ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ರವಿವಾರ ನಡೆದ ಬ್ಯಾರಿ ಮೇಳದಲ್ಲಿ ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್‌ನ ಸಿಇಒ ಮುಹಮ್ಮದ್ ಆಸಿಫ್ ಕರ್ನಿರೆ ಅವರಿಗೆ ‘Global beary of Business Youth Icon’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್, ರಾಜ್ಯ ಹಜ್ ಸಚಿವ ರಹೀಮ್ ಖಾನ್, ಬೆಂಗಳೂರು ಶಾಂತಿನಗರ ಶಾಸಕ N.A ಹಾರಿಸ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಸೌದಿ ಅರೇಬಿಯಾದ ಅಲ್ ಮುಝೈನ್ ನ ಸಿಇಓ ಝಕರಿಯ ಜೋಕಟ್ಟೆ, ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಲಿಮಿಟೆಡ್‌ನ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಸೇರಿದಂತೆ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಯಮದಲ್ಲಿ ಮುಹಮ್ಮದ್ ಆಸಿಫ್ ಕರ್ನಿರೆ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸೌದಿ ಅರೇಬಿಯಾದ ಜುಬೈಲ್ ನಲ್ಲಿರುವ ಪ್ರತಿಷ್ಠಿತ ʼಎಕ್ಸ್‌ಪರ್ಟೈಸ್ʼ ಕಂಪೆನಿಯ ಸಾಮುದಾಯಿಕ ಸೇವೆಗಳಿಗಾಗಿ ಮತ್ತು ಅತ್ಯುತ್ತಮ ಸಾಧನೆಗಾಗಿ ಸಂಸ್ಥೆಯ ಸಿಇಒ ಆಗಿರುವ ಮುಹಮ್ಮದ್ ಆಸಿಫ್ ರನ್ನು 2021ರಲ್ಲಿ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ. ಔಸಾಫ್ ಸಯೀದ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

2008ರಲ್ಲಿ ಸ್ಥಾಪನೆಯಾದ ʼಎಕ್ಸ್‌ಪರ್ಟೈಸ್ʼ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 7500ಕ್ಕೂ ಹೆಚ್ಚು ಉಪಕರಣಗಳನ್ನು ಹೊಂದಿರುವ ಈ ಕಂಪೆನಿಯು ಸೌದಿ ಅರೇಬಿಯಾದ ಹೆಸರಾಂತ ಕೈಗಾರಿಕಾ ಸೇವಾ ಪೂರೈಕೆದಾರ ಕಂಪೆನಿಯಾಗಿದೆ. ಪೆಟ್ರೋಕೆಮಿಕಲ್, ತೈಲ ಮತ್ತು ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್, ನೀರಿನ ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ʼಎಕ್ಸ್‌ಪರ್ಟೈಸ್ʼ ಕಂಪೆನಿ ಸೇವೆ ಸಲ್ಲಿಸುತ್ತಿದೆ. ಜುಬೈಲ್ ಇಂಡಸ್ಟ್ರಿಯಲ್ ನಗರದಲ್ಲಿ ಪ್ರಧಾನ ಕಚೇರಿಯಿರುವ ʼಎಕ್ಸ್‌ಪರ್ಟೈಸ್ʼ ಕಂಪೆನಿಯು ಸೌದಿ ಅರೇಬಿಯಾದ್ಯಂತ ಶಾಖೆಗಳನ್ನು ಹೊಂದಿದೆ.