ದುಬೈ: ಯುಎಇಯಲ್ಲಿ ಸಂಕಷ್ಟಕ್ಕೀಡಾಗುವ ಭಾರತೀಯರ ಪರ ನಿಂತು ಕಾರ್ಯಚರಿಸುತ್ತಿರುವ ‘ಏಮ್ ಇಂಡಿಯಾ ಫೋರಂ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಝಾಫರ್ ಹಾಗೂ ಸದಸ್ಯ ಮುಹಮ್ಮದ್ ನಿಯಾಝ್ ಅವರ ಸೇವೆಯನ್ನು ಗುರುತಿಸಿ ಮಂಗಳವಾರ ದುಬೈನಲ್ಲಿರುವ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್ ಅವರು ವಿಶೇಷ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

ದುಬೈಯ ಭಾರತೀಯ ರಾಯಭಾರಿ ಕಛೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಸಿವನ್ ಅವರು, ಏಮ್ ಇಂಡಿಯಾ ಫೋರಂ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆಂದು ಏಮ್ ಇಂಡಿಯಾ ಫೋರಂ ಪ್ರಧಾನ ಕಾರ್ಯದರ್ಶಿ ಯಾಸೀರ್ ಅರಾಫತ್ ಮಕಾನದಾರ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುವ ಭಾರತೀಯ ಪ್ರಜೆಗಳು ವಿಶೇಷವಾಗಿ ಕಾರ್ಮಿಕ ವರ್ಗದವರು, ಅಲ್ಲಿನ ಕಾನೂನಿನ ಜ್ಞಾನ ಇಲ್ಲದೇ ಹಲವಾರು ಕಾರಣಗಳಿಂದ ತೀವ್ರ ಸಂಕಷ್ಟವನ್ನು ಎದುರಿಸುವ ಸನ್ನಿವೇಶಗಳು ಸರ್ವೇ ಸಾಮಾನ್ಯ. ಇಂತಹ ಜನರ ರಕ್ಷಣೆ ಹಾಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿಸುವ ನಿಟ್ಟಿನಲ್ಲಿ ಕಳೆದ ಹಲವು ತಿಂಗಳುಗಳ ಹಿಂದೆ ದುಬೈನಲ್ಲಿ ಅಮ್ನೆಸ್ಟಿ ಹೆಸರಿನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಭಾಗವಾಗಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಹ ವಿಶೇಷ ಸಹಾಯವಾಣಿ ಹಾಗೂ ಹೆಲ್ಫ್ ಡೆಸ್ಕ ಆರಂಭಿಸಿ ಕಾರ್ಯಾರಂಭ ಮಾಡಿತು. ಈ ಕಾರ್ಯದಲ್ಲಿ ಭಾರತೀಯ ರಾಯಭಾರ ಕಚೇರಿಗೆ ಸಹಕರಿಸುವಂತೆ ಸ್ವಯಂ ಸೇವಾ ಸಂಸ್ಥೆಗಳನ್ನು ಕೇಳಿಕೊಳ್ಳಲಾಗಿತ್ತು. ದುಬೈ ಕೆಎಂಸಿಸಿ, ಐಪಿಎಫ್ ಯುಎಇ, ಎಫ್ಓಐ ಯುಎಇ ಜೊತೆಗೆ ಏಮ್ ಇಂಡಿಯಾ ಫೋರಂ ಸಂಘಟನೆಯು ಸಹ ಜೊತೆಗೂಡಿತು ಎಂದು ಯಾಸೀರ್ ಅರಾಫತ್ ತಿಳಿಸಿದ್ದಾರೆ.

ಭಾರತೀಯ ರಾಯಭಾರಿ ಕಛೇರಿಯ ಆಹ್ವಾನಕ್ಕೆ ತಲೆಬಾಗಿ ಏಮ್ ಇಂಡಿಯಾ ಫೋರಂ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಝಾಫರ್ ಹಾಗೂ ಸದಸ್ಯ ಮುಹಮ್ಮದ್ ನಿಯಾಝ್ ಅವರು ರಾತ್ರಿ ಹಗಲೆನ್ನದೇ ತಮ್ಮ ಸೇವೆಯನ್ನು ನೀಡಿ, ಸಂಕಷ್ಟದಲ್ಲಿದ್ದ ಸಾವಿರಾರು ಭಾರತೀಯ ನಾಗರಿಕರನ್ನು ತಾಯ್ನಾಡಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ 22 ವರ್ಷಗಳ ನರಕ ಯಾತನೆಯ ನಂತರ ಮೊದಲ ಬಾರಿಗೆ ತನ್ನ ಕುಟುಂಬವನ್ನು ಸೇರಿದ ರತ್ನ ಕುಮಾರಿ ಎಂಬ ಆಂಧ್ರ ಪ್ರದೇಶದ ಮಹಿಳೆಯ ಪ್ರಕರಣವೂ ಸಹ ಒಂದು. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.

ಅಮ್ನೆಸ್ಟಿ ಮೂಲಕ ಸುಮಾರು 15 ಸಾವಿರ ಭಾರತೀಯ ನಾಗರಿಕರು ಶುಲ್ಕ ರಹಿತ ಭಾರತೀಯ ರಾಯಭಾರಿ ಕಚೇರಿಯಿಂದ ಪ್ರಯೋಜನ ಪಡೆದಿದ್ದಾರೆ. ನಿಸ್ವಾರ್ಥ ರೀತಿಯಲ್ಲಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯ ನಾಗರಿಕರನ್ನು ತನ್ನ ಸಹೋದರ, ಸಹೋದರಿಯ ರೀತಿಯಲ್ಲಿ ಪರಿಗಣಿಸಿ ಸಹಾಯಕ್ಕಾಗಿ ಸದಾ ಮುಂದೆ ನಿಲ್ಲುವ ಶಿರಾಲಿ ಶೇಖ್ ಮುಝಾಫರ್ ಅವರ ಸೇವೆಯನ್ನು ಗುರುತಿಸಿ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್ ಅವರು ಗೌರವಿಸಿದ್ದಾರೆ ಎಂದು ಯಾಸಿರ್ ಅರಾಫತ್ ಮಕಾನದಾರ ತಿಳಿಸಿದ್ದಾರೆ.