ವಿಶ್ವದ ಅತಿದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕನ್ನಡ ಪಾಠ ಶಾಲೆ ದುಬೈ’ಗೆ ಈಗ 11ನೇ ವರ್ಷದ ಸಂಭ್ರಮ. ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮನ್ನಣೆಗೆ ಪಾತ್ರವಾಗಿರುವ ಈ ಶಾಲೆ ಅರಬರ ನಾಡು ದುಬೈನಲ್ಲಿ ಕನ್ನಡ ಡಿಂಡಿಮ ಭಾರಿಸುವ ಮೂಲಕ ವಿದೇಶದಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡುತ್ತಾ ಬರುತ್ತಿದೆ. ‘ಮಾತೃ ಭಾಷಾ ಸಾಕ್ಷರತೆ ಕನ್ನಡ ಕಂದನ ಹಕ್ಕು’ ಎಂಬ ಘೋಷಣೆಯಡಿ ‘ಕನ್ನಡ ಮಿತ್ರರು-ಯುಎಇ’ ಸಂಘಟನೆ ಈ ಶಾಲೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ. ಈ ಶಾಲೆಯ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 27ರಂದು ದುಬೈನ ಅಲ್ ನಾಸರ್ ಲೀಶರ್ ಲ್ಯಾಂಡ್’ನಲ್ಲಿ ಬೆಳಗ್ಗೆ 10:30ರಿಂದ ಸಂಜೆ 6:30ರ ವರಗೆ ಆಯೋಜಿಸಲಾಗಿದೆ.

‘ಕನ್ನಡ ಮಿತ್ರರು-ಯುಎಇ’ ಸಂಘಟನೆ ಅಧ್ಯಕ್ಷರೂ, ಈ ಶಾಲೆಯ ಸ್ಥಾಪಕ ಮುಖ್ಯ ಸಂಚಾಲಕರೂ ಆಗಿರುವ ಶಶಿಧರ್ ನಾಗರಾಜಪ್ಪ ಅವರ ಕಾರ್ಯವೈಖರಿಗೆ ಕನ್ನಡಾಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ. ಜೊತೆಗೆ ದುಬೈಯ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶಶಿಧರ ನಾಗರಾಜಪ್ಪ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರು. 2002ರಿಂದ ದುಬೈಯಲ್ಲಿ ನೆಲೆಸಿರುವ ಇವರು, ದುಬೈಯ ‘ಪರ್ವ’ ಸಮೂಹ ಸಂಸ್ಥೆಗಳ ಸಹಸಂಸ್ಥಾಪಕರಾಗಿದ್ದಾರೆ. ‘ಕನ್ನಡ ಪಾಠ ಶಾಲೆ ದುಬೈ’ಗೆ 11ರ ಸಂಭ್ರಮದ ಹಿನ್ನೆಲೆಯಲ್ಲಿ globalkannadiga.com ಶಶಿಧರ ನಾಗರಾಜಪ್ಪ ಅವರೊಂದಿಗೆ ನಡೆಸಿದ ಸಂದರ್ಶನ.
ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ ಯಾವಾಗ ? ಯಾರು ಆರಂಭ ಮಾಡಿದ್ದು? ಈ ಬಗ್ಗೆ ವಿವರಣೆ ನೀಡಬಹುದಾ ಸರ್…?
ಶಶಿಧರ್ ನಾಗರಾಜಪ್ಪ: ‘ಕನ್ನಡ ಪಾಠ ಶಾಲೆ ದುಬೈ’ಯನ್ನು ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ 2014ರಲ್ಲಿ ದುಬೈನ ಜೆ.ಎಸ್.ಎಸ್ ಶಾಲೆಯಲ್ಲಿ ಆರಂಭಿಸಲಾಯಿತು. ಯುಎಇಯಲ್ಲಿರುವ ಎಲ್ಲ ಕನ್ನಡ ಪ್ರೇಮಿಗಳು ಸೇರಿ ನಮ್ಮ ಮಕ್ಕಳಿಗೆ ಕನ್ನಡದ ಸೊಗಡು, ಕನ್ನಡಾಭಿಮಾನವನ್ನು ಮೂಡಿಸುವ ಉದ್ದೇಶದಿಂದ ಆರಂಭಿಸಿದ್ದೇವೆ. ಎಲ್ಲರ ಸಹಕಾರದೊಂದಿಗೆ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದೆ.


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಯನ್ನು ನಡೆಸುತ್ತಿರುವವರು ಯಾರು…? ಈಗ ಇರುವ ಮಕ್ಕಳ ಸಂಖ್ಯೆ ಎಷ್ಟು…?
ಶಶಿಧರ್ ನಾಗರಾಜಪ್ಪ: ಈ ಶಾಲೆಯನ್ನು ‘ಕನ್ನಡ ಮಿತ್ರರು ಯು.ಎ.ಇ’ ಸಂಘಟನೆ ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಶ್ವದ ಅತಿದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೂ ಈ ಶಾಲೆ ಭಾಜನವಾಗಿದೆ. ಪ್ರಸ್ತುತ 1254 ಮಕ್ಕಳಿಗೆ ದುಬೈನಲ್ಲಿ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿದೆ. ಈ ಮಕ್ಕಳೆಲ್ಲರೂ ಉತ್ಸಾಹದಿಂದ ಮಾತೃ ಭಾಷೆ ಕನ್ನಡವನ್ನು ಕಲಿಯುತ್ತಿದ್ದಾರೆ.


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಯ ಬಗ್ಗೆ, ಮಕ್ಕಳ ನೋಂದಾವಣೆ ಬಗ್ಗೆ ವಿವರಿಸಬಹುದೇ….?
‘ಕನ್ನಡ ಪಾಠ ಶಾಲೆ ದುಬೈ’ಯಲ್ಲಿ ಮಕ್ಕಳಿಗೆ ಶಿಕ್ಷಣದಿಂದ ಹಿಡಿದು, ಪಠ್ಯ ಪುಸ್ತಕದವರಗೆ ಎಲ್ಲವೂ ಉಚಿತವಾಗಿ ನೀಡಲಾಗುತ್ತದೆ. ಪ್ರತೀ ವರ್ಷವೂ ಶಾಲಾ ತರಗತಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮಗಳಿಗೆ ಕರ್ನಾಟಕದಲ್ಲಿ ಕನ್ನಡ ಸೇವೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಗಳನ್ನು ಆಹ್ವಾನಿಸಿ ಇಲ್ಲಿನ ಕನ್ನಡಿಗರ ಪರವಾಗಿ ಗೌರವಿಸಲಾಗುತ್ತಿದೆ. ಇಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಲಿಯಲು ಅವಕಾಶವಿದೆ.
ಶಾಲೆಯ ವಾರ್ಷಿಕ ವೇಳಾಪಟ್ಟಿ ಹೀಗಿದೆ:
ಮಕ್ಕಳ ನೋಂದಣಿ: ಅಕ್ಟೋಬರ್ 2(ಸಾಂಕೇತಿಕವಾಗಿ ಗಾಂಧಿ ಜಯಂತಿ)
ಶಾಲಾ ತರಗತಿ ಆರಂಭ: ನವಂಬರ್ 1(ಸಾಂಕೇತಿಕವಾಗಿ ಕರ್ನಾಟಕ ರಾಜ್ಯೋತ್ಸವ)
ಮದ್ಯಂತರ ಪರೀಕ್ಷೆಗಳು: ಜನವರಿ 14(ಸಾಂಕೇತಿಕವಾಗಿ ಮಕರ ಸಂಕ್ರಾಂತಿ)
ವಾರ್ಷಿಕ ಪರೀಕ್ಷೆಗಳು: ಏಪ್ರಿಲ್ 30(ಸಾಂಕೇತಿಕವಾಗಿ ಯುಗಾದಿ ಹಬ್ಬ)
ಸಮಾರೋಪ ಸಮಾರಂಭ: ಮೇ 2(ಸಾಂಕೇತಿಕವಾಗಿ ಕಾರ್ಮಿಕರ ದಿನಾಚರಣೆ)


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಗೆ ಕರ್ನಾಟ ಸರಕಾರದಿಂದ ಮಾನ್ಯತೆ ದೊರಕಿದೆಯೇ…?
ಶಶಿಧರ್ ನಾಗರಾಜಪ್ಪ: ‘ಕನ್ನಡ ಪಾಠ ಶಾಲೆ ದುಬೈ’ಗೆ 2024ರಲ್ಲಿಯೇ ಕರ್ನಾಟಕ ಸರ್ಕಾರದ ಮನ್ನಣೆ ದೊರಕಿದೆ. 2014ರಿಂದ ದುಬೈನಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಭಾಷಾ ಬೋಧನೆಯನ್ನು ಉಚಿತವಾಗಿ ಮಾಡುತ್ತಾ ಬಂದಿರುವ ಕನ್ನಡ ಮಿತ್ರರು ಯುಎಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ಪತ್ರ ನೀಡಿ ವಿದೇಶದಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡಿದೆ. ನಮ್ಮ ಶಾಲಾ ಸರ್ಟಿಫಿಕೇಟ್’ನಲ್ಲಿ ಪ್ರಾಧಿಕಾರಾದ ಲೋಗೋ ಹಾಕಿಕೊಳ್ಳುವಂತೆ ಅನುಮತಿ ಕೊಟ್ಟಿದ್ದಾರೆ. ಬೇರೆ ಯಾವುದೇ ರೀತಿಯ ಸಹಾಯ, ಸಹಕಾರ ಸರಕಾರದಿಂದ ಈವರಗೆ ಸಿಕ್ಕಿಲ್ಲ.
ಕನ್ನಡ ಪಾಠ ಶಾಲೆ ದುಬೈನ ಆಯೋಜಕರ ನಿಯೋಗವು 2024ರ ಏಪ್ರಿಲ್ 10 ರಂದು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿತ್ತು. ಈ ವೇಳೆ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿದ್ದು, ತಮ್ಮ ನಿಸ್ವಾರ್ಥ ಕನ್ನಡ ಸೇವೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರಾವೆಗಳ ಸಮೇತವಾಗಿ ನಿರೂಪಿಸಿದ ಫಲವಾಗಿ ಕರ್ನಾಟಕ ಸರಕಾರದಿಂದ ಮನ್ನಣೆ ದೊರೆತಿದೆ.
ಕನ್ನಡ ಪಾಠ ಶಾಲೆ ದುಬೈ ಬಗ್ಗೆ ಸಂಪೂರ್ಣ ಅರಿವಿರುವ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಈ ಬಗ್ಗೆ ವಿವರಿಸಿದ್ದು, ಅಧಿಕೃತ ಮನ್ನಣೆಗೆ ಸಹಕಾರಿಯಾಗಿದೆ.


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಗೆ ಬರುವ ವಿದ್ಯಾರ್ಥಿಗಳಿಗೆ ನಿಮ್ಮ ಕಲಿಕೆಯು ಯಾವ ರೀತಿ ಪ್ರಯೋಜನಕ್ಕೆ ಬರುತ್ತಿದೆ ?
ಶಶಿಧರ್ ನಾಗರಾಜಪ್ಪ: ಸುಲಭವಾಗಿ ಮಕ್ಕಳು ತಮ್ಮ ಮಾತೃ ಭಾಷೆ ಕನ್ನಡಲ್ಲಿ ಸಂವಹನ ಮಾಡುತ್ತಾರೆ. ಕನ್ನಡವನ್ನು ಕ್ರಮಬದ್ಧವಾಗಿ ಓದಬಲ್ಲರು ಮತ್ತು ಬರೆಯಬಲ್ಲರು. ಕನ್ನಡ ಕಲಿಕೆಯಿಂದ ತಾಯ್ನಾಡಿನ ಮೇಲೆ ಹೆಚ್ಚಿನ ಗೌರವ ಮತ್ತು ಪ್ರೀತಿ ಮೂಡುವಂತಾಗಿದೆ. ಮಕ್ಕಳನ್ನು ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ವಾರಸುದಾರರನ್ನಾಗಿಸುತ್ತಿದೆ. ವಿದೇಶದಲ್ಲಿ ಹುಟ್ಟಿ ಬೆಳೆದ ಕನ್ನಡಿಗರ ಮಕ್ಕಳು ತಾಯ್ನಾಡಿಗೆ ಮರಳಿ ವಿದ್ಯಾಭ್ಯಾಸ ಮುಂದುವರಿಸುವ ಸಂದರ್ಭದಲ್ಲಿ, ಕನ್ನಡ ಪಾಠ ಶಾಲೆ ದುಬೈನಲ್ಲಿ ಕನ್ನಡ ಕಲಿತ ಮಕ್ಕಳು ಬಹುಬೇಗ ಹೊಂದಿಕೊಂಡು ಸರಾಗವಾಗಿ ಕನ್ನಡ ಕಲಿಕೆ ಮುಂದುವರಿಸುತ್ತಿದ್ದಾರೆ.


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಯನ್ನು ವಿಶ್ವದಲ್ಲಿಯೇ ಗುರುತಿಸುವಂತೆ ಮಾಡಿರುವ ‘ಕನ್ನಡ ಮಿತ್ರರು ಯುಎಇ’ ಬಗ್ಗೆ ಸಣ್ಣ ಮಾಹಿತಿ ಕೊಡಬಹುದೇ..?
ಶಶಿಧರ್ ನಾಗರಾಜಪ್ಪ: ಕನ್ನಡ ಮಿತ್ರರು ಯು.ಎ.ಇ ತಂಡದಲ್ಲಿ ಶಶಿಧರ್ ನಾಗರಾಜಪ್ಪ(ಅಧ್ಯಕ್ಷರು), ಸಿದ್ದಲಿಂಗೇಶ್ ಬಿ.ಆರ್(ಉಪಾಧ್ಯಕ್ಷರು), ಸುನೀಲ್ ಗವಾಸ್ಕರ್ (ಪ್ರಧಾನ ಕಾರ್ಯದರ್ಶಿ), ಶಶಿಧರ್ ಮುಂಡರಗಿ(ಜಂಟಿ ಕಾರ್ಯದರ್ಶಿ), ನಾಗರಾಜ್ ರಾವ್(ಖಜಾಂಚಿ), ಸ್ಥಾಪಕ ಮುಖ್ಯ ಶಿಕ್ಷಕಿಯಾಗಿ ರೂಪಾ ಶಶಿಧರ್ ಹಾಗು 22 ಮಂದಿ ಸಂಘಟನಾ ಕಾರ್ಯದರ್ಶಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಗೌರವ ಪೋಷಕರಾಗಿ ಯುಎಇಯ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮೋಹನ್ ನರಸಿಂಹ ಮೂರ್ತಿ ಹಾಗು ಗೌರವ ಸಲಹೆಗಾರರಾಗಿ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಮತ್ತು ಎಂ.ಇ.ಮೂಳೂರು ಸೇವೆ ಸಲ್ಲಿಸುತ್ತಿದ್ದಾರೆ.


ಪ್ರಶ್ನೆ: ‘ಕನ್ನಡ ಪಾಠ ಶಾಲೆ ದುಬೈ’ಯ ಪರಿಕಲ್ಪನೆ ಹೇಗೆ ಹುಟ್ಟಿಕೊಂಡಿತು…?
ಶಶಿಧರ್ ನಾಗರಾಜಪ್ಪ: ಇಂದು ಅನಿವಾಸಿ ಕನ್ನಡಿಗರು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ನೆಲೆಸಿದ್ದು, ವಿದೇಶದಲ್ಲಿಯೇ ಹುಟ್ಟಿ ಬೆಳೆಯುವ ನಮ್ಮ ಮಕ್ಕಳು ಪ್ರಮುಖವಾಗಿ ಆಂಗ್ಲ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕನ್ನಡ ಭಾಷೆಯಲ್ಲಿ ಓದಲು ಅಥವಾ ಬರೆಯಲು ಅವಕಾಶವಿಲ್ಲದೆ ಮಾತೃಭಾಷೆಯಲ್ಲಿ ಅನಕ್ಷರಸ್ತರಾಗುತ್ತಿರುವುದು ಶೋಚನೀಯ. ಆದುದರಿಂದ ‘ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು’ ಎಂದು ಸಾರಿ ವಿದೇಶದಲ್ಲಿನ ಯುವ ಪೀಳಿಗೆಗೆ ಸಾಮೂಹಿಕ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಕನ್ನಡ ಮಿತ್ರರು ಯು.ಎ.ಇ’ ಸಂಘಟನೆ ಆಶ್ರಯದಲ್ಲಿ ಹುಟ್ಟಿಕೊಂಡದ್ದೇ ನಮ್ಮ ‘ಕನ್ನಡ ಪಾಠ ಶಾಲೆ ದುಬೈ’.


ಪ್ರಶ್ನೆ: ಅನಿವಾಸಿ ಭಾರತೀಯರಿಗೆ ವಿಶ್ವದ ಅತಿದೊಡ್ಡ ಕನ್ನಡ ಭಾಷಾ ಬೋಧನಾ ಶಾಲೆ ಎಂಬ ಖ್ಯಾತಿಗೆ ಒಳಗಾಗಿರುವ ನಿಮ್ಮ ಶಾಲೆಯ ಬಗ್ಗೆ ಸ್ವಲ್ಪ ವಿವರ ನೀಡಬಹುದಾ..?
ಶಶಿಧರ್ ನಾಗರಾಜಪ್ಪ: 2014ರಲ್ಲಿ ನನ್ನೊಂದಿಗೆ ಕೈಜೋಡಿಸಿದ 50 ಮಂದಿ ಸ್ವಯಂಪ್ರೇರಿತ ಸದಸ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡ ಭಾಷೆ ಹಾಗು ನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸೇವೆಯಲ್ಲಿ ನಿರತರಾಗಿದ್ದಾರೆ. ‘ಕನ್ನಡ ಪಾಠ ಶಾಲೆ ದುಬೈ’ ಯು.ಎ.ಇ ಯಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತ್ತಿದ್ದು, ಒಂದು ಸ್ವಯಂಸೇವೆಯ ಮಾದರಿಯನ್ನು ಅನುಸರಿಸಲಾಗುತ್ತಿದೆ. ಪಾಠ ಕಲಿಸಲು ಬೇಕಾಗುವ ಸ್ಥಳಾವಕಾಶವನ್ನು ಮೊಟ್ಟ ಮೊದಲಿಗೆ ಸುತ್ತೂರು ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರ ಆಶೀರ್ವಾದ ಪಡೆದು, 2014ರಲ್ಲಿ ದುಬೈನ ಜೆ.ಎಸ್.ಎಸ್ ಶಾಲೆಯಲ್ಲಿ ಆರಂಭಿಸಲಾಯಿತು. 2014ರಿಂದ 2017ವರಗೆ ಜೆ.ಎಸ್.ಎಸ್ ಶಾಲೆಯಲ್ಲಿ, 2018ರಲ್ಲಿ ಓಂಪ್ರಕಾಶ ಅವರ ಅಸಾಪ್ ಟ್ಯುಟರ್ಸ್‌ನ ಕೊಠಡಿಗಳಲ್ಲಿ ಉಚಿತ ಸಹಕಾರದೊಂದಿಗೆ ಹಾಗು 2019, 2020ರಲ್ಲಿ ಪ್ರಭಾಕರ ಕೋರೆಯವರು ದುಬೈನಲ್ಲಿ ಸ್ಥಾಪಿಸಿರುವ ಬಿಲ್ವ ಇಂಡಿಯನ್ ಸ್ಕೂಲ್’ನಲ್ಲಿ ಭೌತಿಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಬಳಿಕ ಕೋವಿಡ್ ಮಹಾಮಾರಿಯಿಂದಾಗಿ ಆನ್ಲೈನ್ ತರಗತಿಗಳನ್ನು ಆರಂಭಿಸಲಾಯಿತು. ಪ್ರಸಕ್ತ ತರಗತಿಗಳನ್ನು ಆನ್ಲೈನ್’ನಲ್ಲಿಯೇ ಮುಂದುವರಿಸಲಾಗುತ್ತಿದೆ.


ಪ್ರಶ್ನೆ: ನಿಮ್ಮ ಈ ಶಾಲೆಯಲ್ಲಿ ಎಷ್ಟು ಮಂದಿ ಶಿಕ್ಷಕರು ಇದ್ದಾರೆ…? ಅವರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ…?
ಶಶಿಧರ್ ನಾಗರಾಜಪ್ಪ: ನಮ್ಮ ಶಾಲೆಯಲ್ಲಿ ಒಟ್ಟು 18 ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರೂ ಸ್ವಪ್ರೇರಣೆಯಿಂದ ವೇತನರಹಿತ ಸೇವೆಸಲ್ಲಿಸಿ ಅನಿವಾಸಿ ಕನ್ನಡಿಗರ ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಈ ಶಿಕ್ಷಕಿಯರು ಕನ್ನಡದ ಬಗ್ಗೆ ಅಗಾಧ ಜ್ಞಾನ ಸಂಪತ್ತು ಹೊಂದಿದ್ದು, ಇಲ್ಲಿನ ಮಕ್ಕಳಿಗೆ ಅದನ್ನು ಧಾರೆ ಎರೆಯುತ್ತಿದ್ದಾರೆ. ಇಲ್ಲಿ ಕಲಿಯುವ ಯಾವುದೇ ಮಕ್ಕಳಿಂದ ಶುಲ್ಕವನ್ನೂ ಪಡೆಯುವುದಿಲ್ಲ. ಎಲ್ಲವೂ ಇಲ್ಲಿ ಉಚಿತವಾಗಿರುತ್ತದೆ.


ಪ್ರಶ್ನೆ: ಈ ಕನ್ನಡ ಪಾಠ ಶಾಲೆ ದುಬೈಯ ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿದೆ….? ಇದರ ಬಗ್ಗೆ ಸ್ವಲ್ಪ ವಿವರಣೆ ನೀಡಬಹುದೇ…?
ಶಶಿಧರ್ ನಾಗರಾಜಪ್ಪ: ಕೊರೋನಾ ಬಳಿಕ ಯುಎಇನಲ್ಲಿ ಕನ್ನಡ ಪಾಠ ಶಾಲೆ ಈಗ Zoom(ಆನ್ಲೈನ್)ನಲ್ಲಿಯೇ ನಡೆಯುತ್ತಿದೆ. ನವೆಂಬರ್’ನಿಂದ ಏಪ್ರಿಲ್ ವರಗೆ ಶಾಲೆಯನ್ನು ನಡೆಸಲಾಗುತ್ತಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ 10ರಿಂದ 1:30ರ ವರೆಗೆ ತರಗತಿಗಳು ನಡೆಯುತ್ತದೆ.
ಶಾಲಾ ತರಗತಿಗಳು:
ಹಂತ: 1-ವರ್ಣಮಾಲೆ, ಸಂಖ್ಯೆ ಮತ್ತು ಪುಟಾಣಿ ಸಾಹಿತ್ಯ.
ಹಂತ: 2- ಸುಲಭ ಪದಗಳು ಮತ್ತು ವಾಕ್ಯ ರಚನೆ.
ಹಂತ: 3-ಹೆಚ್ಚಿನ ವ್ಯಾಕರಣ ಮತ್ತು ಪ್ರಬಂಧ ರಚನೆ.


ಪ್ರಶ್ನೆ: ಈ ಕನ್ನಡ ಪಾಠ ಶಾಲೆ ಆರಂಭಿಸಲು ಮೂಲ ಕಾರಣವೇನು…? ಇದರ ಉದ್ದೇಶವೇನು ?
ಶಶಿಧರ್ ನಾಗರಾಜಪ್ಪ: ನಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವುದರಿಂದ ಕನ್ನಡ ನಾಡು-ನುಡಿ ಬಗ್ಗೆ ವಂಚಿತರಾಗುತ್ತಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ಸ್ವಾಭಿಮಾನ ಮೂಡಿಸುವ ಸದುದ್ದೇಶದಿಂದ ಕನ್ನಡ ಪಾಠ ಶಾಲೆಯನ್ನು ಆರಂಭಿಸಿದ್ದೇವೆ. ಕನ್ನಡಿಗ ಅನಿವಾಸಿ ಭಾರತೀಯ ಮಕ್ಕಳನ್ನು ಕನ್ನಡ ಭಾಷೆಯಲ್ಲಿ ಸಾಕ್ಷರರನ್ನಾಗಿ ಮಾಡಿ, ಜನ್ಮಭೂಮಿಯ ಸಾಂಸ್ಕೃತಿಕ ಮೌಲ್ಯವನ್ನು ಮೂಡಿಸುವುದು ಕನ್ನಡ ಮಿತ್ರ ಸಂಘಟನೆಯ ಉದ್ದೇಶ.


ಪ್ರಶ್ನೆ: “ಕನ್ನಡ ಮಿತ್ರ” ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡುವ ಉದ್ದೇಶವೇನು…? ಇದರ ಮಾನದಂಡವೇನು…?
ಶಶಿಧರ್ ನಾಗರಾಜಪ್ಪ: ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಉನ್ನತಿ, ಬೋಧನೆ ಅಥವಾ ವಿಶೇಷ ರೀತಿಯಲ್ಲಿ ಕೊಡುಗೆ ನೀಡಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ “ಕನ್ನಡ ಮಿತ್ರ ಪ್ರಶಸ್ತಿ” ಮತ್ತು ನಗದು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ದುಬೈನಲ್ಲಿ ನಡೆಯುವ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಸಾಧಕರಿಗೆ ನೀಡಿ ಸನ್ಮಾನಿಸುತ್ತಾ ಬಂದಿದ್ದೇವೆ. ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಇದು ಕೂಡ ಒಂದು.


ಪ್ರಶ್ನೆ: ನಿಮ್ಮ ಸಂಘಟನೆ ಮೂಲಕ ಬೇರೆ ಏನಾದರೂ ಕೊಡುಗೆ ನೀಡುತ್ತಿದ್ದೀರಾ…?
ಶಶಿಧರ್ ನಾಗರಾಜಪ್ಪ: ಕನ್ನಡ ಮಿತ್ರರು ಯು.ಎ.ಇ ಸಂಘಟನೆಯ ವತಿಯಿಂದ ಕರ್ನಾಟಕದ ಸರ್ಕಾರಿ ಕನ್ನಡ ಶಾಲೆಗೆ ‘ಸ್ಮಾರ್ಟ್ ಕ್ಲಾಸ್’ ಚತುರ ಶಾಲಾ ಉಪಕರಣಗಳನ್ನು ನೀಡಿ, ಕನ್ನಡ ಮಾಧ್ಯಮದ ಗ್ರಾಮಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತಿದೆ. ಲ್ಯಾಪ್ ಟಾಪ್, ಡಿಜಿಟಲ್ ಪ್ರೊಜೆಕ್ಟರ್ ಮತ್ತು ಕಲರ್ ಪ್ರಿಂಟರ್‌ಗೆ ತಗಲುವ ವೆಚ್ಚವನ್ನು ಸಂಘಟನೆಯ ಎಲ್ಲಾ ಸದಸ್ಯರಿಂದ ಸಹಾಯ ಪಡೆದು ಭರಿಸಲಾಗುತ್ತಿದೆ. ಈಗಾಗಲೆ 5 ಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್’ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿಕ ಹಬ್ಬವನ್ನು ಆಯೋಜಿಸುತ್ತೇವೆ. ರಕ್ತ ದಾನ ಶಿಬಿರ, ಕೋವಿಡ್ ವೇಳೆ ಕೋವಿಡ್ ಪೀಡಿತರಿಗೆ ಸಹಾಯ ಹಸ್ತ, ಉದ್ಯೋಗ ಅರಸಿ ಬಂದ ಕನ್ನಡಿಗರಿಗೆ ಸೂಕ್ತ ಸಲಹೆ ಮತ್ತು ಸಹಕಾರ, ಕನ್ನಡ ತಾರೆಯರ ಕ್ರಿಕೆಟ್ ಪಂದ್ಯ ಆಯೋಜಕರಿಗೆ ಪ್ರೋತ್ಸಾಹ, ಕನ್ನಡ ಭಾಷಾ ಸೇವಕರನ್ನು ಗುರುತಿಸಿ ‘ಕನ್ನಡ ಮಿತ್ರ’ ಪ್ರಶಸ್ತಿ ನೀಡುವುದು, ಗಡಿನಾಡ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಪ್ಯೂಟರ್ ಪರಿಕರ ದೇಣಿಗೆ ನೀಡುತ್ತಿದ್ದೇವೆ.