ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ ಗಲ್ಫ್ ರಾಷ್ಟ್ರಗಳು ತಮ್ಮ ನಿಲುವುಗಳನ್ನು ಪ್ರಕಟಿಸಿವೆ. ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೇರಿಕ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿದ ಗಲ್ಫ್ ರಾಷ್ಟ್ರಗಳು ಅಮೇರಿಕದ ವಿರುದ್ಧ ಟೀಕೆ ಮಾಡಿದೆ. ಸೌದಿ ಅರೇಬಿಯಾವು ಅಮೇರಿಕದ ದಾಳಿಯು ಇರಾನ್‌ನ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಮತ್ತು ದೇಶಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಯಾವುದೇ ಹಸ್ತಕ್ಷೇಪವನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದೆ. ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ಅಮೇರಿಕದ ದಾಳಿಯು ಆತಂಕಕಾರಿಯಾಗಿದ್ದು, ಇದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಖತರ್ ಹೇಳಿದೆ. ಅಮೇರಿಕ ಮತ್ತು ಇರಾನ್ ನಡುವಿನ ಪರಮಾಣು ಮಾತುಕತೆಗಳಲ್ಲಿ ಒಮಾನ್ ಪ್ರಮುಖ ಮಧ್ಯವರ್ತಿಯಾಗಿದ್ದು, ಇರಾನ್‌ನಲ್ಲಿನ ಮೂರು ಪರಮಾಣು ಸೌಲಭ್ಯಗಳ ಮೇಲಿನ ಅಮೇರಿಕದ ದಾಳಿಯನ್ನು ಒಮಾನ್ ಬಲವಾಗಿ ಖಂಡಿಸಿದೆ. ಗಲ್ಫ್ ಉದ್ವಿಗ್ನತೆಗಳು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಅಸ್ಥಿರಗೊಳಿಸುತ್ತವೆ ಎಂದು ಯುಎಇ ಹೇಳಿದ್ದು, ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದೆ. ಸೇನಾ ಕಾರ್ಯಾಚರಣೆಗಳನ್ನು ಆದಷ್ಟು ಬೇಗ ಕೊನೆಗೊಳಿಸಲು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕು ಎಂದು ಬಹರೈನ್ ಹೇಳಿದೆ. ಅಮೇರಿಕವು ಇರಾನ್ ಮೇಲೆ ನಡೆಸಿದ ದಾಳಿ ನಡೆಸಿದ ನಂತರ ಇರಾನ್ ಮಿಸೈಲ್ ದಾಳಿಯ ಭೀತಿಯನ್ನು ಎದುರಿಸುತ್ತಿರುವ ರಾಷ್ಟ್ರವಾಗಿದೆ ಬಹರೈನ್. ಅಮೇರಿಕದ ಹಸ್ತಕ್ಷೇಪದ ವಿರುದ್ಧ ಇರಾನ್ ಬಲವಾಗಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದು, ಗಲ್ಫ್‌ನಲ್ಲಿರುವ ಅಮೇರಿಕದ ನೌಕಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಸಂದರ್ಭದಲ್ಲಿ ಜಿಸಿಸಿ ರಾಷ್ಟ್ರಗಳು ತಮ್ಮ ನಿಲುವಿನಲ್ಲಿ ಸ್ಪಷ್ಟತೆಯನ್ನು ತೋರಿಸುತ್ತಿಲ್ಲ. ಮಾತ್ರವಲ್ಲ ಅಮೇರಿಕವನ್ನು ಪ್ರತ್ಯಕ್ಷವಾಗಿ ಎದುರು ಹಾಕಿಕೊಳ್ಳುವ ಎದೆಗಾರಿಕೆಯನ್ನು ಯಾವ ಗಲ್ಫ್ ರಾಷ್ಟ್ರವು ತೋರಿಸುತ್ತಿಲ್ಲ.

ಅಮೇರಿಕವು ಇರಾನ್ ವಿರುದ್ಧ ತಿರುಗಿ ಬಿದ್ದಿರುವುದರಿಂದ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚುತ್ತಿದೆ. ಇದರಿಂದಾಗಿ ಅಮೇರಿಕದ ನೌಕಾ ನೆಲೆಗಳಿರುವ ಗಲ್ಫ್ ಪ್ರದೇಶದಲ್ಲಿಯೂ ಯುದ್ಧದ ಭಯ ಹೆಚ್ಚಾಗಿದ್ದು, ವಲಸಿಗರು ಚಿಂತಿತರಾಗಿದ್ದಾರೆ. ಗಲ್ಫ್ ಪ್ರದೇಶವನ್ನು ಅವಲಂಬಿಸಿರುವ ಭಾರತದ ಜೊತೆಗೆ, ಇದು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳ ಮೇಲೂ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಸಂಘರ್ಷ ತೀವ್ರಗೊಂಡರೆ, ಅನಿವಾಸಿ ಭಾರತೀಯರ ಮೇಲೆ ಗಮನಾರ್ಹವಾಗಿ ಇದರ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಬಹರೈನ್ ಸೇರಿದಂತೆ ಗಲ್ಫ್ ರಾಷ್ಟ್ರಗಳು ಈಗಾಗಲೇ ತನ್ನ ನಾಗರೀಕರಿಗೆ ಎಚ್ಚರಿಕೆಗಳನ್ನು ನೀಡಿರುವುದರಿಂದ, ವಲಸಿಗರು ಹೆಚ್ಚು ಚಿಂತಿತರಾಗಿದ್ದಾರೆ. ವಿವಿಧ ಅಧಿಕಾರಿಗಳು, ಜನರು ಜಾಗರೂಕರಾಗಿರಲು ಎಚ್ಚರಿಕೆ ನೀಡಿದ ನಂತರ, ಬಹರೈನ್‌ನಲ್ಲಿ ಕೆಲಸ ಮತ್ತು ಶಾಲೆಯನ್ನು ಆನ್‌ಲೈನ್ ಮಾಡಲಾಗಿದ್ದು, ಪ್ರಮುಖ ರಸ್ತೆಗಳನ್ನು ತುರ್ತು ಉದ್ದೇಶಗಳಿಗಾಗಿ ಬಳಸಬೇಕಾಗಿರುವುದರಿಂದ ಅನಿವಾರ್ಯತೆಗಳ್ಳದೆ ಅವುಗಳನ್ನು ಬಳಸಬಾರದೆಂದು ಬಹರೈನ್ ಘೋಷಿಸಿದೆ. ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಯುಎಸ್ ದಾಳಿಯ ನಂತರ, ಇರಾನ್ ಗಲ್ಫ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಬಹರೇನ್ ಸೇರಿದಂತೆ ಸೌದಿ ಅರೇಬಿಯಾ, ಯುಎಇ, ಕತಾರ್ ರಾಷ್ಟ್ರಗಳ ಜನರ ನಡುವೆ ವ್ಯಾಪಕ ಭಯ ಆವರಿಸಿದೆ. ಈ ಬೆದರಿಕೆಗಳ ನಂತರ, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಇರಾನ್ ಘೋಷಣೆಯು ಕೊಲ್ಲಿಯಲ್ಲಿ ಬಿಕ್ಕಟ್ಟನ್ನು ಉಂಟುಮಾಡಬಹುದಾದ ಸಂಗತಿಯಾಗಿದೆ. ಇದು ಅಂತಾ ರಾಷ್ಟ್ರೀಯ ಮಾರುಕಟ್ಟೆಯ ಶೇಕಡಾ 20ರಷ್ಟು ತೈಲ ಹಾದುಹೋಗುವ ಸಮುದ್ರ ಮಾರ್ಗವಾಗಿದ್ದು, ವಿಶ್ವದ ದ್ರವೀಕೃತ ನೈಸರ್ಗಿಕ ಅನಿಲದ ಮೂರನೇ ಒಂದು ಭಾಗ ಈ ಮಾರ್ಗದ ಮೂಲಕವೇ ಹರಿಯುತ್ತದೆ. ಸೌದಿ ಅರೇಬಿಯಾವನ್ನು ಹೊರತುಪಡಿಸಿ ಇತರ ಗಲ್ಫ್ ರಾಷ್ಟ್ರಗಳು ಈ ಮಾರ್ಗದ ಮೂಲಕ ಮಾತ್ರ ತೈಲವನ್ನು ರಫ್ತು ಮಾಡಲು ಸಾಧ್ಯವಿದೆ ಎಂಬುದು ಸಹ ಮುಖ್ಯವಾಗಿದೆ. ಸೌದಿ ಅರೇಬಿಯಾ ಈಗಾಗಲೇ ದೇಶದ ಎರಡೂ ಬದಿಗಳಲ್ಲಿ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್‌ಗಳನ್ನು ಸ್ಥಾಪಿಸಿರುವುದರಿಂದ, ಪರ್ಷಿಯನ್ ಕೊಲ್ಲಿಯಿಂದ ಯಾಂಬುವಿನ ಕೆಂಪು ಸಮುದ್ರದ ಬಂದರಿಗೆ ತೈಲವನ್ನು ಸಾಗಿಸಲು ಇದು ಉಪಯುಕ್ತವಾಗಿರುತ್ತದೆ.

ಇರಾನ್ ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದರೆ, ಕೊಲ್ಲಿಯ ಆರ್ಥಿಕ ವಲಯವು ಸಂಪೂರ್ಣವಾಗಿ ಕುಸಿಯುವುದಲ್ಲದೆ, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದಂತಹ ದೇಶಗಳು ಇರಾನ್ ಅನ್ನು ಬೆಂಬಲಿಸಲು ಮುಂದೆ ಬರುತ್ತವೆ ಎಂದು ರಾಜತಾಂತ್ರಿಕ ತಜ್ಞರ ಅಭಿಪ್ರಾಯವಾಗಿದೆ. ಹೀಗೇನಾದರೂ ಸಂಭವಿಸಿದಲ್ಲಿ ಗಲ್ಫ್ ರಾಷ್ಟ್ರಗಳಿಗೆ ಮತ್ತೊಮ್ಮೆ 1991ರ ಕೊಲ್ಲಿ ಯುದ್ಧದ ಅನುಭವ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ.
ಅದೇ ಸಮಯದಲ್ಲಿ, ಇರಾನ್ ಕೊಲ್ಲಿ ರಾಷ್ಟ್ರಗಳೊಂದಿಗೆ ಬಲವಾದ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದರಿಂದ ಕೊಲ್ಲಿಯಲ್ಲಿರುವ ಅಮೇರಿಕನ್ ನೆಲೆಗಳನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯಗಳು ಸಹ ಕೇಳಿ ಬರುತ್ತಿದೆ. ಕೊಲ್ಲಿಯಲ್ಲಿರುವ ಅಮೇರಿಕದ ನೆಲೆಗಳ ಮೇಲೆ ದಾಳಿ ಮಾಡಿ ಹಾರ್ಮುಜ್ ಅನ್ನು ನಿರ್ಬಂಧಿಸಿದರೆ, ಮಧ್ಯಪ್ರಾಚ್ಯದ ಪ್ರಸ್ತುತ ಚಿತ್ರಣವು ಸಂಪೂರ್ಣವಾಗಿ ಬದಲಾಗುತ್ತದೆ ಎನ್ನುವುದು ಮಾತ್ರ ಸತ್ಯ. ಮಧ್ಯಪ್ರಾಚ್ಯವನ್ನು ಅವಲಂಬಿಸಿದ ಕರ್ನಾಟಕದ ಕರಾವಳಿ ಹಾಗೂ ಕೇರಳದಂತಹ ರಾಜ್ಯವು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದ ಸ್ಥಿರತೆ ಮತ್ತು ಸಮೃದ್ಧಿಯ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
1991ರಲ್ಲಿ ಇರಾಕ್ ದೇಶವು ಕುವೈತ್ ಮೇಲೆ ಆಕ್ರಮಣ ಮಾಡಿದ ಸಮಯದಲ್ಲಿ ಮತ್ತು ನಂತರದ ಯುದ್ಧಗಳ ಸಮಯದಲ್ಲಿ, ಅನೇಕ ಅನಿವಾಸಿ ಭಾರತೀಯರು ಗಲ್ಫ್ ದೇಶಗಳಿಂದ ಹಿಂತಿರುಗಬೇಕಾಯಿತು. ಈ ಘಟನೆಯು ಆ ಸಮಯದಲ್ಲಿ ಬಹಳಷ್ಟು ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಯಿತು. ಗಲ್ಫ್ ದೇಶಗಳಿಂದ ಹಣದ ಹರಿವು ಕಡಿಮೆಯಾಗುವುದು ಮತ್ತು ವಲಸಿಗರ ಆದಾಯ ಸ್ಥಗಿತಗೊಂಡಿರುವುದರಿಂದ ಆ ಸಮಯದಲ್ಲಿ ಈ ಘಟನೆಯು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತು. ಉದ್ಯೋಗ ವಲಯದಲ್ಲಿ ಸೃಷ್ಟಿಯಾದ ಸವಾಲುಗಳು ಸಹ ಸಣ್ಣದಾಗಿರಲಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ ಅದೇ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ವಲಸಿಗರು ಮತ್ತು ವಲಸಿಗ ಕುಟುಂಬಗಳು ಭಯಪಡುತ್ತಾರೆ. ಆದರೆ ಹಾಗಾಗದಿರಲಿ ಎಂದು ಗಲ್ಫ್ ವಲಸಿಗರ ಕುಟುಂಬಗಳ ಸದಾ ಪ್ರಾರ್ಥಿಸುತ್ತಿದೆ. ಮರುಭೂಮಿಯ ಸುಡು ಬಿಸಿಲಿನಲ್ಲಿ ದುಡಿದು ತಮ್ಮ ಕುಟುಂಬವನ್ನು ಸಲಹುತ್ತಿರುವ ಅನಿವಾಸಿ ಭಾರತೀಯರು ಯುದ್ಧದ ಭೀತಿಯಲ್ಲಿ ಬದುಕುವಂತಾಗಿದೆ.
-ಎಸ್.ಎ.ರಹಿಮಾನ್ ಮಿತ್ತೂರು
ಸೌದಿ ಅರೇಬಿಯಾ