ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ.
ಈ ಕಾಡ್ಗಿಚ್ಚಿನಿಂದಾಗಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಕಟ್ಟಡಗಳು, ಮನೆಗಳು, ವ್ಯಾಪಾರ ಮಳಿಗೆಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದ್ದು, ಇದನ್ನು ನಂದಿಸಲು ಅಗ್ನಿ ಶಾಮಕ ದಳದವರು ಹರಸಾಹಸಪಡುತ್ತಿದ್ದಾರೆ.
ಗುರುವಾರ ಸಂಜೆ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದಾಗಿ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಕಾಡ್ಗಿಚ್ಚಿನಿಂದ ತತ್ತರಿಸರುವ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ಸುಮಾರು 1 ಲಕ್ಷ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಗಳು ತಿಳಿಸಿವೆ.
ಲಾಸ್ ಏಂಜಲೀಸ್‌ನ ಅಲ್ಟಾಡೆನಾ, ಪಸಾಡೆನಾ ಹಾಗು ಪೆಸಿಫಿಕ್ ಪಾಲಿಸೇಡ್ಸ್‌ನ ಹಾಲಿವುಡ್ ಹಿಲ್ಸ್‌ನ್ನು ಕಾಡ್ಗಿಚ್ಚು ಆವರಿಸಿದ್ದು, ಕೋಟಿ ಕೋಟಿ ವೆಚ್ಚದ ಹಾಲಿವುಡ್’ನ ಹಲವು ಸಿನೆಮಾ ತಾರೆಯರ ಮನೆಗಳು ಸುಟ್ಟು ಕರಕಲಾಗಿವೆ.