ಜರ್ಮನಿಯ ಎರ್ಲಾಂಗೆನ್’ನಲ್ಲಿ ಬಸವ ಸಮಿತಿ ಯೂರೋಪ್ ವತಿಯಿಂದ 12ನೇ ಶತಮಾನದ ಸಮಾಜ ಸುಧಾರಕ ಶ್ರೀ ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಹಾಗೂ ಶ್ರೀ ಬಸವಣ್ಣನವರ ಅನುಯಾಯಿಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಮೇ 31ರ ಶನಿವಾರದಂದು ಬೆಳಗ್ಗೆ 10:30 ಘಂಟೆಗೆ ಆರಂಭವಾಗಲಿದೆ. ವಿಶ್ವಗುರು ಬಸವಣ್ಣ ಜಾತಿ, ಮತವನ್ನು ತೊಡೆದುಹಾಕಿ, ಲಿಂಗಸಮಾನತೆಯನ್ನು ಪ್ರಚಾರಿಸಿ, “ಕಾಯಕವೇ ಕೈಲಾಸ” ಎಂಬ ಸಂದೇಶವನ್ನು ಸಂಕ್ಷಿಪ್ತ ವಚನಗಳ ಮೂಲಕ ಹರಡಿದವರು.
ಯುರೋಪಿನ ಹಲವು ದೇಶಗಳಿಂದ ಬಸವ ಭಕ್ತರು ಒಗ್ಗೂಡಿ ಎರಡು ವರ್ಷಗಳ ಸತತ ಪ್ರಯತ್ನದಿಂದ ಬಸವ ಸಮಿತಿ ಯುರೋಪ್ ಎಂಬ ಸಂಘವನ್ನು ಸ್ಥಾಪಿಸಿದ್ದಾರೆ. ಈ ಸಂಘದ 11 ಮಂದಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಜರ್ಮನಿ, ಬೆಲ್ಜಿಯಂ, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಫ್ರಾನ್ಸ್ ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಶಂಕರ ಮಹದೇವ ಬಿದರಿ(ನಿವೃತ್ತ ಪೊಲೀಸ್ ಮಹಾನಿರ್ದೇಶಕರು-ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಬೆಂಗಳೂರು), ಡಾ. ಸಿ. ಸೋಮಶೇಖರ್(ನಿವೃತ್ತ ಐಎಎಸ್ ಅಧಿಕಾರಿ- ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು), ಹಾಗು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ(ಶರಣ ಸಾಹಿತ್ಯ ಚಿಂತಕಿ ಮತ್ತು ಹೃದ್ರೋಗ ತಜ್ಞೆ, ಬೆಂಗಳೂರು) ಅವರು ಸಂಘದ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ.
ಕಾರ್ಯಕಾರಿ ಸಮಿತಿ:
ಪಂಚಾಕ್ಷರಿ ಲಕ್ಷ್ಮೇಶ್ವರಮಠ (ಪೋಲೆಂಡ್)
ಪ್ರಶಾಂತ ಶಿವನಾಗಣ್ಣ (ಪೋಲೆಂಡ್)
ಹೇಮೇಗೌಡ ರುದ್ರಪ್ಪ (ಇಟಲಿ)
ನವೀನ್ ಓದೊಗೌಡ್ರ (ಇಟಲಿ)
ಸತೀಶ ಪಲ್ಲೇದ (ಆಸ್ಟ್ರಿಯಾ)
ದೀಪಕ್ ಜಗದೀಶ್ ಗೋಶ್ವಾಲ್ (ಬೆಲ್ಜಿಯಂ)
ಸಂಜಯ್ ಗೊಡಬನಹಾಳ ಪ್ರಸನ್ನಕುಮಾರ (ಫ್ರಾನ್ಸ್)
ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ (ಜರ್ಮನಿ)
ಪ್ರಿಯಾ ಚಂದ್ರಶೇಖರ(ಜರ್ಮನಿ)
ವೇದ ಕುಮಾರಸ್ವಾಮಿ (ಜರ್ಮನಿ)
ಶಶಿಕಾಂತ ಗ. ಗುಡ್ಡದಮಠ (ಜರ್ಮನಿ)
ಈ ಕಾರ್ಯಕ್ರಮಕ್ಕೆ ಮ್ಯೂನಿಖ್, ಮ್ಯಾಗ್ಡೆಬರ್ಗ್, ಫ್ರಾಂಕ್‌ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಬೆಂಬಲ ನೀಡುತ್ತಿದ್ದು ಸಕ್ರಿಯವಾಗಿ ಭಾಗವಹಿಸುತ್ತಿವೆ. 150ಕ್ಕಿಂತ ಅಧಿಕ ಬಸವ ಭಕ್ತರು ಹಾಗೂ ಅವರ ಕುಟುಂಬದವರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಸಮಾರಂಭವನ್ನು ಬೇರೆ‑ಬೇರೆ ದೇಶಗಳ ನಗರಗಳಲ್ಲಿ ನಡೆಸುವ ಯೋಜನೆಯನ್ನು ಸಂಘ ಹಾಕಿ ಕೊಂಡಿದೆ.
ಈ ಕಾರ್ಯಕ್ಕೆ ಮ್ಯೂನಿಖ್‌ನ ಭಾರತೀಯ ರಾಯಭಾರಿ ಕಚೇರಿ, ಆಸ್ಲಾಂಡರ್ ಇಂಟಿಗ್ರೇಶನ್ ಬೈರತ್‑ಎರ್‌ಲಾಂಗನ್, ಐಸಿಎಫ್ ತಂಡ, ನಟ್ರಾಸ್ ನಾಟ್ಯ ತಂಡ, ಓಂ ಧೋಲ್ ತಾಶಾ, ಮಾತಂಗಿ ನೃತ್ಯ ತಂಡ, ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್, ಭಾವತರಂಗ ಸಂಗೀತ ತಂಡ ಕೈಜೋಡಿಸುತ್ತಿವೆ.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಮೆರವಣಿಗೆ (ಓಂ ಧೋಲ್ ತಾಶಾ, ಲೆಜಿಮ್ ನೃತ್ಯರು, ನಟ್ರಾಸ್ ತಂಡ) ನಡೆಯಲಿದೆ. “ಬಸವನ ಭಾಷೆಗಳು” ಪುಸ್ತಕ ಬಿಡುಗಡೆ (ವಿನ್‌ಶಿ ಫೌಂಡೇಶನ್), ದಾಸೋಹ ಕಾರ್ಯಕ್ರಮ, ಮಕ್ಕಳಿಂದ ವಚನ ವಾಚನ, ವಚನ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ, ಅತಿಥಿಗಳ ಸನ್ಮಾನ ಮತ್ತು ಕೃತಜ್ಞತಾ ಸಮಾರಂಭ, ವಚನ ಗಾಯನ ಮತ್ತು ಸಂಗೀತ ಸಂಜೆ(ಭಾವತರಂಗ ತಂಡದಿಂದ) ನಡೆಯಲಿದೆ.