ವಿಜಯ್–ಬೃಂದಾ ಸಂಗೀತ ಸಂಭ್ರಮ, 38 ಕಲಾವಿದರ ಭವ್ಯ ಫ್ಯಾಷನ್ ಶೋ; ಚೊಚ್ಚಲ ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಗೌರವ, ನೂತನ ಸಮಿತಿಗೆ ಸ್ವಾಗತ



ಆಲ್ಬನಿ(ನ್ಯೂಯಾರ್ಕ್): ಅಮೇರಿಕದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡದ ಕಲರವ ಮೊಳಗಿತು. ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟ (KKCD) ವತಿಯಿಂದ ನವೆಂಬರ್ 1ರಂದು ಸ್ಥಳೀಯ ಹಿಂದೂ ಕಲ್ಚರಲ್ ಸೆಂಟರ್ನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ 2026 ಸಂಗೀತ, ನೃತ್ಯ, ನಾಟಕ, ಭವ್ಯ ಫ್ಯಾಷನ್ ಶೋ ಹಾಗೂ ಸನ್ಮಾನ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂಬುದನ್ನು ಆಲ್ಬನಿಯ ಕನ್ನಡಿಗರು ಮತ್ತೊಮ್ಮೆ ಸಾಬೀತುಪಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಜಯಣ್ಣ, ಶಶಾಂಕ್ ಗೌರಿ ಮತ್ತು ವಿಹಾನ್ ವಂಕದಾರಿ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಆಕರ್ಷಕವಾಗಿ ನಿರ್ವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದುಕೊಟ್ಟರು.
ವಿಜಯ್–ಬೃಂದಾ ಸಂಗೀತಕ್ಕೆ ಹೆಜ್ಜೆ ಹಾಕಿದ ಕನ್ನಡಿಗರು!
ರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿದ್ದ ‘VJ & BK Live’ ಸಂಗೀತ ಕಾರ್ಯಕ್ರಮದಲ್ಲಿ ನ್ಯೂಜೆರ್ಸಿಯಿಂದ ಆಗಮಿಸಿದ್ದ ಗಾಯಕ ವಿಜಯ್ ಮಟಿಘಟ್ಟ ಹಾಗೂ ಬೋಸ್ಟನ್ನಿಂದ ಆಗಮಿಸಿದ್ದ ಗಾಯಕಿ ಡಾ.ಬೃಂದಾ ತಮ್ಮ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿದರು.
ವಿಜಯ್ ಅವರ ಜನಪ್ರಿಯ ನೃತ್ಯಗೀತೆಗಳಿಗೆ ಯುವಜನತೆ ಉತ್ಸಾಹದಿಂದ ಹೆಜ್ಜೆ ಹಾಕಿ ಸಂಭ್ರಮಿಸಿದರು. ಆದರೆ ಅವರ ಗಾಯನವು ಹೆಚ್ಚಾಗಿ ಒಂದೇ ಶೈಲಿಗೆ ಸೀಮಿತವಾಗಿದ್ದರಿಂದ ಸಂಗೀತ ಕಾರ್ಯಕ್ರಮದಲ್ಲಿ ನಿರೀಕ್ಷಿತ ವೈವಿಧ್ಯತೆ ಕಾಣಲಿಲ್ಲ. ಶಾಸ್ತ್ರೀಯ ಸಂಗೀತ, ಭಾವಗೀತೆ ಹಾಗೂ ಸುಮಧುರ ಗಾಯನದಲ್ಲಿ ಪರಿಣತಿ ಹೊಂದಿರುವ ಡಾ. ಬೃಂದಾ ಅವರ ಹಾಡುಗಳಿಗೆ ಹೆಚ್ಚಿನ ಅವಕಾಶ ದೊರೆಯದಿರುವುದು ಕೆಲವು ಹಿರಿಯ ಸಂಗೀತಪ್ರಿಯರಲ್ಲಿ ನಿರಾಸೆ ಮೂಡಿಸಿತು.



ಪುಟಾಣಿಗಳಿಂದ ಹಿರಿಯರವರೆಗೆ ಸಾಂಸ್ಕೃತಿಕ ಸಂಭ್ರಮ
ಶ್ರೇಯಾ ಶ್ರೀವಾಸ್ತವ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪುಟಾಣಿಗಳ ‘ಸ್ಪಾರ್ಕ್ಲಿಂಗ್ ಸ್ಕ್ವಾಡ್’ ತಂಡದ ಆಕರ್ಷಕ ನೃತ್ಯ, ಚೈತಾಲಿ ಕಲ್ಲಿಯಾನಪುರ ಮತ್ತು ತಂಡದ ಜಾನಪದ ನೃತ್ಯರೂಪಕ, ದೀಪಾ ಸಂತೋಷ್ ಮತ್ತು ಮಕ್ಕಳ ಸುಮಧುರ ಗಾಯನ ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ಕನ್ನಡ ಕಲಿ ಶಿಕ್ಷಕಿ ಮಾಧವಿ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶಿಸಿದ ಕನ್ನಡ ನಾಟಕವು ಅಮೇರಿಕದಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆಯ ಕನ್ನಡ ಪ್ರೀತಿ ಮತ್ತು ಭಾಷಾಭಿಮಾನವನ್ನು ಅನಾವರಣಗೊಳಿಸಿತು. ಕನ್ನಡ ನಾಡಿನಿಂದ ದೂರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿ ಅಭಿನಯಿಸಿದ್ದು ವಿಶೇಷವಾಗಿತ್ತು.
ಪ್ರದೀಪ್ ಅರಸಪ್ಪ ನಿರ್ದೇಶನದ ‘ಯಮ ವರ್ಸಸ್ GenZ’ ಹಾಸ್ಯ ನಾಟಕವು ಮತ್ತೊಂದು ಆಕರ್ಷಣೆಯಾಗಿತ್ತು. ಪುರಾಣದ ಯಮಧರ್ಮರಾಯನನ್ನು ಆಧುನಿಕ ಯುವಪೀಳಿಗೆಯೊಂದಿಗೆ ಮುಖಾಮುಖಿಯಾಗಿಸಿದ ವಿಭಿನ್ನ ಕಥಾವಸ್ತು, ಚುರುಕಾದ ಸಂಭಾಷಣೆಗಳು ಮತ್ತು ಕಲಾವಿದರ ಅಭಿನಯ ಪ್ರೇಕ್ಷಕರನ್ನು ರಂಜಿಸಿದವು.
38 ಕಲಾವಿದರ ಭವ್ಯ ಫ್ಯಾಷನ್ ಶೋಗೆ ಭರ್ಜರಿ ಮೆಚ್ಚುಗೆ!
ಈ ಬಾರಿಯ ರಾಜ್ಯೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಸುಪ್ರಿಯಾ ಶೆಟ್ಟಿ ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಭವ್ಯ ಫ್ಯಾಷನ್ ಶೋ. ಮಕ್ಕಳು, ಯುವಜನರು, ಮಹಿಳೆಯರು ಮತ್ತು ಹಿರಿಯರು ಸೇರಿದಂತೆ ವಿವಿಧ ವಯೋಮಾನದ 38 ಮಂದಿ ಕಲಾವಿದರು ಭಾಗವಹಿಸಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಹಾಗೂ ನಾಡಿನ ಹೆಮ್ಮೆಯ ಮಹನೀಯರ ವ್ಯಕ್ತಿತ್ವಗಳನ್ನು ವೇದಿಕೆಯ ಮೇಲೆ ಅನಾವರಣಗೊಳಿಸಿದರು.
ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯನ್ನು ಆಕರ್ಷಕವಾಗಿ ಬಿಂಬಿಸಿದ ಈ ಪ್ರದರ್ಶನದಲ್ಲಿ ಕಲಾವಿದರನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ ಸುಪ್ರಿಯಾ ಶೆಟ್ಟಿ ಅವರ ಸೃಜನಶೀಲತೆ, ನೃತ್ಯ ಸಂಯೋಜನಾ ಕೌಶಲ್ಯ ಮತ್ತು ಪರಿಶ್ರಮ ಸಭಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಚೊಚ್ಚಲ ಕ್ರಿಕೆಟ್ ಪಂದ್ಯಾವಳಿಯಲ್ಲಿ ಧಾರವಾಡ ವಾರಿಯರ್ಸ್ ಚಾಂಪಿಯನ್!
ಕನ್ನಡ ಕೂಟದ 30 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನವೀನ್ ಶ್ರೀವಾಸ್ತವ ನೇತೃತ್ವದ ಧಾರವಾಡ ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ವಿಜೇತ ತಂಡದ ಆರು ಆಟಗಾರರು: ನಾಯಕ ನವೀನ್ ಶ್ರೀವಾಸ್ತವ, ಉಮಾ ಬೆಂಕಿ, ಧರಣಿ ಮುರುಂಡಿ, ರಾಜೀವ್, ಶರತ್ ಮತ್ತು ಶೌಮಿಕ್ ಘೋಷಾಲ್.
ಪಂದ್ಯಾವಳಿಯಲ್ಲಿ ಅತ್ಯುತ್ತಮ ಬ್ಯಾಟರ್ ಪ್ರಶಸ್ತಿಯನ್ನು ಸಂತೋಷ್, ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಅನಿಕೇತ್ ಪಡೆದರು. ಅತ್ಯುತ್ತಮ ಮಹಿಳಾ ಆಟಗಾರ್ತಿಯರ ಪ್ರಶಸ್ತಿಗಳನ್ನು ಉಮಾ ಬೆಂಕಿ ಮತ್ತು ಮಾಧುರಿ ದೀಕ್ಷಿತ್ ಪಡೆದುಕೊಂಡರು.
ವಿಜೇತ ತಂಡದ ಸದಸ್ಯರು ಹಾಗೂ ವೈಯಕ್ತಿಕ ಪ್ರಶಸ್ತಿ ವಿಜೇತರನ್ನು ರಾಜ್ಯೋತ್ಸವದ ವೇದಿಕೆಯಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಕೂಟದ ಯುವಕೂಟದ ಸದಸ್ಯರಿಗೆ ಅಭಿನಂದನೆ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಿತು.



ಸಮಿತಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದ ಬೆಂಕಿ ಬಸಣ್ಣ
ಕನ್ನಡ ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಬೆಂಕಿ ಬಸಣ್ಣ ಅವರು ನಿರ್ಗಮಿತ ಸಮಿತಿಯ ಸದಸ್ಯರ ಸಾಧನೆ ಮತ್ತು ಎರಡು ವರ್ಷಗಳ ನಿಸ್ವಾರ್ಥ ಸೇವೆಯನ್ನು ಅಲ್ಲಲ್ಲಿ ಲಘು ಹಾಸ್ಯ ಬೆರೆಸಿದ ಆಕರ್ಷಕ ಶೈಲಿಯಲ್ಲಿ ಪರಿಚಯಿಸಿದರು.
ಉಪಾಧ್ಯಕ್ಷೆ ಮೈಥಿಲಿ ದಿವಾಕರ್ ಅವರ ಮೂರು ದಶಕಗಳ ಸಮುದಾಯ ಸೇವೆ, ಆಹಾರ ಮತ್ತು ವೇದಿಕೆ ನಿರ್ವಹಣೆಯಲ್ಲಿನ ಕೊಡುಗೆ, ವಿಜ್ಞಾನಿ ಲಲಿತ್ ಮೇಸ್ತಾ ಅವರ 400ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು ಹಾಗೂ ಪ್ರಾಯೋಜಕತ್ವ ಸಂಗ್ರಹಣೆಯಲ್ಲಿನ ಪಾತ್ರ, ಕಾರ್ಯದರ್ಶಿ ಸುಚಿತಾ ಜಾಜು ಅವರ ಸಂಘಟನಾ ಸಾಮರ್ಥ್ಯ ಮತ್ತು ನಿರೂಪಣಾ ಪ್ರತಿಭೆಯನ್ನು ಶ್ಲಾಘಿಸಿದರು.
ಸೃಜನಶೀಲ ನಿರ್ದೇಶಕ ಪ್ರದೀಪ್ ಅರಸಪ್ಪ ಅವರನ್ನು ‘ಆಲ್ಬನಿಯ ಉಪೇಂದ್ರ’ ಎಂದು ಬಣ್ಣಿಸಿದ ಅವರು, ನಾಟಕ ರಚನೆ, ನಿರ್ದೇಶನ ಮತ್ತು ಪ್ರಚಾರ ಸಾಮಗ್ರಿಗಳ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಗುರುತಿಸಿದರು. ರೋಷ್ನಿ ಆಚಾರ್ಯ ಅವರ ನಿಸ್ವಾರ್ಥ ಸೇವೆ ಮತ್ತು ಸಮಯಪಾಲನೆ, ಅರುಣ್ ಗೌಡ ಅವರ ಧ್ವನಿವ್ಯವಸ್ಥೆ ಹಾಗೂ ಆಹಾರ ನಿರ್ವಹಣೆ, ಬಾಲಾಜಿ ವಂಕದಾರಿ ಅವರ ಕ್ರೀಡೆ ಮತ್ತು ಕಾರ್ಯಕ್ರಮಗಳ ಸಂಘಟನೆಯಲ್ಲಿನ ಸೇವೆಯನ್ನು ಸ್ಮರಿಸಿದರು.



‘ಗೋಲ್ಡ್ ಸ್ಟ್ಯಾಂಡರ್ಡ್’ ಮೀರಿಸಿ ‘ಡೈಮಂಡ್ ಸ್ಟ್ಯಾಂಡರ್ಡ್’ ನಿರ್ಮಿಸಿದ ಜ್ಯೋತಿ!
ಕನ್ನಡ ಕೂಟದ ಅಧ್ಯಕ್ಷೆ ಜ್ಯೋತಿ ಮುರುಂಡಿ ಅವರ ಎರಡು ವರ್ಷಗಳ ನಾಯಕತ್ವವನ್ನು ಬೆಂಕಿ ಬಸಣ್ಣ ವಿಶೇಷವಾಗಿ ಪ್ರಶಂಸಿಸಿದರು. ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗಲೇ ಪ್ರಧಾನಿಯಾದಂತೆ, ಜ್ಯೋತಿ ಕೂಡ ಮೊದಲ ಬಾರಿಗೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿ ನೇರವಾಗಿ ಅಧ್ಯಕ್ಷೆಯಾದರು ಎಂದು ಸ್ವಾರಸ್ಯಕರವಾಗಿ ಬಣ್ಣಿಸಿದರು.
ಹಿಂದಿನ ಅಧ್ಯಕ್ಷೆ ಸುನಿತಾ ವಿಜಯ್ ಅವರು ಕನ್ನಡ ಕೂಟಕ್ಕೆ ನಿರ್ಮಿಸಿದ್ದ ‘ಗೋಲ್ಡ್ ಸ್ಟ್ಯಾಂಡರ್ಡ್’ ಅನ್ನು ಜ್ಯೋತಿ ಮುರುಂಡಿ ತಮ್ಮ ನಾಯಕತ್ವದಲ್ಲಿ ‘ಡೈಮಂಡ್ ಸ್ಟ್ಯಾಂಡರ್ಡ್’ ಮಟ್ಟಕ್ಕೆ ಏರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಯೋತಿ ಅವರ ಸರಳತೆ, ಸಂಘಟನಾ ಸಾಮರ್ಥ್ಯ ಹಾಗೂ ಸಮುದಾಯದ ಮೇಲಿನ ಕಾಳಜಿಯನ್ನು ಶ್ಲಾಘಿಸಿದ ಅವರು, ಅವರ ಯಶಸ್ಸಿನಲ್ಲಿ ಪತಿ ಧರಣಿ ಮುರುಂಡಿ ಅವರ ಸಹಕಾರ ಮತ್ತು ತಾಳ್ಮೆಯನ್ನೂ ಸ್ಮರಿಸಿದರು.
ಸಮಿತಿಯ ಸದಸ್ಯರ ಸೇವೆಯನ್ನು ಗೌರವಪೂರ್ವಕವಾಗಿ ಪರಿಚಯಿಸಿದ ಬೆಂಕಿ ಬಸಣ್ಣ ಅವರ ಮಾತುಗಳಿಗೆ ಸಭಿಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಯೋತಿ ಮುರುಂಡಿ ಮತ್ತು ರವಿ ಯಲಿಗಾರ್ ಅವರಿಗೆ ವಿಶೇಷ ಸನ್ಮಾನ
2025–2026ರ ಕಾರ್ಯಕಾರಿ ಸಮಿತಿ ಹಾಗೂ ಆಡಳಿತ ಮಂಡಳಿಯ ಸದಸ್ಯರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು. ನಿರ್ಗಮಿತ ಅಧ್ಯಕ್ಷೆ ಜ್ಯೋತಿ ಮುರುಂಡಿ ಮತ್ತು ಆಡಳಿತ ಮಂಡಳಿಯ ನಿರ್ಗಮಿತ ಅಧ್ಯಕ್ಷ ರವಿ ಯಲಿಗಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ, ಅವರ ನಿಸ್ವಾರ್ಥ ಸೇವೆ ಮತ್ತು ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.
ಆಡಳಿತ ಮಂಡಳಿಯ ಸದಸ್ಯರಾದ ರತ್ನಾ ಕಾಶಿ, ಹರಿ, ಸುನಿತಾ ವಿಜಯ್, ಸತೀಶ್ ಭಟ್ ಮತ್ತು ಮಮತಾ ಕಿರಣ್ ಅವರ ಸೇವೆಯನ್ನೂ ಸ್ಮರಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಗೆ ಸ್ವಾಗತ
ಇದೇ ಸಂದರ್ಭದಲ್ಲಿ 2027ರ ಜನವರಿ 1ರಿಂದ ಅಧಿಕಾರ ವಹಿಸಿಕೊಳ್ಳಲಿರುವ ನೂತನ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಪರಿಚಯಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿ: ಬೆಂಕಿ ಬಸಣ್ಣ, ಬಾಲಾಜಿ ವಂಕದಾರಿ, ಲಲಿತ್ ಮೇಸ್ತಾ, ಪ್ರದೀಪ್ ಅರಸಪ್ಪ, ಅರುಣ್ ಗೌಡ, ರವಿ ಯಲಿಗಾರ್, ಸುಪ್ರಿಯಾ ಶೆಟ್ಟಿ, ಪಾವನಾ ಮತ್ತು ಸೌಮ್ಯ.
ನೂತನ ಆಡಳಿತ ಮಂಡಳಿ: ಮಮತಾ ಕಿರಣ್, ಮೈಥಿಲಿ ದಿವಾಕರ್, ಸತೀಶ್ ಭಟ್, ಸುನಿತಾ ವಿಜಯ್, ಹರಿ ಮತ್ತು ಶೋಭಾ ಗುಣರಾಜ್.
ನೂತನ ಸದಸ್ಯರನ್ನು ಸಭಿಕರು ಚಪ್ಪಾಳೆಗಳೊಂದಿಗೆ ಸ್ವಾಗತಿಸಿ, ಕನ್ನಡ ಕೂಟದ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.


ಬಾಯಲ್ಲಿ ನೀರೂರಿಸಿದ ರುಚಿಕರ ಭೋಜನ!
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರುಚಿಕರ ತಿಂಡಿ-ತಿನಿಸುಗಳೂ ಕನ್ನಡಿಗರ ಮನಗೆದ್ದವು. ಪಾವ್ ಭಾಜಿ, ಬಜ್ಜಿ, ಮ್ಯಾಂಗೋ ಲಸ್ಸಿಯೊಂದಿಗೆ ಆರಂಭವಾದ ಆಹಾರ ಸಂಭ್ರಮ, ರಾತ್ರಿ ಪನೀರ್ ಖುರ್ಚನ್, ದಾಲ್ ತಡ್ಕಾ, ವೆಜಿಟೆಬಲ್ ಬಿರಿಯಾನಿ, ಬಟರ್ ನಾನ್ ಸೇರಿದಂತೆ ವಿವಿಧ ಖಾದ್ಯಗಳ ಭೋಜನದೊಂದಿಗೆ ಮುಂದುವರಿಯಿತು.
ಜ್ಯೋತಿ ಮತ್ತು ಧರಣಿ ಮುರುಂಡಿ ದಂಪತಿ ಮನೆಯಲ್ಲಿಯೇ ತಯಾರಿಸಿ ಪ್ರಾಯೋಜಿಸಿದ ವಿಶೇಷ ಬಾದಾಮಿ ಪುರಿ ಭೋಜನಕ್ಕೆ ಮತ್ತಷ್ಟು ಸಿಹಿ ಮೆರುಗು ನೀಡಿತು.
ರಾಜ್ಯೋತ್ಸವದ ಯಶಸ್ಸಿಗೆ ಸಹಕರಿಸಿದ ಡೈಮಂಡ್, ಪ್ಲಾಟಿನಂ, ಗೋಲ್ಡ್, ಸಿಲ್ವರ್ ಮತ್ತು ಬ್ರಾಂಜ್ ವಿಭಾಗಗಳ ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬೆಂಕಿ ಬಸಣ್ಣ ವಂದನಾರ್ಪಣೆ ಸಲ್ಲಿಸಿದರು.
ಸಾವಿರಾರು ಮೈಲು ದೂರದಲ್ಲೂ ಕನ್ನಡದ ಹೃದಯಸ್ಪಂದನ!
ಅಮೇರಿಕದಂತಹ ದೂರದ ದೇಶದಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಅದು ಕನ್ನಡಿಗರನ್ನು ಒಂದೇ ಕುಟುಂಬದಂತೆ ಬೆಸೆಯುವ, ಮಕ್ಕಳಿಗೆ ತಾಯ್ನುಡಿಯ ಪರಿಚಯ ಮಾಡಿಕೊಡುವ ಹಾಗೂ ಕನ್ನಡ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ವದ ವೇದಿಕೆಯಾಗಿದೆ.
ಸಂಗೀತದ ಸಂಭ್ರಮ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಿದ ಫ್ಯಾಷನ್ ಶೋ, ವೇದಿಕೆಯಲ್ಲಿ ಮಿಂಚಿದ ಪುಟಾಣಿಗಳು, ಕ್ರೀಡಾಪಟುಗಳಿಗೆ ಸಲ್ಲಿಸಿದ ಗೌರವ ಹಾಗೂ ಕನ್ನಡ ಕೂಟದ ಸೇವಕರಿಗೆ ನೀಡಿದ ಸನ್ಮಾನ—ಇವೆಲ್ಲವೂ ಈ ಬಾರಿಯ ರಾಜ್ಯೋತ್ಸವವನ್ನು ಸ್ಮರಣೀಯವಾಗಿಸಿದವು.
ಕನ್ನಡ ನಾಡಿನಿಂದ ಸಾವಿರಾರು ಮೈಲು ದೂರವಿದ್ದರೂ ಕನ್ನಡಿಗರ ಹೃದಯದಲ್ಲಿ ಕನ್ನಡದ ಪ್ರೀತಿ ಎಂದೆಂದಿಗೂ ಹಸಿರಾಗಿರುತ್ತದೆ ಎಂಬುದನ್ನು ಆಲ್ಬನಿಯ ಕನ್ನಡ ರಾಜ್ಯೋತ್ಸವ ಮತ್ತೊಮ್ಮೆ ಸಾಬೀತುಪಡಿಸಿತು.
ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

