ಬಹರೈನ್ ಕನ್ನಡ ಸಂಘ ಅರ್ಪಿಸುವ ‘ಯಕ್ಷ ವೈಭವ – 2025’ರ ಅಂಗವಾಗಿ ಅಕ್ಟೋಬರ್ ತಿಂಗಳ 10ರ ಶುಕ್ರವಾರದಂದು ಸಂಜೆ 5 ಗಂಟೆಗೆ ಕನ್ನಡ ಸಂಘದ ಸಾಂಸ್ಕ್ರತಿಕ ಸಭಾಂಗಣದಲ್ಲಿ “ಚಿತ್ರಾಕ್ಷಿ ಕಲ್ಯಾಣ” ಎನ್ನುವ ಯಕ್ಷಗಾನ ಪ್ರಸಂಗವು ನಾಡಿನ ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದರು ಹಾಗು ಸಂಘದ ಕಲಾವಿದರ ಕೂಡುವಿಕೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಬಡಗುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ, ಶ್ರೇಷ್ಠ ಯಕ್ಷಗಾನ ಕಲಾವಿದ ಚಿಟ್ಟಾಣಿ ಕುಟುಂಬದ ಕುಡಿ ಕಾರ್ತಿಕ್ ಚಿಟ್ಟಾಣಿ, ಬಡಗುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿ ಸುಧೀರ್ ಉಪ್ಪೂರು, ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ವಿನಯ್ ಬೇರೊಳ್ಳಿಯವರು ಮುಮ್ಮೇಳದಲ್ಲಿ, ನಾಡಿನ ಖ್ಯಾತ ಬಡಗು ತಿಟ್ಟಿನ ಭಾಗವತರಾದ ರಾಮಕೃಷ್ಣ ಹಿಲ್ಲೂರು, ಮದ್ದಳೆ ವಾದಕ ಸುನಿಲ್ ಭಂಡಾರಿ ಹಾಗು ಚೆಂಡೆ ವಾದಕ ಗಣೇಶ್ ಗಾಂವ್ಕರ್ ಅವರು ಹಿಮ್ಮೇಳದಲ್ಲಿ ವಿಶೇಷವಾಗಿ ದ್ವೀಪ ರಾಷ್ಟ್ರ ಬಹರೈನ್‌ಗೆ ಆಗಮಿಸಿ ದ್ವೀಪದ ತಮ್ಮ ಅಗಾಧ ಪ್ರತಿಭೆಯಿಂದ ದ್ವೀಪದ ಯಕ್ಷಪ್ರೇಮಿಗಳಿಗೆ ಬಡಗುತಿಟ್ಟಿನ ಯಕ್ಷಗಾನದ ರಸದೌತಣವನ್ನು ನೀಡಲಿದ್ದಾರೆ.
ಇವರೊಂದಿಗೆ ಕನ್ನಡ ಸಂಘದ ಯಕ್ಷ ಕಲಾವಿದರು ಕೂಡ ರಂಗದಲ್ಲಿ ತಮ್ಮ ಕಲಾಚಾತುರ್ಯವನ್ನು ಮೆರೆಯಲಿದ್ದಾರೆ. ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೂ ಈ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದ್ದು, ದ್ವೀಪದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಡಿನ ಶ್ರೀಮಂತ ಕಲೆಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಅಧ್ಯಕ್ಷ ಅಜಿತ್ ಬಂಗೇರ ವಿನಂತಿಸಿದ್ದಾರೆ. ಈ ಕಾರ್ಯಕ್ರಮದ ಸಂಯೋಜಕರಾಗಿ ಕಿರಣ್ ಉಪಾಧ್ಯಾಯರು ಕಾರ್ಯನಿರ್ವಹಿಸುತ್ತಿದ್ದು, ಈ ಯಕ್ಷಗಾನ ಪ್ರದರ್ಶನದ ಬಗೆಗಿನ ಹೆಚ್ಚಿನ ವಿವರಗಳಿಗೆ ಉಪಾಧ್ಯಾಯರನ್ನು ದೂರವಾಣಿ ಸಂಖ್ಯೆ 00973-33457671 ಮೂಲಕ ಸಂಪರ್ಕಿಸಬಹುದು.
ವರದಿ: ಕಮಲಾಕ್ಷ ಅಮೀನ್