ದುಬೈ: ಸೌಹಾರ್ದ ಲಹರಿ ಪ್ರಸ್ತುತಪಡಿಸುವ ‘ಸೌಹಾರ್ದ ಸ್ವರ ಸಂಗಮ-2026’ ಹಾಗೂ ದಿವಂಗತ ಯುವರಾಜ್ ಕೆ. ದೇವಾಡಿಗ ಅವರ ಸ್ಮರಣಾರ್ಥ ಆಯೋಜಿಸಿರುವ ಮಕ್ಕಳ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಕಾರ್ಯಕ್ರಮವು ಅ.24ರಂದು ಶನಿವಾರ ಅಜ್ಮಾನ್‌ನ ಹ್ಯಾಬಿಟೇಟ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಮಧ್ಯಾಹ್ನ 3.30ರಿಂದ ರಾತ್ರಿ ತನಕ ಸಂಗೀತ, ನೃತ್ಯ, ಗಾಯನ ಹಾಗೂ ಸನ್ಮಾನ ಕಾರ್ಯಕ್ರಮಗಳೊಂದಿಗೆ ಮನರಂಜನೆಯ ಸುಂದರ ಸಂಗಮ ಮೂಡಿಬರಲಿದೆ. ಯುಎಇಯಲ್ಲಿರುವ ಎಲ್ಲ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
‘ಸೌಹಾರ್ದ ಸ್ವರ ಸಂಗಮ-2026’ರ ಸಭಾ ಕಾರ್ಯಕ್ರಮದಲ್ಲಿ, ಕಳೆದ ಮೂರು ದಶಕಗಳಿಂದ ಯುಎಇಯ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಹಾಗೂ ಖ್ಯಾತ ಗಾಯಕ ಹರೀಶ್ ಶೇರಿಗಾರ್ ಮತ್ತು ಯುಎಇಯಲ್ಲಿ ಹುಲಿವೇಷ, ಯಕ್ಷಗಾನ, ರಂಗಭೂಮಿ ಹಾಗೂ ಚಿತ್ರಕಲೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಿರೀಶ್ ನಾರಾಯಣ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್. ಶೆಟ್ಟಿ, ಬ್ಲೂ ರೋಯಲ್ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್, ಯುಎಇ ಬಂಟ್ಸ್‌ನ ಗೌರವಾಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ರಮಾನಂದ ಕುಡ್ವ, ಸುದರ್ಶನ್ ಹೆಗ್ಡೆ, ರಾಮಚಂದ್ರ ಹೆಗ್ಡೆ, ಶಶಿರೇಖಾ ಶ್ರೀಕಾಂತ್, ದಯಾ ಕಿರೋಡಿಯನ್, ವಿಶ್ವನಾಥ ಶೆಟ್ಟಿ, ದಿನೇಶ್ ದೇವಾಡಿಗ ಹಾಗೂ ಡಾ. ಸೀಮಾ ಕಾಮತ್ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

