ದುಬೈ: ಯುಎಇ ಪ್ರವಾಸದಲ್ಲಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಐಪಿಎಫ್ ಮತ್ತು ದುಬೈ ಭಾರತೀಯ ಕಾನ್ಸುಲೇಟ್ ಜನರಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ಪಾಠ ಶಾಲೆ ದುಬೈ’ನ ಮಾತೃಭಾಷಾ ಸೇವೆಯನ್ನು ಮೆಚ್ಚಿ ಅಭಿನಂದಿಸಿದರು.





ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದುಬೈ ಕನ್ನಡ ಪಾಠ ಶಾಲೆಯು ಮಾತೃಭಾಷಾ ಪೋಷಣೆಗೆ ಒಂದು ಜಾಗತಿಕ ಮಾದರಿ ಎಂದು ಪ್ರಶಂಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಭಾರತ ಸರ್ಕಾರದ ಪರವಾಗಿ ಕನ್ನಡ ಪಾಠ ಶಾಲೆಯ ಸ್ಥಾಪಕ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರನ್ನು ಸನ್ಮಾನಿಸಿ, ಕಾರ್ಯಕಾರಿ ಸಮಿತಿಯನ್ನು, ಶಿಕ್ಷಕಿಯರು ಮತ್ತು ಸ್ವಯಂಸೇವಕರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.






ಈ ಸಂದರ್ಭದಲ್ಲಿ ದುಬೈ ಭಾರತೀಯ ಕಾನ್ಸುಲೇಟ್ ಜನರಲ್ ಸತೀಶ್ ಕುಮಾರ್ ಸಿವನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಸ್ಕಾರದ ಅಭಿನಂದನೆ ಸ್ವೀಕರಿಸಿದ ಶಾಲೆಯ ಸಂಚಾಲಕಿ ಮತ್ತು ಮುಖ್ಯ ಶಿಕ್ಷಕಿ ರೂಪ ಹೆಚ್.ಜಿ., ಉಪಾಧ್ಯಕ್ಷ ಸಿದ್ದಲಿಂಗೇಶ್, ಕಾರ್ಯದರ್ಶಿ ಸುನೀಲ್ ಕವಾಸ್ಕರ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ, ಖಜಾಂಚಿ ನಾಗರಾಜ್ ರಾವ್, ಗೌರವ ಪೋಷಕರಾದ ಪ್ರವೀಣ್ ಶೆಟ್ಟಿ, ಮೋಹನ್ ನರಸಿಂಹಸಮೂರ್ತಿ, ಸಲಹೆಗಾರ ಎಂ.ಇ.ಮೂಳೂರು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

