ಅತ್ಯಂತ ಸವಿಯಾದ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯೂ ಭಾರತದ ಅನೇಕ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೆ, ದೇಶಾಂತರಗಳಲ್ಲಿಯೂ ತನ್ನ ಪ್ರಭಾವವನ್ನು ಬೀರುತ್ತಾ ಬಂದಿದೆ. ಬಹಳ ಹಿಂದಿನಿಂದಲೂ 1900ರ ದಶಕಗಳಲ್ಲಿ ಕರ್ನಾಟಕದಿಂದ ಹೊರಭಾಗಕ್ಕೆ, ವಿಶೇಷವಾಗಿ ಭಾರತೀಯ ಪ್ರಾಂತ್ಯಗಳಿಗೆ ವಲಸೆ ಹೋಗಿರುವ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಗಳನ್ನು ತಾವು ವಲಸೆ ಹೋದ ಪ್ರಾಂತ್ಯಗಳಲ್ಲಿ ಪೋಷಿಸಿ ಸ್ಥಳೀಯವಾಗಿ ಬೆಳೆಸಿದ್ದಾರೆ. ದಶಕಗಳಲ್ಲಿ ಇದಕ್ಕೆ, ಮುಂಬೈ, ಪುಣೆ, ಚೆನ್ನೈ, ದೆಹಲಿ, ಅಹಮದಾಬಾದ್ ಮತ್ತಿತರ ನಗರಗಳಲ್ಲಿ ನಿರ್ಮಿತ ಕನ್ನಡ ಸಂಘ-ಸಂಸ್ಥೆಗಳು ಹಾಗೂ ಅವುಗಳು ಹಮ್ಮಿಕೊಳ್ಳುವಂಥ ಕಾರ್ಯಕ್ರಮಗಳು ನಿದರ್ಶನವಾಗಿವೆ.

ಇಂಗ್ಲೆಂಡ್‌ನ ಕನ್ನಡಿಗರ ಕುರಿತು ಹೇಳುವುದಾದರೆ ಇಲ್ಲಿಯ ಕನ್ನಡಿಗರು ಹಾಗೂ ಈ ನೆಲದಲ್ಲಿ ಮೂಡಿರುವ ಕನ್ನಡ ಭಾಷೆ ಸಂಸ್ಕೃತಿಯ ಛಾಪು ಇನ್ನಿತರ ದೇಶಗಳಿಗಿಂತ ತುಸು ಭಿನ್ನ ಹಾಗೂ ವಿಶಿಷ್ಟ ಅನ್ನಬಹುದು. ಇದಕ್ಕೆ ಒಂದು ಐತಿಹಾಸಿಕ ಮಹತ್ವವೂ ಇದೆ. 1852ರಲ್ಲಿ ಕೊಡಗಿನ ದೊರೆ ಚಿಕ್ಕವೀರರಾಜೇಂದ್ರ ತನ್ನ ಕುಟುಂಬ ಸಮೇತರಾಗಿ ಇಂಗ್ಲೆಂಡಿಗೆ ತಲುಪಿದ ಸಂದರ್ಭದಲ್ಲಿ ಕನ್ನಡ ಮತ್ತು ಇಂಗ್ಲಿಷ್ ರಾಜ್ಯಮನೆತನಗಳ ನಡುವಿನ ಐತಿಹಾಸಿಕ ಸಂಬಂಧ ಆರಂಭವಾಯಿತು. ಚಿಕ್ಕವೀರ ರಾಜೇಂದ್ರನ ಮಗಳು ಗೌರಮ್ಮ, ರಾಣಿ ವಿಕ್ಟೋರಿಯಾ ಅವರ ಅನುಗ್ರಹದಡಿಯಲ್ಲಿ ಬೆಳೆದು ‘ವಿಕ್ಟೋರಿಯಾ ಗೌರಮ್ಮ’ಳಾಗಿ ಹೆಸರು ಮಾಡಿದರು. ಇದರಿಂದ ಕನ್ನಡಿಗರು ಹಾಗೂ ಇಂಗ್ಲೆಂಡಿನ ರಾಜಮನೆತನದ ನಡುವೆ ಐತಿಹಾಸಿಕ ಸಂಬಂಧವು ವಿಕಸನಗೊಂಡಿತು. ಆನಂತರ, 1970-80ರ ಇಂಗ್ಲೆಂಡ್‌ನಲ್ಲಿ ಉದ್ಭವಿಸಿದ ವೈದ್ಯರ ಕೊರತೆ ಮತ್ತು 90ರ ದಶಕದ ಐಟಿ ಕ್ರಾಂತಿ ಕನ್ನಡಿಗರಿಗೆ ಹೊಸ ಯುನೈಟೆಡ್ ಕಿಂಗ್ಡಮ್ ನ ಬಾಗಿಲನ್ನು ತೆರೆಯಿತು. ಈ ಅವಕಾಶವನ್ನು ಬಳಸಿಕೊಂಡ ಕನ್ನಡಿಗರು ಈ ದೇಶದಲ್ಲಿ ಸದೃಢರಾಗಿ ನೆಲೆನಿಂತರು. ಈಗಿನ ಅಂದಾಜಿನ ಪ್ರಕಾರ ಇಂಗ್ಲೆಂಡ್ ನಲ್ಲಿ ಸುಮಾರು 50,000 ಕನ್ನಡಿಗರು ಇಲ್ಲಿನ ಹಲವಾರು ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದು ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿದ್ದಾರೆ.

ವಿಶೇಷವೆಂದರೆ ಇಲ್ಲಿಗೆ ವಲಸೆ ಬಂದ ಕನ್ನಡಿಗರಲ್ಲಿ ಹೆಚ್ಚಿನವರು ಶಾಶ್ವತವಾಗಿ ನೆಲೆಯೂರಿದರೆ ತಾತ್ಕಾಲಿಕ ನೆಲೆಯಲ್ಲಿ ಬಂದಿದ್ದು ಇವರೆಲ್ಲ ಪ್ರೊಫೆಷನಲ್ ಜಾಬ್ ಮಾಡುವವರಾಗಿದ್ದಾರೆ. ಈ ವಿಶೇಷತೆ ಬೇರೆ. ಪ್ರಾಂತ್ಯಗಳಿಂದ ವಲಸೆ ಬಂದ ಭಾರತೀಯರಲ್ಲಿ ಕಾಣುವುದು ಕಡಿಮೆ.
ಕಳೆದ ನಾಲ್ಕು ದಶಕಗಳಲ್ಲಿ, ಇಂಗ್ಲೆಂಡಿನಲ್ಲಿ ನೆಲೆಯೂರಿರುವ ಕನ್ನಡಿಗರು ತಮ್ಮ ವೃತ್ತಿಜೀವನದ ಜೊತೆಗೆ, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಮೂಲಕ ಯಶಸ್ವಿಯಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗರು ಕನ್ನಡ ಭಾಷೆಯನ್ನು ಸಂಘಟಿತರಾಗಿ ಹಬ್ಬ, ಹರಿದಿನಗಳ ಆಚರಣೆ ಮೂಲಕ ಬೆಳೆಸಲಾರಂಭಿಸಿದ್ದು, ಇವು ಆರಂಭದಲ್ಲಿ ಚಿಕ್ಕ ಮಟ್ಟದಲ್ಲಿ ಒಬ್ಬರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಾಗಿದ್ದರೂ, ಈಗ ಕಳೆದೆರಡು ದಶಕಗಳಲ್ಲಿ, ವರ್ಷಕ್ಕೆ ಮೂರು- ನಾಲ್ಕು ಬಾರಿಯಾದರೂ ಪ್ರಮುಖವಾದ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿಗೆ ಬಂದು ಮುಟ್ಟಿದೆ. ಇತ್ತೀಚೆಗೆ ಈ ಕನ್ನಡ ಸಂಘಗಳು ಕರ್ನಾಟಕ ರಾಜ್ಯೋತ್ಸವದಂತಹ ಸಮಾರಂಭಗಳನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದ್ದು, 1000ಕ್ಕೂ ಹೆಚ್ಚು ಕನ್ನಡಿಗರನ್ನು ಒಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ.

ಸ್ಕಾಟ್ಲೆಂಡ್ ಕನ್ನಡ ಬಳಗ, ಕೊವೆಂಟ್ರಿ ಕನ್ನಡ ಸಂಘ, ಲೇಕ್ಟರ್ ಆ್ಯಂಡ್ ಬೊಲ್ಟನ್ ಕನ್ನಡ ಸಂಘಗಳು ನಿರಂತರವಾಗಿ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಇಲ್ಲಿನ ಕನ್ನಡ ಬಳಗ ಹಾಗೂ ಕನ್ನಡಿಗರು ಉಕ್ ಸಂಘಗಳು ಈ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವಲ್ಲಿ ಯಶಸ್ವಿ ಆಗಿವೆ. ಈ ಎಲ್ಲ ಸಂಘಗಳ ಕಾರ್ಯಕ್ರಮಗಳು ಕನ್ನಡಿಗರ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೇಲೆ ಕೇಂದ್ರೀಕರಿಸಿಕೊಂಡು ನೆರವೇರುತ್ತಿವೆ. ಈ ಸಂಘಗಳು ಪ್ರತಿ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ಜೊತೆಗೆ ಕರ್ನಾಟಕದಿಂದ ಬರುವ ಕಲಾವಿದರು, ಸಾಹಿತಿಗಳು ಹಾಗೂ ಜಾನಪದ ಕಲಾ ತಂಡಗಳನ್ನು ಆಹ್ವಾನಿಸುತ್ತವೆ. ಇವುಗಳ ಮೂಲಕ ಯುನೈಟೆಡ್ ಕಿಂಗ್ಡಮ್ ನಲ್ಲಿ ಹುಟ್ಟಿಬೆಳೆದ ಕನ್ನಡ ಮಕ್ಕಳಿಗೂ ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುತ್ತಿವೆ. ಕನ್ನಡ ಭಾಷೆಯ ಮೇರು ಸಾಧನೆಗಳ ಕುರಿತು ಕಾರ್ಯಕ್ರಮಗಳು ನಡೆದಿರುವುದರಿಂದ ಇಲ್ಲಿನ ಕನ್ನಡಿಗರ ಪಾಲಿಗೆ ವಿಶೇಷವಾದ ಒಕ್ಕೂಟ ಮತ್ತು ಪೋಷಣೆ ದೊರಕುತ್ತಿದೆ.

ಇತ್ತೀಚೆಗೆ ‘ಸಾಗರೋತ್ತರ ಕನ್ನಡಿಗರು’ ಹಾಗೂ ‘ಹಾರೋ ಕುವೆಂಪು ಕನ್ನಡ ಸಂಘ’ ಎಂಬ ಹೊಸ ಸಂಸ್ಥೆಗಳು ತಮ್ಮ ವಿಶಿಷ್ಟ ಹಾಗೂ ಹೊರನಾಡು ಕನ್ನಡಿಗರ ಗಮನವನ್ನು ಸೆಳೆದಿವೆ. ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂತುಷ್ಟಗೊಳ್ಳದ ಇಲ್ಲಿನ ಕನ್ನಡಿಗರು ತಮ್ಮ ಭಾಷೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಕಲಿಸಲು, ಕಿರಿಯ ಮಕ್ಕಳಿಗಾಗಿ ‘ಕನ್ನಡ ಕಲಿ’ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಆದಷ್ಟೇ ಅಲ್ಲದೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕನ್ನಡಿಗರಿಗಾಗಿ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಲು ‘ಅನಿವಾಸಿ’ ಎಂಬ ವೇದಿಕೆಯನ್ನು ರೂಪಿಸಿ, ಕನ್ನಡ ಬರವಣಿಗೆಗೆ ಅವಕಾಶ ಕಲ್ಪಿಸುತ್ತಿದ್ದಾರೆ.
ಇಂಗ್ಲೆಂಡಿನ ಕನ್ನಡ ಸಂಘ-ಸಂಸ್ಥೆಗಳು, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶಿ ನೆಲೆಯಲ್ಲೂ ಚಿಗುರುವಂತೆ ಮಾಡುತ್ತಿವೆ. ಒಳನಾಡು ಹಾಗೂ ವಿದೇಶದ ಕನ್ನಡಿಗರನ್ನು ಸಂಪರ್ಕಿಸುವ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಘಗಳು, ಕನ್ನಡವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಕನ್ನಡ ಪರಂಪರೆಯನ್ನು ಜೀವಂತವಾಗಿಟ್ಟಿವೆ. ವಿಶೇಷವೆಂದರೆ ತಮ್ಮಷ್ಟಕ್ಕೆ ತಾವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಲ್ಲದೆ ಈ ಎಲ್ಲ ಸಂಘಗಳು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳೊಂದಿಗೆ ಕೈಜೋಡಿಸುತ್ತ ಅವರುಗಳ ಸಂಪರ್ಕದೊಂದಿಗೆ ಸಾಕಷ್ಟು ಅಪರೂಪದ ಯೋಜನೆಗಳನ್ನು ಆಗಾಗ ಹಮ್ಮಿಕೊಳ್ಳುತ್ತ ಬಂದಿವೆ.
ಕೃಪೆ: ಕಸ್ತೂರಿ