ಬರ್ಲಿನ್: ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯ ಮೇಲೆ ನಡೆಸಲಾದ ದಾಳಿಯಲ್ಲಿ ಏಳು ಮಂದಿ ಭಾರತೀಯರು ಗಾಯಗೊಂಡಿದ್ದಾರೆ ಎಂದು ಮೂಲಗಳು ಇಂದು ತಿಳಿಸಿವೆ. ಅವರಲ್ಲಿ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಭಾರತೀಯ ರಾಯಭಾರ ಕಚೇರಿ ಎಲ್ಲಾ ಗಾಯಗೊಂಡ ಭಾರತೀಯರೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿರುವ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ನಡೆದ ಭೀಕರ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.
“ಈ ದಾಳಿಯಲ್ಲಿ ಹಲವಾರು ಮಂದಿ ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಪ್ರಾರ್ಥನೆಗಳು ಸಂತ್ರಸ್ತರೊಂದಿಗೆ ಇದೆ. ಗಾಯಗೊಂಡಿರುವ ಭಾರತೀಯರು ಮತ್ತು ಅವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನಾವು ಮಾಡುತ್ತಿದ್ದೇವೆ” ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಇಸ್ಲಾಂ ವಿರೋಧಿ ಅಭಿಪ್ರಾಯಗಳನ್ನು ಹೊಂದಿದ್ದ ವ್ಯಕ್ತಿಯೋರ್ವ ಈ ಕೃತ್ಯವನ್ನಸಗಿದ್ದು, ಈತ ಮುಸ್ಲಿಮರ ವಿರುದ್ಧ ಮತ್ತು ಜರ್ಮನಿಯ ವಲಸೆ ನೀತಿಯ ವಿರುದ್ಧ ಕೋಪಗೊಂಡು ಈ ಕೃತ್ಯವನ್ನೆಸಗಿದ್ದಾನೆ ಎಂದು ತಿಳಿದು ಬಂದಿದೆ.