ಬಹರೈನ್: ದ್ವೀಪ ರಾಷ್ಟ್ರ ಬಹರೈನ್ ನಲ್ಲಿ ಕರಾಳಿಯ ಗಂಡು ಕಲೆ ಯಕ್ಷಗಾನ ವಿಜೃಂಭಿಸಲಿದ್ದು, ಸೆಪ್ಟೆಂಬರ್ 26ರ ಶುಕ್ರವಾರದಂದು ಸಂಜೆ ಕನ್ನಡ ಸಂಘದ ಸಾಂಸ್ಕ್ರತಿಕ ಸಭಾಂಗಣದಲ್ಲಿ ವಾರ್ಷಿಕ ಯಕ್ಷಗಾನ ಕಾರ್ಯಕ್ರಮವಾದ “ಯಕ್ಷ ವೈಭವ”ವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಯಕ್ಷಕಲಾವಿದರುಗಳು ಹಾಗು ಸಂಘದ ಯಕ್ಷಕಲಾವಿದರುಗಳ ಸಮಾಗಮದೊಂದಿಗೆ “ಗಜೇಂದ್ರ ಮೋಕ್ಷ – ಇಂದ್ರಜಿತು ಕಾಳಗ” ಯಕ್ಷಗಾನ ಪ್ರಸಂಗ ಪ್ರದರ್ಶನವಾಗಲಿದೆ.

ಶುಕ್ರವಾರ ಸಂಜೆ 5 ಗಂಟೆಗೆ ದ್ವೀಪದ ಯಕ್ಷಗಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಹರೈನ್ ಹಾಗು ನಾಡಿನ ಅತಿಥಿ ಕಲಾವಿದರುಗಳ ಕೂಡುವಿಕೆಯೊಂದಿಗೆ “ಗಜೇಂದ್ರ ಮೋಕ್ಷ -ಇಂದ್ರಜಿತು ಕಾಳಗ” ಎನ್ನುವಂತಹ ಯಕ್ಷಗಾನ ಪ್ರಸಂಗವು ಖ್ಯಾತ ಯಕ್ಷಗುರು ಯಕ್ಷ ಪುರುಷೋತ್ತಮ ದೀಪಕ್ ಪೇಜಾವರ ದಿಗ್ದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ.
ದ್ವೀಪದ ಕಲಾವಿದರೊಂದಿಗೆ ನಾಡಿನ ಖ್ಯಾತ ಯಕ್ಷ ಕಲಾವಿದಾರಾದ ಕಟೀಲು ಮೇಳದ ಹಿರಿಯ ಭಾಗವತರಾದ ಶ್ರೀನಿವಾಸ ಬಳ್ಳಮಂಜ, ಲಕ್ಷ್ಮಣ ಶೆಟ್ಟಿ ತಾರೆಮಾರ, ಅಕ್ಷಯ್ ಭಟ್ ಮೂಡಬಿದ್ರಿ, ಸವಿನಯ ನೆಲ್ಲಿತೀರ್ಥ, ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ಯಕ್ಷಗುರು ಶೇಖರ್.ಡಿ.ಶೆಟ್ಟಿಗಾರ್ ಮುಂತಾದವರು ರಂಗದಲ್ಲಿ ಹಿಮ್ಮೇಳ ಹಾಗು ಮುಮ್ಮೇಳದಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆಯಲಿದ್ದಾರೆ.


ಅತಿಥಿ ಕಲಾವಿದರು ಈಗಾಗಲೇ ದ್ವೀಪಕ್ಕೆ ಆಗಮಿಸಿದ್ದು, ಬಿರುಸಿನ ಅಭ್ಯಾಸ ನಡೆಯುತ್ತಿದ್ದು ಯಕ್ಷ ವೈಭವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೂ ಈ ಯಕ್ಷಗಾನ ಪ್ರದರ್ಶನಕ್ಕೆ ಪ್ರವೇಶ ಮುಕ್ತವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಡಿನ ಈ ಶ್ರೀಮಂತ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಸಂಘದ ಅಧ್ಯಕ್ಷ ಅಜಿತ್ ಬಂಗೇರ ವಿನಂತಿಸಿದ್ದಾರೆ. ಈ ಯಕ್ಷಗಾನ ಪ್ರದರ್ಶನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀರಾಮ್ ಪ್ರಸಾದ್ ಅಮ್ಮೆನಡ್ಕ ಅವರ ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದು.
ಯಕ್ಷಗಾನಕ್ಕೂ ಹಾಗು ಬಹರೇನ್ ಕನ್ನಡ ಸಂಘಕ್ಕೂ ಸುಮಾರು ನಾಲ್ಕೂವರೆ ದಶಕಗಳ ಅವಿನಾಭಾವ ಸಂಭಂದವಿದೆ. ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲಂಘನ ಮಾಡಿಸಿದ ಹೆಗ್ಗಳಿಕೆಯ ಜೊತೆಗೆ ಸಂಪೂರ್ಣ ಹಿಮ್ಮೇಳ ಮುಮ್ಮೇಳವನ್ನು ಹೊಂದಿರುವ ಕೀರ್ತಿ ಕೂಡ ಇಲ್ಲಿನ ಕನ್ನಡ ಸಂಘಕ್ಕೆ ಸಲ್ಲುತ್ತದೆ. ಹಾಗಾಗಿ ದ್ವೀಪ ರಾಷ್ಟ್ರದಲ್ಲಿ ಆಗಾಗ್ಗೆ ಅಲ್ಲಲ್ಲಿ ಲಯಬದ್ಧವಾದ ಚೆಂಡೆಯ ಸದ್ದು ಕೇಳಿಸುತ್ತಲೇ ಇರುತ್ತದೆ.
ವರದಿ: ಕಮಲಾಕ್ಷ ಅಮೀನ್