ಸೌದಿ ಅರೇಬಿಯಾಸೌದಿಯ ಖ್ಯಾತ ಉದ್ಯಮಿ, ಅನಿವಾಸಿ ಕನ್ನಡಿಗ ಝಕರಿಯಾ ಜೋಕಟ್ಟೆಗೆ...

ಸೌದಿಯ ಖ್ಯಾತ ಉದ್ಯಮಿ, ಅನಿವಾಸಿ ಕನ್ನಡಿಗ ಝಕರಿಯಾ ಜೋಕಟ್ಟೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು: 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಅಧಿಕೃತ ಪಟ್ಟಿಯನ್ನು ರಾಜ್ಯ ಸರಕಾರ ಪ್ರಕಟ ಮಾಡಿದೆ. ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಸೌದಿ ಅರೇಬಿಯಾ ಜುಬೈಲ್ ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕ ಹಾಗೂ ಮಂಗಳೂರಿನ ಪ್ರತಿಷ್ಟಿತ ಸಂಸ್ಥೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಅವರನ್ನು “ಅನಿವಾಸಿ ಕನ್ನಡಿಗ” ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಡು ಬಡತನದ ಕುಟುಂಬದಿಂದ ಬಂದು ತನ್ನ ಅವಿರತ ಪರಿಶ್ರಮದ ಮೂಲಕ ಸಾಧನೆಯ ಸಾಮ್ರಾಜ್ಯ ಕಟ್ಟಿದ ಯಶಸ್ವಿ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ. ಸಾವಿರಾರು ಕನ್ನಡಿಗರಿಗೆ ಉದ್ಯೋಗ, ಕರ್ನಾಟಕ ಮತ್ತು ಸೌದಿ ಅರೇಬಿಯಾದಲ್ಲಿ ಸಮಾಜ ಸೇವೆ, ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ  ಮೂಲಕ ಝಕರಿಯಾ ಜೋಕಟ್ಟೆ ಇಂದು ಕರ್ನಾಟಕ ಮತ್ತು ಮಧ್ಯಪ್ರಾಚ್ಯದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದಾರೆ.

1958 ಮೇ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಜೋಕಟ್ಟೆಯ ತೋಕೂರಿನಲ್ಲಿ ಬಜ್ಪೆಗುತ್ತು ಹಾಜಿ ಬಿ. ಶೇಕುಂಞಿ ಹಾಗೂ ಖತೀಜಮ್ಮ ದಂಪತಿ ಪುತ್ರರಾಗಿ ಜನಿಸಿದರು. 5 ಮಕ್ಕಳಲ್ಲಿ ಹಿರಿಯರಾದ ಝಕರಿಯಾ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜೋಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ಬಳಿಕ ಪ್ರೌಢ ಶಿಕ್ಷಣವನ್ನು ಮೊಟಕು ಗೊಳಿಸಿ ಬೀದಿ ಬೀದಿಗಳಲ್ಲಿ ಬೆಲ್ಲ ವ್ಯಾಪಾರ, ವೆಲ್ಡಿಂಗ್ ಕೆಲಸ, ಗೋಣಿ ಹೊರುವ ಕಾರ್ಮಿಕನಾಗಿ, ವಿದೇಶದಲ್ಲಿ 28ನೇ ಮಹಡಿಗೆ ಸಿಮೆಂಟು ಹೊತ್ತು ಶ್ರಮಪಟ್ಟು ದುಡಿದಿದ್ದಾರೆ.

ಹಲವಾರು ವರ್ಷಗಳ ಅವರ ಕಠಿಣ ಪರಿಶ್ರಮ, ತ್ಯಾಗ ಹಾಗೂ ಅನುಭವದ ಫಲವಾಗಿ 2008ರಲ್ಲಿ ಮೂವರು ಕೆಲಸಗಾರರನ್ನು ಇಟ್ಟುಕೊಂಡು ಹಿರಿಯ ಪುತ್ರ ಝಹೀರ್ ರನ್ನೂ ಸೇರಿಸಿಕೊಂಡು ಸೌದಿ ಅರೇಬಿಯಾದ ಜುಬೈಲ್ ನಲ್ಲಿ “ಅಲ್ ಮುಝೈನ್” ಮೇನ್ ಪವರ್ ಕಂಪೆನಿಯನ್ನು ಸ್ಥಾಪಿಸಿದರು. ಅವಿರತ ದುಡಿಮೆಯಿಂದ ಹಂತಹಂತವಾಗಿ ಬೆಳೆದ ಅಲ್ ಮುಝೈನ್ ಕಂಪೆನಿಯಲ್ಲಿ ಪ್ರಸ್ತುತ 8 ಸಾವಿರ ಉದ್ಯೋಗಿಗಳಿದ್ದು, 2027ಕ್ಕೆ 10 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

ಅಲ್ ಮುಝೈನ್ ಬಳಿಕ ಹತ್ತಾರು ಬೇರೆ ಬೇರೆ ಕಂಪೆನಿಗಳನ್ನು ಸ್ಥಾಪಿಸಿದ ಝಕರಿಯಾ ಅವರು, ಸೌದಿ ಅರೇಬಿಯಾ ಅಲ್ಲದೇ ಬಹರೈನ್, ಯುಎಇ, ಒಮಾನ್, ಖತರ್, ಕುವೈತ್, ಲಂಡನ್ ಹಾಗೂ ಭಾರತಕ್ಕೆ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಶಿಕ್ಷಣ ಸಂಸ್ಥೆಗೂ ಕೈಯಾಡಿಸಿರುವ ಅವರು ಅಲ್ ಕೋಬರ್ ನಲ್ಲಿ ಯೇನೆಪೋಯ ಸಹಯೋಗದೊಂದಿಗೆ ಅಂತಾರಾಷ್ಟ್ರ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದು, ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಹೊಂದುವುದು ಮುಂದಿನ ಯೋಜನೆಯಾಗಿದೆ. ಎಐ ಇನ್ನೋವೇಶನ್ ಯೋಜನೆ, ಕರಾವಳಿಯ ಅಭಿವೃದ್ಧಿ ಗುರಿಯನ್ನೂ ಹೊಂದಿದ್ದಾರೆ.

ಪ್ರಸ್ತುತ ಮಂಗಳೂರು ಬೋಳಾರ್ ನಿವಾಸಿಯಾಗಿರುವ ಝಕರಿಯಾ ಜೋಕಟ್ಟೆ, ಪತ್ನಿ ಹಝ್ರ ಝಕರಿಯಾ, ಮೂವರು ಪುತ್ರರಾದ ಝಹೀರ್, ನಝೀರ್ ಮತ್ತು ಝಾಹಿದ್ ಅವರು ವಿದೇಶದಲ್ಲಿ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಹಿದಾಯ ಫೌಂಡೇಶನ್, ಝರಾ ಫ್ಯಾಮಿಲಿ ಚಾರಿಟಿ ಟ್ರಸ್ಟಿನ ಅಧ್ಯಕ್ಷರಾಗಿರುವ ಝಕರಿಯಾ ಜೋಕಟ್ಟೆ, ರಾಜ್ಯದ ಹಲವಾರು ಸಂಘಸಂಸ್ಥೆಗಳ ನಿರ್ದೇಶಕ, ಸಲಹೆಗಾರ, ಪ್ರಾಯೋಜಕರಾಗಿ ಸಹಸ್ರಾರು ಬಡ, ಅಶಕ್ತರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಾಗೂ ಉದ್ಯಮದ ಯಶಸ್ವಿಗಾಗಿ ದೇಶ-ವಿದೇಶಗಳಿಂದ ಹಲವಾರು ಪ್ರಶಸ್ತಿ ಸನ್ಮಾನಗಳು ಅರಸಿ ಬಂದಿವೆ.

ಪ್ರಶಸ್ತಿಯು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಸಮಾಜದ ಹೊರೆಯನ್ನೂ ಹೆಚ್ಚಿಸಿದೆ: ಝಕರಿಯಾ ಜೋಕಟ್ಟೆ

“ಸಮಾಜದಲ್ಲಿ ಸೇವಗೈಯುವಾಗ ಪ್ರಶಸ್ತಿಯನ್ನು ನಾನೆಂದೂ ಬಯಸಿಲ್ಲ. ಅದಕ್ಕಾಗಿ ಅರ್ಜಿಯೂ ಹಾಕಿಲ್ಲ. ನನ್ನ ಕೆಲ ಸ್ನೇಹಿತರು ನನಗೆ ತಿಳಿಯದೇ ಇದರ ಹಿಂದೆ ಕೆಲಸ ಮಾಡಿ ಅಚ್ಚರಿಯ ಕೊಡುಗೆ ನೀಡಿದ್ದಾರೆ. ನಾನು ಬಡತನದಿಂದಲೇ ಬೆಳೆದು ಮೇಲೆ ಬಂದವ. ಅಶಕ್ತರ ನೋವು ಗೊತ್ತಿದೆ. ಅದಕ್ಕಾಗಿ ಸದಾ ಸ್ಪಂದಿಸುತ್ತೇನೆ. ಪ್ರಶಸ್ತಿ ಪ್ರಕಟವಾಗುವಾಗ ನಾನು ಸೌದಿ ಅರೇಬಿಯಾದಲ್ಲಿದ್ದೇನೆ. ಈಗಲೂ ಅಲ್ಲಿರುವೆ. ನವಂಬರ್ 1ರಂದು ನನ್ನ ಸ್ನೇಹಿತರೋರ್ವರ ಮದುವೆ ಸಮಾರಂಭವು ಜೈಪುರದಲ್ಲಿ ನಡೆಯಲಿದ್ದು, ಅದಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾಗ ಪ್ರಶಸ್ತಿಯ ಪ್ರಕಟಣೆ ದಿಗ್ಭ್ರಮೆ ಹುಟ್ಟಿಸಿದೆ. ಪ್ರಶಸ್ತಿಯ ಗೌರವವು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಸಮಾಜದ ಹೊರೆಯನ್ನೂ ಹೆಚ್ಚಿಸಿದೆ. ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ”.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories