ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕನ್ನಡ ನಾಡು-ನುಡಿ ಬಗ್ಗೆ ಇರುವ ಪ್ರೀತಿ, ಅಭಿಮಾನವನ್ನು ಎಂದೂ ಮರೆಯಲ್ಲ ಎಂಬುದಕ್ಕೆ ದೂರದ ಪೂರ್ವ ಆಫ್ರಿಕಾದಲ್ಲಿರುವ ಉಗಾಂಡ ದೇಶದ ಕರ್ನಾಟಕ ಸಂಘವೇ ಸಾಕ್ಷಿ! ‘ಆಫ್ರಿಕಾದ ಮುತ್ತು (Pearl of Africa)’ ಎಂದು ಕರೆಯುವ ಉಗಾಂಡ ದೇಶವು ಅತ್ಯಂತ ವೈವಿಧ್ಯಮಯ ಹಾಗೂ ಸುಂದರ ದೇಶವಾಗಿದೆ. ಇದು ತನ್ನ ಸಮೃದ್ಧ ಪ್ರಕೃತಿ ಸೌಂದರ್ಯ, ಅಪಾರ ವನ್ಯಜೀವಿ ಸಂಪತ್ತು ಮತ್ತು ಆತಿಥ್ಯಪರ ಜನರಿಂದಾಗಿ ಪ್ರಸಿದ್ಧವಾಗಿದೆ. ಭಾರತದಿಂದ ಬದುಕನ್ನು ಕಟ್ಟಿಕೊಳ್ಳುವುದಕ್ಕೋಸ್ಕರ ಉಗಾಂಡಕ್ಕೆ ಬಂದಿರುವ ಕನ್ನಡಿಗರು ಸುಮಾರು 25 ವರ್ಷಗಳ ಹಿಂದೆ ಕನ್ನಡಿಗರನ್ನು ಬೆಸೆಯಲು, ಕನ್ನಡದ ಸೊಗಡನ್ನು ಕಾಪಾಡಲು ಹಾಗು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಕನ್ನಡ ಸಂಘವನ್ನು ಸ್ಥಾಪನೆ ಮಾಡಿದರು.

ಉಗಾಂಡ ಕರ್ನಾಟಕ ಸಂಘವು ಕನ್ನಡಪರ ಕಾರ್ಯಕ್ರಮಗಳ ಜೊತೆಗೆ ಉಗಾಂಡದಲ್ಲಿರುವ ಸ್ಥಳೀಯ ಬಡ, ನಿರ್ಗತಿಕರಿಗೆ ನಿರಂತರವಾಗಿ ತನ್ನ ಸಹಾಯಹಸ್ತವನ್ನು ನೀಡುವ ಮೂಲಕ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಇಲ್ಲಿ ಹಸಿವಿನಿಂದ ಕಂಗೆಟ್ಟ ಜನರಿಗೆ ಆಹಾರ ಪದಾರ್ಥಗಳನ್ನು, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಕಲಿಕೆಯನ್ನು ಮುಂದುವರಿಸಲು ಬೇಕಾದ ಸೇವಾ-ಸವಲತ್ತುಗಳನ್ನು, ಬಡವರಿಗೆ ಹಬ್ಬಗಳನ್ನು ಆಚರಿಸಲು ಬೇಕಾದ ಆಹಾರ ಸಾಮಾಗ್ರಿಗಳನ್ನು, ಅರೋಗ್ಯ ತಪಾಸಣೆಯಂಥ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಉಗಾಂಡ ಕರ್ನಾಟಕ ಸಂಘವು ಬೇರೆ ಕನ್ನಡಪರ ಸಂಘಟನೆಗಳಿಗಿಂತ ಭಿನ್ನವಾದ ಚಟುವಟಿಕೆಗಳ ಮೂಲಕ ಭಾಷೆ, ಸಂಸ್ಕೃತಿಯ ಜೊತೆಗೆ ಮಾನವೀಯತೆಯನ್ನು ಎತ್ತಿಹಿಡಿದಿದೆ.





ಉಗಾಂಡದ ರಾಜಧಾನಿ ಕಂಪಾಲದಲ್ಲಿರುವ ಕನ್ನಡಿಗರ ಏಕೈಕ ಸಂಘಟನೆಯಾಗಿರುವ ಕರ್ನಾಟಕ ಸಂಘವು ವರ್ಷವಿಡೀ ಹತ್ತಲವು ಕಾರ್ಯಕ್ರಮಗಳನ್ನು ಮಾಡುತ್ತಾ, ಕನ್ನಡದ ಕಂಪನ್ನು ದೇಶವಿಡೀ ಪಸರಿಸಿದೆ. ಇಂಥ ಮಹತ್ತರ ಕಾರ್ಯಗಳನ್ನು ಮಾಡುತ್ತಿರುವ ಉಗಾಂಡ ಕರ್ನಾಟಕ ಸಂಘವನ್ನು ಪ್ರಸಕ್ತ ಮುನ್ನಡೆಸುತ್ತಿರುವುದು ಅಧ್ಯಕ್ಷರಾದ ದೀಪಕ್ ಜಗದೀಶ್. ಮೂಲತಃ ಬೆಂಗಳೂರಿನ ಕೆ.ಅರ.ಪುರಂ ನಿವಾಸಿಯಾಗಿರುವ ದೀಪಕ್ ಜಗದೀಶ್ ಅವರು, ಉಗಾಂಡಕ್ಕೆ ಕಾಲಿಟ್ಟು 11 ವರ್ಷಗಳೇ ಕಳೆದಿವೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿ 2ನೇ ವರ್ಷವನ್ನು ಮುಂದುವರಿಸುತ್ತಿರುವ ಇವರು, ಉಗಾಂಡದ ಕಂಪಾಲದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲಿನಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಪತ್ನಿ ಹಾಗು ಪುತ್ರಿಯೊಂದಿಗೆ ಕುಟುಂಬ ಸಮೇತರಾಗಿ ಉಗಾಂಡದಲ್ಲಿ ನೆಲೆಸಿದ್ದಾರೆ. ದೀಪಕ್ ಜಗದೀಶ್ ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ…
ಪ್ರಶ್ನೆ: ಉಗಾಂಡ ಕರ್ನಾಟಕ ಸಂಘದ ಬಗ್ಗೆ ಸ್ವಲ್ಪ ವಿವರ ನೀಡಬಹುದಾ…?
ದೀಪಕ್ ಜಗದೀಶ್: ಉಗಾಂಡ ಕರ್ನಾಟಕ ಸಂಘ ಆರಂಭ ಆಗಿದ್ದು 2001ರಲ್ಲಿ. 2004ರಲ್ಲಿ ‘Trustees Incorporation Act’ ಅಡಿ ನೋಂದಾಯಿಸಲಾಗಿದೆ. ಉಗಾಂಡದಲ್ಲಿರುವ ಕನ್ನಡಿಗರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದ್ದು, ಕಂಪಾಲದಲ್ಲಿ ಕೇಂದ್ರೀಕೃತವಾಗಿದೆ. ಇದು ಉಗಾಂಡಾದ ಕನ್ನಡಿಗರಿಗೆ ಕನ್ನಡದ ಪರಂಪರೆ, ಭಾಷೆ ಮತ್ತು ಸಂಸ್ಕೃತಿಯನ್ನು ಬೆಂಬಲಿಸುವ ಒಂದು ವೇದಿಕೆಯಾಗಿದೆ ಮತ್ತು ಸಾಮಾಜಿಕ ಸಂಪರ್ಕ, ಸಂಬಂಧಗಳನ್ನು ಬೆಳೆಸಿ, ಪೋಷಿಸುತ್ತಿದೆ. ಈ ಸಂಘವು ‘ಸಪ್ತ ಸಾಗರದಾಚೆಯಲ್ಲೊಂದು ಕನ್ನಡ ಕುಟುಂಬ’ ಎಂಬ ಧ್ಯೇಯವಾಕ್ಯದೊಂದಿಗೆ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ. ‘ಉಗಾಂಡ ಕರ್ನಾಟಕ ಸಂಘ’ವು ಉಗಾಂಡಾ ಹಾಗು ಇಲ್ಲಿರುವ ಭಾರತೀಯ ಹೈಕಮಿಷನ್‌ಗಳಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಸಂಸ್ಥೆಯಾಗಿದೆ.





ಪ್ರಶ್ನೆ: ಉಗಾಂಡ ಕರ್ನಾಟಕ ಸಂಘದ ಉದ್ದೇಶ ಮತ್ತು ಗುರಿ ಏನು ?
ದೀಪಕ್ ಜಗದೀಶ್: ಉಗಾಂಡಾದಲ್ಲಿ ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವುದು ಮತ್ತು ಉಳಿಸಿ, ಬೆಳೆಸುವುದು. ಕನ್ನಡಪರ ಕಾರ್ಯಕ್ರಮ ಆಯೋಜನೆ ಮತ್ತು ವಿವಿಧ ಪ್ರೋತ್ಸಾಹಾತ್ಮಕ ಚಟುವಟಿಕೆಗಳ ಮೂಲಕ ಕನ್ನಡ ಮತ್ತು ಕನ್ನಡಿಗರನ್ನು ಬೆಂಬಲಿಸುವುದು. ಉಗಾಂಡಾದ ಎಲ್ಲ ಕನ್ನಡಿಗರು ನಾವೆಲ್ಲಾ ಒಂದು ಎನ್ನುವ ಸಂದೇಶ ನೀಡುವುದಾಗಿದೆ.
ಪ್ರಶ್ನೆ: ನಿಮ್ಮ ಸಂಘಟನಾ ರಚನೆ ಹೇಗಿದೆ? ಸ್ವಲ್ಪ ವಿವರಿಸಿ
ದೀಪಕ್ ಜಗದೀಶ್: ನಾನು ಅಧ್ಯಕ್ಷನಾಗಿದ್ದೇನೆ. ಸಂತೋಷ್ ರಾಥೋಡ್ (ಉಪಾಧ್ಯಕ್ಷರು), ಹಿಮಾಂಶು ಉಪಾಧ್ಯಾಯ (ಕಾರ್ಯದರ್ಶಿಗಳು), ಪುನೀತ್ ಬೇಂಗ್ರೆ (ಜಂಟಿ ಕಾರ್ಯದರ್ಶಿಗಳು), ಮುರಳಿ ಎನ್.ವಿ (ಕೋಶಾಧಿಕಾರಿಗಳು), ಬಾಲಕೃಷ್ಣ (ಸಾಂಸ್ಕೃತಿಕ ಕಾರ್ಯದರ್ಶಿಗಳು), ಹರೀಶ್ ಕೆ(ಜಾಹೀರಾತು & ಸಾಮಾಜಿಕ ಜಾಲತಾಣ), ರಾಹುಲ್ ತೇಜ (ಕಾರ್ಯಕಾರಿ ಸದಸ್ಯರು), ಪ್ರವೀಣ್ ಕುಮಾರ್ ಎಸ್.ವೈ (ಕಾರ್ಯಕಾರಿ ಸದಸ್ಯರು), ಪ್ರತಿ ಗಣಪತಿ (ಕಾರ್ಯಕಾರಿ ಸದಸ್ಯರು-ಮಹಿಳಾ ವಿಭಾಗ), ಭವಿತ ನವೀನ್ ಕುಂದರ್ (ಕಾರ್ಯಕಾರಿ ಸದಸ್ಯರು-ಮಹಿಳಾ ವಿಭಾಗ) ಹಾಗು ಟ್ರಸ್ಟಿಗಳಾಗಿ (Board of Trustees) ಸೀತಾರಾಮ್ ದೇಶಪಾಂಡೆ, ವೆಂಕಟೇಶ್ ಮನೆಪಳ್ಳಿ ಮತ್ತು ಹರೀಶ್ ಭಟ್ ಸೇವೆ ಸಲ್ಲಿಸುತ್ತಿದ್ದಾರೆ.





ಪ್ರಶ್ನೆ: ಉಗಾಂಡ ಕರ್ನಾಟಕ ಸಂಘದಿಂದ ಯಾವೆಲ್ಲ ಕಾರ್ಯಕ್ರಮವನ್ನು ಆಯೋಜಿಸುತ್ತೀರಾ ?
ದೀಪಕ್ ಜಗದೀಶ್: ಪ್ರತಿ ವರ್ಷ ನಾವು ಯುಗಾದಿಯಿಂದ ಕಾರ್ಯಕ್ರಮವನ್ನು ಆರಂಭಿಸುತ್ತೇವೆ. ಅನಂತರ ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನ(World Environment Day), ಬಳಿಕ ಮಹಾರಾಷ್ಟ್ರ ಮಂಡಲದವರೊಂದಿಗೆ ಸೇರಿಕೊಂಡು ಒಂದು ದಿನ ಉಗಾಂಡ ಕರ್ನಾಟಕ ಸಂಘದಿಂದಲೇ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ಗಣೇಶೋತ್ಸವದಂದು ಪ್ರಸಾದ, ಸುಮಾರು 12 ಬಗೆಯ ಐಟಂಗಳಿರುವ ಊಟವನ್ನೆಲ್ಲ ನಮ್ಮ ಸಂಘದ ಸದಸ್ಯರ ಮನೆಯಿಂದಲೇ ಸಿದ್ಧಪಡಿಸಿಕೊಂಡು ಅಲ್ಲಿ ಸೇರುವ ಜನರಿಗೆ ಉಣಬಡಿಸುತ್ತೇವೆ. ಅಲ್ಲಿ ಬರುವ 500-1000 ಜನರಿಗೆ ಊಟವನ್ನು ಬಡಿಸಲು ನಾವು ಸಿದ್ಧರಾಗಿರುತ್ತೇವೆ. ಅನಂತರ ದೀಪಾವಳಿ, ದಸರಾ ಹಬ್ಬವನ್ನು ಮಾಡುತ್ತೇವೆ. ದಸರಾದಲ್ಲಿ ಬೊಂಬೆಗಳನ್ನೆಲ್ಲ ಇಟ್ಟು, ಮೈಸೂರು ದಸರಾ ಬಗ್ಗೆ ನಮ್ಮ ಮಕ್ಕಳಿಗೆ ಎಲ್ಲ ರೀತಿಯ ಅರಿವು ಮೂಡಿಸುತ್ತೇವೆ. ಬೊಂಬೆಗಳ ವಿಶೇಷತೆ, ಹಬ್ಬದ ವಿಶೇಷತೆ, ಇಲ್ಲಿರುವ ಕನ್ನಡಿಗರ ಮಕ್ಕಳಿಗೆ ತಿಳಿದುಕೊಳ್ಳುವಂಥ ವಾತಾವರಣವನ್ನು ನಿರ್ಮಿಸಿದ್ದೇವೆ. ಮೈಸೂರು ದಸರವನ್ನೇ ಮೂಲವಾಗಿ ಇಟ್ಟುಕೊಂಡು ಚಿತ್ರ ಸ್ಪರ್ಧೆ, ಭಾಷಣ ಸ್ಪರ್ಧೆಯಂಥ ಬೇರೆಬೇರೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡುತ್ತೇವೆ. ಬಳಿಕ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತೇವೆ.
ಇದಲ್ಲದೆ ನಾವು ಸೇವಾ ಕಾರ್ಯಕ್ರಮವನ್ನು ಕೂಡ ಆಯೋಜಿಸುತ್ತೇವೆ. ಉಗಾಂಡಲ್ಲಿರುವ ಜಿಂಜ(Jinja) ಎನ್ನುವ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಬೇಕಾದಂತಹ ಆಹಾರ ಪದಾರ್ಥಗಳನ್ನೆಲ್ಲ ನಾವು ದಾನ ಮಾಡಿದ್ದೇವೆ. ಜೊತೆಗೆ ಇಲ್ಲಿನ ಸುಮಾರು 100 ಬಡ ಮಕ್ಕಳಿಗೆ ಶಾಲೆಗೆ ಬೇಕಾದ ಎಲ್ಲ ವಸ್ತುಗಳನ್ನು ನಾವು ದಾನ ಮಾಡಿದ್ದೇವೆ. ಮಕ್ಕಳು ಶಾಲೆಯ ಕಲಿಕೆಯಿಂದ ವಂಚಿತರಾಗ ಬಾರದು ಎನ್ನುವ ನೆಲೆಗಟ್ಟಿನಲ್ಲಿ ನಾವು ಈ ಸಹಾಯವನ್ನು ನೀಡಿದ್ದೇವೆ. ಕ್ರಿಸ್ಮಸ್ ಹಾಗು ಸಂಕ್ರಾಂತಿ ಸಮಯದಲ್ಲಿ ಹಬ್ಬವನ್ನು ಒಳ್ಳೆಯ ರೀತಿಯಲ್ಲಿ ಆಚರಿಸಲು ಕರ್ನಾಟಕ ಸಂಘದಿಂದ ಬಡವರಿಗೆ ಆಹಾರ ಪದಾರ್ಥಗಳನ್ನೆಲ್ಲ ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದೇವೆ. ಕನ್ನಡ ಭಾಷೆಯನ್ನೂ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಆಗುವ ಕನ್ನಡ ಸಿನೆಮಾಗಳನ್ನು ಇಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದೇವೆ. ಇದು ನಮ್ಮ ಮಕ್ಕಳಿಗೂ ಕನ್ನಡದ ಮೇಲೆ ಅಭಿಮಾನ, ಪ್ರೀತಿಯನ್ನು ಹೆಚ್ಚಿಸುತ್ತದೆ.
ಪ್ರಶ್ನೆ: ನಿಮ್ಮ ಸಂಘವು ಯಾವೆಲ್ಲ ರೀತಿ ಸಾಮಾಜಿಕ ಕಲ್ಯಾಣ ಚಟುವಟಿಕೆಗಳನ್ನು ನಡೆಸುತ್ತಿದೆ ?
ದೀಪಕ್ ಜಗದೀಶ್: ಕಾವೇರಿ ಪ್ರಾಜೆಕ್ಟ್: ಈ ಯೋಜನೆಯಲ್ಲಿ ಮಳೆನೀರು ಸಂಗ್ರಹಣಾ ವ್ಯವಸ್ಥೆ, ಇದು ನಾವು ಬಹುತೇಕ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ನಡೆಸುತ್ತಿರುವ ಮುಖ್ಯ ಯೋಜನೆ ಆಗಿದೆ. ಇದರ ಮೂಲಕ ದೂರದ ಪ್ರದೇಶಗಳಲ್ಲಿ ಶುದ್ಧ ನೀರು ಪೂರೈಕೆ ಮಾಡಲು ಸಹಾಯ ಮಾಡುತ್ತಿದೆ. ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಮತ್ತು ಕಣ್ಣು ತಪಾಸಣಾ ಶಿಬಿರದಂತಹ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಜೊತೆಗೆ ಗ್ರಾಮೀಣ ಶಾಲೆಗಳ ನವೀಕರಣ ಕಾರ್ಯಕ್ರಮ, ಕ್ರಿಸ್ಮಸ್ ಹಬ್ಬದ ವೇಳೆ ಅನಾಥಾಶ್ರಮಗಳಿಗೆ ಸಾಮಾನು, ಆಹಾರ ಪದಾರ್ಥಗಳನ್ನು ಮತ್ತು ಬಟ್ಟೆಬರೆಗಳನ್ನು ಪೂರೈಕೆ ಮಾಡುತ್ತೇವೆ. ಅಲ್ಲದೆ ಬಡವರಿಗೆ ಹಾಗು ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ.





ಪ್ರಶ್ನೆ: ಉಗಾಂಡ ಕರ್ನಾಟಕ ಸಂಘದಿಂದ ರಾಜ್ಯ-ಕೇಂದ್ರ ಸರಕಾರಕ್ಕೆ ಏನಾದರೂ ಬೇಡಿಕೆ ಇಡಲು ಇಚ್ಛಿಸುತ್ತಿರಾ…?
ದೀಪಕ್ ಜಗದೀಶ್: ಖಂಡಿತವಾಗಿಯೂ ಹೌದು. ಉಗಾಂಡದಲ್ಲಿ ಕರ್ನಾಟಕ ಸಂಘ ಸುಮಾರು 25 ವರ್ಷಗಳಿಂದ ನಡೆಯುತ್ತಿದೆ. ಆದರೆ ನಮ್ಮ ಕರ್ನಾಟಕ ಸಂಘಕ್ಕೆ ಅಂತ ಒಂದು ಕಚೇರಿಯಾಗಲಿ, ಸ್ಥಳವಾಗಲಿ ಇಲ್ಲ. ಕರ್ನಾಟಕ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಉಗಾಂಡಲ್ಲಿ ಕನ್ನಡ ಭವನನ್ನು ನಿರ್ಮಿಸಲು ಸಹಕಾರ ನೀಡಬೇಕು. ಇದು ನಮ್ಮ ಬಹುಮುಖ್ಯ ಬೇಡಿಕೆ. ಕನ್ನಡ ಭವನ ನಿರ್ಮಾಣವಾದರೆ ಇಲ್ಲಿರುವ ಕನ್ನಡಿಗರಿಗೆ ಎಲ್ಲ ರೀತಿಯ ಕಷ್ಟ, ಸಮಸ್ಯೆ ಪರಿಹಾರಕ್ಕೆ ಕೇಂದ್ರವನ್ನು ಒದಗಿಸಿದಂತಾಗುತ್ತೆ. ನಾವು ನಮ್ಮ ಎಲ್ಲ ರೀತಿಯ ಕಾರ್ಯಚಟುವಟಿಕೆ ಮಾಡಲು ಬಹಳಷ್ಟು ಸಹಕಾರಿ ಆಗಲಿದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ನಮ್ಮ ಉಗಾಂಡ ಕರ್ನಾಟಕ ಸಂಘದ ಬೇಡಿಕೆಗೆ ಮನ್ನಣೆ ನೀಡಬೇಕು. ಇದು ಉಗಾಂಡ ಕರ್ನಾಟಕ ಸಂಘದ, ಕಾರ್ಯಕಾರಿಣಿ ಸಮಿತಿ ಸದಸ್ಯರ, ಇಲ್ಲಿರುವ ಕನ್ನಡಿಗರೆಲ್ಲರ ಒಕ್ಕೊರಲ ಬೇಡಿಕೆಯೂ ಆಗಿದೆ.
ಉಗಾಂಡಾದಲ್ಲಿರುವ ನಮ್ಮ ಸಂಘಕ್ಕೆ ಕಚೇರಿಯೂ ಇಲ್ಲ, ಸ್ವಂತ ಸ್ಥಳವೂ ಇಲ್ಲ. ಇದು ನಮಗೆ ಅತ್ಯಾವಶ್ಯಕವಾಗಿದ್ದರೂ, ಹಣದ ಕೊರತೆಯಿಂದಾಗಿ ನಾವು ಅದನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ರಾಜ್ಯ ಸರಕಾರದಿಂದ ಸಹಾಯ-ಸಹಕಾರ ಬೇಕಿದೆ.





ಪ್ರಶ್ನೆ: ಉಗಾಂಡಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸುವ ಕಾರ್ಯವೇನಾದರೂ ಉಗಾಂಡ ಕರ್ನಾಟಕ ಸಂಘದಿಂದ ನಡೆಯುತ್ತಿದೆಯೇ ?
ದೀಪಕ್ ಜಗದೀಶ್: ಈ ಹಿಂದೆ ನಮ್ಮ ಸಂಘದಿಂದ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ವ್ಯವಸ್ಥೆಯನ್ನು ನಿರಂತರವಾಗಿ ಮಾಡಲಾಗಿತ್ತು. ಈಗ ಸದ್ಯಕ್ಕೆ ಅದನ್ನು ಮುಂದುವರಿಸಿಕೊಂಡು ಹೋಗಲು ಆಗುತ್ತಿಲ್ಲ.
ಪ್ರಶ್ನೆ: ಉಗಾಂಡದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಇರಬಹುದು…? ಅವರು ಕನ್ನಡ ಭಾಷಾ ಚಟುವಟಿಕೆಗೆ ಸಾಥ್ ಕೊಡುತ್ತಾರಾ..?
ದೀಪಕ್ ಜಗದೀಶ್: ನಮ್ಮ ಉಗಾಂಡ ಕರ್ನಾಟಕ ಸಂಘದಲ್ಲಿ ಸುಮಾರು 130ರಷ್ಟು ಕುಟುಂಬಗಳಿವೆ. ಕನ್ನಡ ಸಂಘದಲ್ಲಿ ಸುಮಾರು 400 ಮಂದಿಯಷ್ಟು ಸದಸ್ಯರಿದ್ದಾರೆ. ಅವರೆಲ್ಲರೂ ನಾವು ಇಲ್ಲಿ ಮಾಡುವಂಥ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಭಾಷೆಯ ಮೇಲಿನ ಅಭಿಮಾನ, ಪ್ರೀತಿಗೆ ಸಾಥ್ ನೀಡುತ್ತಿದ್ದಾರೆ. ಭಾಷೆಯ ಮೇಲಿನ ಪ್ರೀತಿಯಿಂದ ನಾವು ಮಾಡುವಂಥ ಕಾರ್ಯಕ್ರಮವೆಲ್ಲವು ಬಹುತೇಕ ಕನ್ನಡದಲ್ಲಿಯೇ ಇರುತ್ತದೆ.
















