ಖತರ್ವಿಮಾನದರ ಕಡಿಮೆ ಮಾಡಿ; ವಿದ್ಯಾರ್ಥಿಗಳ ಎನ್‌ಆರ್‌ಐ ಕೋಟಾ ಶುಲ್ಕ...

ವಿಮಾನದರ ಕಡಿಮೆ ಮಾಡಿ; ವಿದ್ಯಾರ್ಥಿಗಳ ಎನ್‌ಆರ್‌ಐ ಕೋಟಾ ಶುಲ್ಕ ಬದಲಿಸಿ:ಖತರ್‌ ಕರ್ನಾಟಕ ಸಂಘ ಅಧ್ಯಕ್ಷ ಡಾ.ರವಿ ಶೆಟ್ಟಿ ಮೂಡಂಬೈಲು

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಖತರ್ ಕರ್ನಾಟಕ ಸಂಘ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ಖತರ್ ಎಂಬ ಶ್ರೀಮಂತ ದೇಶದಲ್ಲಿ ಕನ್ನಡ ಭಾಷೆ, ನಾಡು-ನುಡಿಗಾಗಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಕರ್ನಾಟಕ ಸಂಘಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಘ ವರ್ಷವಿಡೀ ಹತ್ತು ಹಲವು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಬರನಾಡು ಖತರ್‌ನಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿರಿಸಿದೆ.

ಈ ಪುಟ್ಟ ದೇಶದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಕರ್ನಾಟಕ ಸಂಘಕ್ಕೆ ಸಾರಥ್ಯ(ಅಧ್ಯಕ್ಷ) ವಹಿಸಿರುವವರು ಸಮಾಜಸೇವಕ, ಉದ್ಯಮಿ, ರಾಜ್ಯೋತ್ಸವ ಪುರಸ್ಕೃತ ಡಾ.ರವಿ ಶೆಟ್ಟಿ ಮೂಡಂಬೈಲು. ಅವರ ಸಾರಥ್ಯದಲ್ಲಿ ಬೆಳ್ಳಿ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಡಾ.ರವಿ ಶೆಟ್ಟಿ ಮೂಡಂಬೈಲು ಅವರು ತುಳುಕೂಟ ಖತರ್‌ನ ಪೋಷಕರಾಗಿ, ಮೂರು ಬಾರಿ ಅಧ್ಯಕ್ಷರಾಗಿ, ಈ ಹಿಂದೆ ಕರ್ನಾಟಕ ಸಂಘ ಖತರ್‌ನ ಉಪಾಧ್ಯಕ್ಷರಾಗಿ, ಬಂಟ್ಸ್ ಖತರ್‌ನ ಸಂಸ್ಥಾಪಕ ಅಧ್ಯಕ್ಷರಾಗಿ, ಭಾರತೀಯ ರಾಯಭಾರಿ ಕಚೇರಿಯ ಅಧೀನದಲ್ಲಿರುವ ಐಸಿಬಿಎಫ್, ಐಸಿಪಿಸಿಯ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ವಧರ್ಮೀಯರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಡಾ.ರವಿ ಶೆಟ್ಟಿ ಅವರು, ಬಂಟ್ವಾಳ ತಾಲೂಕಿನ ಮೂಡಂಬೈಲು ಗ್ರಾಮದವರು. ತನ್ನ ಪತ್ನಿ ಜ್ಯೋತಿ ಆರ್ ಶೆಟ್ಟಿಯವರೊಂದಿಗೆ 1997ರಿಂದ ಖತರ್‌ನಲ್ಲಿ ನೆಲೆಸಿದ್ದು, ಇವರಿಗೆ ಓರ್ವ ಪುತ್ರ ಹಾಗು ಓರ್ವಳು ಪುತ್ರಿ ಇದ್ದಾಳೆ.

ಹಲವಾರು ಪ್ರಶಸ್ತಿಗಳನ್ನು, ಪುರಸ್ಕಾರಗಳನ್ನು ಪಡೆದಿರುವ ಡಾ.ರವಿ ಶೆಟ್ಟಿ ಅವರು, ಖತರ್ ಅಲ್ಲದೆ ತನ್ನ ತಾಯಿ ನಾಡಿನಲ್ಲಿ, ದೂರದ ಮುಂಬೈಯಲ್ಲಿ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ. ಎಂಜಿನಿಯರಿಂಗ್‌ ಹಾಗೂ ಎಂಬಿಎ ಪದವೀಧರರಾಗಿರುವ ಡಾ.ರವಿ ಶೆಟ್ಟಿ, ಭಾರತದಲ್ಲಿ ಹಲವಾರು ಪ್ರಮುಖ ಕಂಪೆನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿ, ಕೆಲವು ವರ್ಷಗಳಿಂದ ಖತರ್‌ನಲ್ಲಿ ಎಟಿಎಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರ ಜೀವನದ ಬಗ್ಗೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ‘ರವಿತೇಜ’ ಎಂಬ ಪುಸ್ತಕವನ್ನು 2022ರಲ್ಲಿ ಪ್ರಕಟಿಸಿದೆ. ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಪ್ರಶ್ನೆ: ಖತರ್ ಕನ್ನಡ ಸಂಘಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ. ಈ ಬಗ್ಗೆ ಸ್ವಲ್ಪ ಹೇಳಿ …

ಡಾ.ರವಿ ಶೆಟ್ಟಿ: ಖತರ್ ಕನ್ನಡ ಸಂಘ ರಜತ ಮಹೋತ್ಸವ ಆಚರಣೆಯ ಸಂಭ್ರಮಾಚರಣೆಯಲ್ಲಿದೆ. ಕಳೆದ ನವಂಬರ್ 12ರಂದು 25ನೇ ವರ್ಷಕ್ಕೆ ಪದಾರ್ಪಣೆ ಮಾಡಿ, ಆ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ಆಚರಿಸಿದೆವು. ನಂತರ ನವಂಬರ್ 15(2024)ರಂದು ರಜತ ವರ್ಷದ ಮೊದಲ ಕಾರ್ಯಕ್ರಮವಾಗಿ ‘ಕರ್ನಾಟಕ ರಾಜ್ಯೋತ್ಸವ ರಜತ ಸಂಭ್ರಮ’ ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮವು ಭರ್ಜರಿ ಯಶಸ್ಸನ್ನು ಕಂಡಿತು. ಹೆಸರಾಂತ ವಿದ್ವಾಂಸರಾದ ಡಾ.ಗುರುರಾಜ ಕರ್ಜಗಿ ಅವರು ‘ಖತರ್ ಕನ್ನಡ ಸಮ್ಮಾನ್’ ಪ್ರಶಸ್ತಿಗೆ ಭಾಜನರಾದರೆ, ಕನ್ನಡ ಸಿನೆಮಾ ನಟರಾದ ರಮೇಶ್ ಅರವಿಂದ್, ಕಾರ್ಗಿಲ್ ಯುದ್ಧ ವೀರ ಕ್ಯಾಪ್ಟನ್ ನವೀನ್ ನಾಗಪ್ಪ ವಿಶೇಷ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಮೆರುಗನ್ನು ನೀಡಿದ್ದರು. ಈ ವೇಳೆ ಎಲ್ಲ ಮಾಜಿ ಅಧ್ಯಕ್ಷರನ್ನು, ಸದಸ್ಯರನ್ನು ಹಾಗು 25 ವರ್ಷಗಳಲ್ಲಿ ಬೇರೆ ಬೇರೆ ರೀತಿಯ ಕೊಡುಗೆಗಳನ್ನು ನೀಡಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಬಳಿಕ ಬೆಳ್ಳಿ ಹಬ್ಬ, ವಸಂತೋತ್ಸವ, ರಜತ ಕ್ರೀಡೋತ್ಸವ, ರಕ್ತದಾನ, ಪರಿಸರ ದಿನಾಚರಣೆ, ಶಿಕ್ಷಕರ ದಿನಾಚರಣೆ, ಅಭಿಯಂತರ ದಿನಾಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ರಜತ ವರ್ಷದ ಶೀರ್ಷಿಕೆಯಲ್ಲಿ ಆಯೋಜಿಸಲಾಗುತ್ತಿದ್ದು, ಈ ವರ್ಷದ ನವಂಬರ್ 7ರಂದು ಗ್ರ್ಯಾಂಡ್ ಫಿನಾಲೆ ಅಂದರೆ, ‘ಕರ್ನಾಟಕ ರಾಜ್ಯೋತ್ಸವ ರಜತ ಸಂಭ್ರಮ’ದ ಸಮಾರೋಪ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಲಿದೆ.

ಪ್ರಶ್ನೆ: ಖತರ್ ಕನ್ನಡ ಸಂಘ ಆರಂಭವಾಗಿದ್ದು ಯಾವಾಗ ? ಯಾರು ಇದರ ಸ್ಥಾಪನೆಗೆ ಕಾರಣ ? ಈ ಬಗ್ಗೆ ವಿವರಿಸಬಹುದಾ ಸರ್….

ಡಾ.ರವಿ ಶೆಟ್ಟಿ: ಖತರ್ ಕನ್ನಡ ಸಂಘವು 1999ರ ನವಂಬರ್ 12ರಂದು ಸ್ಥಾಪನೆಯಾಗಿದೆ. ಸತೀಶ್ ದೇಶಪಾಂಡೆ ಅವರು ಸ್ಥಾಪಕ ಅಧ್ಯಕ್ಷರಾಗಿ ಹಾಗು ಮೊದಲನೇ ಸಮಿತಿಯಲ್ಲಿ ಡಾ.ಮೂರ್ತಿ ಅವರು ಉಪಾಧ್ಯಕ್ಷರಾಗಿ, ಉದಯ ಕುಮಾರ್ ಅವರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಸೂರ್ಯ ನಾರಾಯಣ ಅವರು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಡಾ.ಮೂರ್ತಿ ಹಾಗು ದೇವಾನಂದ ಉಪಾಧ್ಯಾಯ ಅವರು ಕನ್ನಡ ಸಂಘ ಸ್ಥಾಪನೆಗೆ ಬಹಳಷ್ಟು ಶ್ರಮಿಸಿದ್ದರು.

ಪ್ರಶ್ನೆ: ಖತರ್‌ನಲ್ಲಿ ಜನರಲ್ಲಿ ಕನ್ನಡಾಭಿಮಾನ ಹೇಗಿದೆ ? ಜನ ಕನ್ನಡ ಕಾರ್ಯಕ್ರಮಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ?

ಡಾ.ರವಿ ಶೆಟ್ಟಿ: ಖತರ್‌ನಲ್ಲಿ ಕನ್ನಡಿಗರು ಬಹಳಷ್ಟು ಸಂಖ್ಯೆಯಲ್ಲಿದ್ದು, ಒಟ್ಟು 8 ಕನ್ನಡಪರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಇವೆಲ್ಲವೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧೀನದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸೇವೆಗಳಲ್ಲಿ ತೊಡಗಿಸಿಕೊಂಡಿವೆ. ಕನ್ನಡ ಸಂಘವು ರಾಜ್ಯೋತ್ಸವ, ವಸಂತೋತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಇಲ್ಲಿನ ಕನ್ನಡಿಗರ ಭಾಷೆಯ ಮೇಲಿನ ಪ್ರೀತಿ, ಅಭಿಮಾನ ನಮಗೆಲ್ಲರಿಗೂ ಹೆಮ್ಮೆ ತರುವಂತಿದೆ. ಸುಮಾರು 20 ವರ್ಷಗಳಿಂದ ವಾರಾಂತ್ಯದಲ್ಲಿ ಕನ್ನಡ ತರಗತಿಗಳನ್ನು ಪ್ರಾರಂಭಿಸಿ, ಸಂಘದ ಸದಸ್ಯರ ಮಕ್ಕಳಿಗೆ ಸ್ವಯಂ ಪ್ರೇರಿತ ಅಧ್ಯಾಪಕರು ಕನ್ನಡ ಕಲಿಸುತ್ತಿರುವುದು ಖತರ್ ಕನ್ನಡಿಗರ ಭಾಷೆಯ ಮೇಲಿನ ಪ್ರೀತಿಗೆ ನಿದರ್ಶನವಾಗಿದೆ.

ಪ್ರಶ್ನೆ: ‘ಖತರ್ ಕನ್ನಡ ಸಂಘ’ದ ಧ್ಯೇಯೋದ್ದೇಶಗಳು ಯಾವುವು ?

ಡಾ.ರವಿ ಶೆಟ್ಟಿ: ಖತರ್‌ನಲ್ಲಿ ಎಲ್ಲ ಕನ್ನಡಿಗರನ್ನು ಒಗ್ಗೂಡಿಸುವುದು, ಕರುನಾಡಿನ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರವನ್ನು, ರಾಜ್ಯೋತ್ಸವ, ವಸಂತೋತ್ಸವದಂತಹ ಬೇರೆಬೇರೆ ಕಾರ್ಯಕ್ರಮಗಳಲ್ಲಿ ಸದಸ್ಯರಿಗೆ, ವಿಶೇಷವಾಗಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದರ ಮೂಲಕ ಹೊಸ ಪೀಳಿಗೆಗೆ ನಮ್ಮ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರವನ್ನು ಹಸ್ತಾಂತರಿಸುವುದು, ಜೊತೆಗೆ ಊರಿನ ಹಬ್ಬ-ಹರಿದಿನವನ್ನು, ಕ್ರೀಡೆಯನ್ನು ಈ ನೆಲದಲ್ಲಿ ಆಯೋಜಿಸಿ, ಕನ್ನಡಿಗರಿಗೆ ಮನೋರಂಜನೆಯ ಜೊತೆಗೆ ಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯಹಸ್ತವನ್ನು ನೀಡುವುದು ಸಂಘದ ಮೂಲ ಧ್ಯೇಯ ಉದ್ದೇಶವಾಗಿದೆ.

ಪ್ರಶ್ನೆ: ಖತರ್‌ನಲ್ಲಿ ಕನ್ನಡಪರ ಸಂಘಟನೆಗಳ ಕಾರುಬಾರು ಹೇಗಿದೆ ?

ಡಾ.ರವಿ ಶೆಟ್ಟಿ: ಖತರ್‌ನಲ್ಲಿ ಕರ್ನಾಟಕ ಸಂಘ ಸೇರಿದಂತೆ ಕರ್ನಾಟಕದ ಒಟ್ಟು 8 ಕನ್ನಡಪರ ಸಂಘಟನೆಗಳು ಇವೆ. ಕರ್ನಾಟಕ ಸಂಘ, ತುಳು ಕೂಟ, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್(KMCA), ಮಂಗಳೂರು ಕ್ರಿಕೆಟ್ ಕ್ಲಬ್(MCC), ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್(SKMWA), ಮಂಗಳೂರು ಕಲ್ಚರಲ್ ಅಸೋಸಿಯೇಷನ್(MCA), ಬಿಲ್ಲವ ಖತರ್, ಬಂಟ್ಸ್ ಖತರ್ ಇವೇ ಮೊದಲಾದವು. ಬಹುತೇಕ ಬೇರೆಲ್ಲ ಸಂಘ-ಸಂಸ್ಥೆಗಳ ಸದಸ್ಯರು ಕರ್ನಾಟಕ ಸಂಘದ ಸದಸ್ಯರಾಗಿದ್ದಾರೆ. ಬೇರೆಬೇರೆ ಕಾರ್ಯಕ್ರಮಗಳಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ, ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿರುವುದು ನಮಗೆ ಹೆಮ್ಮೆಯ ವಿಷಯ.

ಪ್ರಶ್ನೆ: ‘ಖತರ್ ಕನ್ನಡ ಸಂಘ’ ನೋಂದಾಯಿತ ಸಂಸ್ಥೆಯೇ ?

ಡಾ.ರವಿ ಶೆಟ್ಟಿ: ಹೌದು, ಖತರ್‌ನಲ್ಲಿರುವ ಕರ್ನಾಟಕ ಸಂಘ ಸೇರಿದಂತೆ ಕರ್ನಾಟಕದ ಎಲ್ಲ ಸಂಘ-ಸಂಸ್ಥೆಗಳು ಭಾರತೀಯ ಸಾಂಸ್ಕೃತಿಕ ಕೇಂದ್ರದಡಿಯಲ್ಲಿ ನೋಂದಾಯಿಸಿ ಕೊಂಡು ಕಾರ್ಯಾಚರಿಸುತ್ತಿವೆ.

ಪ್ರಶ್ನೆ: ‘ಖತರ್ ಕನ್ನಡ ಸಂಘ’ದ ಸಂಘಟನಾ ರಚನೆ ಹೇಗಿದೆ ?

ಡಾ.ರವಿ ಶೆಟ್ಟಿ: ಎಲ್ಲ ಕನ್ನಡಿಗರನ್ನು ಸಂಘಟನೆ ಮಾಡುವುದು ಕರ್ನಾಟಕ ಸಂಘದ ಮೂಲ ಉದ್ದೇಶ. ನಮ್ಮ ಸಮಿತಿಯಲ್ಲಿ ಒಬ್ಬರು ಮೆಂಬರ್ ಶಿಪ್ ಕೋ-ಆರ್ಡಿನೇಟರ್ ಅಂತ ಇದ್ದಾರೆ. ಅವರು ಎಲ್ಲಿ ಕನ್ನಡಿಗರು ಸಿಗುತ್ತಾರೋ ಅವರನ್ನು ಸಂಘದ ಸದಸ್ಯರಾಗಿ ನೋಂದಾಯಿಸುವುದು, ಎಲ್ಲ ಕನ್ನಡಿಗರನ್ನು ಜೊತೆ ಸೇರಿಸುವುದು, ಜೊತೆಗೆ ಏನೇ ಕಾರ್ಯಕ್ರಮವಿದ್ದರೂ ಕೂಡ ಅಲ್ಲಿ ಒಂದು ಕೌಂಟರ್ ತೆರೆದು ಮೆಂಬರ್ ಶಿಪ್ ಫಾರ್ಮ್ ಇಟ್ಟು ಸದಸ್ಯರನ್ನಾಗಿ ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ.

ಪ್ರಶ್ನೆ: ಖತರ್‌ನಲ್ಲಿ ಒಟ್ಟು ಎಷ್ಟು ಕನ್ನಡಿಗರು ಇರಬಹುದು ?

ಡಾ.ರವಿ ಶೆಟ್ಟಿ: ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಸುಮಾರು 50 ಸಾವಿರದವರೆಗೆ ಇಲ್ಲಿ ಕನ್ನಡಿಗರಿದ್ದಾರೆ. ಕರ್ನಾಟಕದ ಕರಾವಳಿ ಭಾಗ ತುಳುನಾಡಿನ ಜನ ಹೆಚ್ಚು ಇದ್ದಾರೆ. ಜೊತೆಗೆ ಬೇರೆ ಬೇರೆ ಜಿಲ್ಲೆಗಳ ಜನ ಕೂಡ ಇಲ್ಲಿದ್ದಾರೆ. ಎಲ್ಲರೂ ನಮ್ಮ ಸಂಘದಲ್ಲಿ ಸದಸ್ಯರಾಗಿಲ್ಲ. ಆದರೂ ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಷೆ, ನಾಡಿನ ಮೇಲಿನ ಪ್ರೀತಿ, ಅಭಿಮಾನದಿಂದ ಕನ್ನಡಿಗರು ಪಾಲ್ಗೊಳ್ಳುತ್ತಾರೆ. ಇಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾವು ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಮೂಡಿಸುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಸಂಘದ ಮೂಲಕ ಏನೇನು ಪ್ರಮುಖ ಕಾರ್ಯಕ್ರಮಗಳು ಈವರೆಗೆ ನಡೆದಿವೆ ?

ಡಾ.ರವಿ ಶೆಟ್ಟಿ: ಕರ್ನಾಟಕ ಸಂಘ ಖತರ್‌ನ ವಿಶೇಷ, ಬಹಳ ದೊಡ್ಡ ಕಾರ್ಯಕ್ರಮವೆಂದರೆ ಕರ್ನಾಟಕ ರಾಜ್ಯೋತ್ಸವ, ವಸಂತೋತ್ಸವ. ಇದನ್ನು ನಾವು ಬಹಳ ಅದ್ದೂರಿಯಾಗಿ ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಜೊತೆಗೆ ರಕ್ತದಾನ ಶಿಬಿರ, ಇಂಜಿನಿಯರ್ಸ್ ಡೇ, ಟೀಚರ್ಸ್ ಡೇ, ವಿಶ್ವ ಪರಿಸರ ದಿನಾಚರಣೆ, ದೀಪಾವಳಿ ಹಬ್ಬ ಆಚರಣೆ, ಇಫ್ತಾರ್ ಕೂಟ, ಅಂತಾರಾಷ್ಟ್ರೀಯ ಯೋಗ ದಿನ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳನ್ನು ವರ್ಷವಿಡೀ ಆಚರಿಸುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಸಂಘದ ಮುಂದಿನ ಪ್ರಮುಖ ಯೋಜನೆಗಳು ಏನೇನು ?

ಡಾ.ರವಿ ಶೆಟ್ಟಿ: ಈ ವರ್ಷ ನಮ್ಮ ಸಂಘದ ರಜತ ವರ್ಷ. ಕಳೆದ ನವಂಬರ್’ನಿಂದ ನಮ್ಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ನವಂಬರ್ 15ರಂದು ಕರ್ನಾಟಕ ರಾಜ್ಯೋತ್ಸವ ರಜತ ಸಂಭ್ರಮ ಎಂಬ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ರಜತ ವರ್ಷದ ಶೀರ್ಷಿಕೆಯಲ್ಲಿಯೇ ಎಲ್ಲ ಕಾರ್ಯಕ್ರಮ ನಡೆಯುತ್ತಿದೆ. ರಜತ ಕ್ರೀಡೋತ್ಸವ ನಡೆಸಲಾಯಿತು. ಮುಂದೆ ಕರ್ನಾಟಕ ರಜತ ಕಪ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಈ ವರ್ಷದ ನವಂಬರ್ 7ರಂದು ಕರ್ನಾಟಕ ರಾಜ್ಯೋತ್ಸವ ಗ್ರ್ಯಾಂಡ್ ಫಿನಾಲೆ(ಸಮಾರೋಪ ಸಮಾರಂಭ) ನಡೆಯಲಿದೆ. ಆಗಸ್ಟ್’ನಲ್ಲಿ ಸಂಘದ ಹಿಂದಿನ ಅಧ್ಯಕ್ಷರು, ಸದಸ್ಯರನ್ನೆಲ್ಲ ಕರೆದು ಅವರು ಸಂಘಕ್ಕಾಗಿ ನೀಡಿದ ಸೇವೆ, ಕೊಡುಗೆಯನ್ನು ಪರಿಗಣಿಸಿ ಅವರನ್ನೆಲ್ಲ ಸನ್ಮಾನಿಸಲಿದ್ದೇವೆ. ಜೊತೆಗೆ ಖತರ್ ಬಿಟ್ಟು ಕರ್ನಾಟಕದಲ್ಲಿ ನೆಲೆಸಿರುವವರನ್ನು ಗುರುತಿಸಿ ಅವರನ್ನು ಬೆಂಗಳೂರಿಗೆ ಕರೆಸಿ ಸನ್ಮಾನಿಸಿ, ಗೌರವಿಸಲಿದ್ದೇವೆ.

ಪ್ರಶ್ನೆ: ಖತರ್‌ನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಏನೇನು ?

ಡಾ.ರವಿ ಶೆಟ್ಟಿ: ಇಲ್ಲಿ ನಮಗೆ ಅಂತ ದೊಡ್ಡ ಸಮಸ್ಯೆ ಏನೂ ಇಲ್ಲ. ಆದರೆ ಇಲ್ಲಿ ನೆಲೆಸಿರುವವರು ರಜೆಯಲ್ಲಿ ತಾಯಿನಾಡಿಗೆ ಹೋಗುವಾಗ ವಿಮಾನ ಟಿಕೆಟ್ ವೆಚ್ಚ ಅತ್ಯಧಿಕ ದುಬಾರಿಯಾಗಿರುತ್ತದೆ. ಹೋಗುವ-ಬರುವ ಟಿಕೆಟ್ ದರ ಕಡಿಮೆ ಮಾಡುವ ಮೂಲಕ ಇಲ್ಲಿ ನೆಲೆಸಿರುವವರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದಂತಾಗುತ್ತದೆ. ಜೊತೆಗೆ ಇಲ್ಲಿನ ಶಾಲೆಗಳಲ್ಲಿ ಮಕ್ಕಳನ್ನು ದಾಖಲು(Admission ) ಮಾಡುವುದು ಕೂಡ ಒಂದು ದೊಡ್ಡ ಸಮಸ್ಯೆ ಆಗಿದೆ. ಇಲ್ಲಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನಿಗದಿ ಪಡಿಸಿರುವುದರಿಂದ ಶಾಲಾ ಅವಧಿಯ ಮಧ್ಯೆಯಲ್ಲಿ ಬರುವ ಕನ್ನಡಿಗರ ಮಕ್ಕಳನ್ನು ದಾಖಲಿಸಲು ಹರಸಾಹಸಪಡಬೇಕಾಗುತ್ತೆ. ಆದರೂ ಇಲ್ಲಿನ ಕನ್ನಡಿಗರು ಅದಕ್ಕೆಲ್ಲ ತಮ್ಮ ಸಹಕಾರ ನೀಡುತ್ತಾರೆ.

ಪ್ರಶ್ನೆ: ರಾಜ್ಯ ಸರಕಾರದ ಮುಂದೆ ನೀವೇನಾದರೂ ಬೇಡಿಕೆಗಳನ್ನು ಇಡಲು ಇಚ್ಛಿಸುತ್ತೀರಾ..?

ಡಾ.ರವಿ ಶೆಟ್ಟಿ: ನಮ್ಮ ಬೇಡಿಕೆಯಲ್ಲಿ ಪ್ರಮುಖವಾಗಿ ವಿಮಾನದರ ಕಡಿಮೆ ಮಾಡುವಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು. ಇಲ್ಲಿ ಎಲ್ಲರೂ ಒಂದೇ ರೀತಿಯ ಸಂಬಳ ಪಡೆಯುವುದಿಲ್ಲ. ಕೆಲವರು ಜಾಸ್ತಿ, ಕೆಲವರು ಕಡಿಮೆ ಸಂಬಳದಲ್ಲಿ ದುಡಿಯುತ್ತಾರೆ. ಇನ್ನು ಕೆಲವರು ಕಷ್ಟದಲ್ಲಿ ದಿನದೂಡುವವರು ಇದ್ದಾರೆ. ಕಡಿಮೆ ಸಂಬಳದವರು, ಕಷ್ಟದಲ್ಲಿರುವವರು ಊರಿಗೆ ಹೋಗುವಾಗ ವಿಮಾನದರ ದೊಡ್ಡ ತಲೆನೋವಿನ ಸಂಗತಿ ಆಗಿದೆ. ವಿಮಾನ ದರ ಕಡಿಮೆ ಮಾಡುವಂತೆ ಕರ್ನಾಟಕ ಸರಕಾರ ಮಾಡುವ ಮೂಲಕ ನಮ್ಮ ಕಷ್ಟಕ್ಕೆ ಧ್ವನಿ ಆಗಬೇಕು.

ಇನ್ನೊಂದು ಪ್ರಮುಖ ಬೇಡಿಕೆ ಎನ್‌ಆರ್‌ಐ ಕೋಟಾದ ಬಗ್ಗೆ…
ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎನ್‌ಆರ್‌ಐ(ಅನಿವಾಸಿ ಭಾರತೀಯ) ಕೋಟಾವನ್ನು ಸಡಿಲಿಕೆ ಮಾಡಬೇಕು. ಇಲ್ಲಿನ ಉದ್ಯಮಿಗಳ, ದೊಡ್ಡ ದೊಡ್ಡ ಸಂಬಳ ಪಡೆಯುವವರ ಮಕ್ಕಳಿಗೆ ಹಾಗು ಅತೀ ಕಡಿಮೆ ಸಂಬಳ ಪಡೆಯುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಕಾಲೇಜು ದಾಖಲಾತಿ ವೇಳೆ ನೀಡುವ ಶುಲ್ಕಕ್ಕೆ ಸಂಬಂಧಿಸಿ ಒಂದೇ ರೀತಿಯ ಎನ್‌ಆರ್‌ಐ ಕೋಟಾ ಮಾಡಿರುವುದರಿಂದ ಕಷ್ಟ ಹಾಗು ಸಮಸ್ಯೆ ಆಗುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ದಿಸೆಯಿಂದ ಎನ್‌ಆರ್‌ಐ ಕೋಟಾವನ್ನು ತಿದ್ದುಪಡಿ ಮಾಡಿ, ಕಡಿಮೆ ಸಂಬಳ ಪಡೆಯುವವರ ಮಕ್ಕಳಿಗೆ ಆದಾಯದ ಮಿತಿಯ ಮೇರೆಗೆ ಎನ್‌ಆರ್‌ಐ ಕೋಟಾ ಶುಲ್ಕವನ್ನು ಕಡಿಮೆ ಮಾಡಬೇಕು. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ನಮ್ಮ ಮಕ್ಕಳು ತವರಿನಲ್ಲಿ ಕಲಿಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ದಿಸೆಯಲ್ಲಿ ಕರ್ನಾಟಕ ಸರಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

Hot this week

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

ಅಮೇರಿಕ; ಅಖಿಲ ಅಮೇರಿಕ ತುಳು ಅಸೋಸಿಯೇಷನ್ ವತಿಯಿಂದ ಅದ್ದೂರಿಯಾಗಿ ನಡೆದ ‘ಸಿರಿಪರ್ಬ 2025’

ಉತ್ತರ ಕೆರೊಲಿನಾ: ಅಖಿಲ ಅಮೇರಿಕ ತುಳು ಅಸೋಸಿಯೇಷನ್ (All America tulu...

Related Articles

Popular Categories