ಅಟ್ಲಾಂಟ: ರವಿವಾರ (ನ. 2) ಅಟ್ಲಾಂಟ ನಗರದ ನೃಪತುಂಗ ಕನ್ನಡ ಕೂಟದ ವತಿಯಿಂದ ಕನ್ನಡಿಗರು ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.
ಬೆಳಿಗ್ಗೆ 9.30ರಿಂದ ರಾತ್ರಿ 8 ಗಂಟೆಯವರೆಗೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರಾದ ನಮಿತಾ ರಾವ್ ಹಾಗೂ ವಿಕ್ರಂ ಸೂರಿ ಅವರು ಸ್ಧಳೀಯ ಪ್ರತಿಭೆಗಳೊಂದಿಗೆ “ಮೋಹಿನಿ ಭಸ್ಮಾಸುರ” ನೃತ್ಯ ನಾಟಕವನ್ನು ಪ್ರದರ್ಶಿಸಿದರು. ಹಾಗೆಯೇ ಬೆಂಗಳೂರಿನಿಂದ ಆಗಮಿಸಿದ್ದ ಅಲೋಕ್ (All OK) ಹಾಗೂ ದಿವ್ಯಾ ರಾಮಚಂದ್ರ ಅವರು ತಮ್ಮ ವಿಷೇಶ ಗಾಯನದಿಂದ ಕನ್ನಡಿಗರನ್ನು ಖುಷಿಯಿಂದ ಕುಣಿಸಿದರು.
ಸ್ಥಳೀಯ ಕನ್ನಡಿಗರು ಕರ್ನಾಟಕದ ವಿವಿಧ ಪ್ರದೇಶಗಳ ವೇಷಭೂಷಣಗಳನ್ನು ಧರಿಸಿ ಆಯಾ ಪ್ರದೇಶದ ಕನ್ನಡ ಗೀತೆಗಳೊಂದಿಗೆ ನೃತ್ಯಮಾಡಿದರು. ಮುಂದಿನ ಪೀಳಿಗೆಯ ಮಕ್ಕಳಲ್ಲಿ ಕನ್ನಡ ಓದು, ಬರಹವನ್ನು ಉತ್ತೇಜಿಸಿ ಕಾಪಾಡಲು ಕನ್ನಡ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಅಟ್ಲಾಂಟ ನಗರದಲ್ಲಿರುವ ಹಲವಾರು ಕನ್ನಡ ಶಾಲೆಯ ಮಕ್ಕಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕನ್ನಡ ಕೂಟದ ವತಿಯಿಂದ ಆಯೋಜಿಸಿದ್ದ ಪಿಕಲ್ ಬಾಲ್ ಟೂರ್ನಮೆಂಟ್ ವಿಜೇತರಿಗೆ ಬಹುಮಾನ ನೀಡಲಾಯಿತು.
ಭಾರತದ ಕೌನ್ಸಲೇಟ್ ಜನರಲ್ ಕಛೇರಿಯ ಅಧಿಕಾರಿ ಹಾಗೂ ಸ್ಥಳೀಯ ಕೌಂಟಿಯ ಕೌನ್ಸಲರ್ ಗಳೂ ಕಾರ್ಯಕ್ರಮಕ್ಕೆ ಆಗಮಿಸಿ ಅಟ್ಲಾಂಟ ಕನ್ನಡಿಗರು ತಮ್ಮ ಪರಿಶ್ರಮ ಹಾಗೂ ಪ್ರತಿಭೆಯಿಂದ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿ, ಪ್ರಶಂಸಿದರು. ಅಟ್ಲಾಂಟ ನಗರದಲ್ಲಿ ಮೊದಲ ಬಾರಿಗೆ ಕೆ.ಎಂ.ಎಫ್ ನ ‘ನಂದಿನಿ’ ಉತ್ಪನ್ನಗಳನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.





