ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿಶ್ವದರ್ಜೆಯ ಪ್ರವಾಸಿ ತಾಣ ಹಾಗೂ ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ ಲೋಕ ವಿಖ್ಯಾತ ವಾಣಿಜ್ಯ ಕೇಂದ್ರ ದುಬೈ. ಇಲ್ಲಿ 250 ದೇಶವಾಸಿಗಳು ಅನಿವಾಸಿ ಪ್ರಜೆಗಾಳಗಿ ನೆಲೆಸಿದ್ದಾರೆ. ದುಬೈಯಲ್ಲಿ ಗಿನ್ನೆಸ್ ದಾಖಲೆಯ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಬೃಹತ್ ವಾಸ್ತುಶಿಲ್ಪ “ಬುರ್ಜ್ ಖಲೀಫಾ” ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಯು.ಎ.ಇ.ಯಲ್ಲಿ ಕಳೆದ ನಾಲ್ಕು ಐದು ದಶಕಗಳಿಂದ ಭಾರತೀಯರು ಉದ್ಯೋಗಿಗಳಾಗಿ, ಉದ್ಯಮಿಗಳಾಗಿ ನೆಲೆಸಿದ್ದಾರೆ. ಭಾರತದ ಭಾಗ್ಯವಿಧಾತ ಮಾನ್ಯ ಪ್ರಧಾನಿ ನರೇಂದ ಮೋದಿಯವರು 2015ರಲ್ಲಿ ಅರಬ್ ಸಂಯುಕ್ತ ಸಂಸ್ಥಾನಕ್ಕೆ ಸೌಹಾರ್ಧ ಭೇಟಿಗಾಗಿ ಆಗಮಿಸಿರುವ ಸಂದರ್ಭದಲ್ಲಿ ಗೌರವಾರ್ಥವಾಗಿ ಬುರ್ಜ್ ಖಲೀಫಾದ ಮೇಲೆ ತುತ್ತ ತುದಿಯಿಂದ ಕೆಳಗಿನವರೆಗೆ ಎಂಟುನೂರ ಇಪ್ಪತೆಂಟು ಮೀಟರ್ ಎತ್ತರದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಎಲ್.ಇ.ಡಿ. ಬಲ್ಬ್ ನ ಮೂಲಕ ಪ್ರಜ್ವಲಿಸಲಾಯಿತು. ಭಾರತದ ತ್ರಿವರ್ಣ ಧ್ವಜ ಬುರ್ಜ್ ಖಲೀಫಾದ ಮೂಲಕ ವಿಶ್ವದ ಗಮನ ಸೆಳೆಯಿತು. ಈ ದೃಶ್ಯ ಅರಬ್ ಸಂಯುಕ್ತ ಸಂಸ್ಥಾನ ಮತ್ತು ಭಾರತದ ದೇಶದ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

ದುಬೈಯ ಬುರ್ಜ್ ಖಲೀಫಾದ ಮೇಲಿನ ತುದಿಯಿಂದ ಕೆಳಗಿನ ವರೆಗೆ ಕಟ್ಟದ ಸುತ್ತಲೂ ಯು.ಎ.ಇ. ವಾರ್ಷಿಕ ನ್ಯಾಶನಲ್ ಡೇ ಡಿಸೆಂಬರ್ 2ನೇ ತಾರೀಕು ಹಾಗೂ ಇಸ್ಲಾಮಿಕ್ ಧಾರ್ಮಿಕ ಹಬ್ಬಗಳು, ರಮದಾನ್, ಈದ್ ಹಬ್ಬ, ಹೊಸ ವರ್ಷಚಾರಣೆ ಸಂದರ್ಭದಲ್ಲಿ ಯು.ಎ.ಇ. ಯ ಧ್ವಜ ಹಾಗೂ ವರ್ಣ ರಂಜಿತ ಸಿಡಿ ಮದ್ದುಗಳ ಆಕರ್ಷಕ ಪ್ರದರ್ಶನ ಬುರ್ಜ್ ಖಲೀಫಾದ 4 ಬದಿಗಳಲ್ಲಿ ಹತ್ತಾರು ಕಿಲೊಮೀಟರ್ ದೂರದಿಂದಲೇ ನೋಡುಗರ ಗಮನ ಸೆಳೆಯುತ್ತದೆ.
ಪ್ರತಿವರ್ಷ ಭಾರತದ ಸ್ವಾತಂತ್ರ್ಯ ದಿನಾಚಾರಣೆ, ಭಾರತದ ಗಣರಾಜ್ಯೋತ್ಸವ, ಗಾಂಧಿ ಜಯಂತಿಯ 150ನೇ ವರ್ಷಾಚರಣೆ ಹಾಗೂ ದೀಪಾವಳಿಯ ಶುಭಾಶಯ ಸಂದೇಶ ಹಾಗೂ ಇತ್ತಿಚಿನ ಕೋವಿಡ್ ಸಂದರ್ಭದಲ್ಲಿ ಯುಎಇಯು ಭಾರತಕ್ಕೆ ತಮ್ಮ ಬೆಂಬಲ ಹಾಗೂ ಶುಭವನ್ನು ಬುರ್ಜ್ ಖಲೀಫಾದ ಮೇಲೆ ಸಂದೇಶವನ್ನು ನೀಡಿರುವುದು ಯು.ಎ.ಇ.ಯಲ್ಲಿ ನೆಲೆಸಿರುವ ಸಮಸ್ತ ಅನಿವಾಸಿ ಭಾರತೀಯರ ಗೌರವವನ್ನು ಹಿಮ್ಮಡಿಗೊಳಿಸಿದೆ.

ಗಿನ್ನೆಸ್ ದಾಖಲೆಯ ಬುರ್ಜ್ ಖಲೀಫಾದ ನಿರ್ಮಾಣ ಹಾಗೂ ಇನ್ನಿತರ ತಾಂತ್ರಿಕತೆಯ ಬಗ್ಗೆ ಅವಲೋಕಿಸುವುದಾದರೆ, ನಿರ್ಮಾಣದ ಪ್ರತಿ ಹಂತದಲ್ಲಿಯೂ ವಿಶ್ವದ ಗಮನ ಸೆಳೆದು ವಿಶ್ವ ದಾಖಲೆಯನ್ನು ನಿರ್ಮಿಸುತ್ತಾ ತಲೆ ಎತ್ತಿ ನಿಂತಿದೆ. 2004ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿ 2009ರಲ್ಲಿ ನಿರ್ಮಾಣ ಕಾರ್ಯವನ್ನು ಮುಗಿಸಲಾಯಿತು. 2010 ಜನವರಿ 4ನೇ ತಾರೀಕಿನಂದು ಉದ್ಘಾಟಿಸಲಾಯಿತು.
825 ಮೀಟರ್ ಎತ್ತರದ ಬುರ್ಜ್ ಖಲೀಫಾದಲ್ಲಿ 163 ಮಹಡಿಗಳಿದೆ. ವಿಶ್ವದ ಅತ್ಯಂತ ಎತ್ತರದ 57 ಎಲಿವೇಟರ್ ಗಳು ಮತ್ತು 8 ಎಸ್ಕಲೇಟರ್ ಗಳು ಕಾರ್ಯ ನಿರ್ವಹಿಸುತ್ತಿವೆ. ವಿಶ್ವದ ಅತೀ ಎತ್ತರದ ಈಜುಕೊಳ 76ನೇ ಮಹಡಿಯಲ್ಲಿದೆ. ಎತ್ತರದ ನೈಟ್ ಕ್ಲಬ್ 144 ಮಹಡಿ ಹಾಗೂ ರೆಸ್ಟೋರೆಂಟ್ 122 ಮಹಡಿ ಮೇಲಿದೆ.

ಏಡ್ರಿನ್ ಸ್ಮಿತ್ ಈ ಕಟ್ಟದ ಮುಖ್ಯ ವಾಸ್ತುಶಿಲ್ಪ ರಚನೆಕಾರನಾಗಿದ್ದು ದುಬೈಯ ಎಮ್ಮಾರ್ ಪ್ರಾಪರೆಟಿಸ್ ನ ಮಾಲಕತ್ವದಲ್ಲಿದೆ. ಯು.ಎ.ಇ.ಯ ಪ್ರಧಾನ ಮಂತ್ರಿ, ದುಬೈ ಆಡಳಿತಗಾರ ಗೌರವಾನ್ವಿತ ಶೇಖ್ ಮಹಮ್ಮದ್ ಬಿನ್ ಝಾಯಿದ್ ರವರ ದೂರದರ್ಶಿತ್ವದ ಪ್ರವಾಸಿ ತಾಣದ ಅಭಿವೃದಿಯ ಯೋಜನೆಯಾಗಿದೆ. ಯು.ಎ.ಇ. ಯ ಅಧ್ಯಕ್ಷರು ಹಾಗೂ ಅಬುಧಾಬಿಯ ಆಡಳಿತಗಾರರಾಗಿರುವ ಗೌರವಾನ್ವಿತ ಶೇಖ್ ಖಲೀಫಾ ಬಿನ್ ಝಾಯಿದ್ ಅಲ್ ನಯ್ಯಾನ್ ರವರ ಹೆಸರನ್ನು ಬುರ್ಜ್ ನ ಜೊತೆಗೆ ಖಲಿಫಾ ಎಂದು ನಾಮಕರಣ ಮಾಡಲಾಗಿದೆ.
ಜಗತ್ತಿನ ಅತೀ ಎತ್ತರದ 819 ಮೀಟರಿನ ಕ್ರೇನನ್ನು ಆಪರೇಟ್ ಮಾಡಿರುವ ಕೀರ್ತಿ ಭಾರತೀಯ ಬಾಬುಶಶಿ ಗೆ ಸಲ್ಲುತ್ತದೆ. 7500 ಕೆಲಸಗಾರರು ಕಟ್ಟದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ದಿನಕ್ಕೆ ಎರಡುವರೆ ಲಕ್ಷ ಯು.ಎಸ್. ಗ್ಯಾಲನ್ ನೀರು ಕಟ್ಟದದಲ್ಲಿ ಅಳವಡಿಸಲಾದ ನೂರು ಕಿ.ಮಿ. ಪೈಪ್ ಲೈನ್ ನಲ್ಲಿ ಸರಬರಾಜು ಆಗುತ್ತಿದೆ.
ಬೃಹತ್ ವಾಸ್ತು ಶಿಲ್ಪ ಬುರ್ಜ್ ಖಲೀಫಾ ನಿರ್ಮಾಣದ ವೆಚ್ಚ ೧.5 ಬಿಲಿಯನ್ ಡಾಲರ್, ಭಾರತೀಯ 11 ಸಾವಿರ ಕೋಟಿ ರೂಪಾಯಿಗಳು.
ಬುರ್ಜ್ ಖಲೀಫಾದ ಕಟ್ಟದದ ಹೊರ ಭಾಗದಲ್ಲಿ 1.2 ಮಿಲಿಯನ್ ಎಲ್.ಇ.ಡಿ. ಬಲ್ಬ್ ಗಳ ಹೊದಿಕೆ ಅಳವಡಿಸಲಾಗಿದೆ. ಈ ಬಲ್ಬ್ ಗಳನ್ನು ಒಂದರನಂತರ ಇನ್ನೊಂದು ಜೋಡಿಸಿದರೆ 33 ಕಿ.ಮಿ. ಉದ್ದ ಆಗಬಹುದು. ಇದನ್ನು ಕಂಟ್ರೊಲ್ ಮಾಡುವ ನುರಿತ ತಂತ್ರಜ್ಞರು ಕಟ್ಟದದ ಒಳಭಾಗದ ತಾಂತ್ರಿಕ ಕೊಠಡಿಯಲ್ಲಿ ಅಕ್ಷರಗಳ ಹಾಗೂ ಚಿತ್ರಗಳ ವಿನ್ಯಾಸ ಮಾಡಿ ಚಲನವಲನಗಳನ್ನು ಅತ್ಯಂತ ಸೂಕ್ಶ್ಮವಾಗಿ ನಿಯಂತ್ರಿಸುತ್ತಾರೆ. ಅದೇ ರೀತಿ ಕಟ್ಟಡದ ಹೊರ ಭಾಗದಲ್ಲಿ ಸಿಡಿ ಮದ್ದುಗಳ ಸೆಲ್’ಗಳನ್ನು ಅಳವಡಿಸಿ ಕಂಪ್ಯೂಟರಿಕೃತವಾಗಿ ಸಿಡಿಮದ್ದುಗಳನ್ನು ಸಿಡಿಸಿ ಬಾನಂಗಳದಲ್ಲಿ ವೈವಿಧ್ಯಮಯ ಚಿತ್ತಾರಗಳನ್ನು ಮೂಡಿಸುತ್ತಾರೆ.
ಹೊಸ ವರ್ಷದ ಶುಭಾರಂಭವನ್ನು ಶುಭಾಶಯಗಳ ಅಕ್ಷರದೊಂದಿಗೆ ಸಿಡಿಮದ್ದುಗಳ ಪ್ರದರ್ಶನ ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಬುರ್ಜ್ ಖಲೀಫಾ ಕಟ್ಟದ ಮೇಲೆ ಜಾಹಿರಾತುಗಳನ್ನು ಸಹ ಪ್ರದರ್ಶಿಸುವ ಅವಕಾಶವಿದೆ. ಪ್ರತಿ ಜಾಹಿರಾತು 3 ನಿಮಿಷಗಳ ಕಾಲ ಪ್ರದರ್ಶವಾಗುತ್ತದೆ. 3 ನಿಮಿಷದ ಒಂದು ಸ್ಲಾಟ್ ಗೆ 250 ಸಾವಿರ ದಿರಾಂಸ್ ಪಾವತಿಸಬೇಕಾಗುತ್ತದೆ. 50 ಲಕ್ಷ ಭಾರತೀಯ ರೂಪಾಯಿ ಆಗುತ್ತದೆ. ವಾರದ ದಿನಗಳಲ್ಲಿ ರಾತಿ 8 ಗಂಟೆಯಿಂದ 10 ಗಂಟೆಯವರೆಗೆ ಪ್ರದರ್ಶವಾಗುತ್ತದೆ. ವಿಶೇಷ ರಜಾ ದಿನಗಳಲ್ಲಿ 350 ಸಾವಿರ ದಿರಾಂಸ್ ಆಗುತ್ತದೆ.
ವಾರದ ಕೊನೆಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಬುರ್ಜ್ ಖಲೀಫಾದ ನೆಲಮಟ್ಟದ ಎದುರಿನಲ್ಲಿ ಬೃಹತ್ ಕಾರಂಜಿಯಲ್ಲಿ ವಿದ್ಯುತ್ ದೀಪಾಲಂಕೃತ ವರ್ಣರಂಜಿತ ಕಾರಂಜಿ ಶೋ ಹಾಗೂ ಆಕರ್ಷಕ ಲೇಸರ್ ಶೋ ಸಹ ನಡೆಯುತ್ತದೆ.
ಕನ್ನಡ ಚಂದನವನದ ನಾಯಕ ನಟ ಕಿಚ್ಚಾ ಸುದೀಪ್ ರವರ “ರೋಣಾ” ಬಹುಭಾಷೆಯ ಚಿತ್ರದ ಟೀಸರ್ ಸಹ ಬುರ್ಜ್ ಖಲೀಫಾದ ಮೇಲೆ ಪ್ರದರ್ಶನವಾಗಿ ಬೃಹತ್ ಕನ್ನಡ ಅಕ್ಷರಗಳು ಪ್ರಥಮ ಬಾರಿಗೆ ಬೃಹತ್ ಗಾತ್ರದ ಕನ್ನಡ ಅಕ್ಷರಗಳು ಪ್ರದರ್ಶನಗೊಂಡು ವಿಶ್ವ ದಾಖಲೆಯನ್ನು ಸಹ ನಿರ್ಮಿಸಿರುವುದು ಕನ್ನಡಿಗರಿಗೆ ಬಹಳ ಹೆಮ್ಮೆಯ ವಿಷಯವಾಗಿತ್ತು.
ಬಾನಂಗಳದಲ್ಲಿ ವಿಮಾನ ಯಾನದಲ್ಲಿ ದುಬೈಗೆ ಬರುವ ಪ್ರಯಾಣಿಕರನ್ನು ಹಗಲು ರಾತ್ರಿ ವಿಹಂಗಮ ದೃಶ್ಯ ಸೊಬಗಿನಲ್ಲೆ ತನ್ನೆಡೆ ಸೆಳೆಯುವ ದುಬೈಯ ಗಗನ ಚುಂಬಿ ಕಟ್ಟಡಗಳ ಮದ್ಯೆ ತಲೆ ಎತ್ತಿ ನಿಂತಿರುವ “ಬುರ್ಜ್ ಖಲೀಫಾ” ಅರಬರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿದೆ.
ಬಿ.ಕೆ.ಗಣೇಶ್ ರೈ ದುಬೈ, ಯುಎಇ