ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ ಕನ್ನಡಿಗ ಮಾಡಿದ ಕಾರ್ಯ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಹುಬ್ಬಳ್ಳಿ ಮೂಲದ ಕನ್ನಡಿಗ ಸಂದೀಪ್ ಹೊಸಕೋಟಿ, ಕಳೆದ 15 ವರ್ಷಗಳಿಂದ ಲಂಡನ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ತವರು ಹುಬ್ಬಳ್ಳಿ ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಉಳಿಸಿಕೊಳ್ಳಲು ಅವರು ಲಂಡನಿನಲ್ಲಿರುವ ತಮ್ಮ ಟೆಸ್ಲಾ ಕಾರಿನ ನಂಬರ್ ಪ್ಲೇಟ್ ಅನ್ನು ಧಾರವಾಡದ ವಾಹನ ನೋಂದಣಿ ಕೋಡ್‌ಗೆ ತಕ್ಕಂತೆ ‘KA25 HBL’ ಎಂದು ಕಸ್ಟಮೈಸ್ ಮಾಡಿಸಿದ್ದಾರೆ. ಅವರು ಹಾಗು ಅವರ ಕಾರಿನ ಫೋಟೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸಂದೀಪ್ ಹೊಸಕೋಟಿ ತಮ್ಮ ಹೊಸ ಟೆಸ್ಲಾ ಕಾರಿಗೆ ಧಾರವಾಡ ಜಿಲ್ಲಾ ವಾಹನ ನೋಂದಣಿ ಸಂಖ್ಯೆಯಾದ KA-25 ಎಂದು ಬರೆಸಿ ಅದರ ಮುಂದೆ HBL ಎಂದು ಬರೆಸಿ ಕೊಂಡಿದ್ದಾರೆ. ಹೆಚ್ ಬಿ ಎಲ್ ಅಂದರೆ ಹುಬ್ಬಳ್ಳಿ ಎಂದು ಅರ್ಥ. ಯುನೈಟೆಡ್ ಕಿಂಗ್ ಡಮ್ ನ ಮಾದರಿಯಲ್ಲಿಯೇ ಈ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ದೂರದ ಲಂಡನ್‌ನಲ್ಲಿ ಕರ್ನಾಟಕದ ಧಾರವಾಡ ಜಿಲ್ಲಾ ವಾಹನ ನೋಂದಣಿ ಸಂಖ್ಯೆ ಹಾಗೂ ಹುಬ್ಬಳ್ಳಿ ಹೆಸರು ರಾರಾಜಿಸುವಂತೆ ಸಂದೀಪ್ ಹೊಸಕೋಟಿ ಮಾಡಿದ್ದಾರೆ.
“ಹುಬ್ಬಳ್ಳಿ ನನ್ನ ಜನ್ಮಭೂಮಿಯಾಗಿದ್ದರೂ, ಕರ್ಮಭೂಮಿ ಲಂಡನ್ ಆಗಿದೆ. ನನ್ನ ತವರು ನೆಲದ ಪ್ರೇಮವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲದ ಕಾರಣ ನನ್ನ ಕಾರಿನ ವಾಹನ ಸಂಖ್ಯೆ ಫಲಕದಲ್ಲಿ ಧಾರವಾಡ ವಾಹನ ನೋಂದಣಿ ಸಂಖ್ಯೆಯೊಂದಿಗೆ ಹುಬ್ಬಳ್ಳಿ ಎಂದು ಬರೆಸಿಕೊಂಡಿರುವುದು ಕೇವಲ ಸಂಖ್ಯೆ-ಅಕ್ಷರ ಮಾತ್ರವಲ್ಲ ಅದೊಂದು ನನಗೆ ಭಾವನಾತ್ಮಕ ಸಂಬಂಧದ ಸಂಕೇತವಾಗಿದೆ’’ ಎಂದು ಸಂದೀಪ್ ಹೊಸಕೋಟಿ ಹೇಳಿದ್ದಾರೆ.