ಬೋಸ್ಟನ್: ಅಖಿಲ ಅಮೇರಿಕಾ ತುಳು ಅಸೋಸಿಯೇಶನ್ (AATA)ನ ವತಿಯಿಂದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹಾಗು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ತುಳುವನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಘೋಷಿಸಲು ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ತುಳುನಾಡು ಎಂದು ಬದಲಾಯಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.





ಅಮೇರಿಕದ ‘ಅಖಿಲ ಅಮೇರಿಕ ತುಳು ಅಸೋಸಿಯೇಷನ್’ನ (AATA) ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮತ್ತು ಶೈಲಾಶ್ರೀ ಶೇರಿಗಾರ್ ಅವರ ನಿವಾಸದಲ್ಲಿ ಆಯೋಜಿಸಲಾದ ಭೋಜನ ಸಮಾರಂಭದ ವೇಳೆ ಮನವಿ ಸಲ್ಲಿಸಲಾಯಿತು. AATA ತನ್ನ ಮೊದಲ ಐತಿಹಾಸಿಕ ಸಾಂಸ್ಕೃತಿಕ ಉತ್ಸವ ಸಿರಿ ಪರ್ಬ 2025 ರ ಭರ್ಜರಿ ಯಶಸ್ಸನ್ನು ಆಚರಿಸಿದ ಹಿನ್ನೆಲೆಯಲ್ಲಿ ಈ ಭೋಜನಕೂಟವನ್ನು ಆಯೋಜಿಸಿತ್ತು. AATA ಮತ್ತು ನ್ಯೂ ಇಂಗ್ಲೆಂಡ್ ತುಳು ಕೂಟ (NETK)ದ ಸ್ವಯಂಸೇವಕರು ಸಿದ್ಧಪಡಿಸಿದ ತುಳುನಾಡಿನ ಸವಿರುಚಿ ಆಹಾರಗಳನ್ನು ಅತಿಥಿಗಳು ಆಸ್ವಾದಿಸಿದರು.
ಅಮೇರಿಕದ ಬಾಸ್ಟನ್ ನಗರದಲ್ಲಿ ಆಗಸ್ಟ್ 4 ರಿಂದ 6 ರವರೆಗೆ ನಡೆದ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ಯು.ಟಿ.ಖಾದರ್ ಹಾಗೂ ಬಸವರಾಜ ಹೊರಟ್ಟಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರೂ ಸೇರಿದಂತೆ 23 ಜನ ಕರ್ನಾಟಕ ವಿಧಾನಸಭಾ ಸದಸ್ಯರು (MLA) ಮತ್ತು ವಿಧಾನ ಪರಿಷತ್ ಸದಸ್ಯರು (MLC) ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ಬಂದ ಇಬ್ಬರು ವಿಧಾನಸಭಾ ಸದಸ್ಯರ ತಂಡ, AATA ದ ಆಹ್ವಾನವನ್ನು ಸ್ವೀಕರಿಸಿ ಔತಣ ಕೂಟದಲ್ಲಿ ಪಾಲ್ಗೊಂಡಿತ್ತು.
ತುಳುನಾಡಿನ ಪ್ರಮುಖ ನಾಯಕರಾದ ಪುತ್ತೂರಿನ ಶಾಸಕ ಅಶೋಕ್ ರೈ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗು ವಿಧಾನ ಪರಿಷತ್ ಸದಸ್ಯರಾದ ಐವನ ಡಿಸೋಜಾ, ಭಾರತಿ ಶೆಟ್ಟಿ ಮತ್ತು ಮಂಜುನಾಥ ಭಂಡಾರಿ ಈ ತಂಡದಲ್ಲಿ ಇದ್ದರು. ಕರ್ನಾಟಕ ವಿಧಾನ ಪರಿಷತ್ ಜನತಾ ದಳದ ನಾಯಕ ಸಿ.ಬಿ.ಸುರೇಶ್ ಬಾಬು ಹಾಗು ಶಾಸಕರಾದ ಅಶೋಕ್ ಎಂ. ಪಟ್ಟಣ, ಬಾದರ್ಲಿ ಹಂಪನಗೌಡ, ಅರವಿಂದ್ ಬೆಲ್ಲದ್, ಯಶವಂತರಾಯಗೌಡ ಪಾಟೀಲ್, ಬಲ್ಕಿಸ್ ಬಾನು, ಹಿಮಲತಾ ನಾಯಕ್, ವೀರೇಂದ್ರ ಪುಪ್ಪಿ, ಭೋಜ ರಾಜ್, ಶ್ರೀ ಮಾನೆ ಶ್ರೀನಿವಾಸ್, ಎನ್. ರವಿಕುಮಾರ್, ದಿನೇಶ್ ಗೂಳಿಗೌಡ, ಸುಜಾ ಕುಶಾಲಪ್ಪ, ಟಿ.ಎ. ಶರವಣ ಮತ್ತು ನ್ಯೂಜರ್ಸಿಯ ಎಸ್ಕೆವಿ ದೇವಸ್ಥಾನದ ಯೋಗೀಂದ್ರ ಭಟ್ ಉಪಸ್ಥಿತರಿದ್ದರು.





ಈ ಸಂದರ್ಭದಲ್ಲಿ AATAದ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೆರಿಗಾರ್, ಕಾರ್ಯದರ್ಶಿ ಪೂಜಾ ಶೆಟ್ಟಿ, ಜತೆ ಕಾರ್ಯದರ್ಶಿ ರಂಜನಿ ಅಸೈಗೋಳಿ ಹಾಗೂ AATAದ ಬೋಸ್ಟನ್ ನ ರಾಯಭಾರಿ ಮತ್ತು NETK ಅಧ್ಯಕ್ಷೆ ಮೊಹೈರ್ ಶೆಟ್ಟಿ, ಕಾರ್ಯದರ್ಶಿ ನವೀನ್ ಶೆಟ್ಟಿ, ನಿರ್ದೇಶಕಿ ರೋಶನಿ ಭಂಡಾರಿ ಅವರ ನೇತೃತ್ವದಲ್ಲಿ AATA ತಂಡವು, ಅತಿಥಿ ಗಣ್ಯರ ಮುಖಾಂತರ ಎರಡು ಪ್ರಮುಖ ಮನವಿಗಳನ್ನು ಕರ್ನಾಟಕ ಸರಕಾರಕ್ಕೆ ಅಧಿಕೃತವಾಗಿ ಸಲ್ಲಿಸಿತು.
ತುಳು ಭಾಷೆಯನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು “ತುಳುನಾಡು” ಎಂದು ಮರುನಾಮಕರಣ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಇದು ಕರಾವಳಿ ಪ್ರದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಗುರುತನ್ನು ಹೆಚ್ಚು ಸೂಕ್ತವಾಗಿ ಪ್ರತಿಬಿಂಬಿಸಲಿದೆ. ಈ ಮನವಿಗೆ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್ (GATA), ಟೀಮ್ ಐಲೆಸಾ (ILESA) ಬೆಂಬಲ ವ್ಯಕ್ತಪಡಿಸಿದ್ದು, ಕರ್ನಾಟಕ ಜನಪದ ವಿಶ್ವವಿದ್ಯಾಲಯ ಹಾವೇರಿಯ ಮಾಜಿ ಕುಲಪತಿಗಳಾದ ಡಾ.ಚಿನ್ನಪ್ಪ ಗೌಡ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಡಾ.ಸಯಿಗೀತಾ ಹೆಗ್ಡೆ ಅವರ ಬೆಂಬಲದ ಪೂರಕ ಲೇಖನಗಳನ್ನು ಸಮರ್ಪಿಸಲಾಯಿತು.
ಈವತ್ತಿನ ಕಾರ್ಯಕ್ರಮ ಮನಮುಟ್ಟುವಂತಹ ಅರ್ಥವತ್ತಾದ ಕಾರ್ಯಕ್ರಮ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಸಂಭ್ರಮವನ್ನು ವರ್ಣಿಸಿದರು. “ತುಳುನಾಡಿನ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ವಿಷಯದಲ್ಲಿ ತಮ್ಮ ಧ್ವನಿಯನ್ನು ಎತ್ತಲಿದ್ದಾರೆ. ತುಳುವನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂಬುವುದಾಗಿ ನಾನೂ ಸ್ವತಃ ಮಾನ್ಯ ಮುಖ್ಯಮಂತ್ರಿ ಅವರಿಗೂ ಶಿಫಾರಸು ಮಾಡುತ್ತೇನೆ” ಎಂದು ಭರವಸೆ ನೀಡಿದರು. ಅವರ ಈ ಮಾತುಗಳಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರೇಕ್ಷಕರು ಭಾರೀ ಚಪ್ಪಾಳೆ ಹೊಡೆದು ಹರ್ಷ ವ್ಯಕ್ತ ಪಡಿಸಿದರು.





ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು AATAದ ಪ್ರಯತ್ನಗಳನ್ನು ಶ್ಲಾಘಿಸಿ, ಆತ್ಮೀಯ ಆತಿಥ್ಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. “ತುಳುನಾಡಿನ ಶಾಸಕರೊಂದಿಗೆ, ಇತರ ಜಿಲ್ಲೆಗಳ ಅನೇಕ ಜನಪ್ರತಿನಿಧಿಗಳೂ ತುಳುವಿಗೆ ಅಧಿಕೃತ ಮಾನ್ಯತೆ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇವೆ ಮತ್ತು ಇದರ ಕುರಿತು ರಚನಾತ್ಮಕ ಚರ್ಚೆ ನಡೆಯುವಂತೆ ನೋಡಿಕೊಳ್ಳುತ್ತೇವೆ” ಎಂದು ಅವರು ಭರವಸೆ ನೀಡಿದರು.
ದಕ್ಷಿಣ ಕನ್ನಡವನ್ನು ‘ತುಳುನಾಡು’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕುರಿತು ನಾವು ತಜ್ಞರ ಸಲಹೆ ಪಡೆದು ನಿರ್ಧರಿಸುತ್ತೇವೆ ಎಂದು ನುಡಿದರು.
ಜನತಾ ದಳದ ನಾಯಕ ಹಾಗೂ ಶಾಸಕರಾದ ಸಿ.ಬಿ. ಸುರೇಶ್ ಬಾಬು ಅವರು ತುಳುವರ ಸಾಂಸ್ಕೃತಿಕ ವೈಭವವನ್ನು ಮೆಚ್ಚಿ, ತುಳು ಭಾಷೆಗೆ ಮಾನ್ಯತೆ ನೀಡುವ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಪೂರ್ಣ ಬೆಂಬಲಿಸುವುದಾಗಿ ಘೋಷಿಸಿದರು. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮತ್ತು ರಾಮದುರ್ಗ ಕ್ಷೇತ್ರದ ಶಾಸಕರು ಅಶೋಕ್ ಎಂ. ಪಟ್ಟಣ ಸಹ ವೇದಿಕೆಯಲ್ಲಿದ್ದು, ವಿದೇಶದಲ್ಲಿ ವಾಸಿಸುವ ತುಳುವರ ಸಕ್ರಿಯ ಭಾಗವಹಿಸುವಿಕೆಯನ್ನು ಮೆಚ್ಚಿ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು.
ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಗುರ್ಮೆಯವರು AATAದ ನೇತೃತ್ವವನ್ನು ಗೌರವಿಸಿ, ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇವರ ನಿರಂತರ ಪರಿಶ್ರಮವನ್ನು ಮೆಚ್ಚಿ, ಭಾಸ್ಕರ್ ಶೇರಿಗಾರ್ ಮತ್ತು ಶ್ರೀವಲ್ಲಿ ರೈ ಮಾರ್ಟೆಲ್ ಅವರಿಗೆ ತುಳುನಾಡಿನ ಶಾಲು ಹೊದಿಸಿ ಸನ್ಮಾನಿಸಿದರು. ತುಳುವನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯನ್ನಾಗಿ ಮಾಡಲು ತಾನು ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ತಿಳಿಸಿದರು.




AATAದ ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್ ಅವರು ಎಲ್ಲಾ ವಲಸಿಗ ತುಳುವರ ಮತ್ತು AATAದ ಸದಸ್ಯರ ಪರವಾಗಿ ಮಾತನಾಡಿ, ತುಳು ಭಾಷೆಯನ್ನು ಕರ್ನಾಟಕದ ದ್ವಿತೀಯ ಅಧಿಕೃತ ಭಾಷೆಯಾಗಿ ಮಾನ್ಯಗೊಳಿಸುವುದಕ್ಕೂ ಹಾಗು ದಕ್ಷಿಣ ಕನ್ನಡವನ್ನು ‘ತುಳುನಾಡು’ ಎಂದು ಮರುನಾಮಕರಣ ಮಾಡುವುದಕ್ಕೂ ಎಲ್ಲರ ಬೆಂಬಲವನ್ನು ವಿನಯಪೂರ್ವಕವಾಗಿ ಕೋರಿದರು. AATAದ ಆಹ್ವಾನವನ್ನು ಸ್ವೀಕರಿಸಿದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಆಮಂತ್ರಿತ ಅತಿಥಿಗಳಾದ ರಾಲಿ, ನಾರ್ತ್ ಕರೋಲಿನಾದ ಟ್ರೈಯಾಂಗಲ್ ತುಳುವೇರೆ ಚಾವಡಿಯ ಸಂಸ್ಥಾಪಕ ಅಧ್ಯಕ್ಷ ಉಮೇಶ್ ಆಸೈಗೋಳಿ, ನ್ಯೂಯೋರ್ಕ್ ನ ತುಳುವೆ ಹರಿಣಿ ಬಂಗೇರ, ಅಖಿಲ ಅಮೇರಿಕಾ ತುಳು ಅಸೋಸಿಯೇಷನ್ ನ (AATA) ಸದಸ್ಯರು ಹಾಗೂ ನ್ಯೂ ಇಂಗ್ಲೆಂಡ್ ತುಳು ಕೂಟದ (NETK) ಸಂಸ್ಥಾಪಕ ಅಧ್ಯಕ್ಷ ಡಾ.ಸುಧಾಕರ ರಾವ್, ಸಮಿತಿ ಪಧಾಧಿಕಾರಿಗಳು ಹಾಗು ಸದಸ್ಯರು ಭಾಗವಹಿಸಿ, AATAದ ಕಾರ್ಯಚಟುವಟಿಕೆಗಳಿಗೆ ತಮ್ಮ ನಿರಂತರ ಬೆಂಬಲವನ್ನು ವ್ಯಕ್ತಪಡಿಸಿದರು.





ಕಾರ್ಯಕ್ರಮವು AATAದ ತಬಲಾ ಗುರು, ಬೋಸ್ಟನ್ನ ರಾಜೇಶ್ ಪೈ ಕಲ್ಸಂಕ ಮತ್ತು ಸತೀಶ್ ಮೊವರ್ ಅವರ ಮನಮೋಹಕ ಡ್ರಮ್ ಹಾಗೂ ತಾಸೆ ವಾದನದೊಂದಿಗೆ, ಪ್ರೀತೀ ಯು.ಶೆಟ್ಟಿ ಅವರ ಆರಂಭಿಕ ಮಾತುಗಳೊಂದಿಗೆ ಮತ್ತು ಭಾಸ್ಕರ್ ಶೇರಿಗಾರ್ ಅವರ ಆತ್ಮೀಯ ಸ್ವಾಗತ ದೊಂದಿಗೆ ಆರಂಭವಾಯಿತು.
ವರದಿ : ಶ್ರೀವಲ್ಲಿ ರೈ ಮಾರ್ಟೆಲ್