ಯುಎಇಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು...

ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು ಸಜ್ಜಾಗಿರುವ ಕಣ್ಮನ ಸೆಳೆಯುವ ಪಟಾಕಿ ಪ್ರದರ್ಶನಗಳು

ದುಬೈ: 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಎಇ ಸಜ್ಜಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿನ ಜನರು ಕಾತುರದಲ್ಲಿದ್ದು, ಸಂಭ್ರಮ-ಸಡಗರ ಮನೆಮಾಡಿದೆ.

ಈ ಬಾರಿಯ ಹೊಸ ವರ್ಷಾಚರಣೆಯಲ್ಲಿ ದಾಖಲೆಯ ಪಟಾಕಿ ಪ್ರದರ್ಶನಗಳು, ಡ್ರೋನ್ ಶೋಗಳು ಮತ್ತು ಇದುವರೆಗೆ ಕಂಡಿರದ ಪೈರೋಟೆಕ್ನಿಕ್ ಅದ್ಭುತಗಳು ಯುಎಇಯಾದ್ಯಂತ ಆಕಾಶವನ್ನು ಬೆಳಗಿಸಲಿವೆ. ವಿಶ್ವದ ಅತ್ಯಂತ ಆಕರ್ಷಕ ಪಟಾಕಿ ಪ್ರದರ್ಶನಗಳಿಂದ ಹಿಡಿದು ಭಾರೀ ಡ್ರೋನ್ ಶೋ ಪ್ರದರ್ಶನಕ್ಕೆ ಯುಎಇ ಸಿದ್ಧವಾಗಿದೆ.

ಹೊಸ ವರ್ಷಾಚರಣೆ ಎಂದರೆ ದುಬೈಗರಿಗೆ ಹಬ್ಬದ ವಾತಾವರಣವನ್ನೇ ಮೂಡಿಸುತ್ತೆ. ಇಲ್ಲಿನ ಸಂಭ್ರಮಾಚರಣೆಯನ್ನು ವಿಶ್ವವೇ ನೋಡುವಂತೆ ಸಜ್ಜುಗೊಳಿಸಲಾಗಿದೆ. ಇಲ್ಲಿನ ವಿಶ್ವಪ್ರಸಿದ್ಧ ಬುರ್ಜ್ ಖಲೀಫಾ ಪಟಾಕಿ ಮತ್ತು ಲೇಸರ್ ಶೋಗೆ ಪ್ರಮುಖ ಆಕರ್ಷಣೆಯಾಗಲಿದೆ. ಇದರ ಜೊತೆಗೆ, ಗ್ಲೋಬಲ್ ವಿಲೇಜ್, ಅಟ್ಲಾಂಟಿಸ್ ದ ಪಾಮ್, ಬ್ಲೂವಾಟರ್ಸ್, ದಿ ಬೀಚ್ (JBR), ದುಬೈ ಫೆಸ್ಟಿವಲ್ ಸಿಟಿ, ಅಲ್ ಸೀಫ್ ಸೇರಿದಂತೆ ನಗರದ ಸುಮಾರು 40 ಸ್ಥಳಗಳಲ್ಲಿ ಪಟಾಕಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಅನೇಕ ವೀಕ್ಷಣಾ ಸ್ಥಳಗಳ ಹಿನ್ನೆಲೆಯಲ್ಲಿ ದುಬೈಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಎಲ್‌ಇಡಿ ಪರದೆ ಮತ್ತು ಲೈಟ್ ಶೋ(ಬೆಳಕು ಪ್ರದರ್ಶನ)ಗಳಿಗಾಗಿ ಈಗಾಗಲೇ ಹಲವು ಗಿನ್ನೆಸ್ ದಾಖಲೆಗಳನ್ನು ಹೊಂದಿರುವ ದುಬೈ, ಪ್ರತಿವರ್ಷವೂ ಹೊಸ ದಾಖಲೆಯನ್ನು ನಿರ್ಮಿಸುತ್ತಲೇ ಬಂದಿದ್ದು, ಈ ಬಾರಿಯೂ ಹಲವು ದಾಖಲೆಗಳನ್ನು ತನ್ನದಾಗಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಅಬುಧಾಬಿಯ ಅಲ್ ವಥ್ಬಾದಲ್ಲಿರುವ ಶೇಖ್ ಝಾಯೆದ್ ಉತ್ಸವದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಅತ್ಯಂತ ದೀರ್ಘ ಹಾಗೂ ಅತ್ಯಾಕರ್ಷಕವಾದ ಪಟಾಕಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ನಿರಂತರವಾಗಿ 62 ನಿಮಿಷಗಳ ಕಾಲ ನಡೆಯುವ ಅಪೂರ್ವ ಪಟಾಕಿ ಪ್ರದರ್ಶನ ಇದಾಗಲಿದೆ.

ಜೊತೆಗೆ 6,500 ಡ್ರೋನ್‌ಗಳನ್ನು ಬಳಸಿಕೊಂಡು ವಿಶ್ವದ ಅತಿದೊಡ್ಡ ಡ್ರೋನ್ ಪ್ರದರ್ಶನ ಕೂಡ ನಡೆಯಲಿದೆ. ಡ್ರೋನ್‌ಗಳ ಮೂಲಕ ಆಕಾಶದಲ್ಲಿ ವಿಭಿನ್ನ ಥೀಮ್ ಆಧಾರಿತ ಕಲಾತ್ಮಕ ಚಿತ್ರಣಗಳು ಮೂಡಿಬರಲಿವೆ. ಜೊತೆಗೆ ಡಿಜಿಟಲ್ ಕೌಂಟ್‌ಡೌನ್‌ಗೆ ಹೊಂದಿಕೊಂಡಂತೆ ಪಟಾಕಿಗಳ ಮೂಲಕ ಒಂಬತ್ತು ಭವ್ಯ ಗಗನ ರಚನೆಗಳು ಮೊದಲ ಬಾರಿ ಇಲ್ಲಿ ಪ್ರದರ್ಶನಗೊಳ್ಳಲಿದೆ. ಐದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗಳನ್ನು ಸ್ಥಾಪಿಸುವ ಗುರಿಯೊಂದಿಗೆ, ಸಂಪ್ರದಾಯ, ತಂತ್ರಜ್ಞಾನ ಮತ್ತು ಮನರಂಜನೆಯನ್ನು ಒಟ್ಟುಗೂಡಿಸಿರುವ ಈ ಕಾರ್ಯಕ್ರಮ ಯುಎಇಯಲ್ಲಿನ ಅತಿದೊಡ್ಡ ಹೊಸ ವರ್ಷದ ಆಕರ್ಷಣೆಯಾಗಲಿದೆ.

ರಾಸ್ ಅಲ್ ಖೈಮಾದಲ್ಲಿ 15 ನಿಮಿಷಗಳ ಕಣ್ಮನ ಸೆಳೆಯುವ ಭವ್ಯ ಪಟಾಕಿ ಪ್ರದರ್ಶನ ಆಯೋಜಿಸಲಾಗಿದ್ದು, ಇದು ಆರು ಕಿಲೋಮೀಟರ್‌ಗಳ ಕರಾವಳಿಯನ್ನು ಬೆಳಗಿಸಲಿದೆ. ಇದು ಜಗತ್ತಿನಲ್ಲಿನ ಅತಿದೊಡ್ಡ ಪಟಾಕಿ ಪ್ರದರ್ಶನಗಳಲ್ಲೊಂದು ಆಗಲಿದೆ. ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧಿಸುವ ಗುರಿಯೊಂದಿಗೆ, ರಾಸ್ ಅಲ್ ಖೈಮಾವು ಇದುವರೆಗೆ ಕಂಡಿರದ ವಿಶ್ವದ ಅತಿದೊಡ್ಡ ಏಕ ಪಟಾಕಿಯನ್ನು ಉಡಾಯಿಸಲಿದ್ದು, ಆಕಾಶವನ್ನು ಚೈತನ್ಯಭರಿತ ಬಣ್ಣಗಳ ಚಿತ್ತಾರವನ್ನು ಮೂಡಿಸಲಿದೆ.

ಈ ಅದ್ಭುತತೆಗೆ ಮತ್ತಷ್ಟು ಮೆರುಗು ನೀಡುವಂತೆ ಮಾರ್ಜಾನ್ ದ್ವೀಪ ಮತ್ತು ಅಲ್ ಹಮ್ರಾ ಪ್ರದೇಶಗಳ ಮೇಲೆ 2,300ಕ್ಕೂ ಹೆಚ್ಚು ಡ್ರೋನ್‌ಗಳು ಮನಮೋಹಕ ಆಕಾಶಾಕೃತಿಗಳನ್ನು ರೂಪಿಸಲು ಸಿದ್ಧವಾಗಿದೆ. ಪ್ರಮುಖ ನಗರಗಳ ಜೊತೆಗೆ, ಶಾರ್ಜಾದ ಅಲ್ ಮಜಾಝ್ ವಾಟರ್‌ಫ್ರಂಟ್, ಅಬುಧಾಬಿ ಕೋರ್ನಿಶ್ ಹಾಗೂ ಇತರ ಉತ್ತರ ಎಮಿರೇಟ್ಸ್‌ಗಳಲ್ಲಿಯೂ ಪಟಾಕಿ ಪ್ರದರ್ಶನಗಳು ನಡೆಯಲಿವೆ.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories