ಸಂದೇಶಅನಿವಾಸಿ ಸಚಿವಾಲಯ, ಎನ್‌ಆರ್‌ಐಗಳಿಗೆ ಪ್ರತ್ಯೇಕ ಪೊಲೀಸ್‌ ಠಾಣೆ ಸ್ಥಾಪನೆಯ...

ಅನಿವಾಸಿ ಸಚಿವಾಲಯ, ಎನ್‌ಆರ್‌ಐಗಳಿಗೆ ಪ್ರತ್ಯೇಕ ಪೊಲೀಸ್‌ ಠಾಣೆ ಸ್ಥಾಪನೆಯ ಗುರಿ: ಡಾ. ಆರತಿ ಕೃಷ್ಣ

ವಿದೇಶಗಳಲ್ಲಿ, ಪ್ರಮುಖವಾಗಿ ಗಲ್ಫ್‌ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಅನುಭವಿಸುತ್ತಿರುವ ಸಮಸ್ಯೆಗಳು ಹಲವಾರು. ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ಅನಿವಾಸಿಗಳ ಸಮಸ್ಯೆಗಳು ಇಂದು ನಿನ್ನೆಯದ್ದಲ್ಲ. ಆದರೆ ಪರಿಹಾರಗಳು ಮಾತ್ರ ದೂರ. ಹೀಗಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ರಚಿಸಲಾದ ಅನಿವಾಸಿ ಭಾರತೀಯ ಸಮಿತಿ ಹಲವು ಉದ್ದೇಶಗಳು, ಯೋಜನೆಗಳ ಜೊತೆ ಅನಿವಾಸಿಗಳ ಕಲ್ಯಾಣಕ್ಕೆ ಮುಂದಾಗಿದೆ. ಸಮಿತಿಯ ಕಾರ್ಯ ಯೋಜನೆ, ಭವಿಷ್ಯದ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ʼವಾರ್ತಾಭಾರತಿʼ ಜೊತೆ ಮಾತನಾಡಿದ್ದಾರೆ.

ಪ್ರಶ್ನೆ: ಅನಿವಾಸಿ ಭಾರತೀಯ ಸಮಿತಿಯ ಉದ್ದೇಶವೇನು?

ಆರತಿ ಕೃಷ್ಣ: 2007ರಲ್ಲಿ ಯಡಿಯೂರಪ್ಪ ಅವರ ಸರಕಾರವಿದ್ದಾಗ ಅನಿವಾಸಿ ಭಾರತೀಯ ಸಮಿತಿ ಸ್ಥಾಪನೆಯಾಗಿತ್ತು. ಆಗ ಗಣೇಶ್‌ ಕಾರ್ಣಿಕ್‌ ಮೊದಲನೆ ಉಪಾಧ್ಯಕ್ಷರಾಗಿದ್ದರು. ಹಿಂದಿನ ಸಿದ್ದರಾಮಯ್ಯ ಸರಕಾರದ ಕೊನೆಯ ಎರಡು ವರ್ಷ ನಾನು ಉಪಾಧ್ಯಕ್ಷೆಯಾಗಿದ್ದೆ. ವಿದೇಶಗಳಲ್ಲಿ ಕನ್ನಡಿಗರಿಗೆ ನೆರವಾಗಲು, ಕೇರಳ ಮಾದರಿಯಲ್ಲಿ ನೀತಿ ನಿಯಮಗಳನ್ನು ಹೊರತಂದೆವು. ಬೆಂಗಳೂರಲ್ಲಿ ಪ್ರವಾಸಿ ಭಾರತ್‌ ದಿವಸ್‌ ನಲ್ಲಿ ಪಾಲಿಸಿ ಬಿಡುಗಡೆ ಮಾಡಿದೆವು. ಅನಿವಾಸಿ ಕನ್ನಡಿಗರಿಗೆ ಗುರುತು ಚೀಟಿ, ಕೆಲಸ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಯೋಜನೆಗಳು ಈ ನೀತಿಯ ಭಾಗವಾಗಿವೆ. ಯೋಜನೆ ಕಾರ್ಯಗತಗೊಳಿಸಲು ಅನುದಾನಕ್ಕೂ ಶ್ರಮವಹಿಸಿದ್ದೇನೆ. ಆದರೆ ಆಗ ಚುನಾವಣೆ ನಡೆಯಿತು. ಹೀಗಾಗಿ ಕೊನೆಯ 5 ವರ್ಷ ಯಾರೂ ಉಪಾಧ್ಯಕ್ಷರಿರಲಿಲ್ಲ. 

ಅಮೆರಿಕಾ ರಾಯಭಾರಿ ಕಚೇರಿಯಲ್ಲಿ 15 ವರ್ಷ ಕೆಲಸ ಮಾಡಿದ್ದೆ. ಲಕ್ಷಾಂತರ ಭಾರತೀಯರನ್ನು ಪ್ರತಿನಿಧಿಸುವ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿದ್ದೆ. ಹೀಗಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳ ಅರಿವಿತ್ತು. ಸರ್ಕಾರದಿಂದ ಪರಿಹರಿಸುವ ಬಗ್ಗೆಯೂ ತಿಳಿದಿತ್ತು. ಸಾಗರೋತ್ತರ ಸಚಿವಾಲಯದ ಅಧಿಕಾರಿಯಾಗಿದ್ದಾಗಲೂ ಎಲ್ಲ ದೇಶಗಳಲ್ಲಿರುವ ಭಾರತೀಯರ ಸಮಸ್ಯೆಗಳೂ ಗೊತ್ತಿತ್ತು. ಕೇರಳ ರಾಜ್ಯ ಸರ್ಕಾರ ವಿದೇಶಗಳಲ್ಲಿರುವ ಕೇರಳಿಗರಿಗೆ ರೂಪಿಸಿದ ನೀತಿಯ ಬಗ್ಗೆಯೂ ಗೊತ್ತಿತ್ತು. ಈ ಅನುಭವಗಳು ನೀತಿ ನಿರೂಪಣೆಯ ವೇಳೆ ನೆರವಿಗೆ ಬಂತು. ಅನಿವಾಸಿಗಳಿಗೆ ಎಲ್ಲ ರೀತಿಯ ನೆರವು ನೀಡುವುದು, ವಿದೇಶಗಳ ನ್ಯಾಯಾಂಗ ಪ್ರಕ್ರಿಯೆಯಿಂದ ಕಂಗಾಲಾಗಿರುವವರಿಗೆ ಕಾನೂನು ನೆರವು ನೀಡುವುದು ಸಮಿತಿಯ ಉದ್ದೇಶ.

ಪ್ರಶ್ನೆ: ವಿದೇಶಗಳಲ್ಲಿ ರಾಜ್ಯದಿಂದ ಎಷ್ಟು ಜನರಿದ್ದಾರೆ?, ಎಲ್ಲಿದ್ದಾರೆ?, ಹೇಗಿದ್ದಾರೆ?, ಯಾವ ಉದ್ಯೋಗ ಮಾಡುತ್ತಿದ್ದಾರೆ? ಎನ್ನುವ ಸಂಪೂರ್ಣ ಅಂಕಿ ಅಂಶ ಇದೆಯಾ?

ಆರತಿ ಕೃಷ್ಣ: ಇಲ್ಲ. ಪಾಲಿಸಿ ಮಾಡಿದ್ದಾಗ ಅಂಕಿ ಅಂಶ ಸಂಗ್ರಹದ ಬಗ್ಗೆಯೂ ಉಲ್ಲೇಖಿಸಿದ್ದೆವು. ಡೇಟಾಬೇಸ್‌ ರಚಿಸಬೇಕು ಎನ್ನುವ ಯೋಜನೆ ಇತ್ತು. ಆದರೆ ಇದರ ಸಂಗ್ರಹ ಅಂದುಕೊಂಡಷ್ಟು ಸುಲಭ ಅಲ್ಲ. ಪಾಸ್‌ ಪೋರ್ಟ್‌ ಕಚೇರಿಯಾಗಲೀ, ರಾಯಭಾರ ಕಚೇರಿಯಲ್ಲಾಗಲೀ ಕರ್ನಾಟಕದವರು ಎಷ್ಟೆಷ್ಟು ಜನರಿದ್ದಾರೆ, ಯಾವ ಉದ್ಯೋಗದಲ್ಲಿದ್ದಾರೆ ಎನ್ನುವ ನಿಖರ ಮಾಹಿತಿ ಇರುವುದಿಲ್ಲ. ಹೀಗಾಗಿ ಮತದಾನದ ಮೊದಲು ನೀಡುವ ಚೀಟಿಯಲ್ಲಿ ಅನಿವಾಸಿ ಭಾರತೀಯರನ್ನು ಗುರುತಿಸುವ ಮೂಲಕ ಮಾಹಿತಿ ಕಲೆ ಹಾಕುವ ಯೋಜನೆ ಇತ್ತು. ಆಗಲೇ ಚುನಾವಣೆ ನಡೆಯಿತು. ಈಗ ಮತ್ತೆ ಪ್ರಾರಂಭಿಸಿದ್ದೇವೆ. ಸದ್ಯ ವಿದೇಶಗಳಲ್ಲಿ 18 ಲಕ್ಷ ಕನ್ನಡಿಗರಿದ್ದಾರೆ ಎಂದು ಅಂದಾಜಿಸಬಹುದಷ್ಟೇ. ಇದಕ್ಕಾಗಿ ವಿದೇಶಗಳಲ್ಲಿರುವ ಸಂಘ ಸಂಸ್ಥೆಗಳಿಗೆ, ಕನ್ನಡ ಸಂಘಗಳಿಗೆ ಲಿಂಕ್‌ ಕಳಿಸಿ ನಮ್ಮ ಸಮಿತಿಯಲ್ಲಿ ರಿಜಿಸ್ಟರ್‌ ಮಾಡಿಸುತ್ತಿದ್ದೇವೆ. ಅದರಿಂದಲೂ ಮಾಹಿತಿ ಲಭಿಸುತ್ತದೆ. ಕೆಲವು ದೇಶಗಳಲ್ಲಿ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ವಿದೇಶಗಳಿಗೆ ಹೋಗುವ ಮೊದಲು ರಿಜಿಸ್ಟರ್‌ ಮಾಡಿ ಎಂದು ಹೇಳುತ್ತಿದ್ದೇವೆ. ಇದರ ಜೊತೆಗೆ ಡಿಸಿ ವೆಲ್ಪೇರ್‌ ಕಮಿಟಿ ರಚಿಸಿದ್ದೇವೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌, ಎಸ್ಪಿ ಇದರ ಸದಸ್ಯರು. ವಿದೇಶಗಳಲ್ಲಿರುವ ಯಾರಿಗಾದರೂ ಸಮಸ್ಯೆಯಾದರೆ ಗ್ರಾಮ ಪಂಚಾಯತ್‌ ಮಟ್ಟದಿಂದಲೂ ನಮ್ಮ ಗಮನಕ್ಕೆ ತರಬಹುದು. ಇದರ ಜೊತೆಗೆ ಅಂಕಿ ಅಂಶ ಕಲೆ ಹಾಕಲು ನಮಗೂ ಇದು ನೆರವಾಗುತ್ತದೆ.

ಪ್ರಶ್ನೆ:  ನಕಲಿ ಏಜೆನ್ಸಿಗಳ ವೀಸಾಗಳನ್ನು ನಂಬಿ ವಿದೇಶಕ್ಕೆ ಹೋಗಿ ಉದ್ಯೋಗ, ಊಟ ಸಿಗದೆ ಕಷ್ಟದಲ್ಲಿರುವ ಭಾರತೀಯರಿದ್ದಾರೆ, ಇಂತಹವರು ಯಾರ ಸಹಾಯ ಕೇಳಬೇಕು?

ಆರತಿ ಕೃಷ್ಣ: ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯನ್ನು ಸಂಪರ್ಕಿಸಬೇಕು. ಎಲ್ಲರಿಗೂ ನನ್ನ ವೈಯಕ್ತಿಕ ಸಂಪರ್ಕ ಅಸಾಧ್ಯ. ಇತ್ತೀಚೆಗೆ ಹುಡುಗನೊಬ್ಬನನ್ನು ಸೌದಿ ಅರೇಬಿಯಾದಿಂದ ಮನೆಗೆ ಕಳುಹಿಸಿಕೊಟ್ಟೆ. ವೀಸಾ ನಂಬಿ ಬಂದು ಕೆಲಸವೂ ಸಿಗದೆ ತಿಂಗಳುಗಳ ಕಾಲ ಮಸೀದಿಯೊಂದರ ಹತ್ತಿರ ಕುಳಿತಿದ್ದ. ಕನ್ನಡ ಸಂಘದವರು ನೋಡಿ ಕರೆತಂದರು. ತಾಯಿಯ ಸಂಪರ್ಕ ಮಾಡಿದರು. ಯುವಕನ ಪಾಸ್‌ ಪೋರ್ಟ್‌ ಕಂಪೆನಿಯ ಬಳಿ ಇತ್ತು.  ನಂತರ ನಾನು ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಎಮರ್ಜೆನ್ಸಿ ಪಾಸ್‌ ಪೋರ್ಟ್‌ ವ್ಯವಸ್ಥೆ ಮಾಡಿಸಿದೆ. ಯುವಕ ಈಗ ಮನೆ ತಲುಪಿದ್ದಾನೆ. ಇಂತಹ ಹಲವು ಪ್ರಕರಣಗಳು ಪ್ರತಿದಿನವೂ ಬರುತ್ತದೆ. ಇದಕ್ಕಾಗಿ ವಿದೇಶಗಳಿಗೆ ಹೋಗುವ ಮೊದಲು ಸಮಿತಿಯಲ್ಲಿ ರಿಜಿಸ್ಟರ್‌ ಮಾಡಿ ಎಂದು ಹೇಳುತ್ತಿದ್ದೇವೆ. ಆಗ ಪ್ರತಿಯೊಬ್ಬರ ಸಂಪೂರ್ಣ ವಿವರ ನಮ್ಮಲ್ಲಿ ಇರುತ್ತದೆ. ಸಹಾಯ ಮಾಡಲು ಸುಲಭವಾಗುತ್ತದೆ. ಇನ್ನು ಏಜೆಂಟರು ನಕಲಿಯೋ, ಅಸಲಿಯೋ ಎಂದು ಮೊದಲಿಗೇ ಹೇಳಲೂ ಸಾಧ್ಯವಾಗುತ್ತದೆ.

ಪ್ರಶ್ನೆ: ಉದ್ಯೋಗಾವಕಾಶದ ಮಾಹಿತಿ ನೀಡಲು, ಕೆಲಸ ಒದಗಿಸಲು ಸಮಿತಿಗೆ ಸಾಧ್ಯ ಇದೆಯಾ?

ಆರತಿ ಕೃಷ್ಣ: ಉದ್ಯೋಗಾವಕಾಶದ ಮಾಹಿತಿ ನೀಡಬಹುದಷ್ಟೇ. ಒಂದು ದೇಶಕ್ಕೆ ಹೋಗುವ ಮೊದಲು ಏನು ಮಾಡಬೇಕು?, ಏನು ಮಾಡಬಾರದು? ಏಜೆನ್ಸಿಗಳನ್ನು ನಂಬಬಹುದಾ ಎನ್ನುವ ಮಾಹಿತಿಯನ್ನು ನಾವು ನೀಡಬಹುದು. ವಿದೇಶಗಳಲ್ಲಿ ಕನ್ನಡಿಗರು ಎದುರಿಸುವ ಭಾಷೆಯ ಸಮಸ್ಯೆ ಪರಿಹಾರಕ್ಕೆ ಭಾಷಾ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಉದ್ದೇಶವೂ ಇದೆ.

ಪ್ರಶ್ನೆ: ಸಚಿವಾಲಯದ ಸ್ಥಾಪಿಸುವ ಗುರಿ ಇದೆ ಎಂದಿದ್ದೀರಿ…

ಆರತಿ ಕೃಷ್ಣ: ಒಂದು ವರ್ಷದಿಂದ ಸಮಿತಿಯ ಕೆಲಸದಲ್ಲೇ ನಿರತವಾಗಿದ್ದೆವು. ಅನುದಾನಕ್ಕೆ ಮನವಿ ಸಲ್ಲಿಸಿದ್ದೇವೆ. ಅನುದಾನ ಬಿಡುಗಡೆಯಾದ ನಂತರ ಯೋಜನೆಗಳು ಒಂದೊಂದಾಗಿ ಕಾರ್ಯಗತಗೊಳ್ಳಲಿದೆ. ಅದರ ಜೊತೆಗೆ ಸಚಿವಾಲಯ ಸ್ಥಾಪನೆಯ ಉದ್ದೇಶವೂ ಇದೆ. ಎನ್‌ ಆರ್‌ ಐಗಳಿಗಾಗಿಯೇ ವಿಶೇಷ ಪೊಲೀಸ್‌ ಠಾಣೆ ಸ್ಥಾಪಿಸುವ ಯೋಜನೆ ಇದೆ. ಪಂಜಾಬ್‌ ನಲ್ಲಿ ಇಂತಹ ಠಾಣೆ ಇದೆ. ಸಾಮಾನ್ಯ ಠಾಣೆಗಳಲ್ಲಿ ನೂರಾರು ಪ್ರಕರಣಗಳಿರುತ್ತವೆ. ವಿದೇಶದಿಂದ ಬರುವವರಿಗೆ ಈ ಪ್ರಕರಣಗಳ ಮಧ್ಯೆ ನ್ಯಾಯ ಕೊಡಿಸುವುದು ವಿಳಂಬವಾಗುತ್ತದೆ. ಸಚಿವಾಲಯ ಸ್ಥಾಪನೆಯ ನಂತರ ಈ ಯೋಜನೆಗಳ ಜಾರಿಯ ಉದ್ದೇಶವಿದೆ.

ಪ್ರಶ್ನೆ: ಕೋವಿಡ್‌ 19 ಬಿಕ್ಕಟ್ಟಿನ ಸಂದರ್ಭ ಹಲವು ಪ್ರಕರಣಗಳನ್ನು ನಿಭಾಯಿಸಿದ್ದೀರಿ?, ಆಗ ಭಾರತಕ್ಕೆ ಹಿಂದಿರುಗಿದವರ ಪರಿಸ್ಥಿತಿ ಹೇಗಿದೆ?

ಆರತಿ ಕೃಷ್ಣ: ಹೆಚ್ಚಿನವರು ವಿದೇಶಗಳಿಗೆ ವಾಪಸಾಗಿಲ್ಲ. ಕೂಲಿ ಕಾರ್ಮಿಕರು ಹೆಚ್ಚಿನವರು ಊರಿನಲ್ಲೇ ಉಳಿದಿದ್ದಾರೆ. ಕೆಲವರು ಊರಲ್ಲೇ ಕೂಲಿ ಮಾಡುತ್ತಿದ್ದಾರೆ. ಕೆಲವರು ಸಣ್ಣ ಉದ್ಯಮ ಆರಂಭಿಸಿದ್ದಾರೆ, ಕೃಷಿ ಮಾಡುತ್ತಿದ್ದಾರೆ. ಹೀಗಾಗಿ ಸಚಿವಾಲಯ ಸ್ಥಾಪನೆಯ ನಂತರ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಸಣ್ಣ ಉದ್ಯಮ ಆರಂಭಕ್ಕೆ ಸಾಲ ಒದಗಿಸುವ, ಕೆಲವು ತಿಂಗಳುಗಳವರೆಗೆ ಸಾಲ ನೀಡುವ ಯೋಜನೆಗಳನ್ನು ಆರಂಭಿಸುವ ಕನಸಿದೆ.

ಪ್ರಶ್ನೆ: ವಿದೇಶಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸುವ, ಕನ್ನಡಿಗರಿಗೆ ಪರಿಚಯಿಸುವ ನಿಟ್ಟಿನ ಕೆಲಸಗಳು ನಡೆದಿದೆಯೇ?

ಆರತಿ ಕೃಷ್ಣ: ಕರ್ನಾಟಕ ಪ್ರವಾಸಿ ದಿವಸ್‌ ಆಚರಿಸಿ, ಎಲ್ಲ ಅನಿವಾಸಿ ಭಾರತೀಯರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶವಿದೆ. ಉದ್ಯಮ, ಹೂಡಿಕೆಗೂ ಇದು ವೇದಿಕೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸುವ ಕೆಲಸವೂ ನಡೆಯಲಿದೆ. ಇದಕ್ಕಾಗಿ ಕರ್ನಾಟಕ ಸರಕಾರದ ನೆರವು ಕೋರಿದ್ದೇವೆ.

ಪ್ರಶ್ನೆ: ವಿದೇಶಗಳಲ್ಲಿರುವ ಕನ್ನಡಿಗರು ಇಲ್ಲಿನ ಯೋಜನೆಗಳ ಹಕ್ಕುದಾರರೂ ಹೌದು. ಇಲ್ಲಿನ ಆರ್ಥಿಕತೆಗೂ ಅವರ ಕೊಡುಗೆ ಇದೆ. ಆದರೆ ಯೋಜನೆಗಳ ಪ್ರಯೋಜನ ಅವರಿಗೆ ಸಿಗುವುದಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ?

ಆರತಿ ಕೃಷ್ಣ:  ಪ್ರಮುಖವಾಗಿ ಗಲ್ಫ್‌ ರಾಷ್ಟ್ರಗಳಲ್ಲಿರುವವರಿಗೆ ಅಲ್ಲಿನ ಪೌರತ್ವ ಪಡೆಯಲು ಸಾಧ್ಯವಿಲ್ಲ. ಅಮೆರಿಕ, ಬ್ರಿಟನ್‌ ನಲ್ಲಿರುವವರಿಗೆ ಈ ಸಮಸ್ಯೆ ಇಲ್ಲ. ಗಲ್ಫ್‌ ನಲ್ಲಿರುವವರಿಗೆ ಅಲ್ಲಿನ ಯೋಜನೆಗಳೂ ಇಲ್ಲ, ಇಲ್ಲಿನದ್ದೂ ಇಲ್ಲ. ಮತದಾನಕ್ಕೂ ಬರಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂತಹವರನ್ನು ಗುರುತಿಸಿ ಅವರಿಗೆ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಬೇಕು.

Hot this week

ಎ.12ರಂದು ದುಬೈನಲ್ಲಿ ‘ಆಕ್ಮೆ’ಯಿಂದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ವಿಶೇಷ ಸಂಗೀತ, ನೃತ್ಯ, ಹಾಸ್ಯಮಯ ಕಾರ್ಯಕ್ರಮ

ದುಬೈ: ಖ್ಯಾತ ಗಾಯಕ ಹಾಗು ಉದ್ಯಮಿ ಆಗಿರುವ ದುಬೈಯ ‘ಆಕ್ಮೆ’ ಬಿಲ್ಡಿಂಗ್...

ದುಬೈಯಲ್ಲಿ ಸಂಭ್ರಮ, ಸಡಗರದ ಶ್ರೀರಾಮನವಮಿ ಆಚರಣೆ

ದುಬೈ: ರಾಮನವಮಿ ಪ್ರಯುಕ್ತ ಶಂಕರ ಸೇವಾ ಸಮಿತಿಯವರು ದುಬೈಯ ಭಕ್ತಾಧಿಗಳನ್ನೆಲ್ಲ ಸೇರಿಸಿಕೊಂಡು...

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

Related Articles

Popular Categories