ಯುಎಸ್‌ಎಅಮೇರಿಕದಲ್ಲಿ ಕನ್ನಡ ಕಲರವ; '8ನೇ ನಾವಿಕ ವಿಶ್ವ ಕನ್ನಡ...

ಅಮೇರಿಕದಲ್ಲಿ ಕನ್ನಡ ಕಲರವ; ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ಕ್ಕೆ ಭರದ ಸಿದ್ಧತೆ! ಆಗಸ್ಟ್ 29ರಿಂದ 31ರವರೆಗೆ ಫ್ಲೋರಿಡಾದಲ್ಲಿ ನಡೆಯಲಿದೆ 3 ದಿನಗಳ ಐತಿಹಾಸಿಕ ಸಮಾವೇಶ

ಕನ್ನಡ ಭಾಷೆ, ಕಲೆ, ಸಾಹಿತ್ಯಕ್ಕೆ 'ನಾವಿಕ': ಶಿವಕುಮಾರ್-ಹರ್ಷಿತ್ ಗೌಡ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ಅಮೇರಿಕದ ‘ನಾವಿಕ'(ನಾವು ವಿಶ್ವ ಕನ್ನಡಿಗರು) ಮತ್ತೆ ಸದ್ದು ಮಾಡುತ್ತಿದೆ. ಅಮೇರಿಕದ ಫ್ಲೋರಿಡಾದ ಲೇಕ್‌ಲ್ಯಾಂಡ್‌ ನಗರದಲ್ಲಿ ನಡೆಯಲಿರುವ ಅದ್ದೂರಿಯ ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆರ್‌.ಪಿ.ಫಂಡಿಂಗ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ಈ ಐತಿಹಾಸಿಕ ಸಮಾವೇಶ ನಡೆಯಲಿದೆ.‌ ಈ ಮೂರು ದಿನ ಕನ್ನಡದ ಕಲರವಕ್ಕೆ ಅಮೇರಿಕದ ಕನ್ನಡಿಗರು ಸಾಕ್ಷಿಯಾಗಲಿದ್ದಾರೆ. “ನಾವಿಕ” ಸಂಘಟನೆಯು ಅಮೇರಿಕದಲ್ಲಿರುವ ಕನ್ನಡಿಗರಿಗೆ ಒಂದು ಪ್ರಮುಖ ವೇದಿಕೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಮೇರಿಕ, ಕರ್ನಾಟಕ ಅಲ್ಲದೆ ಪ್ರಪಂಚದ ಬೇರೆಬೇರೆ ಕಡೆಗಳಲ್ಲಿ ‘ನಾವಿಕ ವಿಶ್ವ ಕನ್ನಡ ಸಮಾವೇಶ’ವನ್ನು ಆಯೋಜಿಸಿದ ಕೀರ್ತಿಗೆ ‘ನಾವಿಕ’ ಭಾಜನವಾಗಿದೆ.

ಈ ನಾವಿಕ ವಿಶ್ವ ಸಮ್ಮೇಳನವು ಕನ್ನಡಿಗರನ್ನು ಒಂದಾಗಿ ಸೇರಿಸಿ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಮಹತ್ವಪೂರ್ಣ ಚರ್ಚೆಗಳನ್ನು ನಡೆಸಲು ವೇದಿಕೆಯನ್ನು ಕಲ್ಪಿಸುತ್ತಿದೆ. ಜೊತೆಗೆ ಕನ್ನಡ ಭಾಷೆ, ಕಲೆ ಮತ್ತು ಸಾಹಿತ್ಯವನ್ನು ಪ್ರಪಂಚದಾದ್ಯಾಂತ ಪ್ರಚಾರ ಮಾಡಲು ಸಾಕಷ್ಟು ಕಾರ್ಯವನ್ನು ಮಾಡುತ್ತಿದೆ. ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಕೆಲವೇ ದಿನ ಬಾಕಿಯಿದ್ದು, ಈ ಬಗ್ಗೆ ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಹಾಗು ಸಮ್ಮೇಳನ ಸಂಚಾಲಕ ಹರ್ಷಿತ್ ಗೌಡ ಅವರ ಜೊತೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಪ್ರಶ್ನೆ: ಅಮೇರಿಕದ ಪ್ಲೋರಿಡಾದಲ್ಲಿ ನಡೆಯಲಿರುವ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶದ ಬಗ್ಗೆ ಸ್ವಲ್ಪ ವಿವರಿಸಿ…

ಶಿವಕುಮಾರ್-ಹರ್ಷಿತ್ ಗೌಡ: 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025ನ್ನು ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಫಂಡಿಂಗ್ ಕನ್ವೆನ್ಷನ್ ಸೆಂಟರ್​ನಲ್ಲಿ ಆಗಸ್ಟ್ 29ರಿಂದ 31ರವರೆಗೆ ಆಯೋಜಿಸಲಾಗಿದೆ. ನಾವಿಕ ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ ಮಯಾಮಿ ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವಿಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸುತ್ತಿದೆ. ನಾವಿಕ ಸಮಿತಿಯು ಕಳೆದ ಒಂದು ವರ್ಷದಿಂದ ‘ನಾವಿಕ ವಿಶ್ವ ಕನ್ನಡ ಸಮಾವೇಶ’ ನಡೆಸಲು ಸೂಕ್ತ ಸ್ಥಳಕ್ಕಾಗಿ ಅಮೇರಿಕದ ಸುಮಾರು 20ಕ್ಕೂ ಹೆಚ್ಚು ನಗರಗಳ ಹುಡುಕಾಟ ಮತ್ತು ಅವಲೋಕನ ಮಾಡಿ ಕೊನೆಗೆ ಎಲ್ಲಾ ರೀತಿಯಿಂದಲೂ ಅತ್ಯಂತ ಅನುಕೂಲಕರವಾದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರವನ್ನು ಆಯ್ಕೆ ಮಾಡಿದ್ದು, ಲೇಕ್‌ಲ್ಯಾಂಡ್ ನಗರವು ಟ್ಯಾಂಪಾ ಮತ್ತು ಒರ್ಲ್ಯಾಂಡೊಗಳ ಮಧ್ಯೆ ಇದೆ.

ಪ್ರಶ್ನೆ: 8ನೇ ನಾವಿಕ ವಿಶ್ವ ಕನ್ನಡ ಸಮಾವೇಶದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ…? ಏನೆಲ್ಲ ವಿಶೇಷತೆ ಇರಲಿದೆ…?

ಶಿವಕುಮಾರ್-ಹರ್ಷಿತ್ ಗೌಡ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್, ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ಧಲಿಂಗಮಹಾಸ್ವಾಮೀಜಿ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರು, ನಟರಾದ ಶ್ರೀನಾಥ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ವಿನಯ್ ರಾಜ್ ಕುಮಾರ್, ಸಿಹಿಕಹಿ ಚಂದ್ರು, ನಟಿ ರಮ್ಯಾ, ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್, ಸಂಗೀತ ನಿರ್ದೇಶಕ ಮನೋ ಮೂರ್ತಿ ಸೇರಿದಂತೆ ಕನ್ನಡ ಚಿತ್ರರಂಗದ ನಟ-ನಟಿಯರು, ಕಿರುತೆರೆ ಕಲಾವಿದರು, ನೃತ್ಯಪಟುಗಳು, ಗಾಯಕ-ಗಾಯಕಿಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಗೀತ ರಸ ಸಂಜೆ ಕಾರ್ಯಕ್ರಮ: ನಾವಿಕ ಕ್ರಿಕೆಟ್ ಟೂರ್ನಮೆಂಟ್ , ಆಧುನಿಕ ವಿಜ್ಞಾನ ಮತ್ತು ಕಾಲಾತೀತ ಆಧ್ಯಾತ್ಮಿಕ ಕಾರ್ಯಕ್ರಮ, ನಾಟಕ, ಕಥೆ ಹೇಳುವುದು, ಕನ್ನಡ ಸಾಹಿತ್ಯದ ಕಿರು ನಾಟಕ ಕಾರ್ಯಕ್ರಮ ಸೇರಿದಂತೆ ಸಂಗೀತ ರಸ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಆಲ್ ಒಕೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಪ್ರಶ್ನೆ: ಮೂರು ದಿನದ ಸಮಾವೇಶದ ಕಾರ್ಯಕ್ರಮದಲ್ಲಿ ಏನೇನು ನಡೆಯಲಿದೆ ?

ಶಿವಕುಮಾರ್-ಹರ್ಷಿತ್ ಗೌಡ: ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಕವಿ ಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಕರ್ನಾಟಕದ ದಸರಾ ಶೈಲಿಯ ಜಂಬೂ ಸವಾರಿಯಿಂದ ಪ್ರೇರಿತವಾದ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪ್ರಪಂಚದಾದ್ಯಂತದ ಕನ್ನಡ ಕೂಟಗಳು ಕರ್ನಾಟಕ ಜಿಲ್ಲೆಗಳನ್ನು ಪ್ರತಿನಿಧಿಸಲಿವೆ. ಈ ಮೆರವಣಿಗೆಯ ಉದ್ದಕ್ಕೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಜಾನಪದ ಪ್ರದರ್ಶನಗಳು, ಸ್ತಬ್ಧ ಚಿತ್ರಗಳ ಮೂಲಕ ಸಾಂಪ್ರದಾಯಿಕ ಸ್ಮಾರಕಗಳ ಪುನರ್ನಿಮಾಣ ಹಾಗೂ ಕನ್ನಡ ಅಸ್ಮಿತೆಯನ್ನು ಪ್ರತಿಧ್ವನಿಸುವ ಧ್ವಜಗಳು ಮತ್ತು ಸಂಗೀತ ಪ್ರಕಾರಗಳು ಸಾಂಸ್ಕೃತಿಕ ವೈಭವವನ್ನು ಸಾರಲಿವೆ.

ಪ್ರಶ್ನೆ: ಸರ್, ‘ನಾವಿಕ’ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು ? ಅದರ ಬಗ್ಗೆ ವಿವರ ನೀಡುತ್ತೀರಾ..?

ಶಿವಕುಮಾರ್-ಹರ್ಷಿತ್ ಗೌಡ: ನಾವಿಕ (ನಾವು ವಿಶ್ವ ಕನ್ನಡಿಗರು) 2009ರಲ್ಲಿ ಸ್ಥಾಪಿತವಾದ ಒಂದು ಲಾಭರಹಿತ ಸಂಸ್ಥೆ ಆಗಿದೆ. ಇದರ ಮುಖ್ಯ ಉದ್ದೇಶವೇನೆಂದರೆ ಪ್ರಪಂಚಾದ್ಯಾಂತ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಕಾರ್ಯನಿರ್ವಹಿಸುವುದು. ನಾವಿಕವು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ಹಾಗೂ ಧರ್ಮಕಾರ್ಯ ಚಟುವಟಿಕೆಗಳನ್ನು ಆಯೋಜಿಸಿ ಕನ್ನಡಿಗರ ನಡುವೆ ಭದ್ರವಾದ ಸಂಪರ್ಕ ಮತ್ತು ಸಹಕಾರವನ್ನು ನಿರ್ಮಿಸಲು ಪ್ರಯತ್ನಿಸುವುದಾಗಿದೆ.

ಪ್ರಶ್ನೆ: “ನಾವಿಕ” ಸಂಸ್ಥೆಯು ನಡೆದು ಬಂದ ಹಾದಿ ಬಗ್ಗೆ ವಿವರಿಸುತ್ತೀರಾ…..?

ಶಿವಕುಮಾರ್-ಹರ್ಷಿತ್ ಗೌಡ: ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಆರಂಭಿಸಲಾಯಿತು. ಇದರ ಒಂದು ಭಾಗವಾಗಿ ನಾವಿಕ ಸಂಸ್ಥೆಯು ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ. ನಾವಿಕ ಸಂಸ್ಥೆಯು ಮಾತೃಭೂಮಿ ಕರ್ನಾಟಕ ಜನತೆಗೆ, ವಿದ್ಯಾರ್ಥಿಗಳಿಗೆ ಕೋವಿಡ್ ಸಮಯದಲ್ಲಿ, ಪ್ರವಾಹ ವಿಕೋಪ , ನೈಸರ್ಗಿಕ ವಿಕೋಪ ಮುಂತಾದ ಸಂದರ್ಭಗಳಲ್ಲಿ ಸಹಾಯ ಮಾಡುತ್ತಲೇ ಬಂದಿದೆ.

ನಾವಿಕ – ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗಟ್ಟಿಯಾದ ಸೇತುವೆ ಆಗಿದೆ. 2009ರಲ್ಲಿ ಸ್ಥಾಪನೆಯಾದ ನಂತರ, ಪ್ರಪಂಚಾದ್ಯಾಂತ ಕನ್ನಡಿಗರ ಸಮುದಾಯವನ್ನು ಒಂದಾಗಿ ಸೇರಿಸಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ಮಹತ್ವವನ್ನು ಜಾಗೃತಿ ಮೂಡಿಸುವ ಮೂಲಕ ಜನರಿಗೆ ತಮ್ಮ ಮೂಲಭೂತ ಪರಂಪರೆಯನ್ನು ಉಳಿಸಲು ಮತ್ತು ಆಳವಾಗಿ ಪೋಷಿಸಲು ಪ್ರೇರೇಪಿಸುವುದಾಗಿದೆ. ಅಮೇರಿಕದ ಕನ್ನಡಿಗರಿಗಷ್ಟೇ ಅಲ್ಲ, ಇತರ ದೇಶಗಳಲ್ಲಿ ವಾಸಮಾಡುತ್ತಿರುವ ಕನ್ನಡಿಗರನ್ನು ಒಂದಾಗಿ ಸೇರಿಸಲು ನಾವಿಕವು ಮಹತ್ವಪೂರ್ಣ ಹಂತಗಳನ್ನು ಸಾಧಿಸಿದೆ. ಸಂಸ್ಥೆಯು ಭಾರತೀಯ ಮೂಲದ ಶ್ರೇಷ್ಠ ಕಲಾವಿದರ, ಸಾಹಿತ್ಯಕಾರರ, ಜನಪ್ರಿಯ ವ್ಯಕ್ತಿಗಳ ಮೂಲಕ ಭಾರತೀಯತೆ ಮತ್ತು ಕನ್ನಡ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ನಾವಿಕವನ್ನು ಸ್ಥಾಪಿಸಲಾಯಿತು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಮತ್ತು ಪ್ರಚಾರ ಮಾಡಲು ನಾವಿಕವು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಮೂಲಕ, ನಾವಿಕವು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಪ್ರಪಂಚದಾದ್ಯಾಂತ ಜನರಿಗೆ ಪರಿಚಯಿಸುತ್ತಿದೆ.

‘ನಾವಿಕ’ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್. ಸಂಚಾಲಕ ಹರ್ಷಿತ್ ಗೌಡ, ಭಾವಿ ಅಧ್ಯಕ್ಷೆ ಡಾ.ಅನ್ನಪೂರ್ಣ ಭಟ್, ಉಪಾಧ್ಯಕ್ಷ ಡಾ.ಮನಮೋಹನ್ ಕಟಪಾಡಿ, ಕಾರ್ಯದರ್ಶಿ ಪುಷ್ಪಲತಾ ವೆಂಕಟರಾಮನ್, ಜೊತೆ ಕಾರ್ಯದರ್ಶಿ ಅನಿಲ್ ಪುವ್ವಡಿ ಹಾಗು ರಾಜ್ ಬಣಕಾರ್, ಕೋಶಾಧಿಕಾರಿ ಗೋಪಾಲ್ ಕುಮಾರ್, ಸದಸ್ಯರಾಗಿ ಡಾ.ಚಂದ್ರಕಲಾ ಗೌಡ, ಡಾ. ಅಶೋಕ್ ಕಟ್ಟಿಮನಿ, ಬಸವರಾಜ್ ಬೆಂಕಿ, ಮೈಥಿಲಿ ಮೂರ್ತಿ, ಡಾ.ಶಿಮೊಗ ಪ್ರಕಾಶ್, ರಜನಿ ಮಹೇಶ್, ರಾಮ ರಾವ್, ಅಜಿತ್ ಭಾಸ್ಕರ್ ಹಾಗು ಜಯ್ ಬೊಳ್ಳೂರು.

ಪ್ರಶ್ನೆ: ನಾವಿಕ ವಿಶ್ವ ಕನ್ನಡ ಸಮಾವೇಶದ ಉದ್ದೇಶವೇನು…?

ಶಿವಕುಮಾರ್-ಹರ್ಷಿತ್ ಗೌಡ: ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ ನಾವಿಕ ಸಂಸ್ಥೆಯು ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ. ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೇರಿಕ ದೇಶದಲ್ಲಿ ಮತ್ತು ಸಮ ವರ್ಷಗಳಲ್ಲಿ ಅಮೇರಿಕದ ಹೊರಗಡೆ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ವರ್ಷ 2024ರಲ್ಲಿ ನಾವಿಕ ಸಂಸ್ಥೆಯು ಯೂರೋಪ್ ಖಂಡದ ಜರ್ಮನಿ ದೇಶದ ಫ್ರಾಂಕ್ಫರ್ಟ್ ನಲ್ಲಿ ರೈನ್ ಮೇನ್ ಕನ್ನಡ ಸಂಘದ ಸಹಯೋಗದೊಂದಿಗೆ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಭಾರಿ ಅದ್ದೂರಿಯಾಗಿ ಆಯೋಜಿಸಿತ್ತು.

ಪ್ರಶ್ನೆ: ನಾವಿಕದ ಹಿಂದಿರುವ ಧ್ಯೇಯೋದ್ದೇಶಗಳು ಏನೇನು ? ಅದರ ಬಗ್ಗೆ ಹೇಳಬಹುದೇ..?

ಶಿವಕುಮಾರ್-ಹರ್ಷಿತ್ ಗೌಡ: ನಮ್ಮ ಮಕ್ಕಳಿಗಾಗಿ ಹಾಗೂ ಮುಂದಿನ ಜನಾಂಗಕ್ಕಾಗಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಮತ್ತು ವೃಧ್ಧಿಸಿಕೊಳ್ಳುವುದು. ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡ ಸಂಘಗಳಿಗೂ ಪರಸ್ಪರ ವಿನಿಮಯ ವೇದಿಕೆ ಒದಗಿಸುವುದು. ಹೊರದೇಶದ ಸಾಮಾಜಿಕ ವಾತಾವರಣದಲ್ಲಿ ಎದುರಾಗುವ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕೆ ಪ್ರಾಮುಖ್ಯತೆ. ಕನ್ನಡಿಗರು ತಮ್ಮ ಸಂಘ ಮತ್ತು ನಾವಿಕದ ಮೂಲಕ ವಾಸಿಸುವ ದೇಶದ ಮತ್ತು ರಾಜ್ಯಗಳ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು. ಕನ್ನಡತನ ಹಾಗೂ ಭಾರತೀಯತೆಯನ್ನು ಉಳಿಸಿಕೊಳ್ಳುವುದು. ಎಲ್ಲರೂ ಸಾಂಘಿಕವಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಭಾಗವಹಿಸುವುದು. ಕನ್ನಡ ನಾಡಿನಲ್ಲಿ, ಭಾರತದ ಇತರ ಪ್ರಾ೦ತ್ಯಗಳಲ್ಲಿ, ಹಾಗು ನಾವು ವಾಸಿಸುವ ದೇಶಗಳಲ್ಲಿ ವಿವಿಧ ದಾನ ಧರ್ಮ ಸತ್ಕಾರ್ಯಗಳಲ್ಲಿ ತೊಡಗುವುದು.

ಪ್ರಶ್ನೆ: ಕನ್ನಡ ಭಾಷೆ ಬೆಳವಣಿಗೆಗೆ ಜೊತೆಗೆ ‘ನಾವಿಕ’ದ ಇನ್ನಿತರ ಕೊಡುಗೆಗಳು ಏನು…?

ಶಿವಕುಮಾರ್-ಹರ್ಷಿತ್ ಗೌಡ: ನಾವಿಕವು ವಿವಿಧ ಕುಟುಂಬ ಮತ್ತು ಮಕ್ಕಳ ಸಹಾಯ ನಿಧಿ ಅಭಿಯಾನಗಳನ್ನು ನಡೆಸುತ್ತಿದೆ. ಸಂಸ್ಥೆಯ ಚಾರಿಟಿ ವಿಭಾಗವು ಅನಾಥಾಶ್ರಮಗಳು, ಅನಾರೋಗ್ಯದಿಂದ ತತ್ತರಿಸಿರುವ ವ್ಯಕ್ತಿಗಳು, ಅಪಘಾತಗಳಲ್ಲಿ ಗಾಯಗೊಂಡವರು, ಶಿಕ್ಷಣ ಅಗತ್ಯವಿರುವ ಮಕ್ಕಳ ಮತ್ತು ಬಡ ಕುಟುಂಬಗಳಿಗೆ ಸಹಾಯ-ಸಹಕಾರವನ್ನು ನೀಡುತ್ತಿದೆ. ನಾವಿಕವು ಕನ್ನಡಿಗರ ಕಷ್ಟ-ಕಾರ್ಪಣ್ಯಗಳಿಗೆ ಸಹಾಯಹಸ್ತವನ್ನು ನೀಡುತ್ತಲೇ ಬಂದಿದೆ. ನಾವಿಕವು ಕೇವಲ ಒಂದು ಸಂಸ್ಥೆ ಅಲ್ಲ, ಅದು ಪ್ರಪಂಚಾದ್ಯಾಂತ ಇರುವ ಕನ್ನಡಿಗರಲ್ಲಿ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಿದೆ.

ಜೊತೆಗೆ ಸಮಾಜ ಸೇವಾ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ಪ್ರವಾಹ ಪೀಡಿತರಿಗೆ ಧನ ಸಹಾಯ (ಕರ್ನಾಟಕ ಮತ್ತು ಅಮೆರಿಕ), COVID-19 ಸಮಯದಲ್ಲಿ ಮುಖ್ಯಮಂತ್ರಿಯ ಸಹಾಯ ನಿಧಿಗೆ 10 ಲಕ್ಷ ರೂ ದೇಣಿಗೆ, COVID-19 ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ ಧನ ಸಹಾಯ, ಕಲಾವಿದರಿಗೆ ಧನ ಮತ್ತು ಧಾನ್ಯ ಸಹಾಯ, 500 ಕಂಪ್ಯೂಟರ್ ಟ್ಯಾಬ್ಲೆಟ್’ಗಳ ವಿತರಣೆ, ಆಮ್ಲಜನಕ ಸಿಲಿಂಡರ್ಗಳ ವಿತರಣೆ ಕಾರ್ಯ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದೆ.

ಪ್ರಶ್ನೆ: ಈವರಗೆ ನಡೆದ ನಾವಿಕ ವಿಶ್ವ ಕನ್ನಡ ಸಮಾವೇಶದ ಬಗ್ಗೆ ಸಣ್ಣ ವಿವರಣೆ…?

ಶಿವಕುಮಾರ್-ಹರ್ಷಿತ್ ಗೌಡ: ನಾವಿಕದ ಮುಖ್ಯ ಚಟುವಟಿಕೆಗಳ ಭಾಗವಾಗಿ ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಈಗಾಗಲೇ ಆಯೋಜಿಸುತ್ತಾ ಬಂದಿದೆ. ನಾವಿಕವು ಕನ್ನಡ ಸಂಸ್ಕೃತಿಯನ್ನು ಪ್ರಪಂಚಾದ್ಯಾಂತ ಹಬ್ಬಿಸಲು ವಿವಿಧ ಸಮ್ಮೇಳನಗಳನ್ನು ಆಯೋಜಿಸಿದೆ. ನಾವಿಕದ ಮೊದಲ ಸಮ್ಮೇಳನವು 2010ರಲ್ಲಿ ಕ್ಯಾಲಿಫೋರ್ನಿಯಾದ ಪ್ಯಾಸಡೀನಾದಲ್ಲಿ ನಡೆಯಿತು. 2012ರಲ್ಲಿ ಬೆಂಗಳೂರಿನಲ್ಲಿ ನಾವಿಕೋತ್ಸವ, 2013ರಲ್ಲಿ ಅಮೇರಿಕದ ಬೋಸ್ಟನ್ ನಗರದಲ್ಲಿ ನಾವಿಕ ಸಮ್ಮೇಳನ, 2014ರಲ್ಲಿ ಬೆಂಗಳೂರಿನಲ್ಲಿ ಸಮ್ಮೇಳನ, 2015ರಲ್ಲಿ ನಾರ್ತ್ ಕ್ಯಾರೋಲೈನಾದ ರಾಲಿಯಲ್ಲಿ, 2016ರಲ್ಲಿ ಬೆಂಗಳೂರಿನಲ್ಲಿ, 2017ರಲ್ಲಿ ಅಮೇರಿಕದ ಡಾಲಸ್’ನಲ್ಲಿ, 2018ರಲ್ಲಿ ಮೈಸೂರಿನಲ್ಲಿ, 2019ರಲ್ಲಿ ಅಮೇರಿಕದ ಸಿಂಸಿನಾಟಿಯಲ್ಲಿ, 2020 ಮತ್ತು 2021ರಲ್ಲಿ ವರ್ಚುಯಲ್ ಸಮ್ಮೇಳನ, 2022ರಲ್ಲಿ ಕೀನ್ಯಾದಲ್ಲಿ, 2023ರಲ್ಲಿ ಅಮೇರಿಕದ ಟೆಕ್ಸಸ್’ನ ಆಸ್ಟಿನ್’ನಲ್ಲಿ, 2024ರಲ್ಲಿ ಜರ್ಮನಿಯಲ್ಲಿ ಹಾಗು ಈ ಬಾರಿ ಅಮೇರಿಕದ ಫ್ಲೋರಿಡಾದಲ್ಲಿ ನಾವಿಕ ಸಮ್ಮೇಳನ ನಡೆಯಲಿದೆ.

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories