ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲದ ವೈದ್ಯ ಡಾ. ಸೈಯದ್ ಅನ್ವರ್ ಖುರ್ಷಿದ್ ಅವರಿಗೆ ಭಾರತ ಸರ್ಕಾರವು ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ಡಾ.ಸೈಯದ್ ಅನ್ವರ್ ಖುರ್ಷಿದ್ ಅವರು ಕಲಬುರ್ಗಿಯವರಾಗಿದ್ದು, ಸೌದಿ ಅರೇಬಿಯಾದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. 45 ವರ್ಷಗಳ ವೈದ್ಯಕೀಯ ಸೇವಾ ಅನುಭವ ಹೊಂದಿರುವ ಡಾ.ಸೈಯದ್ ಅನ್ವರ್ ಖುರ್ಷಿದ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಓಡಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.

ಈ ಪ್ರಶಸ್ತಿಯು ಭಾರತ ಸರ್ಕಾರದಿಂದ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಮನ್ನಣೆಯಾಗಿದೆ. ಈ ಪ್ರಶಸ್ತಿಯು ಆರೋಗ್ಯ ರಕ್ಷಣೆ, ಸಮುದಾಯ ಕಲ್ಯಾಣ ಹಾಗು ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಖುರ್ಷಿದ್ ಅವರ ಗಮನಾರ್ಹ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.
45 ವರ್ಷಗಳ ಅನುಭವ ಹೊಂದಿರುವ ಡಾ.ಸೈಯದ್ ಅನ್ವರ್ ಖುರ್ಷಿದ್ ಅವರು, ತೈಫ್‌ನ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ 3 ದಶಕಗಳು ಮತ್ತು ರಾಯಲ್ ಪ್ರೋಟೋಕಾಲ್ ವೈದ್ಯರಾಗಿ ನ್ಯಾಷನಲ್ ಗಾರ್ಡ್ ಆಸ್ಪತ್ರೆಯಲ್ಲಿ 1 ದಶಕ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
COVID-19 ಸಾಂಕ್ರಾಮಿಕ ಸಮಯದಲ್ಲಿ ಅವರು ಭಾರತೀಯ ವಲಸಿಗರಿಗೆ ಅಗತ್ಯ ಆರೋಗ್ಯ ರಕ್ಷಣೆ, ಲಸಿಕೆ ಕಳುಹಿಸಿಕೊಡುವುದು, ಸಮಾಲೋಚನೆ ಹಾಗು ಹಜ್ಜ್ ಯಾತ್ರಿಕರ ಆರೈಕೆ ಜೊತೆ ವೈದ್ಯಕೀಯ ಸೇವೆಯ ಮೇಲ್ವಿಚಾರಣೆ ವಹಿಸುವ ಮೂಲಕ ನಿರ್ಣಾಯಕ ಪಾತ್ರವಹಿಸಿದ್ದರು.
ಈ ಪ್ರಶಸ್ತಿಯು ವೈದ್ಯಕೀಯ ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ.ಖುರ್ಷೀದ್ ಅವರ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿದೆ ಹಾಗು ಸೌದಿ ಅರೇಬಿಯಾದಲ್ಲಿನ ಭಾರತೀಯ ಸಮುದಾಯದ ಕಲ್ಯಾಣಕ್ಕೆ ಅವರ ದೀರ್ಘಕಾಲದ ಕೊಡುಗೆಯನ್ನು ಗುರುತಿಸಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ.ಸುಹೇಲ್ ಅಜಾಝ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಅರೇಬಿಕ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಜೊತೆಗೆ ಸೌದಿಯವರೊಂದಿಗೆ ಆತ್ಮೀಯ ಸಂಪರ್ಕ ಹೊಂದಿರುವ ಡಾ. ಖುರ್ಷಿದ್ ಅವರು, ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಪ್ರಮುಖ ಸೇತುವೆಯಾಗಿದ್ದಾರೆ. ಅಲ್ಲದೆ ಆರೋಗ್ಯ, ಶಿಕ್ಷಣ ಹಾಗು ಉದ್ಯಮಶೀಲತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವಲ್ಲಿ ಅವರ ವೈದ್ಯಕೀಯ ಸೇವೆಯ ಮೂಲಕ ಶ್ರಮಿಸಿದ್ದಾರೆ.