ಬಹರೈನ್; ಇಲ್ಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಬಹರೈನ್ ಕನ್ನಡ ಸಂಘದ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದ್ದು, 2025-2026ರ ಸಾಲಿನ ಕನ್ನಡ ಸಂಘದ ಅಧ್ಯಕ್ಷರಾಗಿ ಅಜಿತ್ ಬಂಗೇರ ಅವರು ಅವಿರೋಧವಾಗಿ ಆಯ್ಕೆಯಾಗಿ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಕಳೆದ 17 ವರುಷಗಳಿಂದ ದ್ವೀಪದಲ್ಲಿ ನೆಲೆಸಿರುವ ಅಜಿತ್ ಬಂಗೇರರವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರಾಗಿದ್ದು, ಸಾಮಾಜಿಕವಾಗಿ ಇಲ್ಲಿ ಸಕ್ರೀಯರಾಗಿರುವ ಜೊತೆಗೆ ಈ ಹಿಂದೆ ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಸಂಘಕ್ಕೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಇದೇ ತಿಂಗಳ 6ನೇ ತಾರೀಖಿನ ಶುಕ್ರವಾರದಂದು ಪೂಜಾ ಮಹೋತ್ಸವವವನ್ನು ಹಮ್ಮಿಕೊಂಡಿದ್ದು, ಶ್ರೀ ಕ್ಷೇತ್ರ ಕದ್ರಿ ದೇಗುಲದ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಲಿದ್ದು, ಇವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನಿ ಪೂಜಾ ಕಾರ್ಯಕ್ರಮವು ಜರುಗಲಿರುವುದು. ಸಂಜೆ ಗಂಟೆ ನಾಲ್ಕರಿಂದ ಸತ್ಯನಾರಾಯಣ ಪೂಜೆ ಹಾಗು ಶನಿ ಪೂಜೆ ಆರಂಭಗೊಳ್ಳಲಿದ್ದು, ಸಂಜೆ ಏಳೂವರೆಗೆ ಮಂಗಳಾರತಿ, ಪ್ರಸಾದ ವಿತರಣೆಯ ನಂತರ ರಾತ್ರಿ ಎಂಟೂವರೆಗೆ ಅನ್ನ ಸಂತರ್ಪಣೆಯೊಂದಿಗೆ ಈ ಪೂಜಾ ಮಹೋತ್ಸವವು ಸಮಾಪ್ತಿಗೊಳ್ಳಲಿದೆ. ಈ ಪೂಜಾ ಮಹೋತ್ಸವವಕ್ಕೆ ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರಾದ ಅಜಿತ್ ಬಂಗೇರ ಹಾಗು ಆಡಳಿತ ಮಂಡಳಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.. ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರನ್ನು ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದು.
ವರದಿ-ಕಮಲಾಕ್ಷ ಅಮೀನ್