ದುಬೈ: ದುಬೈಯ ಅಲ್ ಖಿಸೈಸ್ ನ ಅಮಿಟಿ ಸ್ಕೂಲಿನ ಮೈದಾನದಲ್ಲಿ ‘ಸಾಹೇಬಾನ್ ಯುಎಇ’ ಆಶ್ರಯದಲ್ಲಿ ಶನಿವಾರದಂದು ನಡೆದ ‘ಕುಟುಂಬ ಸ್ನೇಹಕೂಟ’ದಲ್ಲಿ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸಿಂಗ್’ನಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಕಾರ್ಕಳದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ DSBK ಸೂಪರ್ ಬೈಕ್ ರೇಸಿಂಗ್ ಕಂಪೆನಿಯ ಸ್ಥಾಪಕ ನಾಸಿರ್ ಸೈಯದ್ ಅವರಿಗೆ ‘Sahebaan Sports Excellence Award’ ನೀಡಿ ಗೌರವಿಸಲಾಯಿತು.



ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ‘ಸಾಹೇಬಾನ್’ ಸಮುದಾಯದ ಪೋಷಕರಾದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಪ್ರತಿಷ್ಠಿತ ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಇನ್ನೋರ್ವ ಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈಯ ನ್ಯಾಶ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಕೆ.ಎಸ್. ನಿಸಾರ್ ಅಹ್ಮದ್ ಹಾಗು ‘ಸಾಹೇಬಾನ್’ ಯುಎಇಯ ಸಂಚಾಲಕ H.M.ಆಫ್ರೋಝ್ ಅಸ್ಸಾದಿರವರು ನಾಸಿರ್ ಸೈಯದ್ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
” ನಾನು ಹಲವಾರು ಅಂತರ್ ರಾಷ್ಟ್ರೀಯ ಸೂಪರ್ ಬೈಕ್ ರೇಸಿಂಗ್ ಗೆದ್ದು ಪ್ರಶಸ್ತಿ ಪಡೆದಿದ್ದರೂ ಸಾಹೇಬಾನ್ ಸಮುದಾಯ ನನ್ನನ್ನು ಗುರುತಿಸಿ ಈ ಗೌರವ ನೀಡಿರುವುದು ನನಗೆ ಹೆಮ್ಮೆಯ ವಿಷಯ. ಹಿದಾಯತುಲ್ಲಾ ಅಬ್ಬಾಸ್ ಸಾಹೇಬ್ ಹಾಗೂ ನಿಸಾರ್ ಅಹ್ಮದ್ ಸಾಹೇಬ್ ಅವರು ನಮಗೆ ಸ್ಪೂರ್ತಿಯಾಗಿದ್ದಾರೆ. ಈ ವೇದಿಕೆಯಲ್ಲಿ ಕಾರ್ಕಳಕ್ಕೆ ವಿಶೇಷ ಗೌರವ ಸಿಕ್ಕಿದೆ ” ಎಂದು ನಾಸಿರ್ ಸಯ್ಯದ್ ಸಂತಸ ಹಂಚಿಕೊಂಡರು.




ಯುಎಇಯಲ್ಲಿ ಸ್ವಂತ ಉದ್ಯಮ ಕಟ್ಟಿ ಬೆಳೆಸಿದ ಕೀರ್ತಿ
ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲೇ ಕಳೆದು ಹೋಗಲು ಬಯಸದೆ ಸ್ವಂತ ಉದ್ಯಮ ಕಟ್ಟಿ ಬೆಳೆಸುವ ಭಾರೀ ಸವಾಲನ್ನು ದಿಟ್ಟವಾಗಿ ಎದುರಿಸಿ ಭರ್ಜರಿಯಾಗಿ ಗೆದ್ದವರು ನಾಸಿರ್ ಸೈಯದ್.
ಈ ಶತಮಾನದ ಆರಂಭದಲ್ಲೇ ಸ್ವಂತ ಉದ್ಯಮ ಸ್ಥಾಪಿಸಲು ಇರುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಸ್ಕಫೋಲ್ಡಿಂಗ್ ಕ್ಷೇತ್ರದಲ್ಲಿ ತನ್ನದೇ ಕಂಪೆನಿಯನ್ನು ಪ್ರಾರಂಭಿಸಿದವರು ನಾಸಿರ್. ಕಠಿಣ ಪರಿಶ್ರಮ, ಅತ್ಯುತ್ತಮ ಗ್ರಾಹಕ ಸೇವೆ, ವಿನೂತನ ಶೈಲಿ ಹಾಗೂ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬ ಅವರ ನೀತಿಯಿಂದಾಗಿ ಬಹಳ ಬೇಗ 2005ರಲ್ಲಿ ಅವರ ಉದ್ಯಮಕ್ಕೆ ಪ್ರಮುಖ ತಿರುವು ಸಿಕ್ಕಿತು. ದೊಡ್ಡ ಗ್ರಾಹಕರನ್ನು ಸೆಳೆಯುವಲ್ಲಿ ಅವರ ಕಂಪೆನಿ ಯಶಸ್ವಿಯಾಯಿತು.

ಅಲ್ಲಿಂದ ನಾಸಿರ್ ಸೈಯದ್ ಹಿಂದಿರುಗಿ ನೋಡಲೇ ಇಲ್ಲ. ಒಂದೊಂದೇ ಹೆಜ್ಜೆ ಮುಂದಿಡುತ್ತಾ ಬೆಳೆಯುತ್ತಲೇ ಹೋದರು. ಒಬ್ಬರೇ ಪ್ರಾರಂಭಿಸಿದ ಅವರ ಕಂಪೆನಿಯ ಸಮೂಹ ಇಂದು ಇನ್ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿದೆ.
DSBK ಸೂಪರ್ ಬೈಕ್ ರೇಸಿಂಗ್ ಕಂಪೆನಿ ಸ್ಥಾಪಿಸಿದ ನಾಸಿರ್ ಸಯ್ಯದ್
ಇಂದು ಸ್ಕಫೋಲ್ಡಿಂಗ್ ಹಾಗೂ ಫಾರ್ಮ್ ವರ್ಕ್ ಕ್ಷೇತ್ರದಲ್ಲಿ ಇಡೀ ಯುಎಇಯಲ್ಲೇ ಮುಂಚೂಣಿ ಕಂಪೆನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾದ ಸಿ.ಎಚ್.ಎಸ್. ಕ್ರಿಯೇಟಿವ್ ಹೌಸ್ (CHS Creative House), ಕೈಗಾರಿಕಾ ವಾಲ್ವ್ ಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ವಿ.ಎಂ.ಇ. ವಾಲ್ವ್ಸ್ ಫ್ಯಾಕ್ಟರಿ ಎಲ್.ಎಲ್.ಸಿ. (VME Valves Factory LLC), ವಿಶ್ವದರ್ಜೆಯ ಇವೆಂಟ್ ಗಳನ್ನು ನಡೆಸುವ ಕ್ರಿಯೇಟಿವ್ ಹೌಸ್ ಇವೆಂಟ್ಸ್ (Creative House Events) ಹಾಗೂ ಅಂತಾರಾಷ್ಟ್ರೀಯ ರೇಸಿಂಗ್ ಸ್ಪರ್ಧೆ ಆಯೋಜಿಸುವ ಪ್ರತಿಷ್ಠಿತ ಡಿ.ಎಸ್.ಬಿ.ಕೆ. ಸೂಪರ್ ಬೈಕ್ ರೇಸಿಂಗ್ ಕಂಪೆನಿ (DSBK – D SUPER BIKE RACING)ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ನಾಸಿರ್ ಸಯ್ಯದ್.

38 ಪ್ರೊ ಬೈಕ್ ರೇಸಿಂಗ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ
ಶಾಲಾ-ಕಾಲೇಜು ದಿನಗಳಲ್ಲೇ ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್ ಆಡುತ್ತಿದ್ದ ನಾಸಿರ್ ಸಯ್ಯದ್ ಕ್ರಮೇಣ ಬೈಕ್ ರೇಸಿಂಗ್ ನತ್ತ ಆಕರ್ಷಿತರಾದರು. ಅತ್ಯಂತ ದುಬಾರಿ ಹಾಗೂ ಅಷ್ಟೇ ಅಪಾಯಕಾರಿಯೂ ಆಗಿರುವ ಮೈನವಿರೇಳಿಸುವ ರೋಮಾಂಚಕಾರಿ ಸೂಪರ್ ಬೈಕ್ ರೇಸಿಂಗ್ ಅನ್ನು ದೂರದಿಂದ ನೋಡಿ ಆನಂದಿಸುವವರೇ ಹೆಚ್ಚು. ದುಬೈಯಲ್ಲಿ ನೆಲೆಸಿದ ಮೇಲೆ ಸೂಪರ್ ಬೈಕ್ ರೇಸಿಂಗ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಅವರು, ಆ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲೂ ಅಂತಾರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಒಂದಾದ ಮೇಲೊಂದರಂತೆ 38 ಪ್ರೊ ಬೈಕ್ ರೇಸಿಂಗ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದರು. ಯುಎಇ ರಾಷ್ಟ್ರೀಯ ಚಾಂಪಿಯನ್ ಶಿಪ್ ಹಾಗೂ ಬಹರೈನ್ ಸೂಪರ್ ಬೈಕ್ ಚಾಂಪಿಯನ್ ಶಿಪ್ ಗಳಲ್ಲೂ ಅವರು ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

ದುಬೈ-ಭಾರತಕ್ಕೆ ಸೂಪರ್ ಬೈಕ್ ರೇಸಿಂಗ್ ತರುವ ಸಾಹಸಕ್ಕೆ ಮುಂದಾದ ನಾಸಿರ್ ಸೈಯದ್
ಈವರೆಗೆ ಹೆಚ್ಚಾಗಿ ಯುರೋಪ್ ನಲ್ಲಿ ಮಾತ್ರ ನಡೆಯುತ್ತಿದ್ದ ಸೂಪರ್ ಬೈಕ್ ರೇಸಿಂಗ್ ಅನ್ನು ದುಬೈ ಹಾಗೂ ಭಾರತಕ್ಕೆ ತರುವ ಸಾಹಸಕ್ಕೆ ನಾಸಿರ್ ಸೈಯದ್ ಕೈ ಹಾಕಿದ್ದಾರೆ. ದುಬೈಯಲ್ಲಿ ಸೂಪರ್ ಬೈಕ್ ರೇಸಿಂಗ್ ಆಯೋಜಿಸುವ ಹೊಸ ಕಂಪೆನಿಯನ್ನೇ ಸ್ಥಾಪಿಸಿದ್ದಾರೆ. DSBK – D SUPER BIKE RACING ಹೆಸರಿನ ಕಂಪೆನಿ ಈಗಾಗಲೇ ರೇಸಿಂಗ್ ಸ್ಪರ್ಧೆಗಳನ್ನು ನಡೆಸಿ ಯಶಸ್ವಿಯಾಗಿದೆ. ಸೂಪರ್ ಬೈಕ್ ರೇಸರ್ ಗಳು, ಅದರ ಅಭಿಮಾನಿಗಳು ಹಾಗೂ ಪ್ರತಿಷ್ಠಿತ ಬ್ರ್ಯಾಂಡ್ ಗಳನ್ನು ಒಂದೇ ವೇದಿಕೆಗೆ ತರುವ ವಿನೂತನ ಹಾಗೂ ಸಾಹಸಿ ಪ್ರಯತ್ನ ಈ ಡಿ.ಎಸ್.ಬಿ.ಕೆ.
ಕುಟುಂಬ ಹಿನ್ನೆಲೆ….
ನಾಸಿರ್ ಅವರ ಪತ್ನಿ ಅನಿಲ ನಾಸಿರ್ ಪತಿಯ ಉದ್ಯಮ ಹಾಗೂ ಕ್ರೀಡಾ ಸಾಹಸಗಳಲ್ಲಿ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಪುತ್ರ ಅಬ್ದುಲ್ ಸಮಿ ಈಗಾಗಲೇ ಉದಯೋನ್ಮುಖ ಸೂಪರ್ ಬೈಕ್ ರೇಸರ್ ಆಗಿ ಹೆಸರು ಗಳಿಸಿದ್ದಾರೆ. ಇನ್ನೋರ್ವ ಪುತ್ರ ಯಹ್ಯಾ ನಾಸಿರ್, ಪುತ್ರಿಯರಾದ ಹನ ನಾಸಿರ್ ಹಾಗೂ ರಿದ ನಾಸಿರ್ ಅವರ ತುಂಬು ಕುಟುಂಬ ಅವರದ್ದು.

ಹಲವು ಜನೋಪಯೋಗಿ ಚಟುವಟಿಕೆಗಳಲ್ಲಿ ಭಾಗಿ
ಯಶಸ್ವೀ ಉದ್ಯಮಿ ಹಾಗೂ ಚಾಂಪಿಯನ್ ಸೂಪರ್ ಬೈಕ್ ರೇಸರ್ ನಾಸಿರ್ ಸಯ್ಯದ್ ಅವರು ಊರಿನಲ್ಲಿ ಹಲವು ಜನೋಪಯೋಗಿ ಸಾಮಾಜಿಕ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ. ಶಿಕ್ಷಣ, ಅರೋಗ್ಯ ಸಹಿತ ಹಲವು ರಂಗಗಳಲ್ಲಿ ಅರ್ಹರಿಗೆ ನೆರವು ತಲುಪಿಸುತ್ತಿದ್ದಾರೆ.