ಬಹರೈನ್ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ...

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು. ಸುಖ-ದುಃಖಗಳ ನಡುವೆ ತಂಗಾಳಿಯಂತೆ ತೇಲಿ ಬರುವ ಹಳೆಯ ಕನ್ನಡ ಗೀತೆಗಳು ಮನಸ್ಸಿನಲ್ಲಿ ಮರೆಯಲಾಗದ ಭಾವನೆಗಳನ್ನು ಮತ್ತೆ ಅರಳಿಸುತ್ತವೆ. ಇಂತಹ ಅಮರ ಗೀತೆಗಳ ಮಾಧುರ್ಯವನ್ನು ಮತ್ತೊಮ್ಮೆ ಕನ್ನಡಿಗರ ಮನದಂಗಳದಲ್ಲಿ ಅನುರಣಿಸುವ ಉದ್ದೇಶದಿಂದ ಬಹರೈನ್ ಕನ್ನಡ ಸಂಘವು ತನ್ನ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಅಮರ ಮಧುರ ಗೀತೆ’ಯನ್ನು ಅಕ್ಟೋಬರ್ 29ರಂದು ಆಯೋಜಿಸಿದೆ.

49 ವರ್ಷಗಳ ಕನ್ನಡ ಸೇವೆಯ ಹೆಗ್ಗುರುತು
ಕಳೆದ 49 ವರ್ಷಗಳಿಂದ ಬಹರೈನ್‌ನಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕಂಪನ್ನು ಪಸರಿಸುತ್ತಾ ಸುವರ್ಣ ಸಂಭ್ರಮದತ್ತ ದಾಪುಗಾಲಿಡುತ್ತಿರುವ ಬಹರೈನ್ ಕನ್ನಡ ಸಂಘವು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.ವಿದೇಶಿ ನೆಲದಲ್ಲಿ ಕನ್ನಡ ಸೇವೆಗಾಗಿ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿರುವ ಸಂಘವು, ವಿದೇಶದಲ್ಲಿ ಸ್ವಂತ ಕನ್ನಡ ಭವನ ಹೊಂದಿರುವ ಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಕಾರ್ಯದಲ್ಲಿಯೂ ಸಂಘ ಸಕ್ರಿಯವಾಗಿದೆ. ಈ ಸಾಂಸ್ಕೃತಿಕ ಪಯಣದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ ‘ಅಮರ ಮಧುರ ಗೀತೆ’ ಇದೀಗ ಮತ್ತೊಮ್ಮೆ ಸಂಗೀತ ಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದೆ.

ಅಕ್ಟೋಬರ್ 29ರಂದು ಸಂಗೀತ ಸಂಭ್ರಮ
ಬಹರೈನ್ ಕನ್ನಡ ಸಂಘದ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮವು ಅಕ್ಟೋಬರ್ 29, ಗುರುವಾರ ಸಂಜೆ 7 ಗಂಟೆಗೆ ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.

1960, 70, 80 ಮತ್ತು 90ರ ದಶಕಗಳಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಸುಮಧುರ ಗೀತೆಗಳು ಇಂದಿಗೂ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ, ಭಾವಪೂರ್ಣ ಗಾಯನ ಮತ್ತು ಮನಮುಟ್ಟುವ ಚಿತ್ರಣ ಈ ಹಾಡುಗಳನ್ನು ಕಾಲಾತೀತವಾಗಿಸಿವೆ. ಇವುಗಳನ್ನು ಕೇಳುವಾಗ ಬಾಲ್ಯದ ನೆನಪುಗಳು, ಸ್ನೇಹ, ಪ್ರೀತಿ ಮತ್ತು ಬದುಕಿನ ಮರೆಯಲಾಗದ ಕ್ಷಣಗಳು ಮತ್ತೆ ಮನಸ್ಸಿನಲ್ಲಿ ಮರುಕಳಿಸುತ್ತವೆ.

2007ರಲ್ಲಿ ಆರಂಭಗೊಂಡ ‘ಅಮರ ಮಧುರ ಗೀತೆ’ ಕಾರ್ಯಕ್ರಮವು ಸುದೀರ್ಘ ಪಯಣವನ್ನು ಕ್ರಮಿಸಿದ್ದು, ವರ್ಷದಿಂದ ವರ್ಷಕ್ಕೆ ಸಂಗೀತ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. ಹಳೆಯ ಕನ್ನಡ ಚಿತ್ರಗೀತೆಗಳ ಸೊಬಗನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿಯೂ ಇದು ಗುರುತಿಸಿಕೊಂಡಿದೆ.

ಹೆಸರಾಂತ ಕಲಾವಿದರ ಸಂಗಮ
ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ, ಗಾಯಕ ಹಾಗೂ ನಟ ಗುರುಕಿರಣ್, ಖ್ಯಾತ ಹಿನ್ನೆಲೆ ಗಾಯಕ ಸಮೀರ್ ಮುಡಿಪು ಮತ್ತು ಪ್ರತಿಭಾವಂತ ಗಾಯಕಿ ಸುವಿನ್ಯ ಉಷಾ ಅವರು ತಮ್ಮ ಸುಮಧುರ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಮೈಸೂರಿನ ಖ್ಯಾತ ಇತಿಹಾಸಕಾರ ಹಾಗೂ ಸಂಶೋಧಕ ಧರ್ಮೇಂದ್ರ ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ, ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ, ನ್ಯೂ ಮ್ಯಾಂಗಲೋರ್ ಟೈಮ್ಸ್ ಪತ್ರಿಕೆಯ ಸಂಪಾದಕ ಪೂರ್ಣ ಪ್ರಕಾಶ್ಚಂದ್ರ ಹಾಗೂ ಉದ್ಯಮಿ ಪ್ರಶಾಂತ್ ರೈ ಅವರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ನಿರೂಪಕಿ ಹಾಗೂ ಬಿಗ್ ಎಫ್.ಎಂ.ಖ್ಯಾತಿಯ ಆರ್.ಜೆ. ನಯನಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.ಕನ್ನಡ ಸಂಘದ ಪ್ರತಿಭಾವಂತ ನ್ರತ್ಯಪಟುಗಳಿಂದ ವೈವಿಧ್ಯಮಯವಾದ ನ್ರತ್ಯ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ .

ಪ್ರಾಯೋಜಕರ ಸಹಕಾರ
ಈ ಕಾರ್ಯಕ್ರಮಕ್ಕೆ ಶೀರ್ಷಿಕಾ ಪ್ರಾಯೋಜಕರಾಗಿ ಬಹರೈನ್‌ನ ಖ್ಯಾತ ಬಿ.ಎಂ.ಎಂ.ಐ. ಶೋಫರ್ಸ್ ಸಂಸ್ಥೆಯ ಹಿರಿಯ ಮಾರಾಟ ಪ್ರಬಂಧಕ ರಾಜೀವ್ ಮೆನನ್ ಅವರು ಕನ್ನಡ ಸಂಘದೊಂದಿಗೆ ಕೈಜೋಡಿಸಿದ್ದಾರೆ. ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೋನಾಲ್ಡ್ ಕುಲಾಸೋ ಅವರು ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಹಳೆಯ ಕನ್ನಡ ಚಿತ್ರಗೀತೆಗಳ ಸುವರ್ಣಯುಗವನ್ನು ಮತ್ತೊಮ್ಮೆ ನೆನಪಿಸುವ ಈ ಸಂಗೀತ ಸಂಜೆಯು ಕನ್ನಡಿಗರಿಗೆ ಮಧುರ ನೆನಪುಗಳ ಪಯಣವಾಗಲಿದೆ.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರನ್ನು 36721660 ಅಥವಾ ಪ್ರಧಾನ ಕಾರ್ಯದರ್ಶಿ ರಾಂಪ್ರಸಾದ್ ಅಮ್ಮೆನಡ್ಕ ಅವರನ್ನು 33946655 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ವರದಿ: ಕಮಲಾಕ್ಷ ಅಮೀನ್

Hot this week

ಕರ್ನಾಟಕ ಸಂಘ ಶಾರ್ಜಾದಿಂದ ‘ಮಯೂರ ಸವಿರುಚಿ 2026’: ಬೆಂಕಿರಹಿತ ಅಡುಗೆಯಲ್ಲಿ ಸೃಜನಶೀಲತೆ ಮೆರೆದ ಸ್ಪರ್ಧಿಗಳು

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ನಡೆದ ವಿನೂತನ ವಿಶೇಷ ಕಾರ್ಯಕ್ರಮ ದುಬೈ :...

ಅಜ್ಮಾನ್‌; ಅ.24ರಂದು ‘ಸೌಹಾರ್ದ ಸ್ವರ ಸಂಗಮ-2026’; ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್ ಅವರಿಗೆ ಸನ್ಮಾನ

ದುಬೈ: ಸೌಹಾರ್ದ ಲಹರಿ ಪ್ರಸ್ತುತಪಡಿಸುವ ‘ಸೌಹಾರ್ದ ಸ್ವರ ಸಂಗಮ-2026’ ಹಾಗೂ ದಿವಂಗತ...

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಖತರ್‌ ಗೌರವ-ಸನ್ಮಾನ

ದೋಹಾ: ಖತರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಕ್ರಿಯಾಶೀಲ...

Related Articles

Popular Categories