ಬಹರೈನ್ದ್ವೀಪದಲ್ಲಿ 'ಬಹರೈನ್ ಕುಲಾಲ್ಸ್' ಸಂಘಟನೆಯಿಂದ ಯಶಸ್ವಿಯಾಗಿ ಜರುಗಿದ ಮಹಿಳೆಯರ...

ದ್ವೀಪದಲ್ಲಿ ‘ಬಹರೈನ್ ಕುಲಾಲ್ಸ್’ ಸಂಘಟನೆಯಿಂದ ಯಶಸ್ವಿಯಾಗಿ ಜರುಗಿದ ಮಹಿಳೆಯರ ಥ್ರೋ ಬಾಲ್ ಹಾಗು ಪುರುಷರ ವಾಲಿಬಾಲ್ ಪಂದ್ಯಾಟ

ಕ್ರೀಡಾಭಿಮಾನಿಗಳ ಮನಸೂರೆಗೊಂಡ "ಕುಂಭ ಟ್ರೋಫಿ -2025"

ಬಹರೈನ್: ಇಲ್ಲಿನ ಆಲಿ ಪರಿಸರದಲ್ಲಿರುವ ಆಲಿ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ದ್ವೀಪದ “ಬಹರೈನ್ ಕುಲಾಲ್ಸ್” ಸಂಘಟನೆ ಆಯೋಜಿಸಿದ್ದ ಮಹಿಳೆಯರ ಥ್ರೋ ಬಾಲ್ ಹಾಗು ಪುರುಷರ ವಾಲಿಬಾಲ್ ಪಂದ್ಯಾಟವು ಬಹಳ ಯಶಸ್ವಿಯಾಗಿ ಜರುಗಿ ನೆರೆದ ನೂರಾರು ಕ್ರೀಡಾ ಪ್ರೇಮಿಗಳ ಮನಸೂರೆಗೊಳಿಸಿತು.

ಇಲ್ಲಿನ ಅನಿವಾಸಿ ಕುಲಾಲ ಸಮುದಾಯದ ಸಂಘಟನೆಯಾದ “ಬಹರೈನ್ ಕುಲಾಲ್ಸ್” ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಇದೀಗ ಒಂಭತ್ತನೇ ವರುಷದ ಹೊಸ್ತಿಲಲ್ಲಿದೆ. ಕಳೆದ ವರುಷ ಈ ಸಂಘಟನೆಯು ದ್ವೀಪದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಸಲುವಾಗಿ “ಕುಂಭ ಟ್ರೋಫಿ” ಎನ್ನುವಂತಹ ಕ್ರೀಡಾಕೂಟಕ್ಕೆ ಯಶಸ್ವಿಯಾಗಿ ಚಾಲನೆ ನೀಡಿದ್ದು, ಇದೀಗ ನಡೆದ “ಕುಂಭ ಟ್ರೋಫಿ -2025 ” ಎರಡನೇ ಆವೃತ್ತಿಯಾಗಿದೆ .

ದ್ವೀಪದ ಮಹಿಳೆಯರ 6 ಬಲಿಷ್ಠ ಥ್ರೋ ಬಾಲ್ ತಂಡಗಳು ಹಾಗು ಪುರುಷರ ಬಲಿಷ್ಠ 8 ವಾಲಿಬಾಲ್ ತಂಡಗಳು “ಕುಂಭ ಟ್ರೋಫಿ”ಗಾಗಿ ಕಣದಲ್ಲಿದ್ದು ಪ್ರತೀ ತಂಡವು ಮೈ ನವಿರೇಳಿಸುವಂತಹ ಪ್ರದರ್ಶನವನ್ನು ನೀಡಿ ನೆರೆದ ಕ್ರೀಡಾ ಪ್ರೇಮಿಗಳಿಗೆ ಯಥೇಚ್ಛ ಮನರಂಜನೆಯನ್ನು ನೀಡಿತು.

ಬೆಳಗ್ಗೆ ಆರೂವರೆ ಘಂಟೆಗೆ ಪಂದ್ಯಾಟವು ಚಾಲನೆಗೊಂಡು ಸಂಜೆ ಎಂಟೂವರೆ ಘಂಟೆಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸುವುದರೊಂದಿಗೆ ಮುಕ್ತಾಯ ಕಂಡಿತು. “ಬಹರೈನ್ ಕುಲಾಲ್ಸ್”ನ ಅಧ್ಯಕ್ಷ ಗಣೇಶ್ ಮಾಣಿಲ ಸಾರಥ್ಯದಲ್ಲಿ ಜರಗಿದ ಈ ಪಂದ್ಯಾಟಕ್ಕೆ ನಾಡಿನ ಜನಪ್ರಿಯ ವಿದ್ಯಾ ಸಂಸ್ಥೆಯಾದ ಕುಂಭಶ್ರೀ ರೆಸಿಡೆನ್ಷಿಯಲ್ ಸ್ಕೂಲ್ ಅಂಡ್ ಪಿಯು ಕಾಲೇಜ್ ನ ಆಡಳಿತ ನಿರ್ದೇಶಕ ಗಿರೀಶ್ .ಕೆ .ಹೆಚ್ ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸಿ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಆಸ್ಟಿನ್ ಸಂತೋಷ್, ರಾಜೇಶ್ ಶೆಟ್ಟಿ, ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷ ರಾಜ್ ಕುಮಾರ್, ಬಹರೈನ್ ಕುಲಾಲ್ಸ್ ನ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ್ ಎಕ್ಕಾರ್, ಗೌರವಾಧ್ಯಕ್ಷರಾದ ರಾಧಾಕೃಷ್ಣ ಕುಲಾಲ್, ಹಿರಿಯ ಸಲಹೆಗಾರ ಕೇಶವ್ ಕುಲಾಲ್ ಮುಂತಾದವರು ಸೇರಿದಂತೆ ಇಲ್ಲಿನ ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರುಗಳು, ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ್ವೀಪದ ಕುಲಾಲ ಸಮುದಾಯದ ಪ್ರೀತಿ, ವಿಶ್ವಾಸ, ಅಭಿಮಾನದ ದ್ಯೋತಕವಾಗಿ ಗಿರೀಶ್ ಕೆ .ಹೆಚ್ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಗಿರೀಶ್, ಕೃತಜ್ಞತೆಗಳನ್ನು ಅರ್ಪಿಸುತ್ತ “ಬಹರೈನ್ ಕುಲಾಲ್ಸ್” ಸಂಘಟನೆಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಗಣ್ಯರುಗಳ ಪರವಾಗಿ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗು ಕನ್ನಡ ಸಂಘದ ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್, ಇಂತಹ ಪಂದ್ಯಾಟಗಳು ಎಲ್ಲರನ್ನೂ ಒಂದುಗೂಡಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು, ಮಾತ್ರವಲ್ಲದೆ ಪಂದ್ಯಾಟವನ್ನು ಅತ್ಯಂತ ಸುಸಜ್ಜಿತವಾಗಿ ಆಯೋಜಿಸಿದ್ದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪಂದ್ಯಾಟಕ್ಕೆ ಪ್ರಯೋಜಕತವನ್ನು ನೀಡಿ ಪ್ರೋತ್ಸಾಹಿಸಿದ ಪ್ರಾಯೋಜಕರುಗಳನ್ನು, ತೀರ್ಪುಗಾರರನ್ನು ಹಾಗು ಪಂದ್ಯಾಟದ ಯಶಸ್ಸಿಗಾಗಿ ಸಹಕರಿಸಿದ ಅನೇಕರಿಗೆ ಈ ಸಂದರ್ಭದಲ್ಲಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಮಹಿಳಾ ಥ್ರೋ ಬಾಲ್ ಪಂದ್ಯಾಟದಲ್ಲಿ ರೋಮನ್ ಕ್ಯಾಥೊಲಿಕ್ ಬಹರೈನ್ ವಾರಿಯರ್ಸ್ ತಂಡವು ಕುಂಭ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಕೊಂಕಣ್ ಕರ್ನಾಟಕ ಸೋಶಿಯಲ್ ಕ್ಲಬ್ ಎ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಕೊಂಕಣ್ ಜಿಂಜ್ ಫ್ರೆಂಡ್ಸ್ ತಂಡ ಕುಂಭ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡರೆ, ತೀವ್ರ ಪೈಪೋಟಿಯನ್ನು ನೀಡಿದ ಬಂಟ್ಸ್ ಬಹರೈನ್ ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಪಂದ್ಯಾಟದ ಶಿಸ್ತುಬದ್ಧ ತಂಡವಾಗಿ ಬಹರೈನ್ ಬಿಲ್ಲವಾಸ್ ತಂಡ ಮೂಡಿಬಂದರೆ, ಮಹಿಳೆಯರ ವಿಭಾಗದಲ್ಲಿ ಕೊಂಕಣ್ ಸೀ ಗಾಯ್ಸ್ ತಂಡವು ಅತ್ಯಂತ ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನು ಪಡೆಯಿತು. ಅತ್ಯುತ್ತಮ ಥ್ರೋ ಬಾಲ್ ಸರ್ವರ್ ಆಗಿ ವಿನೋಲ, ಅತ್ಯುತ್ತಮ ಥ್ರೋ ಬಾಲ್ ಆಟಗಾರ್ತಿಯಾಗಿ ವಿಮಲಾ, ಪುರುಷರ ವಿಭಾಗದಲ್ಲಿ ಅತ್ಯುತ್ತಮ ಆಕ್ರಮಣಕಾರಿ ಆಟಗಾರನಾಗಿ ಉಸ್ಸಾಮ, ಅತ್ಯುತ್ತಮ ಸೆಟ್ಟರ್ ಆಗಿ ನಿತಿನ್, ಮೌಲ್ಯವುಳ್ಳ ಆಟಗಾರನಾಗಿ ರಾಕಿ ಪ್ರಶಸ್ತಿಯನ್ನು ಪಡಕೊಂಡರು .

ಬಹರೈನ್ ಕುಲಾಲ್ಸ್ ನ ಅಧ್ಯಕ್ಷ ಗಣೇಶ್ ಮಾಣಿಲಾ ಮಾತನಾಡಿ, ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಕ್ರೀಡಾ ಕಾರ್ಯದರ್ಶಿ ಗಣೇಶ್ ಬಂಜನ್ ಹಾಗು ಉಪ ಕ್ರೀಡಾ ಕಾರ್ಯದರ್ಶಿ ಐಶ್ವರ್ಯ ಜಯರಾಜ್ ಪಂದ್ಯಾಟವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ಕಮಲಾಕ್ಷ ಅಮೀನ್

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories