ಬಹರೈನ್ಬಹರೈನ್‌ನ 'ಟ್ರೀ ಆಫ್ ಲೈಫ್' ಎಂಬ ಅಜರಾ'ಮರ'; ಗಲ್ಫ್...

ಬಹರೈನ್‌ನ ‘ಟ್ರೀ ಆಫ್ ಲೈಫ್’ ಎಂಬ ಅಜರಾ’ಮರ’; ಗಲ್ಫ್ ಮರುಭೂಮಿಯ ಮಧ್ಯೆ 400 ವರ್ಷಗಳಿಂದ ಹಸಿರಿನಿಂದ ಕಂಗೊಳಿಸುತ್ತಿರುವ ಏಕೈಕ ಮರ!

ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲಿ ಈ ಮರವೂ ಒಂದು

-ವರ್ಷಕ್ಕೆ 70 ಸಾವಿರಕ್ಕೂ ಹೆಚ್ಚು ಪ್ರವಾಸಿಗರಿಂದ ವೀಕ್ಷಣೆ
-ಮರುಭೂಮಿಯಲ್ಲಿ ನೀರಿನ ಮೂಲ ಇಲ್ಲದೆ ಇಂದಿಗೂ ಗಟ್ಟಿಯಾಗಿ ನಿಂತಿರುವ ಈ ಬೃಹತ್ ಮರ
-ಇಂದಿಗೂ ನಿಗೂಢವಾಗಿ, ಅಚ್ಚರಿಯಿಂದಲೇ ಬೆಳೆಯುತ್ತಿರುವ ಮರ
-ವಿಜ್ಞಾನಿ, ಸಸ್ಯಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿರುವ ಮರದ ಬದುಕು-ಬೆಳವಣಿಗೆ

ಬಹರೈನ್: ಅದೊಂದು ದಟ್ಟ ಮರುಭೂಮಿ…ಕಣ್ಣು ಹಾಯಿಸಿದಷ್ಟು ದೂರದಲ್ಲಿ ಮರಳಿನ ದಿಬ್ಬಗಳು. ಬಹುತೇಕ ನಿರ್ಜೀವ ಸ್ಥಳವಾಗಿದ್ದು, ಉರಿಯುತ್ತಿರುವ ಕುಲುಮೆಯನ್ನು ಹೋಲುತ್ತೆ. ನೀರಿನ ಪಸೆಯೇ ಇಲ್ಲದ ಈ ಸ್ಥಳದಲ್ಲಿ ಬೃಹತ್ ಮರವೊಂದು ವರ್ಷವಿಡೀ ಹಚ್ಚ ಹಸಿರಿನಿಂದ ಕಂಗೊಳಿಸುತ್ತೆ! ಈ ಅದ್ಭುತವಾದ ಏಕೈಕ ಮರ ಕಾಣ ಸಿಗುವುದು ಬಹರೈನ್ ಎಂಬ ಪುಟ್ಟ ದೇಶದ ಅರೆಬಿಯನ್ ಮರುಭೂಮಿಯ ಮಧ್ಯೆ.

ಈ ಮರ ಜಗತ್ತಿನಾದ್ಯಂತ ಖ್ಯಾತಿಗಳಿಸಿದ್ದು, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿಯೂ ಗುರುತಿಸಿಕೊಂಡಿದೆ. ‘ಟ್ರೀ ಆಫ್ ಲೈಫ್’ ಎಂಬ ಹೆಸರಿನ ಈ ಮರವನ್ನು ಸ್ಥಳೀಯವಾಗಿ ‘ಶಜರತ್-ಅಲ್-ಹಯಾತ್’ ಎಂದು ಕರೆಯಲಾಗುತ್ತದೆ. ಜಗತ್ತಿನ ಕೆಲವೇ ಕೆಲವು ಅದ್ಭುತಗಳಲ್ಲಿ ಈ ‘ಟ್ರೀ ಆಫ್ ಲೈಫ್’ ಒಂದಾಗಿದೆ.

ಮಳೆ, ನೀರನ್ನೇ ಕಾಣದೆ, ಬೆಂಕಿಯಂತೆ ದಿನವಿಡೀ ಉರಿಯುವ ಬಹರೈನ್‌ನ ಒಣ ಮರುಭೂಮಿಯ ಹೃದಯಭಾಗದಲ್ಲಿ ಕಳೆದ 400 ವರ್ಷಗಳಿಂದ ಈ ಮರ ಬದುಕಿ, ಬೆಳೆಯುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Photo: Facebook

ಇಡೀ ಗಲ್ಫ್ ಪ್ರದೇಶದ ಮರುಭೂಮಿಯಲ್ಲಿ ಇದು ಏಕೈಕ ಬೃಹತ್ ಮರವಾಗಿದೆ. ಇದು ಪ್ರಕೃತಿಯ ಪವಾಡವೂ ಆಗಿದ್ದು, ಹತ್ತು ಹಲವು ಪಕ್ಷಿಗಳಿಗೆ ಆಶ್ರಯ ತಾಣವೂ ಆಗಿದೆ.

ಈ ಮರವಿರುವ ಸುತ್ತಮುತ್ತ ಹತ್ತಾರು ಕಿಮೀ ನೀರಿನ ಮೂಲವೇ ಇಲ್ಲ. ಸುಮಾರು ನಾನೂರು ವರ್ಷಗಳಿಂದ ಈ ಒಂಟಿ ಮರ ಹೇಗೆ ಬದುಕಿರಬಹುದು ಎಂಬುದು ವಿಸ್ಮಯವೇ ಸರಿ ಎನ್ನುತ್ತಾರೆ ಪ್ರವಾಸಿಗರು. ಈ ಮರವನ್ನು ಬಹರೈನ್ ಪ್ರವಾಸೋದ್ಯಮ ಇಲಾಖೆ ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿದೆ. ಬಹರೈನ್‌ಗೆ ಭೇಟಿ ನೀಡಿದವರೆಲ್ಲ ಮರುಭೂಮಿಯಲ್ಲಿ ನೂರಾರು ಕಿಮೀ ಪಯಣಿಸಿ ಈ ಒಂದು ಮರವನ್ನು ನೋಡಿ ಆನಂದಿಸುತ್ತಾರೆ.

ಪ್ರತಿ ವರ್ಷ 70 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಈ ವಿಸ್ಮಯ ಮರವನ್ನು ನೋಡಲು ಬರುತ್ತಾರೆ. ಬಹರೈನ್‌ನ ಅತಿ ಎತ್ತರದ ಸ್ಥಳವಾದ ಜೆಬೆಲ್ ದುಖಾನ್‌ನಿಂದ ಸರಿಸುಮಾರು 6 ಕಿಲೋಮೀಟರ್ ಮತ್ತು ಬಹರೈನ್‌ನ ರಾಜಧಾನಿ ಮನಾಮದಿಂದ 40 ಕಿಲೋಮೀಟರ್ ದೂರದಲ್ಲಿದೆ.

ಬಹರೈನ್ ವರ್ಷವಿಡೀ ಬಿಸಿ ವಾತಾವರಣವನ್ನು ಹೊಂದಿದ್ದು, ಇಲ್ಲಿ ಮಳೆಯೇ ಇಲ್ಲ. ಮಳೆ ಬಂದರೂ ತುಂತುರು ಮಾತ್ರ. ಅಂತಹ ವಾತಾವರಣದಲ್ಲಿ ಈ ಮರವು ಮರುಭೂಮಿಯಲ್ಲಿ ಹೇಗೆ ಬದುಕುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Photo: Facebook

ಬಹರೈನ್‌ನ ಪ್ರವಾಸಿಗಳ ಆಕರ್ಷಣೀಯ ಕೇಂದ್ರಗಳಲ್ಲೊಂದಾದ ‘ಟ್ರೀ ಆಫ್ ಲೈಫ್’ ಎಂಬ ಈ ಮರ ಪ್ರೊಸೊಪಿಸ್ ಸಿನೇರಿಯಾ ಜಾತಿಗೆ ಸೇರಿದ ಮರವಾಗಿದೆ. 32 ಅಡಿ ಎತ್ತರ ಹಾಗು ಇದರ ಬೇರುಗಳು 50 ಮೀಟರ್ ಆಳಕ್ಕಿಳಿದಿದೆ. ನೀರಿನ ಮೂಲವೇ ಇಲ್ಲದೆ ಅರೇಬಿಯನ್ ಮರುಭೂಮಿಯ ಬಂಜರು ಪ್ರದೇಶದ ಬೆಟ್ಟದ ಮೇಲೆ ಬದುಕುತ್ತಿರುವ ಈ ಮರವು ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ.

ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವ ಈ ಮರವು ಹೇರಳವಾಗಿ ಹಸಿರು ಎಲೆಗಳಿಂದ ಆವೃತವಾಗಿದೆ. ಇದರ ರಂಬೆ-ಕೊಂಬೆಗಳು ಬೆಳೆಯುತ್ತಿರುವ ಜೊತೆಗೆ ನೆಲದ ಮೇಲೆ ಚಾಚಿಕೊಂಡಿವೆ.

Photo: Facebook

ಅರೆಬಿಯನ್ ಮರುಭೂಮಿಯ ಮರಳು ದಿಬ್ಬಗಳಿಂದ ಸುತ್ತುವರಿದಿರುವ ಈ ಸ್ಥಳದಲ್ಲಿ ಏಕಾಂಗಿ ಬೆಳೆಯುತ್ತಿರುವ ಈ ವಿಸ್ಮಯ ಮರವು ವಿಜ್ಞಾನಿಗಳನ್ನು, ಸಸ್ಯಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿದೆ. ಜೊತೆಗೆ ಈ ಮರದ ಬದುಕು, ಬೆಳವಣಿಗೆಯ ಹಿಂದಿನ ರಹಸ್ಯವನ್ನು ಬಿಚ್ಚಿಡಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ!

ಗಲ್ಫ್ ರಾಷ್ಟ್ರಗಳ ಪೈಕಿ ಅತೀ ಸಣ್ಣ ದ್ವೀಪ ರಾಷ್ಟ್ರವಾಗಿರುವ ಬಹರೈನ್, ತೈಲ ಹಾಗು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದು, ‘ಟ್ರೀ ಆಫ್ ಲೈಫ್’ ವರ್ಷವಿಡೀ ಸಂದರ್ಶಕರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರ ಸೌಂದರ್ಯವನ್ನು ಕಂಡು ಬೆರಗಾಗುವ ಮತ್ತು ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಪ್ರವಾಸಿಗರಿಗೆ ಇದು ಜನಪ್ರಿಯ ತಾಣವಾಗಿದೆ. 2009ರಲ್ಲಿ, ಈ ಮರವನ್ನು ಪ್ರಕೃತಿಯ ಹೊಸ ಏಳು ಅದ್ಭುತಗಳ ಪಟ್ಟಿಗೆ ನಾಮನಿರ್ದೇಶನ ಮಾಡಲಾಗಿತ್ತು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಡುವಂತೆ ಪ್ರವಾಸಿಗರು ಒತ್ತಾಯವನ್ನೂ ಮಾಡಿದ್ದರು. ಜೊತೆಗೆ ಇದನ್ನು ಬಹ್ರೇನ್‌ನ ರಾಷ್ಟ್ರೀಯ ಸಂಕೇತವೆಂದು ಪರಿಗಣಿಸಲಾಗಿದೆ.

ವಿಶ್ವ ವಿಖ್ಯಾತಿಗಳಿಸಿರುವ ಈ ಮರದ ಸೊಬಗನ್ನು ನೋಡಲು ಪ್ರಪಂಚದಾದ್ಯಂತ ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಾರೆ. ಈ ಅವಿಸ್ಮರಣೀಯ ತಾಣದ ನೆನಪಿಗಾಗಿ ಫೋಟೋಗಳನ್ನು ಕ್ಲಿಕ್ಕಿಸಿ ಸಂಭ್ರಮಪಡುತ್ತಾರೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories