ವಿಶೇಷ ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ದುಬೈ: ದುಬೈಯ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್‌ಶಿಪ್, ಕಸ್ಟಮ್ಸ್ ಅಂಡ್ ಪೋರ್ಟ್ಸ್ ಸೆಕ್ಯೂರಿಟಿ(The Federal Authority for Identity, Citizenship, Customs and Ports Security-ICP) ನೂತನವಾಗಿ ಒಂದು ವಿಶೇಷ ವಿನ್ಯಾಸದ ಎಲೆಕ್ಟ್ರಿಕ್ ಕಾರನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದೆ.
ಇದು ಅಂತಿಂಥ ಕಾರಲ್ಲ, ಬದಲಾಗಿ AI ಸೇರಿದಂತೆ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿರುವ ಕಾರು. ಇದರ ಕೆಲಸ ವೀಸಾ ಮತ್ತು ವಾಸಸ್ಥಳ (ರೆಸಿಡೆನ್ಸಿ) ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆಹಚ್ಚುವುದಾಗಿದೆ.
ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ಜಿಟೆಕ್ಸ್(Gitex Global 2025) ಮೇಳದಲ್ಲಿ ICP ‘ಸ್ಮಾರ್ಟ್ ತಪಾಸಣಾ ಕಾರನ್ನು’ ಅನಾವರಣಗೊಳಿಸಿದೆ.
AI ತಂತ್ರಜ್ಞಾನ ಬಳಸಿ ತಯಾರಿಯುವ ಈ ಹೊಸ ವಿನ್ಯಾಸದ ಕಾರು, ಮೊದಲು ದುಬೈಯಲ್ಲಿ ರಸ್ತೆಗಿಳಿಯಲಿದ್ದು, ದುಬೈಯ ನಂತರ ಯುಎಇಯಾದ್ಯಂತ ಈ ಕಾರಿನ ಓಡಾಟ ಆರಂಭವಾಗಲಿದೆ. ವೀಸಾ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಸ್ಮಾರ್ಟ್ ಕಾರು ಬಳಕೆಯಾಗಲಿದ್ದು, 2026ರಲ್ಲಿ ಈ ಕಾರು ಕಾರ್ಯಾಚರಣೆಗಿಳಿಯಲು ಈಗಾಗಲೇ ಸಿದ್ಧತೆ ಕಾರ್ಯ ಅಂತಿಮಗೊಂಡಿದೆ.
ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿರುವ ಈ ಸ್ಮಾರ್ಟ್ ಕಾರು, ತನ್ನದೇ ಆದ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. AI ಬಳಸಿಕೊಂಡು ನಿರ್ಮಿಸಲಾಗಿರುವ ಈ ಕಾರು ದುಬೈಯ ಬೀದಿಗಳಲ್ಲಿ ಗಸ್ತು ತಿರುಗಲು ಮತ್ತು ವೀಸಾ ಉಲ್ಲಂಘನೆ, ಅಕ್ರಮವಾಗಿ ನೆಲೆಸಿರುವವರ ಪತ್ತೆ ಹಚ್ಚುವುದೇ ಇದರ ಗುರಿ.
ಕಾರಿನಲ್ಲಿದೆ ಆರು ವಿಶೇಷ ಕ್ಯಾಮೆರಾಗಳು
ಈ ಸ್ಮಾರ್ಟ್ ಕಾರಿನಲ್ಲಿ ಆರು ಹೈ-ರೆಸಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದು 360-ಡಿಗ್ರಿ ಕ್ಯಾಪ್ಚರ್(ಸೆರೆ ಹಿಡಿಯುವ) ಸಾಮರ್ಥ್ಯದೊಂದಿಗೆ ವಿವಿಧ ದಿಕ್ಕುಗಳ 10 ಮೀಟರ್ ದೂರದವರೆ ಇರುವ ಜನರ ಮುಖಗಳನ್ನು ಸೆರೆಹಿಡಿಯುತ್ತವೆ. ಇದರಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯಾಗಲಿದೆ. AIಯಿಂದಾಗಿ ಜನರ ಮುಖವನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದು ವಿಶೇಷ ಡ್ಯಾಶ್‌ಬೋರ್ಡ್‌ಗೆ ಸಂಪರ್ಕಗೊಂಡಿದ್ದು, ಅಲ್ಲಿ ಹೀಟ್‌ಮ್ಯಾಪ್‌ಗಳ ಮೂಲಕ ಅಕ್ರಮವಾಗಿರುವ ಜನರನ್ನು ಪತ್ತೆ ಹಚ್ಚಿ, ಎಚ್ಚರಿಕೆಯ ಸಂದೇಶವನ್ನು ಕಾರಿನೊಳಗಿರುವ ತಪಾಸಣಾ ಅಧಿಕಾರಿಗೆ ತಲುಪಿಸುವ ಮೂಲಕ ಕಾರ್ಯ ನಡೆಸಲಿದೆ.
ಈ ಕಾರು ಅತ್ಯಂತ ಹೈ-ಟೆಕ್ ಆದರೂ ಸಂಪೂರ್ಣ ಸ್ವಯಂಚಾಲಿತವಲ್ಲ. ಇದನ್ನು ತಪಾಸಣಾ ಅಧಿಕಾರಿಗಳು ಚಾಲನೆ ಮಾಡಲಿದ್ದು, ಇವರ ಗಸ್ತು ತಿರುಗಾಟದ ವೇಳೆ ಪರದೆ ಮೇಲೆ ಕಾಣುವ ಜನರ ಮಾಹಿತಿಯನ್ನು ಅವರು ಪರಿಶೀಲಿಸುತ್ತಾರೆ. ಈ ವೇಳೆ ವೀಸಾ ಇಲ್ಲದವರು, ಅಕ್ರಮ ನೆಲೆಸಿರುವವರ ಗುರುತು ಪತ್ತೆ ಹಚ್ಚಿ, ಈ ಬಗ್ಗೆ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿತ್ತೆ. ಬಳಿಕ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ.
2026ರ ಆರಂಭದಲ್ಲಿ ರಸ್ತೆಗಿಳಿಯಲಿದೆ ಈ ಕಾರು
2026ರ ಆರಂಭದಲ್ಲಿ ಈ ಕಾರಿನ ಮೊದಲ ಬಳಕೆ ದುಬೈಯಲ್ಲಿ ಪ್ರಾರಂಭವಾಗುತ್ತದೆ. ಬಳಿಕ ಅದನ್ನು ಇತರ ಎಮಿರೇಟ್‌ಗಳಿಗೂ ವಿಸ್ತರಿಸಲಾಗುತ್ತದೆ. ಈ ಕಾರು ಯಾರಾದರೂ ವೀಸಾ ಅಥವಾ ವಾಸಸ್ಥಳ (ರೆಸಿಡೆನ್ಸಿ) ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆಹಚ್ಚಿದರೆ, ಅಧಿಕಾರಿಗಳು ಕಾರಿನಿಂದ ಇಳಿದು ಆ ವ್ಯಕ್ತಿಯ ದಾಖಲೆಗಳನ್ನು ಪರಿಶೀಲಿಸಿ, ತಪಾಸಣೆ ನಡೆಸಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತಾರೆ.
32 ಸಾವಿರಕ್ಕೂ ಹೆಚ್ಚು ವೀಸಾ ಉಲ್ಲಂಘನೆ ಪ್ರಕರಣಗಳು ಪತ್ತೆ
ICP ಯ ಮಾಹಿತಿ ಪ್ರಕಾರ, 2025ರ ಮೊದಲ ತ್ರೈಮಾಸಿಕದಲ್ಲೇ 32,000 ಕ್ಕೂ ಹೆಚ್ಚು ವೀಸಾ ಉಲ್ಲಂಘನೆ ಪ್ರಕರಣಗಳು (ಉದಾಹರಣೆಗೆ ಅವಧಿ ಮೀರಿದ ವಾಸ ಅಥವಾ ಅಕ್ರಮ ಉದ್ಯೋಗ) ಪತ್ತೆಯಾಗಿದೆ. ಮುಂದೆ ಈ ಸ್ಮಾರ್ಟ್ ಕಾರು ತಪಾಸಣಾ ಕಾರ್ಯ ಯಶಸ್ವಿಯಾದರೆ, ಈ ಕಾರು ಅಕ್ರಮ ವಲಸಿಗರ ಪತ್ತೆ ಹಚ್ಚುವ ವೇಗವನ್ನು ಹೆಚ್ಚಿಸಲಿದೆ ಹಾಗು ಇನ್ನಿತರ ಪರಿಶೀಲನೆಗೆ ಬೇಕಾದ ಸಮಯವನ್ನು ಕಡಿಮೆಮಾಡಲಿದೆ, ಜೊತೆಗೆ ತನಿಖಾ ಪ್ರಕ್ರಿಯೆಯನ್ನು ವೇಗಗೊಳಿಸಲಿದೆ.


