಘ ಪ್ರತಿ ವರ್ಷ 2 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಒಂದು ಯುಗಾದಿ ಮತ್ತು ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ದಸರಾ-ದೀಪಾವಳಿಯಯನ್ನು ಆಚರಿಸುತ್ತ ಬಂದಿದ್ದೇವೆ. ಇದರ ಜೊತೆಗೆ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ಆಚರಿಸುತ್ತೇವೆ. 1990ರಲ್ಲಿ ನಾನು ಮೆಲ್ಬರ್ನ್‌ಗೆ ಬಂದಾಗಿನಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ.

ಪ್ರಶ್ನೆ: ಮೆಲ್ಬರ್ನ್‌ನಲ್ಲಿ ಎಷ್ಟು ಕನ್ನಡ ಕುಟುಂಬಗಳಿವೆ…? ಸುಮಾರು ಎಷ್ಟು ಜನ ಕನ್ನಡಿಗರಿರಬಹುದು ನಿಮ್ಮ ಅನಿಸಿಕೆ ಪ್ರಕಾರ..?

ಗಂಗಾಧರ್ ಬೇವಿನಕೊಪ್ಪ: 1986ರ ಯುಗಾದಿ ಸಂದರ್ಭದಲ್ಲಿ ಮೆಲ್ಬರ್ನ್‌ ಕನ್ನಡ ಸಂಘ ಸ್ಥಾಪನೆಗೊಂಡಾಗ ಮೆಲ್ಬರ್ನ್‌ನಲ್ಲಿ ಸುಮಾರು 50 ಕನ್ನಡಿಗರ ಕುಟುಂಬಗಳಿತ್ತು. ಈಗ 5 ಸಾವಿರಕ್ಕೂ ಹೆಚ್ಚು ಕನ್ನಡಿಗರ ಕುಟುಂಬಗಳು ಇಲ್ಲಿ ನೆಲೆಸಿವೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಂಥ ಸುಮಾರು 20 ಸಾವಿರ ಮಂದಿ ಕನ್ನಡಿಗರು ಮೆಲ್ಬರ್ನ್‌(ವಿಕ್ಟೋರಿಯಾ) ನಗರದಲ್ಲಿ ನೆಲೆಸಿದ್ದಾರೆ.

ಪ್ರಶ್ನೆ: ಆಸ್ಟ್ರೇಲಿಯಾದಲ್ಲಿ ‘ಅಕ್ಕಿ’ ಸಂಸ್ಥೆ ಆರಂಭಿಸಿರುವ ಕುರಿತು ವಿವರ ನೀಡುತ್ತೀರಾ…? ಅದರ ರಚನೆ ಹೇಗಿರಲಿದೆ..?

ಗಂಗಾಧರ್ ಬೇವಿನಕೊಪ್ಪ: ಆಸ್ಟ್ರೇಲಿಯಾದಲ್ಲೂ ಹಲವು ರಾಜ್ಯಗಳು ಮತ್ತು ಪ್ರಾಂತ್ಯಗಳು(territories) ಇವೆ. ಎಲ್ಲ ಕಡೆ ಕನ್ನಡಪರ ಸಂಘಗಳು ಸ್ಥಾಪನೆಯಾಗಿವೆ. ಈ ಎಲ್ಲ ಕನ್ನಡಪರ ಸಂಘಗಳನ್ನು ಸೇರಿಸಿ ಒಂದು ಒಕ್ಕೂಟವನ್ನು ಮಾಡಿದ್ದು, ಅದಕ್ಕೆ ‘ಅಕ್ಕಿ’ ಅಂದರೆ ‘ಆಸ್ಟ್ರೇಲಿಯಾ ಕನ್ನಡ ಕೂಟಾಸ್ ಇನ್ ಕಾರ್ಪೊರೇಟೆಡ್’ ಹೆಸರನ್ನು ಇಟ್ಟಿದ್ದೇವೆ. ಅಮೇರಿಕದಲ್ಲಿ ‘ಅಕ್ಕ’, ಯುನೈಟೆಡ್ ಕಿಂಗಡಮ್’ನಲ್ಲಿ ‘ನಾವಿಕ’, ನಮ್ಮಲ್ಲಿ ಇನ್ನು ಮುಂದೆ ‘ಅಕ್ಕಿ’ ಇರಲಿದೆ. ಇದರ ಪ್ರಸಕ್ತ ಅಧ್ಯಕ್ಷನಾಗಿಯೂ ನಾನು ಸೇವೆ ಸಲ್ಲಿಸುತ್ತಿದ್ದೇನೆ.

ಪ್ರಶ್ನೆ: ನಿಮ್ಮ ಸಂಘದ ಅತ್ಯಂತ ಪ್ರಮುಖ ಸಾಧನೆಗಳು ಏನೇನು ಅಂತ ಸ್ವಲ್ಪ ಹೇಳ್ತೀರಾ ?

ಗಂಗಾಧರ್ ಬೇವಿನಕೊಪ್ಪ: ಭಾರತಬಿಟ್ಟರೆ ಜಗತ್ತಿನಲ್ಲಿ ಕನ್ನಡ ಭವನಗಳು ಎರಡೇ ಕಡೆಗಳಲ್ಲಿವೆ. ಒಂದು ಬಹರೈನಿನಲ್ಲಿ, ಇನ್ನೊಂದು ನಮ್ಮಲ್ಲಿ(ಆಸ್ಟ್ರೇಲಿಯಾ). ಬಹರೈನಿನಲ್ಲಿ ಕರ್ನಾಟಕ ಸರಕಾರದ ಸಹಾಯದಿಂದ ಕಟ್ಟಿರುವಂಥದ್ದು. ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮದೇ ಮೊದಲನೇ ಕನ್ನಡ ಭವನ. ಇದನ್ನು ನಮ್ಮಲ್ಲಿನ ಕನ್ನಡಿಗರೆಲ್ಲ ಸೇರಿ ಅವರ ಕೈಯಿಂದ ಹಣ ಹಾಕಿ ಖರೀದಿಸಿರುವಥದ್ದು. ಇದಕ್ಕೆ ಸರಕಾರದಿಂದ ಯಾವುದೇ ರೀತಿಯ ಬೇರೆ ಸಹಾಯ, ಸಹಕಾರ ಸಿಕ್ಕಿಲ್ಲ. ಈ ಕನ್ನಡ ಭವನ ಇರುವ ಕಟ್ಟಡ ಹಳೆಯದಾಗಿದ್ದು, ಇದನ್ನು ನವೀಕರಣ ಮಾಡುವ ಯೋಜನೆ ಇದೆ. 3 ಅಂತಸ್ತಿನ ಕಟ್ಟಡ ಕಟ್ಟಲು ನಾವು ನಿರ್ಧರಿಸಿದ್ದೇವೆ. ಒಂದರಲ್ಲಿ ಸಭಾಂಗಣ, ಇನ್ನೊಂದರಲ್ಲಿ ಗ್ರಂಥಾಲಯ ಮತ್ತು ಸಭೆ ನಡೆಸಲು ಕೊಠಡಿ, ಮತ್ತೊಂದು ಹಂತಸ್ತಿನಲ್ಲಿ ಕರ್ನಾಟಕದಿಂದ ಬರುವ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಇದಕ್ಕೆ ಬಹಳಷ್ಟು ಆರ್ಥಿಕ ನೆರವಿನ ಅಗತ್ಯತೆ ಇದೆ. ಈ ಬಗ್ಗೆ ಕರ್ನಾಟಕ ಸರಕಾರ ಹಾಗು ಇಲ್ಲಿನ ಸರಕಾರಕ್ಕೂ ಮನವಿ ಮಾಡಿದ್ದೇವೆ. ಜೊತೆಗೆ ಕರ್ನಾಟಕದಲ್ಲಿರುವ ದಾನಿಗಳು ಕೂಡ ಇದಕ್ಕೆ ಸಹಕಾರ ನೀಡುವುದಾದರೆ ನಮ್ಮನ್ನು ಸಂಪರ್ಕಿಸಬಹುದು.

ಪ್ರಶ್ನೆ: ಕರ್ನಾಟಕ ಸರಕಾರಕ್ಕೆ ಮೆಲ್ಬರ್ನ್‌ ಕನ್ನಡ ಸಂಘ ಇಡುವ ಬೇಡಿಕೆಗಳೇನು ?

ಗಂಗಾಧರ್ ಬೇವಿನಕೊಪ್ಪ: ಇಲ್ಲಿ ನಾವು ಕನ್ನಡ ಭವನ ನಿರ್ಮಿಸಿರುವುದು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ. ಬಹರೈನ್’ನಲ್ಲಿ ಕನ್ನಡ ಭವನ ಕಟ್ಟಲು ಅಲ್ಲಿನವರೊಂದಿಗೆ ಕರ್ನಾಟಕ ಸರಕಾರವು ಸಹಕಾರ ನೀಡಿದೆ. ಸುಮಾರು 2-3 ಕೋಟಿ ರೂ. ಕರ್ನಾಟಕ ಸರಕಾರ ನೀಡಿದೆ. ಆದರೆ ಮೆಲ್ಬೋರ್ನ್ ಕನ್ನಡ ಭವನಕ್ಕೆ ಕರ್ನಾಟಕ ಸರಕಾರದಿಂದ, ಇಲ್ಲಿನ ಸರಕಾರದಿಂದ ಇಲ್ಲಿಯವರಗೆ ಯಾವುದೇ ಸಹಾಯ, ಸಹಕಾರ ಸಿಕ್ಕಿಲ್ಲ. ಮೆಲ್ಬರ್ನ್‌ ಕನ್ನಡ ಭವನದ ನವೀಕರಿಸುವ ಮೂಲಕ ಕನ್ನಡ ಭಾಷೆ, ಕನ್ನಡಿಗರಿಗೆ ಇನ್ನಷ್ಟು ಸಹಾಯ ಮಾಡಲು ನಾವು ಮುಂದಾಗಿದ್ದು, ಈ ನವೀಕರಣಕ್ಕೆ ಈಗ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಈ ಹಿಂದೆ ಹಲವು ಬಾರಿ ಕರ್ನಾಟಕ ಸರಕಾರಕ್ಕೆ ನೆರವಿಗಾಗಿ ಮನವಿ ಮಾಡಿದ್ದರೂ, ಅದು ಈಡೇರಿಲ್ಲ. ಕೆಲ ಸಮಯದ ಹಿಂದೆ ಮಾನ್ಯ ಮುಖ್ಯಮಂತ್ರಿ ಅವರನ್ನು ನಮ್ಮ ಪದಾಧಿಕಾರಿಗಳು ಭೇಟಿಯಾಗಿ ನೆರವು ನೀಡುವಂತೆ ಮನವಿ ಮಾಡಿ ಬಂದಿದ್ದಾರೆ. ಅದಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮಗೆ ಕರ್ನಾಟಕ ಸರಕಾರದಿಂದ ಸುಮಾರು 3 ಕೋಟಿ ರೂ.ವರಗೆ ಧನ ಸಹಾಯದ ಅನಿವಾರ್ಯತೆ ಇದೆ. ಈ ನೆರವನ್ನು ನೀಡುವ ಮೂಲಕ ಮೆಲ್ಬರ್ನ್‌ ಕನ್ನಡ ಭವನಕ್ಕೆ ಶಕ್ತಿ ತುಂಬುವ ಕೆಲಸ ಕರ್ನಾಟಕ ರಾಜ್ಯ ಸರಕಾರದಿಂದ ಆಗಬೇಕಿದೆ.

ಆಸ್ಟ್ರೇಲಿಯಾಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವುದೇ ನಮ್ಮ ‘ಕನ್ನಡ ಭವನ’ದ ಮೂಲ ಉದ್ದೇಶ : ಶ್ರೀನಿವಾಸ್ ಶರ್ಮ

ಪ್ರಶ್ನೆ: ಮೆಲ್ಬೋರ್ನ್ ಕನ್ನಡ ಸಂಘ ಆರಂಭದ ಬಗ್ಗೆ ಏನು ಹೇಳುತ್ತೀರಿ…? ಕನ್ನಡ ಸಂಘದ ಅನಿವಾರ್ಯತೆ ಆಗ ಇತ್ತೇ…? ಯಾವ ಕನಸು ಇಟ್ಟು ಕೊಂಡು ಸಂಘವನ್ನು ಆರಂಭಿಸಿದ್ದೀರಿ…?

ಶ್ರೀನಿವಾಸ್ ಶರ್ಮ: ಆಸ್ಟ್ರೇಲಿಯಾದಲ್ಲಿ ಕೇವಲ ಬಿಳಿಯರಿಗೆ ಮಾತ್ರ ಅವಕಾಶವಿತ್ತು. ಆಗ ಕರ್ನಾಟಕದಿಂದ ಬಂದವರು ವೈದ್ಯರು, ಎಂಜಿನಿಯರ್, ಉದ್ಯಮಿಗಳು. ಇವರೆಲ್ಲ ಉನ್ನತ ವರ್ಗದ ಉದ್ಯೋಗಿಗಳು. ಇವರೆಲ್ಲ ಸಮಯ ಕಳೆಯಲು ಪಾರ್ಕ್ ಇನ್ನಿತರ ಕಡೆಗಳಲ್ಲಿ ಸೇರುತ್ತಿದ್ದರು. ಈ ವೇಳೆ ಕನ್ನಡ ಸಂಘವನ್ನು ಕಟ್ಟುವ ವಿರ್ಧಾರಕ್ಕೆ ಬಂದು ಮೆಲ್ಬರ್ನ್‌ನಲ್ಲಿ ಕನ್ನಡ ಸಂಘದ ಹುಟ್ಟಿಗೆ ಕಾರಣವಾಯಿತು. ಇಲ್ಲಿನ ಕನ್ನಡಿಗರಿಗೆ ತಮ್ಮ ಮಾತೃ ಭಾಷೆಯ ಮೇಲಿನ ಅಭಿಮಾನವೇ ಈ ಕನ್ನಡ ಸಂಘದ ಸ್ಥಾಪನೆಗೆ ಕಾರಣ.

ಪ್ರಶ್ನೆ: ʻಮೆಲ್ಬರ್ನ್‌ ಕನ್ನಡ ಭವನʼ ಯಾವಾಗ ಲೋಕಾರ್ಪಣೆ ಆಯಿತು..? ಯಾವ ಉದ್ದೇಶಕ್ಕಾಗಿ ಈ ಭವನವನ್ನು ನಿರ್ಮಿಸಲಾಗಿದೆ…? ಈ ಬಗ್ಗೆ ವಿವರಣೆ ಕೊಡಬಹುದೇ…?

ಶ್ರೀನಿವಾಸ್ ಶರ್ಮ: ʻಮೆಲ್ಬರ್ನ್‌ ಕನ್ನಡ ಭವನʼ 2023ರ ಜುಲೈ 8ರಂದು ಲೋಕಾರ್ಪಣೆ ಆಯಿತು. ಕೊರೋನಾ ಸಂದರ್ಭದಲ್ಲಿ ಕಟ್ಟಡವನ್ನು ಖರೀದಿಸಿದ್ದೆವು. ಇದೊಂದು ಸಣ್ಣ, ಹಳೆಯ ಕಟ್ಟಡ. ಇದನ್ನು ಕೆಡವಿ ದೊಡ್ಡದಾಗಿ ಮೂರು ಅಂತಸ್ತಿನ ಕಟ್ಟಡ ಮಾಡಬೇಕೆಂಬ ಯೋಜನೆ ಇದೆ. ಈ ಕಟ್ಟಡ ಖರೀದಿಸಲು ಇಲ್ಲಿನ ಕನ್ನಡ ಪ್ರಿಯರು ಬಡ್ಡಿರಹಿತವಾಗಿ ಹಣವನ್ನು ಸಾಲದ ರೂಪದಲ್ಲಿ ನೀಡಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಆದರೆ ಸಾಲದ ಹಣವನ್ನು ಅವರಿಗೆ ವಾಪಾಸು ನೀಡಬೇಕಿದೆ. ನಮಗೆ ಸರಕಾರದಿಂದ ಯಾವುದೇ ರೀತಿಯ ಆರ್ಥಿಕ ಸಹಾಯ, ಸಹಕಾರ ಸಿಕ್ಕಿಲ್ಲ. ಇಡೀ ವಿಶ್ವದಲ್ಲಿಯೇ ಇದು ಎರಡನೇ ಕನ್ನಡ ಭವನ. ಭವಿಷ್ಯದಲ್ಲಿ ಇದು ವಿಶ್ವದಲ್ಲಿಯೇ ದೊಡ್ಡ ಕನ್ನಡ ಭವನ ಆಗಲಿದೆ.

ಭವನ ನಿರ್ಮಿಸಿರುವ ಮೂಲ ಉದ್ದೇಶ ನಮ್ಮ ಕನ್ನಡ ಗ್ರಂಥಾಲಯ 24 ಗಂಟೆಗಳ ಕಾಲವು ತೆರೆದಿರಬೇಕು. ಇನ್ನೊಂದು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಸಿಗುವುದು ಬಹಳ ಕಷ್ಟ. ಅಂಥವರಿಗೆ ಈ ಕಟ್ಟಡದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದೆ. ಜೊತೆಗೆ ಕನ್ನಡವನ್ನು ಉಳಿಸಿ, ಬೆಳೆಸಲು ನಮಗೆ ನಮ್ಮದೇ ಆದ ಕನ್ನಡ ಸಂಘದ ಕಟ್ಟಡದ ಅವಶ್ಯಕತೆ ಇತ್ತು.

ಪ್ರಶ್ನೆ: ಆಸ್ಟ್ರೇಲಿಯಾದಲ್ಲಿ ಒಟ್ಟು ಎಷ್ಟು ಎಷ್ಟು ಕನ್ನಡ ಸಂಘಟನೆಗಳಿವೆ ? ಎಲ್ಲೆಲ್ಲಿ ಅವು ಕಾರ್ಯಾಚರಿಸುತ್ತಿವೆ? ಅವರರೊಂದಿಗಿನ ನಿಮ್ಮ ಒಡನಾಟ ಹೇಗಿದೆ…?

ಶ್ರೀನಿವಾಸ್ ಶರ್ಮ: ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳಲ್ಲಿ ಹಾಗು ಪ್ರಾಂತ್ಯಗಳಲ್ಲಿ ಕನ್ನಡ ಸಂಘಗಳಿವೆ. ಸಿಡ್ನಿ, ಮೆಲ್ಬರ್ನ್‌, ಬ್ರಿಸ್ಬನ್, ಪರ್ತ್, ಅಡಿಲೇಡ್, ತಸ್ಮಾನಿಯಾ ಸೇರಿದಂತೆ ಎಲ್ಲ ಕಡೆ ಕನ್ನಡ ಸಂಘ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಕನ್ನಡ ಸಂಘಗಳೊಂದಿಗೆ ನಮಗೆ ಉತ್ತಮ ಒಡನಾಟವಿದೆ. ಅದಕ್ಕಾಗಿಯೇ ನಾವು ‘ಅಕ್ಕಿ'(ಆಸ್ಟ್ರೇಲಿಯಾ ಕನ್ನಡ ಕೂಟಾಸ್ ಇನ್ ಕಾರ್ಪೊರೇಟೆಡ್) ಎಂಬ ಕೇಂದ್ರ ಸಂಘವನ್ನು ಕಟ್ಟಿದ್ದೇವೆ. ನಾವು ಇಲ್ಲಿಗೆ ಕರ್ನಾಟಕದಿಂದ ಹಲವಾರು ಕಲಾವಿದರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತೇವೆ. ಅವರು ಇಲ್ಲಿ ಒಂದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಬದಲು ಇಲ್ಲಿನ ಬೇರೆ ಬೇರೆ ರಾಜ್ಯಗಳಲ್ಲಿನ ಕನ್ನಡ ಸಂಘಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನಮಗೆ ಹೆಚ್ಚಿನ ಆರ್ಥಿಕ ಹೊರೆಯಾಗಲ್ಲ. ಜೊತೆಗೆ ಕಲಾವಿದರಿಗೂ ಇಲ್ಲಿಗೆ ಬಂದದ್ದಕ್ಕೆ ಸಾರ್ಥಕವಾಗುತ್ತೆ.

ಪ್ರಶ್ನೆ: ಮೆಲ್ಬರ್ನ್‌ನಲ್ಲಿ ಕನ್ನಡಿಗರಿಗಾಗಿ ಏನೆಲ್ಲ ಕಾರ್ಯಕ್ರಮ, ಹಬ್ಬಗಳನ್ನು ಆಚರಿಸಲಾಗುತ್ತೆ…?

ಶ್ರೀನಿವಾಸ್ ಶರ್ಮ: ಮೆಲ್ಬರ್ನ್‌ ಕನ್ನಡ ಸಂಘದ ಆಶ್ರಯದಲ್ಲಿ ವರ್ಷದ ಆರಂಭದಲ್ಲಿ ಯುಗಾದಿ, ಬಳಿಕ ಸಂಕ್ರಾಂತಿ, ಮೇ -ಜೂನ್-ಜುಲೈನಲ್ಲಿ ಬೇರೆ ಬೇರೆ ಕಾರ್ಯಕ್ರಮ, ನಮ್ಮಲ್ಲಿ ಕನ್ನಡ ಶಾಲೆ ಇರುವುದರಿಂದ ದೇಶಾಭಿಮಾನವನ್ನು ಮೂಡಿಸಲು ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತೇವೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories