ಬೆಂಗಳೂರು: ಹೊಸದಾಗಿ ಆರಂಭವಾಗಿರುವ ʼglobalkannadiga.comʼ ವೆಬ್ಸೈಟ್ ವಿಶ್ವದ ಎಲ್ಲಾ ಕನ್ನಡಿಗರಿಗೂ ತಲುಪುವ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾಭಾರತಿಯು ಅನಿವಾಸಿ ಕನ್ನಡಿಗರಿಗಾಗಿಯೇ ಆರಂಭಿಸಿರುವ ವಿನೂತನ ʼglobalkannadiga.comʼಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.





ಈ ವೆಬ್ಸೈಟ್ ವಿಶ್ವದ ಮೂಲೆಮೂಲೆಯಲಿರುವ ಕನ್ನಡಿಗರನ್ನು ತಲುಪಲಿ. ಅವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಅವರನ್ನೆಲ್ಲ ಒಟ್ಟು ಸೇರಿಸುವ ಒಂದು ವೇದಿಕೆಯಾಗಿ ಮೂಡಿಬರಲಿ ಎಂದು ಆಶಿಸಿದರು.
ವಾರ್ತಾಭಾರತಿಯ 22ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿದ ಸಿಎಂ
ಇದೇ ವೇಳೆ ವಾರ್ತಾಭಾರತಿ ಕನ್ನಡ ದೈನಿಕದ 22ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿ ಓದುಗರ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಅಂಬಿಕಾ ಮಂಡ್ಯ ಹಾಗೂ ಮಂಜುನಾಥ್ ಕೊಪ್ಪಳ ಅವರಿಗೆ ಸಿಎಂ ಸಿದ್ದರಾಮಯ್ಯ ವಿಶೇಷಾಂಕದ ಮೊದಲ ಪ್ರತಿಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ವಾರ್ತಾಭಾರತಿಯು ಜನರಿಗೆ ಸತ್ಯ ತಿಳಿಸುವ, ಧ್ವನಿ ಇಲ್ಲದವರ ಧ್ವನಿಯಾಗಿದೆ. 22 ವರ್ಷಗಳಲ್ಲಿ ವಾರ್ತಾಭಾರತಿ ಬಹಳಷ್ಟು ಬೆಳೆದಿದೆ. ನಾಡಿನ ಜನತೆಗೆ ಸತ್ಯವನ್ನು ತಲುಪಿಸುವ ಕೆಲಸ ಮಾಡುತ್ತಿದೆ. ನಾನು ತಪ್ಪದೇ ಪ್ರತಿ ದಿನ ವಾರ್ತಾಭಾರತಿ ಓದುತ್ತೇನೆ ಎಂದು ಹೇಳಿದರು.
“ಸಂತೋಷದಿಂದ ವಾರ್ತಾಭಾರತಿಯ ವಾರ್ಷಿಕ ವಿಶೇಷಾಂಕ ಬಿಡುಗಡೆ ಮಾಡಿದ್ದೇನೆ. ವಾರ್ತಾಭಾರತಿಯು ಜನರಿಗೆ ಸತ್ಯ ತಿಳಿಸುವ, ಧ್ವನಿ ಇಲ್ಲದವರ ಧ್ವನಿಯಾಗಿದೆ. 22 ವರ್ಷಗಳಲ್ಲಿ ವಾರ್ತಾಭಾರತಿ ಬಹಳಷ್ಟು ಬೆಳೆದಿದೆ. ನಾಡಿನ ಜನತೆಗೆ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಅದರಲ್ಲಿ ಬರುವ ವಿಶೇಷ ಲೇಖನಗಳು, ಸಮಾಜದ ಸಮಸ್ಯೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಪರವಾಗಿದೆಯೋ ಇಲ್ಲವೋ ಎಂಬುವುದನ್ನು ತಿಳಿಸುತ್ತದೆ” ಎಂದರು.







“ಪತ್ರಿಕೆ ಸತ್ಯ ಹಾಗೂ ವಸ್ತು ನಿಷ್ಠವಾಗಿ ಇರಬೇಕು. ಸಮಾಜದಲ್ಲಿ ಕರ್ಮ ಸಿದ್ಧಾಂತ ಇದೆ. ಅದನ್ನು ನಿವಾರಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇತ್ತು. ಶಿಕ್ಷಣದಿಂದ ವಂಚಿತರಾದ ಬಹುಸಂಖ್ಯಾತರು ಇದ್ದಾರೆ. ಅವರ ಧ್ವನಿಯಾಗಿ ವಾರ್ತಾಭಾರತಿ ಕೆಲಸ ಮಾಡುತ್ತಿದೆ. ಇನ್ನೂ ಜನಪರ ಹಾಗೂ ಸಮಾಜಪರವಾಗಿ ಕೆಲಸ ಮಾಡಿ. ಸಮ ಸಮಾಜ ನಿರ್ಮಾಣ ಇನ್ನೂ ಆಗಿಲ್ಲ. ನಾವು ಮನುಷ್ಯತ್ವ ಇರುವ ಸಮಾಜ ನಿರ್ಮಾಣ ಮಾಡಬೇಕು. ಮನುಷ್ಯರು ಪರಸ್ಪರ ಪ್ರೀತಿಸಬೇಕು. ದ್ವೇಷ ಮಾಡಬಾರದು. ಮಾಧ್ಯಮಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಲಿ” ಎಂದು ಸಿಎಂ ಹೇಳಿದರು.
ಸಂಪಾದಕೀಯ ಸಂಗ್ರಹವು ಉತ್ತಮವಾಗಿದೆ. ಸಂಪಾದಕೀಯ ವಸ್ತು ನಿಷ್ಠವಾಗಿರಬೇಕು. ಮಾಧ್ಯಮಗಳು ವಸ್ತು ನಿಷ್ಠವಾಗಿರದಿದ್ದರೆ ಕಷ್ಟವಾಗುತ್ತದೆ. ಸಂಪಾದಕೀಯಗಳು ಇನ್ನೂ ಪ್ರಖರವಾಗಿರಲಿ ಎಂದರು.




ಇದೇ ವೇಳೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಅಂಕಣ ‘ಅನುಗಾಲ’ದ ಸಂಗ್ರಹ ‘ನಿಜದ ಸೂಜಿಮೊನೆ’ ಕೃತಿಯನ್ನು ಕೂಡ ಬಿಡುಗಡೆ ಮಾಡಲಾಯಿತು. ಅಂಕಣಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ ಎಂದು ‘ನಿಜದ ಸೂಜಿಮೊನೆ’ ಕೃತಿ ಕುರಿತು ಸಿಎಂ ಪ್ರತಿಕ್ರಿಯಿಸಿದರು.
ಕರ್ನಾಟಕದ ಸಾಮಾಜಿಕ ಆರೋಗ್ಯ ಕಾಪಾಡುತ್ತಿರುವ ವಾರ್ತಾಭಾರತಿ: ನಟ ಪ್ರಕಾಶ್ ರಾಜ್
ಈ ಸಂದರ್ಭದಲ್ಲಿ ವಾರ್ತಾಭಾರತಿಯ ಸಂಪಾದಕೀಯಗಳ ಸಂಗ್ರಹವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬಿಡುಗಡೆ ಮಾಡಿದರು.
ಇವತ್ತಿನ ಕಾಲದಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದೆ. ವಾರ್ತಾಭಾರತಿಯ ಸಂಪಾದಕೀಯಗಳ ಸಂಗ್ರಹವನ್ನು ಬಿಡುಗಡೆ ಮಾಡುವುದು ನನಗೆ ಅತ್ಯಂತ ಸಂಸತದ ವಿಷಯ. ವಾರ್ತಾಭಾರತಿಯ ಸಂಪಾದಕೀಯಗಳನ್ನು ಓದುವುದೇ ಒಂದು ವಿಶೇಷ ಅನುಭವ. ವಾರ್ತಾಭಾರತಿಯು ರಾಜ್ಯದ ಸಾಮಾಜಿಕ ಆರೋಗ್ಯ ಕಾಪಾಡುತ್ತಿರುವ ಮಾಧ್ಯಮ ಆಗಿದೆ. ಈ ಮಾಧ್ಯಮ ಇದೇ ರೀತಿ ನೇರ ನಿಷ್ಠುರವಾಗಿ ಮುಂದುವರೆಯಲಿ. ಜನರ ಪರವಾಗಿ ಕೆಲಸ ಮಾಡಲಿ ಎಂದು ನಟ ಪ್ರಕಾಶ್ ರಾಜ್ ಶುಭ ಹಾರೈಸಿದರು.
ರಾಜ್ಯ ದಲ್ಲಿ ಕನ್ನಡಿಗರ ಧ್ವನಿಯಾಗಿ ಬೆಳೆಯುತ್ತಿರುವ ವಾರ್ತಾಭಾರತಿ: ದಿನೇಶ್ ಗುಂಡೂರಾವ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವಾರ್ತಾಭಾರತಿ ಪತ್ರಿಕೆಯವರು ಅನಿವಾಸಿ ಕನ್ನಡಿಗರಿಗೆ ಜಗತ್ತಿನ ಎಲ್ಲ ಭಾಗಗಳ ಸುದ್ದಿಗಳನ್ನು ಕನ್ನಡದಲ್ಲಿ ಮುಟ್ಟಿಸಲು “ಗ್ಲೋಬಲ್ ಕನ್ನಡಿಗ” ಎಂಬ ವೆಬ್ ಸೈಟ್ ಅನ್ನು ಇವತ್ತು ಲೋಕಾರ್ಪಣೆ ಮಾಡಿದ್ದಾರೆ. ಅವರ ಬಳಗಕ್ಕೆ ಶುಭ ಹಾರೈಸಿದರು.
ಪ್ರಗತಿಪರ ಹಾಗೂ ತಾರ್ಕಿಕ ವಿಷಯಗಳನ್ನು ಮಂಡಿಸುವಲ್ಲಿ ವಾರ್ತಾಭಾರತಿ ಸದಾ ಮುಂಚೂಣಿಯಲ್ಲಿರುತ್ತದೆ. ಅಲ್ಲದೆ, ನೈಜತೆಗೆ ಹತ್ತಿರವಾಗಿರುವಂತೆ ಸುದ್ದಿಗಳನ್ನು ನೀಡುವುದು ನಮ್ಮ ವಾರ್ತಾಭಾರತಿ. ವ್ಯಾಪಕವಾಗಿ ಬೆಳೆದಿರುವ ವಾರ್ತಾಭಾರತಿ, ಇಡೀ ರಾಜ್ಯ ದಲ್ಲಿ ಕನ್ನಡಿಗರ ಧ್ವನಿಯಾಗಿ ಬೆಳೆಯುತ್ತಿದೆ. ಇದೇ ರೀತಿ ವಿಶ್ವಮಟ್ಟದಲ್ಲಿ ಕನ್ನಡಿಗರಿಗೆ globalkannadiga.com ಮೂಲಕ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಶ್ಲಾಘನೀಯ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕ ಶಿವಲಿಂಗೇಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ನಿರ್ದೇಶಕ ಯಾಸಿನ್ ಮಲ್ಪೆ ಉಪಸ್ಥಿತರಿದ್ದರು.