ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸರ್ವಪ್ರಥಮ ಮತ್ತು ಏಕೈಕ ಸಮಗ್ರ ಯಕ್ಷಗಾನ ಅಭ್ಯಾಸ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಆಶ್ರಯದಲ್ಲಿ ದಶಮಾನೋತ್ಸವ ಹಾಗೂ ದುಬೈ ಯಕ್ಷೋತ್ಸವ ಸಂಭ್ರಮವನ್ನು ಆಚರಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಯು.ಎ.ಇ. ಘಟಕದ ಸಹಯೋಗದೊಂದಿಗೆ ಯಕ್ಷಗಾನ ಪೂರ್ವರಂಗ, ಗಾಯನ ಸೌರಭ ಮತ್ತು ಶಿವಾನಿ ಸಿಂಹವಾಹಿನಿ ಯಕ್ಷಗಾನ ಕಥಾ ಪ್ರಸಂಗ ಅತ್ಯಂತ ವಿಜೃಂಬಣೆಯಿಂದ ಭಕ್ತಿ ಭಾವದೊಂದಿಗೆ ಸಂಪನ್ನವಾಯಿತು.




ರವಿವಾರ ದುಬೈಯ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂ ನ ಭವ್ಯ ವೇದಿಕೆಯಲ್ಲಿ ಬೆಳಗ್ಗೆ 9.00 ಗಂಟೆಯಿಂದ ಅಬ್ಬರ ತಾಳದಿಂದ ಪ್ರಾರಂಭವಾಗಿ ಪುರೋಹಿತರಾದ ಪುತ್ತಿಗೆ ವಾಸುದೇವ ಭಟ್ಟ್ ಮತ್ತು ಅರ್ಚಕರ ತಂಡದವರಿಂದ ಚೌಕಿ ಪೂಜೆ ನಡೆದು ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಯ ಸಂಚಾಲಕರಾದ ಕೊಟ್ಟಿಂಜ ದಿನೇಶ್ ಶೆಟ್ಟಿ ಮತ್ತು ಯಕ್ಷ ಗುರುಗಳಾದ ಶೇಖರ್ ಶೆಟ್ಟಿಗಾರ್ ಹಾಗೂ ಪ್ರಖ್ಯಾತ ಭಾಗವತರಾದ ಯಕ್ಷ ಧ್ರುವ ಸತೀಶ್ ಶೆಟ್ಟಿ ಪಟ್ಲ, ಭಾಗವತ ದೇವಿಪ್ರಸಾದ್ ಆಳ್ವ, ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಹಿಮ್ಮೇಳ ಮುಮ್ಮೇಳದ ಕಲಾವಿದರು ಹಾಗೂ ಸರ್ವ ಸದಸ್ಯರು ಸಿರಿಗಂಧ ಪ್ರಸಾದವನ್ನು ಸ್ವೀಕರಿಸಿದರು.
ಯಕ್ಷಗಾನ ಅಭ್ಯಾಸ ಕೇಂದ್ರದ ಕಿರಿಯ ಹಾಗೂ ಹಿರಿಯ ಮಕ್ಕಳಿಂದ ಪೂರ್ವರಂಗ ನಡೆಯಿತು. ಊರಿನಿಂದ ಬಂದಿರುವ ಚೆಂಡೆ ಮದ್ದಳೆ ವಾದಕ ಚಂದ್ರ ಶೇಖರ ಸರಪಾಡಿ, ಹಾಗೂ ದುಬೈಯ ಚೆಂಡೆ ವಾದಕ ಸವಿನಯ ನೆಲ್ಲಿತೀರ್ಥ ಇವರ ಹಿಮ್ಮೇಳದಲ್ಲಿ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ, ದೇವಿಪ್ರಸಾದ್ ಆಳ್ವ ಮಹಿಳಾ ಭಾಗವತರು ಕಾವ್ಯಶ್ರೀ ಅಜೇರು ಮತ್ತು ಹಿರಿಯ ಯಕ್ಷಗಾನ ಕಲಾವಿದರು ಸುಬ್ರಾಯ ಹೊಳ್ಳ ಕಾಸರಗೋಡು ಅವರು ಯಕ್ಷಗಾನ ಗಾಯನ ಸೌರಭವನ್ನು ನಡೆಸಿಕೊಟ್ಟರು.




ದಶಮನೋತ್ಸವ ಸಂಭ್ರಮ ಸಡಗರದಲ್ಲಿ ದೇವಿ ಭಜಕ ವೃಂದ ಮತ್ತು ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಅಭಿಮಾನಿ ವೃಂದದವರ ಕೊಡುಗೆಯಾಗಿ ದೇವಿಗೆ ಬೆಳ್ಳಿಯ ಕಿರೀಟ, ತುರಾಯಿ ಮತ್ತು ಶಂಖ, ಚಕ್ರಗಳ ಸಮರ್ಪಣೆಯನ್ನು ಊರ, ಪರಊರ ಗಣ್ಯಾತಿ ಗಣ್ಯರು, ಅತಿಥಿ ಅಭ್ಯಾಗತರ ಜೊತೆಯಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿ ಸ್ವೀಕರಿಸುವ ಹತ್ತು ಸಾಧಕರ ಜೊತೆಗೂಡಿ ವೈಭವದ ಶೋಭಾಯಾತ್ರೆಯಲ್ಲಿ ಚೆಂಡೆ, ಪಂಚವಾಧ್ಯ, ಮಂಗಳೂರಿನ ಬ್ಯಾಂಡ್ ವಾದನ, ಯಕ್ಷಗಾನ ವೇಷಧಾರಿಗಳೊಂದಿಗೆ ಸುಮಂಗಲೆಯರು ಪೂರ್ಣ ಕುಂಭ ಕಳಸದೊಂದಿಗೆ ಸಭಾಂಗಣದ ವೇದಿಕೆಗೆ ಮೆರವಣಿಗೆಯಲ್ಲಿ ತರಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮನೋತ್ಸವದ ಸಂಭ್ರಮದಲ್ಲಿ ಯುಎಇಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹತ್ತು ಮಂದಿ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘಟಕರು ಸರ್ವೋತ್ತಮ ಶೆಟ್ಟಿ, ಕಲಾಪೋಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಮಾಜಸೇವೆಯಲ್ಲಿ ಬಾಲಕೃಷ್ಣ ಸಾಲಿಯಾನ್, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಬಿ.ಕೆ. ಗಣೇಶ್ ರೈ, ನಾಟಕ ಕ್ಷೇತ್ರದಲ್ಲಿ ಡೋನಿ ಕೊರೆಯಾ, ಉದ್ಯಮ ಕ್ಷೇತ್ರ: ಪುತ್ತಿಗೆ ವಾಸುದೇವ ಭಟ್, ಭರತನಾಟ್ಯದಲ್ಲಿ ರೂಪಾ ಕಿರಣ್, ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರ ಕನ್ನಡ ಪಾಠಶಾಲೆ, ವಿದೇಶದ ನೆಲದಲ್ಲಿ ಭಜನಾ ಸೇವೆಯಲ್ಲಿ ಶ್ರೀ ರಾಜರಾಜೇಶ್ವರಿ ಭಜಾನಾ ತಂಡ ಯುಎಇ ಮತ್ತು ಯುಎಇಯಲ್ಲಿ ಸಂಸ್ಕೃತಿ ಸೇವೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಊರಿನಿಂದ ಬಂದಿರುವ ಮಹಿಳಾ ಭಾಗವತರು ಕಾವ್ಯಶ್ರೀ ಅಜೇರು, ಭಾಗವತರಾದ ದೇವಿಪ್ರಸಾದ ಆಳ್ವ ತಲಪಾಡಿ ಶ್ರೀ ದೇವಿ ಪಾತ್ರಧಾರಿ ಅರುಣ್ ಕೋಟ್ಯಾನ್, ಚೆಂಡೆ ಮದ್ದಳೆ ವಾದಕರಾದ ಚಂದ್ರಶೇಖರ್ ಸರಪಾಡಿ,ಕಾರ್ಯಕ್ರಮ ನಿರೂಪಕರಾದ ಚೇತನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.




ನಿರ್ದೇಶಕರು ಹಾಗೂ ಮುಖ್ಯ ಗುರುಗಳಾದ ಶೇಖರ್ ಶೆಟ್ಟಿಗಾರ್ ಮತ್ತು ನಾಟ್ಯಗುರು ಶರತ್ ಕುಡ್ಲ ಇವರನ್ನು ಕೂಡಾ ಗಣ್ಯಾತಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಮಹಾ ಪೋಷಕರಾದ ಭೀಮಾ ಜ್ಯುವೆಲ್ಲರಿಯ ನಾಗರಾಜ ರಾವ್, ಟ್ಯಾಕ್ ಕನ್ಸ್ಟ್ರಕ್ಷನ್ ನ ಪ್ರವೀಣ್ ಅಮರನಾಥ್, 365 ಸಂಸ್ಥೆಯ ರಮಾನಂದ ಶೆಟ್ಟಿ, ಅಲ್ ಫರ್ದಾನ್ ಏಕ್ಸೈಂಜ್ ನ ಆತ್ಮಾನಂದ ರೈ, ತಾರಾನಾಥ ರೈ, ಸಂತೋಷ್ ಶೆಟ್ಟಿ ಕಾಪು, ಕಿಶೋರ್ ಕುಮಾರ್, ವಿ ಟೂ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶಿವ ಶಂಕರ ನೆಕ್ರಾಜೆ, ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಪ್ರೇಮ್ ನಾಥ ಶೆಟ್ಟಿ, ಜಯರಾಮ ರೈ ಮಿತ್ರಂಪಾಡಿ, ಅಶೋಕ್ ರೈ ದುಬೈ, ತುಳು ಚಿತ್ರರಂಗದ ನಾಯಕ ನಟ ವಿನೀತ್, ಖ್ಯಾತ ಯೂಟ್ಯೂಬರ್ ಸಚಿನ್ ಶೆಟ್ಟಿ, ಕಲಾ ಪೋಷಕರಾದ ಜೇಮ್ಸ್ ಮೆಂಡೋನ್ಸ, ರಘುರಾಮ ಶೆಟ್ಟಿಗಾರ್, ಹರೀಶ್ ಬಂಗೆರ, ವರದರಾಜ್ ಶೆಟ್ಟಿಗಾರ್, ಮಲ್ಲಿಕಾರ್ಜುನ ಗೌಡ,ಮನೋಹರ ಹೆಗ್ಡೆ, ನಿಹಾಲ್ ಸುಂದರ ಶೆಟ್ಟಿ ಅಬುಧಾಬಿ ಉಪಸ್ಥಿತರಿದ್ದರು.
“ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ – 2025” ಕಾಸರಗೋಡು ಸುಬ್ರಾಯ ಹೊಳ್ಳರಿಗೆ ಪ್ರದಾನ
ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಕೊಡಮಾಡುವ ಪ್ರತಿಷ್ಠಿತ ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ- 2025 ನ್ನು ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದರು ಶ್ರೀ ಕಟೀಲು ಮೇಳದಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಾಲ್ಕು ದಶಕಗಳ ಕಾಲ ತಿರುಗಾಟ ಮಾಡಿರುವ ಸುಬ್ರಾಯ ಹೊಳ್ಳರಿಗೆ ಪ್ರದಾನಿಸಲಾಯಿತು.
ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ. ದಶಕಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ಹಿಮ್ಮೇಳ ಮುಮ್ಮೇಳ ಕಲಾವಿದರಾದ ಭವಾನಿ ಶಂಕರ ಶರ್ಮಾ, ಜೀವನ್. ಎಂ ಕ್ರಾಸ್ತ, ಭಾಸ್ಕರ್ ಪೂಜಾರಿ ನೀರ್ ಮಾರ್ಗ, ಆನಂದ ಸಾಲಿಯಾನ್ ಮತ್ತು ಸ್ವಾತಿ ಶರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ.ಗೆ ಸದಾ ಬೆಂಬಲ ಪ್ರೋತ್ಸಾಹ ನೀಡುತ್ತಾ ಬಂದಿರುವ ಪೋಷಕರು, ಪ್ರಾಯೋಜಕರುಗಳು, ಹಾಗೂ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದಶಮಾನೋತ್ಸವದ ಅಂಗವಾಗಿ ತರಭೇತಿಯಲ್ಲಿರುವ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸ್ಪರ್ಧಿಗಳು ತಮ್ಮ ಹಸ್ತಕೌಶಲ್ಯದಿಂದ ಮೂಡಿಸಿದ್ದ ಪೆನ್ಸಿಲ್ ಡ್ರಾಯಿಂಗ್, ಜಲ ವರ್ಣ, ತೈಲವರ್ಣಗಳಲ್ಲಿ ಮೂಡಿಸಿದ್ದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಬಹುಮಾನಗಳ ತೀರ್ಪುಗಾರಿಕೆಯನ್ನು ಕ್ರಿಯಾತ್ಮಕ ಕಲಾ ನಿರ್ದೇಶಕರು ಬಿ. ಕೆ. ಗಣೇಶ್ ರೈ , ಚಿತ್ರಕಲಾವಿದರಾದ ಮಮತಾ ರವಿ ಕೊಟ್ಯಾನ್, ರಜನೀಶ್ ಅಮೀನ್ ರವರು ನಡೆಸಿಕೊಟ್ಟರು.
ದಿನಪೂರ್ತಿ ನಡೆದ ದಶಮಾನೋತ್ಸವದ ಸಂಭ್ರಮದಲ್ಲಿ ಪಾಲ್ಗೊಳಲು ಅಗಮಿಸಿದವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ, ಸಂಜೆಯ ಚಹಾ ತಿಂಡಿ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಯಕ್ಷಗಾನ ಅಭ್ಯಾಸ ತರಗತಿಯ 150 ಕಿಂತಲೂ ಹೆಚ್ಚಿನ ಕಾರ್ಯಕರ್ತರ ತಂಡ, ಯಕ್ಷಯೋಧಾಸ್, ಕಟೀಲ್ ಕ್ರಿಕೇಟರ್ಸ್, ಬಿರುವೆರ್ ಕುಡ್ಲ ತಂಡದ ಉತ್ಸಾಹಿ ಕಾರ್ಯ ಪಡೆ ತಮ್ಮ ಅಮೂಲ್ಯ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿದರು.





ಮಧ್ಯಾನ 2.00 ಗಂಟೆಯಿಂದ ಯಕ್ಷಗಾನ “ಶಿವಾನಿ ಸಿಂಹವಾಹಿನಿ” ಕಥಾ ಪ್ರಸಂಗ ಅತ್ಯಂತ ಭಕ್ತಿಭಾವದೊಂದಿಗೆ ಕಿರಿಯ ಮಕ್ಕಳು ಹಾಗೂ ವಿವಿಧ ವಯೋಮಿತಿಯ ಅಭ್ಯಾಸ ಕೇಂದ್ರದಲ್ಲಿ ಅಭ್ಯಾಸ ಮಾಡಿ ಪರಿಪಕ್ವತೆಯನ್ನು ಪಡೆದು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ಕಿರಿಯರು ಹಿರಿಯರು ಒಟ್ಟು 72 ಕಲಾವಿದರು 108 ಅದ್ಭುತ ವೇಷಗಳು 7 ಹಿಮ್ಮೇಳ ಕಲಾವಿದರು 3 ಕಾರ್ಯಕರ್ತರು ನೀಡಿರುವ ಪ್ರದರ್ಶನ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂ ಸಾಕ್ಷಿಯಾಯಿತು.
ಹಲವು ತಿಂಗಳುಗಳ ಕಾಲ ಪೂರ್ವಭಾವಿ ತಯಾರಿಯಲ್ಲಿ ಹೊರಹೊಮ್ಮಿದ ದಶಮನೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸಿದೆ.
ಮಂಗಳೂರಿನಿಂದ ಆಗಮಿಸಿ ಚೇತನ್ ಶೆಟ್ಟಿಯವರು ತಮ್ಮ ವಾಕ್ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದು ದಿನ ಪೂರ್ತಿ ಕಾರ್ಯಕ್ರಮ ನಿರೂಪಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ. ಸಂಚಾಲಕರು ಕೊಟ್ಟಿಂಜ ದಿನೇಶ್ ಶೆಟ್ಟಿಯವರು ಮತ್ತು ನಿರ್ದೇಶಕರು ಹಾಗೂ ಮುಖ್ಯ ಗುರುಗಳಾದ ಶೇಖರ ಡಿ ಶೆಟ್ಟಿಗಾರ್ ಕಲಾವಿದರು, ಪೊಷಕರು ಹಾಗೂ ಪ್ರೇಕ್ಷಕವರ್ಗ ಹಾಗು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದರು.
ಬಿ. ಕೆ. ಗಣೇಶ್ ರೈ – ದುಬೈ