ದೂರದ ಇಟಲಿಯಲ್ಲಿ ಕನ್ನಡದ ಕಂಪನ್ನು ಬೀರಿರುವ ‘ಇಟಲಿ ಕನ್ನಡ ಸಂಘ’ವನ್ನು ಕಟ್ಟಿ ಬೆಳೆಸಿದ ಕೀರ್ತಿ ಅದರ ಸ್ಥಾಪಕಾಧ್ಯಕ್ಷ , ಹಾಲಿ ಅಧ್ಯಕ್ಷರೂ ಆಗಿರುವ ಹೇಮೇಗೌಡ ರುದ್ರಪ್ಪ ಅವರಿಗೆ ಸಲ್ಲುತ್ತದೆ. ಇಟಲಿಯಲ್ಲಿ ಕನ್ನಡ ಸಂಘಕ್ಕೆ ಅಡಿಪಾಯ ಹಾಕಿ ಕೊಟ್ಟಿರುವ ಹೇಮೇಗೌಡ ರುದ್ರಪ್ಪ, ಮಹಾಮಾರಿ ಕೊರೊನಾ ವೇಳೆ ಇಟಲಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಲವಾರು ಇಟಲಿಯನ್ನರನ್ನು ಹಾಗು ಕನ್ನಡಿಗರನ್ನು ಕಾಪಾಡುವ ಜೊತೆಗೆ, ಕನ್ನಡಿಗರನ್ನು ಸ್ವದೇಶಕ್ಕೆ ಮರಳಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.



ಇಟಲಿಯಲ್ಲಿ ಸರಕಾರಿ ನರ್ಸ್ ನೌಕರಿ ಪಡೆದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು ಹೇಮೇಗೌಡ ರುದ್ರಪ್ಪ. ಬೆಂಗಳೂರಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಪಡೆದು, ಸಿಕ್ಕಿಂ ಮಣೀಪಾಲ್ ಯೂನಿವರ್ಸಿಟಿಯ ಎಂಎಸ್ಸಿ- ಕ್ಲೀನಿಕಲ್ ರಿಸರ್ಚ್ ಅಂಡ್ ರೆಗೂ ಲೇಟರಿ ಅಫೇರ್ಸ್ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009ರಿಂದ ಇಟಲಿ ದೇಶದಲ್ಲಿ ಶುಶ್ರೂಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಚಿಕ್ಕಬಾನೂರು(ಶಿವಪುರ) ಮೂಲದವರಾಗಿದ್ದು, ಪ್ರಸಕ್ತ ಇಟಲಿಯ ಟೊರಿನೊ ರಿವೊಲಿ ಪಬ್ಲಿಕ್ ಆಸ್ಪತ್ರೆಯಲ್ಲಿ ರಿಜಿಸ್ಟರ್ಡ್ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ‘V-Empire’ ಎನ್ನುವ ಕನ್ಸಲ್ಟೆನ್ಸಿ ಸಂಸ್ಥೆ ಕೂಡ ನಡೆಸುತ್ತಿರುವ ಇವರು, ಸಮನ್ವಿ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಕನ್ನಡ ಸಿನೇಮಾಗಳನ್ನು ವಿಶ್ವದೆಲ್ಲೆಡೆಗೆ ವಿತರಿಸುವ ಕಾರ್ಯವನ್ನು ಮಾಡಿಕೊಂಡಿದ್ದಾರೆ. ಇವರ ಜೊತೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ ನೋಡಿ….



ಪ್ರಶ್ನೆ: ಸರ್, ಇಟಲಿ ಕನ್ನಡ ಸಂಘವನ್ನು ಯಾವಾಗ ಸ್ಥಾಪಿಸಲಾಯಿತು ? ಅದರ ಬಗ್ಗೆ ವಿವರ ನೀಡುತ್ತೀರಾ..?
ಹೇಮೇಗೌಡ ರುದ್ರಪ್ಪ: ‘ಇಟಲಿ ಕನ್ನಡ ಸಂಘ’ವನ್ನು 2013ರಲ್ಲಿ ಸ್ಥಾಪಿಸಲಾಯಿತು. ಇಟಲಿಯಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಕನ್ನಡ ಸಿನೆಮಾವನ್ನು ಪ್ರದರ್ಶಿಸುವ ಮೂಲಕ ‘ಇಟಲಿ ಕನ್ನಡ ಸಂಘ’ವನ್ನು ಆರಂಭಿಸಲಾಯಿತು. ಈಗ ನಾನು ಅಧ್ಯಕ್ಷನಾಗಿದ್ದು, ಸ್ಥಾಪಕ ಅಧ್ಯಕ್ಷನೂ ಆಗಿದ್ದೇನೆ. 2013ರ ನಂತರ ಇಲ್ಲಿ ನಾವು ಹಲವಾರು ಕನ್ನಡ ಸಿನೆಮಾಗಳನ್ನು ಪ್ರದರ್ಶನ ಮಾಡಿದ್ದೇವೆ. ಅನಂತರ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವ ಕನ್ನಡಿಗರ ಸಂಖ್ಯೆ ಹೆಚ್ಚಾಯಿತು. ಇಲ್ಲಿ ಕನ್ನಡಿಗರಲ್ಲಿ ಹೆಚ್ಚಿರುವುದೇ ವಿದ್ಯಾರ್ಥಿಗಳು. ಇವರೆಲ್ಲ ನಮ್ಮ ಕನ್ನಡ ಸಂಘದ ಜೊತೆ ಎಲ್ಲ ಕಾರ್ಯಕ್ರಮದಲ್ಲೂ ಕೈಜೋಡಿಸುತ್ತಾರೆ.



ಪ್ರಶ್ನೆ: ಇಟಲಿಯಲ್ಲಿ ಕನ್ನಡ ಸಂಘ ಸ್ಥಾಪಿಸಲು ನಿರ್ಧರಿಸಿದ ಹಿನ್ನೆಲೆಯನ್ನು ಸ್ವಲ್ಪ ಹೇಳ್ತೀರಾ ?
ಹೇಮೇಗೌಡ ರುದ್ರಪ್ಪ: ಇಟಲಿಯಲ್ಲಿರುವ ಕನ್ನಡಿಗರು ನಮ್ಮ ಕನ್ನಡದ ಭಾಷೆ, ಸಂಸ್ಕೃತಿ, ಪರಂಪರೆ, ಸೊಗಡು ಇವೆಲ್ಲದರಿಂದ ದೂರ ಉಳಿಯಬಾರದೆಂಬ ಕಾರಣಕ್ಕೆ ಹಾಗು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ‘ಇಟಲಿ ಕನ್ನಡ ಸಂಘ’ವನ್ನು ಆರಂಭಿಸಲು ನಿರ್ಧರಿಸಿದೆವು. ಜೊತೆಗೆ ಇಲ್ಲಿಗೆ ಕೆಲಸ ಹಾಗು ವಿದ್ಯಾಭ್ಯಾಸಕ್ಕೆ ಬರುವ ಜನ ಹಲವು ರೀತಿಯ ಸಮಸ್ಯೆ, ಕಷ್ಟಗಳನ್ನು ಎದುರಿಸುತ್ತಿದ್ದರು. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸದುದ್ದೇಶದಿಂದ ‘ಇಟಲಿ ಕನ್ನಡ ಸಂಘ’ವನ್ನು ಸ್ಥಾಪಿಸಿದೆವು. ನಾನು 2007ರಲ್ಲಿ ಇಲ್ಲಿಗೆ ಬಂದಾಗ ಹಲವು ರೀತಿಯ ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಿದ್ದೇನೆ. ಈ ಕಷ್ಟದ ಅರಿವು ನನಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಇರುವವರು ಹಾಗು ಬರುವವರು ಯಾವುದೇ ರೀತಿಯ ಕಷ್ಟಗಳನ್ನು ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲ ಸೇರಿ ‘ಇಟಲಿ ಕನ್ನಡ ಸಂಘ’ವನ್ನು ಆರಂಭಿಸಿದೆವು.



ಪ್ರಶ್ನೆ: ಇಟಲಿ ಕನ್ನಡ ಸಂಘದ ಬಗ್ಗೆ ಏನು ಹೇಳಲು ಬಯಸುತ್ತೀರಿ..?
ಹೇಮೇಗೌಡ ರುದ್ರಪ್ಪ: ‘ಇಟಲಿ ಕನ್ನಡ ಸಂಘ’ವನ್ನು ಕೇವಲ 20-30 ಜನ ಸೇರಿ 2013ರಲ್ಲಿ ಸ್ಥಾಪಿಸಿದ್ದು, ಈಗ 300 ರಿಂದ 400 ಜನರು ಸಂಘದಲ್ಲಿದ್ದಾರೆ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಇದರಲ್ಲಿ 20ರಿಂದ 30 ಕುಟುಂಬಗಳು ಇವೆ. ಇದರಲ್ಲಿ10 ಮಂದಿ ಸೇರಿ ಕಾರ್ಯಕಾರಿ ಸಮಿತಿ ಮಾಡಿಕೊಂಡಿದ್ದು, ಈ ಮೂಲಕ ನಾವು ಸಂಘದ ಕಾರ್ಯಚಟುವಟಿಕೆ ಮಾಡುತ್ತಿದ್ದೇವೆ. ಈ ವರಗೆ ‘ಇಟಲಿ ಕನ್ನಡ ಸಂಘ’ವನ್ನು ನೋಂದವಣಿ ಮಾಡಿರಲಿಲ್ಲ, ಮುಂದಿನ ತಿಂಗಳು ಅಂದರೆ ಏಪ್ರಿಲ್’ನಲ್ಲಿ ನಾವು ‘ಇಟಲಿ ಕನ್ನಡ ಸಂಘ’ವನ್ನು ಅಧಿಕೃತವಾಗಿ ನೋಂದಾವಣೆ (Registration) ಮಾಡುತ್ತಿದ್ದೇವೆ. ಈವರಗೆ ಸಂಘ ಔಪಚಾರಿಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ ನಾವು ಇನ್ನಷ್ಟು ಕಾರ್ಯಕ್ರಮ ಮಾಡಲು ಅನುಕೂಲವಾಗಲಿದೆ. ಜೊತೆಗೆ ಇಟಲಿಯನ್ ಕಾನ್ಸುಲೇಟ್ ಹಾಗು ಸರಕಾರ ನಮ್ಮ ಸಂಘಟನೆಗೆ ಬೆಂಬಲ, ಸಹಕಾರ ನೀಡುವ ಭರವಸೆ ನೀಡಿದ್ದರಿಂದ ನಾವು ಅಧಿಕೃತವಾಗಿ ನೋಂದಾವಣೆ ಮಾಡುತ್ತಿದ್ದೇವೆ.



ಪ್ರಶ್ನೆ: ಇಟಲಿ ಕನ್ನಡ ಸಂಘದ ಹಿಂದಿರುವ ಧ್ಯೇಯೋದ್ದೇಶಗಳು ಏನೇನು ?
ಹೇಮೇಗೌಡ ರುದ್ರಪ್ಪ: ನಮ್ಮ ತಾಯಿನಾಡಿನಿಂದ ಬಂದಿರುವ ಕನ್ನಡಿಗರಿಗೆ ಸಹಾಯ ಮಾಡಬೇಕು, ಇಲ್ಲಿ ಅವರಿಗೆ ಯಾವುದೇ ರೀತಿಯ ಕಷ್ಟ, ಕಾರ್ಪಣ್ಯಗಳಾದರೆ ಅದಕ್ಕೆ ಸ್ಪಂದಿಸಬೇಕು. ಮುಖ್ಯವಾಗಿ ಇಲ್ಲಿ ಬೇಕಿರುವುದು ಇಟಲಿಯನ್ ಭಾಷೆ. ಅದು ಗೊತ್ತಿಲ್ಲದಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಮನೆ ಬಾಡಿಗೆ ಪಡೆಯಲು, ಆಸ್ಪತ್ರೆಗಳಲ್ಲಿ ಭಾಷೆಯಿಂದಾಗಿ ಹಲವು ಮಂದಿ ಮೋಸ ಹೋಗುತ್ತಾರೆ. ಅಂಥವರಿಗೆ ಸಹಾಯ ಮಾಡಲು ಹಾಗು ನಮ್ಮ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿ, ಸೊಗಡನ್ನು ಇಟಲಿಯನ್ನರಿಗೂ ಪರಿಚಯಿಸುವ ಮೂಲಕ ಅವರಲ್ಲೂ ಕನ್ನಡದ ಬಗ್ಗೆ ಒಲವು ಹೆಚ್ಚಿಸುವುದೇ ನಮ್ಮ ಧ್ಯೇಯೋದ್ದೇಶವಾಗಿದೆ.

ಪ್ರಶ್ನೆ: ಪ್ರತಿ ವರ್ಷ ಯಾವೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ…?
ಹೇಮೇಗೌಡ ರುದ್ರಪ್ಪ: ಪ್ರತಿ ವರ್ಷ ನಾವು ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಅದೇ ರೀತಿ ಸಂಘದ ವಾರ್ಷಿಕೋತ್ಸವವನ್ನು ಭಾರೀ ಜೋರಾಗಿಯೇ ಆಚರಿಸುತ್ತೇವೆ. ಜೊತೆಗೆ ರಾಮನವಮಿ, ದೀಪಾವಳಿ, ಗಣೇಶೋತ್ಸವ, ಯುಗಾದಿ ಸೇರಿದಂತೆ ಎಲ್ಲ ಹಬ್ಬಗಳನ್ನು ನಾವು ಸಂಘದ ಆಶ್ರಯದಲ್ಲಿ ಇತರರೊಂದಿಗೆ ಸೇರಿ ಆಚರಿಸುತ್ತೇವೆ.
ಪ್ರಶ್ನೆ: ಕನ್ನಡ ಭಾಷೆ ಬೆಳವಣಿಗೆಗೆ ಇಟಲಿ ಕನ್ನಡ ಸಂಘದ ಕೊಡುಗೆ ಏನು…?
ಹೇಮೇಗೌಡ ರುದ್ರಪ್ಪ: ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ವಿವಿಧ ಕಾರ್ಯಗಳನ್ನು ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಇಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಒಲವಿರುವವರು ಕವನ, ಕವಿತೆ, ಕಥೆಗಳನ್ನು ಬರೆದು ಕನ್ನಡ ಸಾಹಿತ್ಯ ಪರಿಷತ್ತಿನ ಮಹೇಶ್ ಜೋಶಿ ಅವರಿಗೆ ಕಳುಹಿಸುತ್ತಿದ್ದಾರೆ. ಇಟಲಿ ಕನ್ನಡ ಸಂಘದ ಕಾರ್ಯದರ್ಶಿ ಜಯಮೂರ್ತಿ ಅವರು ಇಲ್ಲಿನ ಇಟಲಿಯನ್ನರಿಗೆ ಕನ್ನಡದ ಒಳ್ಳೆಯ ಕಾದಂಬರಿಗಳು, ಪುಸ್ತಕಗಳನ್ನು ಇಟಾಲಿಯನ್ ಭಾಷೆಗೆ ಭಾಷಾಂತರಿಸಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್’ನಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತ್ರಿವೇಣಿಯವರ ಕಾದಂಬರಿ ‘ಶರಪಂಜರ’ವನ್ನು ಜಯಮೂರ್ತಿಯವರು ‘ಲಾ ಗಬಿಯಾ ಡಿ ಫ್ರೆಕ್ಕೆ'( La Gabbia Di Frecce) ಎಂಬ ಹೆಸರಿನಲ್ಲಿಇಟಾಲಿಯನ್ ಭಾಷೆಗೆ ಭಾಷಾಂತರ ಮಾಡಿದ್ದು, ಈ ಕೃತಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದರು. ಕನ್ನಡ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ರಾಜ್ಯದ ಸಚಿವರನ್ನು, ಗಣ್ಯರನ್ನು ಕರೆಸುತ್ತಿದ್ದೇವೆ. ಇತ್ತೀಚಿಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಆಗಮಿಸಿದ್ದರು.

ಇಟಲಿಯಲ್ಲಿರುವ ಒಟ್ಟು ಕನ್ನಡಿಗರು ಎಷ್ಟು ? ಅವರೆಲ್ಲರೂ ಯಾವ ರೀತಿ ಕನ್ನಡ ಸಂಘದೊಂದಿಗೆ ಸಕ್ರಿಯವಾಗಿದ್ದಾರೆ ?
ಹೇಮೇಗೌಡ ರುದ್ರಪ್ಪ: ಇಟಲಿಯಲ್ಲಿ ಸುಮಾರು 500ರಷ್ಟು ಮಂದಿ ಕನ್ನಡಿಗರಿದ್ದಾರೆ. ಸುಮಾರು 20 ಕುಟುಂಬಗಳಿದ್ದು, ಇಲ್ಲಿರುವವರಲ್ಲಿ ಹೆಚ್ಚು ಜನ ವಿದ್ಯಾರ್ಥಿಗಳು. ಅವರೆಲ್ಲರೂ ಇಲ್ಲಿಗೆ ಉನ್ನತ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಬರುತ್ತಿದ್ದಾರೆ. ಮಿಲನೋ, ರೋಮ್, ಟೊರಿನೊ, ಫ್ಲೋರೆನ್ಸ್, ಮೆಸ್ಸಿನ ಮುಂತಾದ ಕಡೆಗಳ ಯೂನಿವರ್ಸಿಟಿಗಳಲ್ಲಿ ಕನ್ನಡಿಗರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ಇಲ್ಲಿಗೆ ಬರುತ್ತಿರುವವರಲ್ಲಿ ನರ್ಸ್’ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿರುವ ಹೆಚ್ಚಿನವರು ಕನ್ನಡ ಭಾಷೆ, ನಾಡು-ನುಡಿಗಳ ಕಾರ್ಯಕ್ರಮಗಳಿಗೆ ಬಂದು ನಮಗೆ ಸಹಕಾರ ನೀಡುತ್ತಿದ್ದಾರೆ.

ನಿಮ್ಮಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಏನೇನು ?
ಹೇಮೇಗೌಡ ರುದ್ರಪ್ಪ: ಇಟಲಿ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಕನ್ನಡಿಗರು ಎದುರಿಸುವ ಬಹುದೊಡ್ಡ ಸಮಸ್ಯೆ ಭಾಷೆಯದ್ದು. ಇಲ್ಲಿಗೆ ತುಂಬಾ ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಜೊತೆಗೆ ಹಲವಾರು ಮಂದಿ ಉದ್ಯೋಗ, ಬಿಝಿನೆಸ್ ಮಾಡಲು ಬರುತ್ತಿದ್ದಾರೆ. ಅವರಿಗೆ ಇಲ್ಲಿನ ಭಾಷೆ ಬರಲ್ಲ, ಅರ್ಥವೂ ಆಗಲ್ಲ. ಇದರಿಂದ ಹಲವು ಸಮಸ್ಯೆಗಳನ್ನು, ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ.

ಕರ್ನಾಟಕ ಸರಕಾರಕ್ಕೆ , ಕೇಂದ್ರ ಸರಕಾರಕ್ಕೆ ಇಟಲಿ ಕನ್ನಡ ಸಂಘ ಇಡುವ ಬೇಡಿಕೆಗಳೇನಾದರೂ ಇದೆಯೇ.. ?
ಹೇಮೇಗೌಡ ರುದ್ರಪ್ಪ: ಇಲ್ಲಿನ ಭಾಷೆಯ ಬಗ್ಗೆಗಿನ ಸಮಸ್ಯೆಯನ್ನು ಕರ್ನಾಟಕ ಸರಕಾರ ಪರಿಹರಿಸುವ ಕಾರ್ಯಕ್ಕೆ ಮುಂದಾಗಬೇಕು. ಯುರೋಪಿಗೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಮೊದಲೇ ಇಲ್ಲಿನ ಭಾಷೆಯನ್ನು ಕಲಿಸುವ ಅಥವಾ ಇಲ್ಲಿಗೆ ಬಂದ ಮೇಲೆ ಇಲ್ಲಿ ಕಲಿಯಲು ಸೂಕ್ತವಾದ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂಬುದೇ ನಮ್ಮ ಬಹುದೊಡ್ಡ ಬೇಡಿಕೆಯಾಗಿದೆ. ಈ ಬಗ್ಗೆ ಇತ್ತೀಚಿಗೆ ಭೇಟಿ ನೀಡಿದ್ದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರಿಗೆ ಮನವಿ ಮಾಡಿದ್ದೇವೆ.
ಕನ್ನಡಪರ ಸಂಘಗಳಿಗೆ ಸರಕಾರ ಅಧಿಕೃತ ಮಾನ್ಯತೆ ನೀಡಲಿ: ಕರ್ನಾಟಕದಿಂದ ಯಾರೆಲ್ಲ ಹೊರದೇಶಗಳಿಗೆ ಉದ್ಯೋಗಕ್ಕೆ, ವಿದ್ಯಾಭ್ಯಾಸಕ್ಕೆ ಬರುತ್ತಾರೆ ಅಂಥವರ ಬಗ್ಗೆಗಿನ ಅಂಕಿ ಅಂಶಗಳನ್ನು ಸರಕಾರ ಕ್ರೋಢೀಕರಿಸಬೇಕು. ಇದರ ಜೊತೆಗೆ ರಾಜ್ಯ ಸರಕಾರವು ಹೊರದೇಶದಲ್ಲಿರುವ ಕನ್ನಡಪರ ಸಂಘಗಳನ್ನು ಗುರುತಿಸಿ, ಅದರ ಮುಖ್ಯಸ್ಥರಿಗೆ ಅಧಿಕೃತ ಮಾನ್ಯತೆ ನೀಡಿ, ವಿದೇಶಕ್ಕೆ ಹೋಗುವವರಿಗೆ ಇಂಥವರನ್ನು ನಿಮ್ಮ ಸಹಾಯಕ್ಕಾಗಿ ಸಂಪರ್ಕಿಸುವಂತೆ ಸೂಚಿಸುವ ಕಾರ್ಯ ಸರಕಾರೀ ಮಟ್ಟದಲ್ಲಿ ಆಗಬೇಕು.
ಪರದೇಶದಲ್ಲಿರುವ ಕನ್ನಡ ಪರ ಸಂಘಗಳನ್ನು ಗುರುತಿಸಿ, ರಾಜ್ಯ ಸರಕಾರ ಸ್ಥಾನಮಾನ ನೀಡಬೇಕು. ಜೊತೆಗೆ ಪ್ರತಿ ವರ್ಷ ಕನ್ನಡ ಪರ ಸಂಘಗಳ ಪದಾಧಿಕಾರಿಗಳನ್ನು ಕರೆದು ಅವರ ಸಮಸ್ಯೆ, ಬೇಡಿಕೆಗಳ ಬಗ್ಗೆ, ಅವರು ನಡೆಸುವಂತಹ ಹಲವು ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಬೇಕು.



ಇಟಲಿಯಲ್ಲಿ ಸಂಕಷ್ಟಕ್ಕೀಡಾಗುವ ಕನ್ನಡಿಗರಿಗೆ ಸಂಘಟನೆಯ ಸ್ಪಂದನೆ ಏನು…?
ಹೇಮೇಗೌಡ ರುದ್ರಪ್ಪ: ಇಟಲಿಯಲ್ಲಿ ಸಂಕಷ್ಟಕ್ಕೀಡಾಗುವ ಕನ್ನಡಿಗರಿಗೆ ಎಲ್ಲ ರೀತಿಯಿಂದಲೂ ನಾವು ಸಹಾಯ, ಸಹಕಾರವನ್ನು ನೀಡುತ್ತಿದ್ದೇವೆ. ಅವರಿಗೆ ಹೆಚ್ಚಾಗಿ ಭಾಷೆಯ ಸಮಸ್ಯೆ ಎದುರಾದಾಗ ನಾವು ಅದನ್ನು ಪರಿಹರಿಸುತ್ತೇವೆ. ಜೊತೆಗೆ ನಾವು ಇಲ್ಲಿರುವ ಕನ್ನಡಿಗರ ಜೊತೆ ಸದಾ ಕಾಲ ಇದ್ದೇವೆ.