ಬಹರೈನ್: ನೊಂದ, ಅಶಕ್ತ ಹಾಗು ಬಡ ಯಕ್ಷಗಾನ ಕಲಾವಿದರ ಕಲ್ಯಾಣಕ್ಕಾಗಿಯೇ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ದೇಶ ವಿದೇಶಗಳಲ್ಲಿ ನೂರಾರು ಘಟಕಗಳನ್ನು ಹೊಂದಿದ್ದು, ಅದರ ಬಹರೈನ್ ಮತ್ತು ಸೌದಿ ಘಟಕವು ಇದೀಗ ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.

ಈ ಐದನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ರೂಪುರೇಷೆಗಳನ್ನು ಹಾಕಿಕೊಂಡಿದ್ದು “ಪಂಚ ವಾರ್ಷಿಕ ಪಟ್ಲ ಯಕ್ಷ ವೈಭವ 2025” ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಅಕ್ಟೋಬರ್ 31ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಯಿಂದ ಕನ್ನಡ ಸಂಘ ಬಹರೈನ್‌ನ ಆಶ್ರಯದಲ್ಲಿ ಕನ್ನಡ ಭವನದ ಸಭಾಂಗಣದಲ್ಲಿ ನಾಡಿನ ಮೇರು ಕಲಾವಿದರು ಹಾಗು ದ್ವೀಪದ ಯಕ್ಷ ಕಲಾವಿದರುಗಳ ಸಮಾಗಮದೊಂದಿಗೆ “ಶ್ರೀ ದೇವಿ ಮಹಾತ್ಮೆ” ಎನ್ನುವ ಯಕ್ಷಗಾನ ಪ್ರಸಂಗವು ರಂಗದಲ್ಲಿ ಪ್ರದರ್ಶನಗೊಳ್ಳಲಿದೆ.
“ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಬಹರೈನ್-ಸೌದಿ ಘಟಕದ ಅಧ್ಯಕ್ಷ ದೀಪಕ್ ಪೇಜಾವರ ಅಧ್ಯಕ್ಕ್ಷತೆಯಲ್ಲಿ ಜರಗುವ ಈ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕರೂ ಪ್ರಸಿದ್ಧ ಭಾಗವತರೂ ಆಗಿರುವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರು ಪಾಲ್ಗೊಂಡು ತಮ್ಮ ಕಂಚಿನ ಕಂಠದ ಭಾಗವತಿಕೆಯಿಂದ ದ್ವೀಪದ ಯಕ್ಷಪ್ರೇಮಿಗಳನ್ನು ರಂಜಿಸಲಿದ್ದಾರೆ. ಅಲ್ಲದೆ ನಾಡಿನ ಯಕ್ಷಲೋಕದ ಮೇರು ಕಲಾವಿದರಾದ ದಿವಾಕರ ರೈ, ಮನೀಶ್ ಪಾಟಾಳಿ, ಮಾನ್ಯ ಸಂತೋಷ್, ನರೇಂದ್ರ ಸುವರ್ಣ, ಸೂರಜ್ ಆಚಾರ್ಯ, ಮಯೂರ ನಾಯ್ಕ ಮತ್ತು ಶಿವಾನಂದ ಶೆಟ್ಟಿ ಪೆರ್ಲ ಮುಂತಾದವರು ಹಿಮ್ಮೇಳ ಹಾಗು ಮುಮ್ಮೇಳದಲ್ಲಿ ತಮ್ಮ ಕಲಾನೈಪುಣ್ಯತೆಯನ್ನು ಮೆರೆಯಲಿದ್ದು, ದ್ವೀಪದ ಯಕ್ಷಕಲಾವಿದರುಗಳು ತಮ್ಮ ಪ್ರತಿಭೆಯನ್ನು ರಂಗದಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಈ ಪಂಚ ವಾರ್ಷಿಕ ಪಟ್ಲ ಯಕ್ಷ ವೈಭವವು ದ್ವೀಪದ ಯಕ್ಷಲೋಕದ ಇತಿಹಾಸದಲ್ಲಿ ಇನ್ನೊಂದು ಮೈಲುಗಲ್ಲಾಗಲಿದ್ದು ,ಈ ಸಾಂಸ್ಕ್ರತಿಕ ವೈಭವಕ್ಕೆ ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೂ ಪ್ರವೇಶ ಉಚಿತವಾಗಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಮೋಹನ್ ಎಡನೀರ್ ಇವರನ್ನು ದೂರವಾಣಿ ಸಂಖ್ಯೆ 00973-36729116 ಮೂಲಕ ಸಂಪರ್ಕಿಸಬಹುದು.
ವರದಿ-ಕಮಲಾಕ್ಷ ಅಮೀನ್


