ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ
ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ ಅರಬರ ನಾಡು ಒಮಾನ್’ನಲ್ಲಿ ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೇ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುತ್ತಿರುವ ‘ಮಸ್ಕತ್ ಕನ್ನಡ ಸಂಘ’ ಇಂದು ಬೆಳೆದು ಹೆಮ್ಮರವಾಗಿದೆ. ಇದೇ ನವೆಂಬರ್ 28ರಂದು ಮಸ್ಕತ್’ನಲ್ಲಿ 3ನೇ ವಿಶ್ವ ಕನ್ನಡ ಹಬ್ಬವನ್ನು(ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆ) ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗು ಮಸ್ಕತ್ ಕನ್ನಡ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಇದರ ಭರದ ಸಿದ್ಧತಾ ಕಾರ್ಯ ಕೂಡ ನಡೆಯುತ್ತಿದೆ.




ಕಳೆದ 28 ವರ್ಷಗಳ ಹಿಂದೆ ಕನ್ನಡ ಭಾಷೆ, ಕನ್ನಡ ನಾಡಿನ ಮೇಲಿನ ಅಭಿಮಾನದ ಹಿನ್ನೆಲೆಯಲ್ಲಿ ಆರಂಭವಾದ ‘ಮಸ್ಕತ್ ಕನ್ನಡ ಸಂಘ’ಕ್ಕೆ ಈಗ ಮಂಜುನಾಥ್ ಸಂಗಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಜುನಾಥ್ ಸಂಗಟಿ ಅವರು ಹುಬ್ಬಳ್ಳಿ ಗ್ರಾಮೀಣ ಭಾಗದ ಕುಸುಗಲ್ ಗ್ರಾಮದವರು. ಮೆಕಾನಿಕಲ್ ಇಂಜಿನೀಯರಿಂಗ್ ನಲ್ಲಿ ಪದವೀಧರ. ಅಹ್ಮದಾಬಾದ್, ಮುಂಬೈ, ದುಬೈ ನಂತರ ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ಗೆ 2012ರಲ್ಲಿ ಬಂದ ಮಂಜುನಾಥ್ ಸಂಗಟಿ, ಮಸ್ಕತ್ ನ ಪ್ರತಿಷ್ಠಿತ ಕಂಪೆನಿಗಳಾದ STS, Velosi, Intertek, PDO ಮತ್ತು OQ ಕಂಪೆನಿಯಲ್ಲಿ ಕಳೆದ 14 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
ಪ್ರಶ್ನೆ: ‘ಮಸ್ಕತ್ ಕನ್ನಡ ಸಂಘ’ದ ಹುಟ್ಟು, ಬೆಳವಣಿಗೆಯ ಬಗ್ಗೆ ವಿವರಿಸುತ್ತೀರಾ?
ಮಂಜುನಾಥ್ ಸಂಗಟಿ: ಮಸ್ಕತ್ ಕನ್ನಡ ಸಂಘ ಕಳೆದ 28 ಹಿಂದೆ ಆರಂಭವಾಗಿದ್ದು, ಇಲ್ಲಿ ಕೆಲಸ ಹುಡುಕಿಕೊಂಡು ಬಂದಂಥ ಕನ್ನಡಿಗರು ಒಟ್ಟು ಸೇರಿ ಭಾಷೆಯ ಮೇಲಿನ ಅಭಿಮಾನದಿಂದ ಸ್ಥಾಪನೆ ಮಾಡಿದ್ದಾರೆ. ಇಲ್ಲಿ ಬಂದಂಥ ಕನ್ನಡಿಗರು ತಮ್ಮ ಹೆಂಡತಿ, ಮಕ್ಕಳನ್ನು ಕೂಡ ಕರೆದುಕೊಂಡು ಬಂದಾಗ, ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ, ಆರಂಭದಲ್ಲಿ ಐದಾರು ಮಂದಿ ಸೇರಿ ಮನೆಯಲ್ಲಿಯೇ ‘ಮಸ್ಕತ್ ಕರ್ನಾಟಕ ಸಂಘ’ವನ್ನು ಹುಟ್ಟು ಹಾಕಿದ ಬಳಿಕ ಪ್ರತಿ ವರ್ಷ ಕನ್ನಡಿಗರನ್ನೆಲ್ಲ ಸೇರಿಸುತ್ತಾ, ಈಗ ಅದು ಬೆಳೆದು ಹೆಮ್ಮರವಾಗಿದೆ. ಈಗ ಸುಮಾರು 1400 ಮಂದಿ ಕನ್ನಡಿಗರು ಈ ಸಂಘದಲ್ಲಿದ್ದಾರೆ. ಸುಮಾರು 200 ಮಂದಿ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಶ್ನೆ: ಒಮಾನ್ ನಲ್ಲಿ ಜನರ ಕನ್ನಡ ಪ್ರೇಮ, ಕನ್ನಡಾಭಿಮಾನ ಹೇಗಿದೆ? ಯಾವ ರೀತಿ ಜನ ಕನ್ನಡ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಾರೆ?
ಮಂಜುನಾಥ್ ಸಂಗಟಿ: ಒಮಾನಿನಲ್ಲಿ ಇರುವ ಕನ್ನಡಿಗರಲ್ಲಿ ಭಾಷಾ ಅಭಿಮಾನ ಕನ್ನಡ ನಾಡಿನಲ್ಲಿರುವವರಿಗಿಂತಲೂ ಬಹಳಷ್ಟು ಹೆಚ್ಚಿದೆ. ಇಲ್ಲಿರುವವರು ಕನ್ನಡದ ಮೇಲಿನ ಪ್ರೀತಿಯಿಂದ ತಮ್ಮ ಮಕ್ಕಳಿಗೂ ಕನ್ನಡವನ್ನು ಕಲಿಸುತ್ತಿದ್ದಾರೆ. ಜೊತೆಗೆ ಒಮಾನಿನ ಯಾವುದೇ ಮೂಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳಿದ್ದರೂ ಅಲ್ಲಿ ಬಹಳಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಇಲ್ಲಿ ಕನ್ನಡಪರ ಸಂಘಟನೆಗಳು ಬಹಳಷ್ಟು ಇವೆ. ಪ್ರತಿ ತಿಂಗಳಲ್ಲಿ ಎರಡು ಮೂರು ಕನ್ನಡದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ.








ಪ್ರಶ್ನೆ: ‘ಮಸ್ಕತ್ ಕನ್ನಡ ಸಂಘ’ದ ಧ್ಯೇಯೋದ್ದೇಶಗಳು ಏನು..?
ಮಂಜುನಾಥ್ ಸಂಗಟಿ: ಮಕ್ಕಳಿಗೆ ಕನ್ನಡವನ್ನು ಕಲಿಸುವುದು, ಜೊತೆಗೆ ಕನ್ನಡವನ್ನು ಓದಲು, ಬರೆಯುವಂತೆ ಮಾಡುವುದು ಮಸ್ಕತ್ ಕನ್ನಡ ಸಂಘದ ಮುಖ್ಯ ಧ್ಯೇಯೋದ್ದೇಶವಾಗಿದೆ. ಸಂಘದಿಂದ ‘ಕನ್ನಡ ಕಲಿ’ ಎಂಬ ತರಗತಿಯನ್ನು ಮಕ್ಕಳಿಗೆ ನಡೆಸಲಾಗುತ್ತಿದೆ. ಅಲ್ಲದೆ ನಮ್ಮ ಮಕ್ಕಳಿಗೆ ಭಾಷೆಯ ಮೇಲಿನ ಅಭಿಮಾನ ಹೆಚ್ಚುಸುವ ದೃಷ್ಟಿಯಿಂದ ಪ್ರತಿ ವರ್ಷ ಐದಾರು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿಯೇ ಮಾಡುತ್ತಿದ್ದೇವೆ. ಛದ್ಮವೇಷ ಸ್ಪರ್ಧೆ, ಕನ್ನಡ ಇತಿಹಾಸದ ಬಗ್ಗೆ ಆಶು ಭಾಷಣ ಸ್ಪರ್ಧೆ ಮಾಡುವ ಮೂಲಕ ಮಕ್ಕಳು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದೇವೆ. ಅಲ್ಲದೆ ಕನ್ನಡದ ಹಬ್ಬ, ಆಚರಣೆಗಳನ್ನು ಕೂಡ ಮಾಡುತ್ತಿದ್ದೇವೆ. ಜೊತೆಗೆ ಇಲ್ಲಿಗೆ ಬರುವ ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಆದರೂ ಅವರ ಸಹಾಯಕ್ಕೆ ನಾವು ಸದಾ ಬದ್ಧರಾಗಿದ್ದೇವೆ.



ಪ್ರಶ್ನೆ: ಒಮಾನಿನಲ್ಲಿ ಕನ್ನಡಪರ ಸಂಘಟನೆಗಳ ಕಾರುಬಾರು ಹೇಗಿದೆ? ಎಷ್ಟು ಕನ್ನಡಪರ ಸಂಘಟನೆಗಳಿವೆ? ಅವರ ಕೊಡುಗೆಗಳೇನು?
ಮಂಜುನಾಥ್ ಸಂಗಟಿ: ಒಮಾನಿನಲ್ಲಿ ಕನ್ನಡಪರ ಸಂಘಟನೆಗಳು ಬಹಳಷ್ಟಿವೆ. ಅವರವರು ವಿವಿಧ ರೀತಿಯ ಕನ್ನಡಪರ, ಧಾರ್ಮಿಕ, ಇನ್ನಿತರ ಹಬ್ಬ ಹರಿದಿನಗಳನ್ನು ಆಚರಿಸುತ್ತ ಬರುತ್ತಿದ್ದಾರೆ. ಕೆಲವೊಂದು ಜಿಲ್ಲೆಯ ಜನ ಒಟ್ಟು ಸೇರಿ ವಿವಿಧ ರೀತಿಯ ಮನೋರಂಜನಾ, ಆಟೋಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಕನ್ನಡಿಗರೆಲ್ಲ ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರಶ್ನೆ: ‘ಮಸ್ಕತ್ ಕನ್ನಡ ಸಂಘ’ ನೋಂದಾಯಿತ ಸಂಸ್ಥೆಯೇ? ಯಾವಾಗ ನೋಂದಾಯಿಸಲಾಗಿದೆ?
ಮಂಜುನಾಥ್ ಸಂಗಟಿ: ‘ಮಸ್ಕತ್ ಕನ್ನಡ ಸಂಘ’ವು ಇಲ್ಲಿನ ಭಾರತೀಯ ಸಾಮಾಜಿಕ ವೇದಿಕೆ ಅಡಿಯಲ್ಲಿ ಕರ್ನಾಟಕ ವಿಭಾಗವೆಂದು ನೋಂದಾಯಿತವಾಗಿದೆ. 2002ರಲ್ಲಿ ಭಾರತೀಯ ಸಾಮಾಜಿಕ ವೇದಿಕೆ ಅಡಿಯಲ್ಲಿ ‘ಮಸ್ಕತ್ ಕನ್ನಡ ಸಂಘ’ ಎಂದು ನೋಂದಾವಣೆಯಾಗಿದೆ.





ಪ್ರಶ್ನೆ: ‘ಮಸ್ಕತ್ ಕನ್ನಡ ಸಂಘ’ದ ಸಂಘಟನಾ ರಚನೆ ಹೇಗಿದೆ? ಸ್ವಲ್ಪ ವಿವರಿಸಿ
ಮಂಜುನಾಥ್ ಸಂಗಟಿ: ‘ಮಸ್ಕತ್ ಕನ್ನಡ ಸಂಘ’ವು ಒಂದು ಉತ್ತಮ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತಿ ವರ್ಷ 50ರಿಂದ 70 ಮಂದಿ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ನೋಂದಾಯಿತ ಸದಸ್ಯರ ಮಕ್ಕಳಿಗೆ ಕನ್ನಡವನ್ನು ಕಲಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಎಲ್ಲ ಸದಸ್ಯರನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳುವ ಜೊತೆಗೆ ಸಂಘದಿಂದ ನಡೆಯುವ ಎಲ್ಲ ಕಾರ್ಯಕ್ರಮಗಳ ಆಹ್ವಾನವನ್ನು ನೀಡಲಾಗುತ್ತಿದೆ. ‘ಮಸ್ಕತ್ ಕನ್ನಡ ಸಂಘ’ವನ್ನು ಕಟ್ಟಿ ಬೆಳೆಸಲು ಈ ಹಿಂದೆ ಅಧ್ಯಕ್ಷರಾಗಿದ್ದ ದೀಲಿಪ್ ರಾವ್, ಯೋಗಾನಂದ್, ರಾಮಚಂದ್ರ ರಾವ್, ಅಹಿರಾಜ್, ಅನಿಲ್ ಬಾಸ್ಕಿ, ಜಾನಕೀನಾಥ್, ಕರುಣಾಕರ್ ರಾವ್, SDT ಪ್ರಸಾದ್ ಮುಂತಾದವರು ಶ್ರಮಿಸಿದ್ದಾರೆ.
ಪ್ರಶ್ನೆ: ಒಮಾನಿನಲ್ಲಿ ಒಟ್ಟು ಎಷ್ಟು ಕನ್ನಡಿಗರಿದ್ದಾರೆ? ಅವರೆಲ್ಲ ಕಾರ್ಯಕ್ರಮಗಳಿಗೆ ಸಾಥ್ ಕೊಡುತ್ತಾರಾ?
ಮಂಜುನಾಥ್ ಸಂಗಟಿ: ಒಮಾನಿನಲ್ಲಿ ಸುಮಾರು 25 ಸಾವಿರ ಜನ ಕರ್ನಾಟಕದವರಿದ್ದಾರೆ. ಒಮಾನಿನ ಬೇರೆ ಬೇರೆ ಸ್ಥಳಗಳಲ್ಲಿ ಕನ್ನಡಿಗರು ಬೀಡುಬಿಟ್ಟಿದ್ದಾರೆ. ಇಲ್ಲಿ ನಾಲ್ಕೈದು ಸಿಟಿಗಳು ದೊಡ್ಡದಾಗಿವೆ. ಮಸ್ಕತ್, ಸೋಹಾರ್, ನಿಜವಾ, ಸಲಲಾಹ್ ಮುಂತಾದವು ದೊಡ್ಡ ಸಿಟಿಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಶುಕ್ರವಾರ ಹಾಗು ಶನಿವಾರ ರಜೆ ಇರುವುದರಿಂದ ನಡೆಯುವ ಎಲ್ಲ ಕನ್ನಡಪರ ಕಾರ್ಯಕ್ರಮಗಳಲ್ಲಿ ಜನ ಪಾಲ್ಗೊಳ್ಳುತ್ತಿದ್ದಾರೆ.
ಪ್ರಶ್ನೆ: ನಿಮ್ಮ ಸಂಘದ ಮೂಲಕ ಏನೇನು ಪ್ರಮುಖ ಕಾರ್ಯಕ್ರಮಗಳು ಈವರೆಗೆ ನಡೆದಿವೆ?
ಮಂಜುನಾಥ್ ಸಂಗಟಿ: ಪ್ರತಿ ವರ್ಷ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಸಂಘದಿಂದ ಆಯೋಜಿಸಲಾಗುತ್ತಿದೆ. ಕನ್ನಡ ಸಿನಿಮಾ ನಟ, ನಟಿಯರನ್ನು, ಸಂಗೀತಕಾರನ್ನು, ಗಾಯಕರನ್ನು, ನೃತ್ಯಪಟುಗಳನ್ನು, ಕನ್ನಡ ಸಾಹಿತಿ, ವಾಗ್ಮಿಗಳನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕನ್ನಡಕ್ಕೆ ಸಂಬಂಧಿಸಿದ ಕನಿಷ್ಠ ಐದಾರು ಕಾರ್ಯಕ್ರಮಗಳನ್ನು ಪ್ರತೀ ವರ್ಷ ಮಾಡುತ್ತಿದ್ದೇವೆ. ಎಲ್ಲ ಕನ್ನಡಿಗರು ಪಾಲ್ಗೊಳ್ಳುವಂತೆ ಮಾಡುವ ಜೊತೆಗೆ ಕನ್ನಡಾಭಿಮಾನವನ್ನು ಮೂಡಿಸುವಂತ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುಕೊಡುತ್ತಿದ್ದೇವೆ. ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳು ಮುಂದುವರಿಯುತ್ತಿವೆ.
ಮಸ್ಕತ್ ನಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗಾಗಿ ಕಳೆದ 5 ವರ್ಷದಿಂದ ಬೆಂಗಳೂರಿನ ಕನ್ನಡ ಪ್ರಾಧಿಕಾರದೊಂದಿಗೆ ಸಂವಹನ ನಡೆಸಿ, ಕನ್ನಡ ಕಲಿಕಾ ಪ್ರಮಾಣ ಪತ್ರಗಳನ್ನು ಪಡೆದು ವಿತರಿಸುವುದು ಹಾಗು ಮಕ್ಕಳ ಕಾರ್ಯಕ್ರಮಗಳಿಗೆ ಮತ್ತು ಪರೀಕ್ಷೆಗಾಗಿ ಸೂಕ್ತ ವ್ಯವಸ್ಥೆಯನ್ನು ಶ್ರದ್ದೆಯಿಂದ ಮಾಡುತ್ತ ಬಂದಿದ್ದೇವೆ.


3ನೇ ವಿಶ್ವ ಕನ್ನಡ ಹಬ್ಬಕ್ಕೆ ಸಾಕ್ಷಿಯಾಗಲಿರುವ 300ಕ್ಕೂ ಹೆಚ್ಚಿನ ಕಲಾವಿದರು, ಗಣ್ಯರು!
ಇದೇ ನವೆಂಬರ್ 28ರಂದು ಮಸ್ಕತ್’ನ ಬೌಷರ್ CBFC ಸಭಾಂಗಣದಲ್ಲಿ 3ನೇ ವಿಶ್ವ ಕನ್ನಡ ಹಬ್ಬವನ್ನು ನಾವು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಜೊತೆ ಸೇರಿಕೊಂಡು ಆಯೋಜಿಸಿದ್ದೇವೆ. ಕರ್ನಾಟಕದ ಮೂಲೆ ಮೂಲೆಗಳಿಂದ ಕಲಾವಿದರು ಮತ್ತು ಮಸ್ಕತ್ ಕನ್ನಡ ಸಂಘದ ಪ್ರತಿಭಾನ್ವಿತ ಕಲಾವಿದರು ಸೇರಿದಂತೆ ಒಟ್ಟು ಮುನ್ನೂರಕ್ಕೂ(300) ಹೆಚ್ಚಿನ ಜನರು ಈ ಸಾಂಸ್ಕೃತಿಕ ಹಬ್ಬದಲ್ಲಿ ನಮ್ಮೆಲ್ಲರನ್ನ ರಂಜಿಸಲಿದ್ದಾರೆ. ಇಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಟಿಯರು, ಪ್ರಸಿದ್ದ ರಾಜಕೀಯ ಮುಖಂಡರು, ಖ್ಯಾತ ಕ್ರೀಡಾ ಪಟುಗಳು, ಮನರಂಜನ ಕ್ಷೇತ್ರದ ಖ್ಯಾತನಾಮರು ಮತ್ತು ಗಣ್ಯ ಸಾಹಿತಿಗಳು ಸೇರಿದಂತೆ ವಿವಿಧ ಗಣ್ಯವ್ಯಕ್ತಿಗಳು ನಾಯಕರುಗಳು ಈ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.




ಪ್ರಶ್ನೆ: ನಿಮ್ಮ ಸಂಘದ ಮುಂದಿನ ಪ್ರಮುಖ ಯೋಜನೆಗಳು ಏನೇನು ?
ಮಂಜುನಾಥ್ ಸಂಗಟಿ: ಕನ್ನಡ ಭವನವನ್ನು ಮಸ್ಕತ್ತಿನಲ್ಲಿ ನಿರ್ಮಿಸುವುದು ನಮ್ಮ ಸಂಘದ ಪ್ರಮುಖ ಯೋಜನೆಯಾಗಿದೆ. ಈ ಭವನದಲ್ಲಿ ಕನ್ನಡವನ್ನು ದಿನನಿತ್ಯ ಕಲಿಸುವ ಮಹತ್ತರ ಉದ್ದೇಶವ ನಮ್ಮದಾಗಿದೆ. ಜೊತೆಗೆ ಈ ಭವನದಲ್ಲಿ ನಾಲ್ಕೈದು ಕೊಠಡಿಗಳನ್ನು ನಿರ್ಮಿಸಿ, ಕನ್ನಡ ನಾಡಿನಿಂದ ಕೆಲಸ, ಇನ್ನಿತರ ಕಾರ್ಯಗಳಿಗೆ ಬರುವವರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸುವ ಜೊತೆಗೆ ಊಟೋಪಚಾರವನ್ನು ಒದಗಿಸುವ ಸದುದ್ದೇಶ ಸಂಘದ್ದಾಗಿದೆ.
ಪ್ರಶ್ನೆ: ಒಮಾನಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಏನೇನು ?
ಮಂಜುನಾಥ್ ಸಂಗಟಿ: ಒಮಾನಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಉದ್ಯೋಗದ ಸಮಸ್ಯೆ ಕಾಡುತ್ತಿದೆ. ಇದೊಂದು ದೊಡ್ಡ ಸವಾಲಾಗಿ ನಿಂತಿದೆ. ಇಲ್ಲಿನ ಸರಕಾರ ನಡೆಸುತ್ತಿರುವ ಒಮಾನೈಸಷನ್(ಒಮಾನೀಕರಣ)ನಿಂದಾಗಿ ಜನ ತಮ್ಮ ಕೆಲಸವನ್ನು ಕಳೆದುಕೊಳ್ಳುವಂತಾಗಿದೆ. ಪ್ರತಿ ತಿಂಗಳು ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡು ತಾಯಿನಾಡಿಗೆ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಇದು ಕನ್ನಡಿಗರನ್ನು ಬಿಟ್ಟಿಲ್ಲ. ಈ ಸಮಸ್ಯೆಯಿಂದ ಕನ್ನಡಿಗರು ಕೂಡ ಸಾಕಷ್ಟು ಸಮಸ್ಯೆ, ಸಂಕಷ್ಟದಲ್ಲಿದ್ದಾರೆ.










ಪ್ರಶ್ನೆ: ರಾಜ್ಯ ಸರಕಾರದ ಮುಂದೆ ಬೇಡಿಕೆಗಳೇನಾದರೂ ಇಡಲು ಇಚ್ಛಿಸುತ್ತೀರಾ?
ಮಂಜುನಾಥ್ ಸಂಗಟಿ: ಹೌದು, ಖಂಡಿತವಾಗಿ. ಮಸ್ಕತ್ತಿನಲ್ಲಿ ಕನ್ನಡ ಭವನವನ್ನು ನಿರ್ಮಿಸಲು ನಮಗೆ ಇಲ್ಲಿ ಕರ್ನಾಟಕ ಸರಕಾರದ ಆರ್ಥಿಕ ನೆರವು ಅಗತ್ಯ. ಅಲ್ಲದೆ ಇಲ್ಲಿ ಕನ್ನಡವನ್ನು ಕಲಿಸುವ ಶಿಕ್ಷಕರಿಗೆ ಸರಕಾರ ಅನುಕೂಲತೆಯನ್ನು ಮಾಡಿಕೊಡಬೇಕು. ಅವರಿಗೆ ಸಂಭಾವನೆಯನ್ನು ನಿಗದಿ ಮಾಡಬೇಕು. ಕನ್ನಡ ಭವನವನ್ನು ನಡೆಸಿಕೊಂಡು ಹೋಗಲು ಕರ್ನಾಟಕ ಸರಕಾರದ ಹಣಕಾಸಿನ ನೆರವು ಬೇಕೇಬೇಕು. ಅಲ್ಲಿ ಐದಾರು ಮಂದಿ ಕೆಲಸಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ. ಅವರಿಗೆ ಪ್ರತಿ ತಿಂಗಳು ನಮ್ಮ ಸಂಘದಿಂದ ಸಂಬಳ ನೀಡಲು, ಇನ್ನಿತರ ಕಾರ್ಯಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಈ ಹಣಕಾಸಿನ ನೆರವು ಕರ್ನಾಟಕ ರಾಜ್ಯ ಸರಕಾರ ನೀಡಿದರೆ ಕನ್ನಡವನ್ನು ವಿದೇಶದಲ್ಲಿ ಉಳಿಸಿ ಬೆಳೆಸುವ ಕಾರ್ಯಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.