ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ







ಜಗತ್ತಿನ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳಲ್ಲಿ 2ನೇ ಸ್ಥಾನ ಪಡೆದಿರುವ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿರುವ ಹಾಂಗ್ ಕಾಂಗ್‌ನಲ್ಲಿ ಕನ್ನಡ ಭಾಷೆ ಕೂಡ ಶ್ರೀಮಂತಿಕೆಯನ್ನು ಗಳಿಸಿದೆ. ಅದಕ್ಕೆ ಮೂಲ ಕಾರಣ ಹಾಂಗ್ ಕಾಂಗ್‌ನಲ್ಲಿರುವ ಕನ್ನಡ ಸಂಘ!. ಅತ್ಯಂತ ಹೆಚ್ಚು ಗಗನಚುಂಬಿ ಕಟ್ಟಡಗಳಿರುವ ವಾಣಿಜ್ಯ ನಗರ ಹಾಂಗ್ ಕಾಂಗ್‌ನಲ್ಲಿ ಉದ್ಯೋಗ ಹರಸಿ ಹೋದ ಕನ್ನಡಿಗರೆಲ್ಲ ಜೊತೆ ಸೇರಿ ಕಟ್ಟಿದ ‘ಕನ್ನಡ ಸಂಘ ಹಾಂಗ್ ಕಾಂಗ್’ ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ.
‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಗಳಂತೆ, ವಿದೇಶದಲ್ಲಿದ್ದುಕೊಂಡೆ ಕನ್ನಡ ಡಿಂಡಿಮವನ್ನು ಭಾರಿಸುತ್ತಿದೆ ‘ಹಾಂಗ್ ಕಾಂಗ್ ಕನ್ನಡ ಸಂಘ’. ವಿಶ್ವದ ಅತ್ಯಂತ ಹೆಚ್ಚು ಜನನಿಬಿಡ ಹಾಗು ಸುಂದರ ನಗರಗಳಲ್ಲಿ ಒಂದಾಗಿರುವ ಹಾಂಗ್ ಕಾಂಗ್‌ನಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡ ಭಾಷೆಯ ಸೊಗಡು, ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಇಲ್ಲಿನ ಕನ್ನಡ ಸಂಘ. ಈಗ ಈ ಕನ್ನಡ ಸಂಘದ ಸಾರಥ್ಯ(ಅಧ್ಯಕ್ಷತೆ) ವಹಿಸಿರುವವರು ವಾಣಿ ರಮೇಶ್ ಬಾಬು.
ವಾಣಿ ರಮೇಶ್ ಬಾಬು ಅವರು ಬೆಂಗಳೂರು ಮೂಲದವರಾಗಿದ್ದು, ಓದಿದ್ದು, ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಪತಿ ಹಾಗು ಮಕ್ಕಳ ಜೊತೆ ಕಳೆದ 25 ವರ್ಷಗಳಿಂದ ಹಾಂಗ್ ಕಾಂಗ್‌ನಲ್ಲಿ ನೆಲೆಸಿರುವ ಇವರು, ‘ಕನ್ನಡ ಸಂಘ ಹಾಂಗ್ ಕಾಂಗ್’ನಲ್ಲಿ ಸಕ್ರೀಯವಾಗಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. Food and Beverage ಕಂಪನಿ ನಡೆಸುತ್ತಿರುವ ಇವರು, ‘ಕನ್ನಡ ಸಂಘ ಹಾಂಗ್ ಕಾಂಗ್’ನ ಕನ್ನಡ ಶಾಲೆಯ ಪ್ರಿನ್ಸಿಪಾಲ್ ಆಗಿ, ಶಿಕ್ಷಕಿಯಾಗಿ ಮಕ್ಕಳಿಗೆ ಕನ್ನಡ ಕಲಿಸುತ್ತ ಸಕ್ರೀಯರಾಗಿದ್ದಾರೆ. 2012ರಲ್ಲಿ ಮೊದಲ ಮಹಿಳಾ ಕಮಿಟಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿರುವ ಜೊತೆಗೆ ಕನ್ನಡ ಸಂಘದ ಬೇರೆಬೇರೆ ಸ್ಥಾನಗಳನ್ನೂ ಅಲಂಕರಿಸಿದ್ದಾರೆ. ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ….




ಪ್ರಶ್ನೆ: ವಿಶ್ವದ ಅತ್ಯಂತ ಶ್ರೀಮಂತ ದೇಶ ಎನಿಸಿಕೊಂಡಿರುವ ಹಾಂಗ್ ಕಾಂಗ್‌ನಲ್ಲಿ ಕನ್ನಡ ಸಂಘ ಯಾವಾಗ…? ಯಾವ ಉದ್ದೇಶವನ್ನು ಇಟ್ಟುಕೊಂಡು, ಯಾರೆಲ್ಲ ಜೊತೆ ಸೇರಿ ಸಂಘ ಸ್ಥಾಪಿಸಿದ್ದಾರೆ….? ಈ ಬಗ್ಗೆ ಸಣ್ಣ ವಿವರಣೆ ನೀಡುತ್ತೀರಾ….
ವಾಣಿ ರಮೇಶ್ ಬಾಬು: ‘ಕನ್ನಡ ಸಂಘ ಹಾಂಗ್ ಕಾಂಗ್(KSHK)’ ಕರ್ನಾಟಕದ ಕನ್ನಡ ಸಮುದಾಯವನ್ನು ಪ್ರತಿನಿಧಿಸುವಂಥ ಲಾಭರಹಿತ ಸಂಸ್ಥೆಯಾಗಿದೆ. ಇದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ. ಈ ಸಂಸ್ಥೆಯ ಉದ್ದೇಶ ಕನ್ನಡಿಗರ ನಡುವೆ ಕರ್ನಾಟಕ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಕಲಾ ಪ್ರಕಾರಗಳನ್ನು ಪ್ರಚಾರ ಮಾಡುವುದು. ‘ಕನ್ನಡ ಸಂಘ ಹಾಂಗ್ ಕಾಂಗ್’ ಸಂಪೂರ್ಣ ಗ್ರೇಟರ್ ಚೀನಾ ಭೌಗೋಳಿಕದಲ್ಲೇ ಮೊದಲ ಕನ್ನಡ ಸಂಸ್ಥೆಯಾಗಿದೆ. KSHK ಈಗಾಗಲೇ ಕೆಲವು ವರ್ಷಗಳಿ೦ದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಹೊರನಾಡಿನಲ್ಲಿರುವ ಕನ್ನಡಿಗರಾದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಲಿಕ್ಕೆ, ಅದನ್ನು ಬೆಳೆಸಲಿಕ್ಕೆ ನಾವು ಪ್ರಯತ್ನ ಮಾಡಬೇಕು, ಕನ್ನಡದ ಮೇಲಿನ ನಮ್ಮ ಪ್ರೀತಿಯನ್ನು ತೋರ್ಪಡಿಸಬೇಕು ಹಾಗು ಇತರರಿಗೂ ಅದನ್ನು ಮನವರಿಕೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹಾಂಗ್ ಕಾಂಗ್‌ನಲ್ಲಿರುವ ಕನ್ನಡಿಗರೆಲ್ಲ ಒಟ್ಟು ಸೇರಿ ಈ ಕನ್ನಡ ಸಂಘವನ್ನು ಸ್ಥಾಪನೆ ಮಾಡಿದ್ದಾರೆ. 2004ರಲ್ಲಿ ಕನ್ನಡಿಗರೆಲ್ಲ ಸೇರಿ ಒಂದು ಸಣ್ಣಮಟ್ಟದಲ್ಲಿ ಕನ್ನಡ ಸಂಘವನ್ನು ಸ್ಥಾಪನೆ ಮಾಡಿದ್ದು, ಮುಂದೆ ಅಂದರೆ, ಜನವರಿ 2005ರಲ್ಲಿ ಈ ಸಂಘವನ್ನು ಅಧಿಕೃತವಾಗಿ ನೋಂದಾವಣಿ ಮಾಡಲಾಗಿದೆ.
‘ಕನ್ನಡ ಸಂಘ ಹಾಂಗ್ ಕಾಂಗ್’ ಸ್ಥಾಪನೆಗೆ ಸುಮಾರು ಜನ ಕಾರಣೀಕರ್ತರಾಗಿದ್ದಾರೆ. ಅದರಲ್ಲಿ ಪ್ರಮುಖರು ಪಾಂಡುರಂಗ ರಾವ್, ಪೂರ್ಣ ಮೈಸೂರು, ಉದಯ್ ಕೌಶಿಕ್, ರವಿ ಶ್ರಾಫ್, ಸಾದಾಶಿವ ಹೆಗಡೆ, ರಂಗಣ್ಣ… ಹೀಗೆ ಸುಮಾರು ಜನ ಒಟ್ಟು ಸೇರಿ ಕನ್ನಡ ಸಂಘ ಕಟ್ಟಿದ್ದಾರೆ. ಆರಂಭದಲ್ಲಿ ಅಂದರೆ 2005ರಲ್ಲಿ ಅಧ್ಯಕ್ಷರಾಗಿ ಪಾಂಡುರಂಗ ರಾವ್, ಕಾರ್ಯದರ್ಶಿಯಾಗಿ ಪೂರ್ಣಾ ಮೈಸೂರು ಹಾಗು ಖಜಾಂಚಿಯಾಗಿ ರಾಜೇಶ್ ಕುಲಕರ್ಣಿ ಸೇವೆಸಲ್ಲಿಸಿದ್ದಾರೆ.



ಪ್ರಶ್ನೆ: ‘ಕನ್ನಡ ಸಂಘ ಹಾಂಗ್ ಕಾಂಗ್’ನ ಧ್ಯೇಯೋದ್ದೇಶಗಳೇನು ?
ವಾಣಿ ರಮೇಶ್ ಬಾಬು: ಕನ್ನಡ ಭಾಷೆ, ಸಂಸ್ಕೃತಿಯ ಪ್ರಚಾರ ಮತ್ತು ಬೆಳೆವಣಿಗೆಯನ್ನು ತಮ್ಮ ಧ್ಯೇಯವಾಗಿಟ್ಟುಕೊಂಡು ಸಾಗುತ್ತಿದೆ. ನಮ್ಮ ಮುಂದಿನ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪೋಷಿಸಿಕೊಂಡು, ಮುಂದೆ ಸಾಗಬೇಕೆಂಬುದೇ ನಮ್ಮ ಮೂಲ ಉದ್ದೇಶ. ಕರ್ನಾಟಕದ ಹಿರಿಮೆಗೆ ಕಾರಣವಾದ ಕಲೆ, ಸಾಹಿತ್ಯ, ಸಂಗೀತದ ಸೌರಭವನ್ನು ಹಾಂಗ್ ಕಾಂಗ್ ಹಾಗೂ ಅದರ ಸುತ್ತಮುತ್ತ ನೆಲೆಸಿರುವ ಕನ್ನಡ ಬಾಂಧವರೊಂದಿಗೆ ಹಂಚಿಕೊಂಡು ‘ನಮ್ಮತನ’ದ ಅರಿವನ್ನು ಜಾಗೃತಗೊಳಿಸುವುದೇ ಈ ಸಂಘದ ಮೂಲೋದ್ದೇಶ.
ಇತರ ಧ್ಯೇಯೋದ್ದೇಶಗಳು: ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ವರ್ಧಿಸಿ, ಪ್ರಚಾರಗೊಳಿಸಿ ಎಲ್ಲೆಡೆ ಪಸರಿಸುವುದು, ಸಂಘದ ಸದಸ್ಯರು ಹಾಗೂ ಜನ ಸಾಮನ್ಯರಿಗಾಗಿ ಸಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ ಹಾಗೂ ಇನ್ನಿತರ ಲಾಭದಾಯಕವಲ್ಲದ ಚಟುವಟಿಕೆಗಳನ್ನು ಆಯೋಜಿಸುವುದು.
ದತ್ತಿಕಾರ್ಯಕ್ರಮಗಳು, ಉದಾಹರಣೆಗೆ ಬಡತನ ಪರಿಹಾರ, ಶೈಕ್ಷಣಿಕ ಪ್ರಗತಿ ಹಾಗೂ ಇತರೆ ಸಮುದಾಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು. ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಹಾಗೂ ಸಮರ್ಥ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು. ನಿಯತಕಾಲಿಕಗಳು, ಸುತ್ತೋಲೆಗಳು ಹಾಗೂ ಇತರೆ ಸಂಘದ ಆಸಕ್ತಿಗಳನ್ನು ಪ್ರಚಾರಿಸುವ ಸಾಹಿತ್ಯಗಳನ್ನು ತಯಾರಿಸಿ ಮುದ್ರಿಸಿ ಸಂಘದ ಸದಸ್ಯರಿಗೆ ಹಾಗೂ ಇನ್ನಿತರ ಆಸಕ್ತರಿಗೆ ತಲುಪಿಸುವುದು.
ಸದಸ್ಯತ್ವ ಶುಲ್ಕ ಹಾಗೂ ಇನ್ನಿತರ ಕೊಡುಗೆಗಳ ವಿವರಗಳನ್ನು ಸಂಗ್ರಹಿಸಿ ಖಾತೆಗಳನ್ನು ಪ್ರಮಾಣಿಕವಾಗಿ ಕಾಯ್ದುಕೊಳ್ಳುವುದು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕನ್ನಡಿಗರಿಗೆ ವೇದಿಕೆಯನ್ನು ಒದಗಿಸುವುದು. ಹಾಂಗ್ ಕಾಂಗ್ ನಲ್ಲಿ ಹೊಸ ಕನ್ನಡ ಸದಸ್ಯರಿಗೆ ಅಗತ್ಯ ಸ್ಥಳೀಯ ಮಾಹಿತಿಯೊಂದಿಗೆ ಸಹಾಯ.



ಪ್ರಶ್ನೆ: ನಿಮ್ಮ ಸಂಘದ ಸಂಘಟನಾ ರಚನೆ ಹೇಗಿದೆ ? ಸ್ವಲ್ಪ ವಿವರಿಸಿ….?
ವಾಣಿ ರಮೇಶ್ ಬಾಬು: ನಮ್ಮ ಸಂಘದಲ್ಲಿ ಪ್ರತಿ ವರ್ಷ ಚುನಾವಣಾ ನಡೆಯುತ್ತದೆ. ಪದಾಧಿಕಾರಿಗಳು ಇದರಲ್ಲಿ ಆಯ್ಕೆಯಾಗುತ್ತಾರೆ. 2 ವರ್ಷಕ್ಕೊಮ್ಮೆ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳು ಬದಲಾಗುತ್ತಾರೆ. ನಮ್ಮ ಪದಾಧಿಕಾರಿಗಳು ಯಾವುದೇ ರೀತಿಯ ವೇತನವನ್ನು ಪಡೆಯುವುದಿಲ್ಲ. ಪ್ರಸಕ್ತ ನಮ್ಮ ಸಂಸ್ಥೆಯ ಅಧ್ಯಕ್ಷೆಯಾಗಿ ವಾಣಿ ರಮೇಶ್ ಬಾಬು, ಉಪಾಧ್ಯಕ್ಷ: ಜೆಸಿಂತಾ ಡಿಸೋಜಾ, ಕಾರ್ಯದರ್ಶಿ: ಪ್ರದೀಪ್ ಹಳೇಬೀಡು, ಜಂಟಿ ಕಾರ್ಯದರ್ಶಿ: ವಿನೋದ್ ವಾಸುದೇವನ್, ಖಜಾಂಚಿ: ಅಶ್ವಿನಿ ಉಮೇಶ್, ಸಲಹಾ ಸಮಿತಿ: ಸುಧೀರ್, ಗೌತಮ್ ಹೆಗ್ಡೆ, ವಿಜಯ್ ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.



ಪ್ರಶ್ನೆ: ನಿಮ್ಮ ಸಂಘಟನೆಯನ್ನು ಹಾಂಗ್ ಕಾಂಗ್ ಸರಕಾರದಲ್ಲಿ ನೋಂದಾವಣೆ ಮಾಡಿದ್ದೀರಾ ? ಯಾವಾಗ? ಯಾವ ವಿಭಾಗದಲ್ಲಿ ನೋಂದಾವಣೆ ಮಾಡಲಾಗಿದೆ ?
ವಾಣಿ ರಮೇಶ್ ಬಾಬು: ಜನವರಿ 2005ರಲ್ಲಿ ಹಾಂಗ್ ಕಾಂಗ್ ಕನ್ನಡ ಸಂಘವನ್ನು ಅಧಿಕೃತವಾಗಿ ನೋಂದಾವಣಿ ಮಾಡಲಾಗಿದೆ. ಕನ್ನಡ ಸಂಘವನ್ನು ‘ನಾನ್ ಪ್ರಾಫಿಟ್ ಸೋಶಿಯಲ್ ಅಂಡ್ ಕಲ್ಚರಲ್ ಸೊಸೈಟಿ’ ಎಂದು ಹಾಂಗ್ ಕಾಂಗ್‌ನಲ್ಲಿ ನೋಂದಾವಣಿ ಮಾಡಲಾಗಿದೆ.



ಪ್ರಶ್ನೆ: ನಿಮ್ಮ ಸಂಘಟನೆ ಮೂಲಕ ಏನೇನು ಪ್ರಮುಖ ಕಾರ್ಯಕ್ರಮಗಳು ಈವರೆಗೆ ನಡೆದಿವೆ ?
ವಾಣಿ ರಮೇಶ್ ಬಾಬು: 2006ರ ಏಪ್ರಿಲ್ ನಲ್ಲಿ ಸಂಘದ ವತಿಯಿ೦ದ ಮೊದಲ ಕನ್ನಡ ಚಲನಚಿತ್ರವಾಗಿ “ಅಮೃತ ಧಾರೆ” ಪ್ರದರ್ಶನ ಮಾಡಲಾಯಿತು. ಪ್ರದರ್ಶನದ ವೇಳೆ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆಯನ್ನು ಆಯೋಜಿಸಲಾಗಿತ್ತು. ನಾಡಿನ ಸಂಗೀತಕಾರರು, ನಾಟಕಕಾರರು, ನಿರ್ದೇಶಕರು ಸೇರಿದಂತೆ ಹಲವಾರು ಕಲಾವಿದರನ್ನು ನಾವು ಹಾಂಗ್ ಕಾಂಗ್‌ಗೆ ಆಹ್ವಾನಿಸಿ ಸನ್ಮಾನಿಸಿದ್ದೇವೆ. ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್, ರತ್ನಮಾಲಾ ಪ್ರಕಾಶ್, ಬಿ.ಆರ್.ಛಾಯಾ, ಮೋಹನ್ ಕೃಷ್ಣ, ಅನುರಾಧಾ ಭಟ್, ಸಂಗೀತ ಗಟ್ಟಿ, ಸುಪ್ರೀತ್ ಫಲ್ಗುಣ ಮತ್ತು ಹಾಸ್ಯ ಕಲಾವಿದ ಕೃಷ್ಣೇ ಗೌಡ, ದಯಾನಂದ್, ಭಾನುಮತಿ, ಅಸಾದುಲ್ಲಾ ಬೇಗ್, ಸರ್ದೇಶಪಾಂಡೆ, ನಟ ವಿನಯ್ ರಾಜ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿದ್ದೇವೆ, ಸನ್ಮಾನಿಸಿದ್ದೇವೆ. ನವೆಂಬರ್ 2006ರಲ್ಲಿ ಅರಳು ಮಲ್ಲಿಗೆ ಪಾರ್ಥಸಾರಥಿಯವರಿ೦ದ ದಾಸ ಸಾಹಿತ್ಯ ಉಪನ್ಯಾಸ ಸಂಘಟಿಸುವ ಮೂಲಕ ದಾಸ ಸಾಹಿತ್ಯಕ್ಕೆ ಸಂಘದ ಮೊದಲ ಗೌರವ ಸಲ್ಲಿಸಲಾಗಿತ್ತು. ಫೆಬ್ರವರಿ 2007ರಲ್ಲಿ ಖ್ಯಾತ ರಂಗಕರ್ಮಿ ಸುಬ್ರಾಯ ಭಟ್ ಅವರಿ೦ದ ಸಂಘವು ಮೊದಲ ನಾಟಕ ಕಾರ್ಯಾಗಾರವನ್ನು ಆಯೋಜಿಸಿತು. ನವಂಬರ್ ನಲ್ಲಿ ಬಿ.ಎಂ.ಗಿರಿರಾಜ ಅವರ ರಂಗರೂಪ-ನಿರ್ದೇಶನದಲ್ಲಿ ನಾಡಿನ ಕಲಾವಿದರಿಂದ ‘ನನ್ನ ತೇಜಸ್ವಿ’ ಎನ್ನುವ ನಾಟಕವನ್ನು ಆಯೋಜಿಸಲಾಗಿತ್ತು.
ದೀಪಾವಳಿ, ಯುಗಾದಿ, ಗಣೇಶ ಚತುರ್ಥಿ, ಹೋಳಿ ಸೇರಿದಂತೆ ಹತ್ತಲವು ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ನಮ್ಮ ಸಂಘದ ವಾಡಿಕೆಯಂತೆ ದಾಸ ಕೀರ್ತನೆಯಿಂದ ನಮ್ಮ ಮೊದಲ ಕಾರ್ಯಕ್ರಮ ಆರಂಭವಾಗುತ್ತದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ದಾಸ ಕೀರ್ತನೆ ಇರುತ್ತದೆ. ಅದರ ನಂತರ ಮಾರ್ಚ್-ಏಪ್ರಿಲ್ ನಲ್ಲಿ ಯುಗಾದಿ ಕಾರ್ಯಕ್ರಮ ನಡೆಯುತ್ತದೆ. ಆಮೇಲೆ ವಿಹಾರ ಕೂಟ ಅಥವಾ ಪ್ರವಾಸ ಕಾರ್ಯಕ್ರಮವನ್ನು ಮಾಡುತ್ತೇವೆ. ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತೆ. ಅನಂತರ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತೇವೆ. ಇದರ ಮಧ್ಯೆ ಯಾವುದಾದರೂ ಕನ್ನಡ ಸಿನೆಮಾವನ್ನು ಪ್ರದರ್ಶನ ಮಾಡುತ್ತೇವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಇಲ್ಲಿರುವ ಕನ್ನಡಿಗರೆಲ್ಲರೂ ಸಂತಸ, ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ.



ಪ್ರಶ್ನೆ: ನಿಮ್ಮ ಸಂಘದ ಅತ್ಯಂತ ಪ್ರಮುಖ ಸಾಧನೆಗಳು ಏನೇನು ಅಂತ ಸ್ವಲ್ಪ ಹೇಳ್ತೀರಾ ?
ವಾಣಿ ರಮೇಶ್ ಬಾಬು: ಕಳೆದ 20 ವರ್ಷಗಳಿಂದ ನಾವು ನಾನಾ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಇದರೊಂದಿಗೆ ನಾವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಸಂಘವು 2009ರಲ್ಲಿ ಸಮುದಾಯ ಸೇವೆ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ನಮ್ಮ ನಾಡಿನಲ್ಲಿ SSLC ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಇರುವ ಮಕ್ಕಳಿಗೆ ಆರ್ಥಿಕ ನೆರವು ನೀಡಲು ವಿದ್ಯಾನಿಧಿ ಮೂಲಕ ಸ್ಕಾಲರ್ ಶಿಪ್, ಪ್ರಾಯೋಜಕತ್ವವನ್ನು ನೀಡಲಾಗುತ್ತಿದೆ. ‘ಸ್ನೇಹದೀಪ’ದ ಹೆಸರಿನಲ್ಲಿ ಕಂಪ್ಯೂಟರ್ ತರಬೇತಿ ಕೊಡಲಾಗುತ್ತಿದೆ. ಇಲ್ಲಿರುವ ಬ್ಲೈಂಡ್ ಅಸೋಸಿಯೇಷನ್ ಗೆ ಬೆಂಬಲ ನೀಡುತ್ತಿದ್ದೇವೆ. ಜೊತೆಗೆ ನಮ್ಮಲ್ಲಿರುವ ಜನರ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸಹಾಯ-ಸಹಕಾರವನ್ನು ನೀಡುತ್ತಿದ್ದೇವೆ.



ಪ್ರಶ್ನೆ: ಹಾಂಗ್ ಕಾಂಗ್ ಕನ್ನಡ ಸಂಘದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ….? ಅವರ ಬಗ್ಗೆ….
ವಾಣಿ ರಮೇಶ್ ಬಾಬು: ಹಾಂಗ್ ಕಾಂಗ್ ಕನ್ನಡ ಸಂಘದ ಆರಂಭದಲ್ಲಿ ಸದಸ್ಯರ ಸಂಖ್ಯೆ ಬಹಳಷ್ಟು ಕಡಿಮೆ ಇತ್ತು. ಪ್ರಸಕ್ತ ಸದಸ್ಯರ ಸಂಖ್ಯೆ ಹೆಚ್ಚಿದೆ. ಸುಮಾರು 300ರಷ್ಟು ಮಂದಿ ಸದಸ್ಯರಿದ್ದಾರೆ. ಅವರೆಲ್ಲರೂ ಕನ್ನಡ ಭಾಷೆ, ನಾಡಿನ ಮೇಲೆ ಅಭಿಮಾನ, ಪ್ರೀತಿ ಇಟ್ಟುಕೊಂಡವರಾಗಿದ್ದು, ಇಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ.
ಪ್ರಶ್ನೆ: ಮುಂದೆ ನೀವು ಏನಾದರೂ ಯೋಜನೆಗಳನ್ನೂ ಇಟ್ಟು ಕೊಂಡಿದ್ದೀರಾ…?
ವಾಣಿ ರಮೇಶ್ ಬಾಬು: ನಮ್ಮ ನಾಡಿನಲ್ಲಿರುವ ಕನ್ನಡಿಗರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕೆಂಬ ಉದ್ದೇಶವಿದೆ. ನಮ್ಮ ಸಂಘದ ಸಮುದಾಯ ಸೇವೆಯಿಂದ ನಾಡಿನ ಜನರಿಗಾಗಿ ಮಾಡುತ್ತಿರುವ ಸೇವೆಯಂತೆಯೇ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಬೇರೆಬೇರೆ ರೀತಿಯಲ್ಲಿ ಸಹಾಯ ಮಾಡುವ ಯೋಚನೆ ಇದೆ.

ಪ್ರಶ್ನೆ: ಹಾಂಗ್ ಕಾಂಗ್ ನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಏನೇನು ?
ವಾಣಿ ರಮೇಶ್ ಬಾಬು: ನಾವು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳಲ್ಲಿ ಮುಖ್ಯವಾಗಿ ನಾವು ಇಲ್ಲಿ ಏನೇ ಕಾರ್ಯಕ್ರಮ ಮಾಡಬೇಕಾದರೆ ಹಾಲ್(ಸಂಭಾಂಗಣ) ಸಿಗುವುದು ಬಹಳ ಕಷ್ಟ. 2-3 ತಿಂಗಳ ಮುಂಚಿತವಾಗಿ ಹಾಲ್ ಬುಕ್ ಮಾಡಬೇಕಾಗುತ್ತೆ. ಅದೂ ನಮಗೆ ಬೇಕಾದ ಸಮಯದಲ್ಲಿ ಹಾಲ್ ಸಿಗುವುದಿಲ್ಲ. ನಾವು ಕಾರ್ಯಕ್ರಮಕ್ಕೆ ಬೇಕಾಗುವ ಪ್ರಯೋಜಕರನ್ನು ಹುಡುಕುವ ಜೊತೆಗೆ ಹಾಲ್ ಬುಕ್ ಮಾಡಲು ಹರಸಾಹಸ ಪಡುವಂತಾಗಿದೆ ನಮ್ಮ ಪಾಡು. ಯಾವುದೇ ರೀತಿಯ ಕಾರ್ಯಕ್ರಮ ಮಾಡಬೇಕಾದರೂ ಇದೊಂದು ನಮಗೆ ದೊಡ್ಡ ಸವಾಲಾಗಿ ಎದುರು ನಿಲ್ಲುತ್ತೆ.


ಪ್ರಶ್ನೆ: ಹಾಂಗ್ ಕಾಂಗ್ ಕನ್ನಡ ಸಂಘದಿಂದ ಕರ್ನಾಟಕ ಸರಕಾರಕ್ಕೆ ಏನಾದರೂ ಬೇಡಿಕೆ ಇದೆಯಾ…?
ವಾಣಿ ರಮೇಶ್ ಬಾಬು: ಹಾಂಗ್ ಕಾಂಗ್‌ನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಶಾಲೆ ಆರಂಭಿಸಲು ಸ್ಥಳಾವಕಾಶವನ್ನು ಒದಗಿಸಲು ಕರ್ನಾಟಕ ಸರಕಾರ ಧನ ಸಹಾಯ ನೀಡಬೇಕು. ಇದು ನಮ್ಮ ಪ್ರಮುಖ ಬೇಡಿಕೆ. ಇಲ್ಲಿರುವ ನಮ್ಮ ಮಕ್ಕಳು ಕನ್ನಡ ಭಾಷೆಯಿಂದ ವಂಚಿತರಾಗಬಾರದು ಎನ್ನುವುದು ಇಲ್ಲಿರುವ ನಮ್ಮೆಲ್ಲ ಕನ್ನಡಿಗರ ಬಹು ಮುಖ್ಯ ಆಶಯ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಮ್ಮ ಬೇಡಿಕೆಯತ್ತ ಗಮನಹರಿಸಿ ಈಡೇರಿಸಬೇಕೆಂಬುದೇ ನಮ್ಮ ಆಗ್ರಹವಾಗಿದೆ. ಜೊತೆಗೆ ರಾಜ್ಯ ಸರಕಾರದವರು ನಮ್ಮ ಸಂಘಕ್ಕೆ ಯಾವುದೇ ರೀತಿಯಲ್ಲಿಯೂ ಸಹಾಯ-ಸಹಕಾರ ನೀಡಿದರೆ ನಾವು ಖುಷಿ ಪಡುತ್ತೇವೆ.


ಪ್ರಶ್ನೆ: ಹಾಂಗ್ ಕಾಂಗ್ ಕನ್ನಡ ಸಂಘದಿಂದ ನಿಮ್ಮಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯವೇನಾದರೂ ನಡೆಯುತ್ತಿದೆಯಾ…?
ವಾಣಿ ರಮೇಶ್ ಬಾಬು: ನಮ್ಮ ಮಕ್ಕಳಿಗೆ 2008-09ರಲ್ಲಿ ಕನ್ನಡ ಕಲಿಸಲಾಗುತ್ತಿತ್ತು. ಅದು ಬಳಿಕ ಸ್ಥಗಿತಗೊಂಡಿತ್ತು. 2014ರಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ‘ಕನ್ನಡ ಕಲಿ’ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದು, ಅದು ಮುಂದುವರಿಯುತ್ತಿದೆ. ಇದರ ಉಪಯೋಗವನ್ನು ಬಹಳಷ್ಟು ಮಂದಿ ಕನ್ನಡಿಗ ಮಕ್ಕಳು ಪಡೆದಿದ್ದಾರೆ. ನಮ್ಮ ಮಕ್ಕಳು ಕನ್ನಡ ಭಾಷೆಯಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಈ ‘ಕನ್ನಡ ಕಲಿ’ ಮೂಲಕ ಕನ್ನಡ ಸಾಕ್ಷರತೆಯನ್ನು ನೀಡುತ್ತಿದ್ದೇವೆ.



