ಬಹರೈನ್ಬಹರೈನ್‌; ದ.ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನಿಂದ ಅದ್ದೂರಿಯಾಗಿ ನಡೆದ...

ಬಹರೈನ್‌; ದ.ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನಿಂದ ಅದ್ದೂರಿಯಾಗಿ ನಡೆದ ಕಬಡ್ಡಿ ಟೂರ್ನಮೆಂಟ್; ತುಳುನಾಡು ತಂಡಕ್ಕೆ ಚಾಂಪಿಯನ್ ಪಟ್ಟ; ಫ್ರೆಂಡ್ಸ್ ಬಹರೈನ್ ರನ್ನರ್ ಅಫ್

ಬಹರೈನ್: ಇಲ್ಲಿನ ಕರ್ನಾಟಕ ಮೂಲದ ಅನಿವಾಸಿ ಮುಸ್ಲಿಂ ಸಮುದಾಯದ ಒಕ್ಕೊಟವಾಗಿರುವ “ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್ ” ಸ್ಥಳೀಯ ಇಂಡಿಯನ್ ಕ್ಲಬ್ ನ ಹೊರಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾಟವೊಂದನ್ನು ಏರ್ಪಡಿಸಿದ್ದು, ದ್ವೀಪ(ಬಹರೈನ್)ದ ಎಂಟು ಬಲಿಷ್ಠ ಕಬಡ್ಡಿ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡು ನೆರೆದ ನೂರಾರು ಕ್ರೀಡಾಪ್ರೇಮಿಗಳನ್ನು ಬೆಳಗಿನಿಂದ ತಡರಾತ್ರಿಯವರೆಗೂ ರಂಜಿಸುವಲ್ಲಿ ಸಫಲವಾಯಿತು.

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಸದಸ್ಯರಾಗಿದ್ದು, ಸಂಘಟನೆಗೆ ಅನನ್ಯ ಕೊಡುಗೆ ನೀಡಿ ಮರೆಯಾದ ದಿವಂಗತ ಅಬೂಬಕರ್ ಕೋಯಾ ಹಾಗು ದಿವಂಗತ ಅಬೂಬಕರ್ ಖಾದರ್ ಹೊಳೆಬದಿ ಅವರ ಸ್ಮರಣಾರ್ಥ ಈ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.

ಸಂಘಟನೆಯ ಅಧ್ಯಕ್ಷರಾಗಿ ಬಹರೈನ್‌ನ ಹಾಗು ನಾಡಿನ ಮುಸ್ಲಿಮ್ ಸಮುದಾಯದ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತ ಕಳೆದ 33 ವರುಷಗಳಿಂದ ಸಂಘಟನೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಸಂಘಟನೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅವರ ನೇತೃತ್ವದಲ್ಲಿ ಈ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು.

ಇಲ್ಲಿನ ಕಬಡ್ಡಿ ಫೆಡರೇಷನ್ ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ನೀತಿ ನಿಯಮಾವಳಿಯಂತೆ ಈ ಪಂದ್ಯಾಟವನ್ನು ಆಯೋಜಿಸಿದ್ದು ,ಕಬಡ್ಡಿ ಫೆಡರೇಷನ್ ನ ಅಧಿಕಾರಿಗಳು ಈ ಪಂದ್ಯಾಟದ ಆಯೋಜನೆಯಲ್ಲಿ ಹಾಗು ತೀರ್ಪುಗಾರರಾಗಿ ಸಹಕರಿಸಿದರು.

ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಪಂದ್ಯಾಟವು ವಿದ್ಯುಕ್ತ ಚಾಲನೆಯನ್ನು ಕಂಡಿದ್ದು, ಇಲ್ಲಿನ ಸೆಂಟ್ರಲ್ ಕೆಫೆ ಸಮೂಹ ಹೋಟೆಲ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಉಪಸ್ಥಿತರಿದ್ದರು.

ಲೀಗ್ ಹಂತದಲ್ಲಿ ಎಂಟು ಬಲಿಷ್ಠ ತಂಡಗಳಲ್ಲಿ ತೀವ್ರ ಪೈಪೋಟಿ ನಡೆದು, ಸೆಮಿಫೈನಲ್ ನಲ್ಲಿ ಪಟ್ಟುಕೊಟ್ಟೈ ತಂಡವನ್ನು ಮಣಿಸಿದ ತುಳುನಾಡು ತಂಡ ಅಂತಿಮ ಹಂತಕ್ಕೆ ಏರಿದರೆ, ಬಹರೈನ್ ಬ್ಯಾರೀಸ್ ತಂಡವನ್ನು ಸೋಲಿಸಿ ಫ್ರೆಂಡ್ಸ್ ಬಹರೈನ್ ತಂಡವು ಅಂತಿಮ ಹಂತಕ್ಕೇರಿತು. ಫೈನಲ್ ಪಂದ್ಯಾಟದಲ್ಲಿ ತೀವ್ರ ಪೈಪೋಟಿಯಿದ್ದರೂ ಕೂಡ ತುಳುನಾಡು ತಂಡವು ಗ್ರ್ಯಾಂಡ್ ಕಬಡ್ಡಿ ಪಂದ್ಯಾಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಬಹರೈನ್ ತಂಡ ರನ್ನರ್ ಅಫ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ತಡರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಹರೈನ್‌ನ ಯುನೀಕೋ ಸಮೂಹ ಸಂಸ್ಥೆಗಳ ಸಿ .ಓ .ಓ ಜಯಶಂಕರ್ ವಿಶ್ವನಾಥನ್, ಇಲ್ಲಿನ ಕಬಡ್ಡಿ ಫೆಡರೇಷನ್ ನ ಅಧ್ಯಕ್ಷರಾದ ಸಾಮಿ ಆಲಿ, ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಮಾಜಿ ಅಧ್ಯಕ್ಷರಾದ ಅಮರನಾಥ್ ರೈ, ಪ್ರದೀಪ್ ಶೆಟ್ಟಿ, ಸೆಂಟ್ರಲ್ ಕೆಫೆ ಸಮೂಹ ಹೋಟೆಲ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ, ಉಡುಪಿಯ ಉದ್ಯಮಿ ಹಾಗು ಸಮಾಜಸೇವಕ ಮುಬಾರಕ್, ಬಿ.ಕೆ.ಉಮ್ಮೆರ್ ಸಾಹೇಬ್, ಸಯ್ಯದ್ ಹೆಜಮಾಡಿ, ನಾಸರ್ ಮುಂತಾದವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅವರು ಮಾತನಾಡಿ, ಕಬಡ್ಡಿ ಪಂದ್ಯಾಟದ ಯಶಸ್ಸಿಗಾಗಿ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತ, ಇಂತಹ ಕ್ರೀಡೆಗಳು ನಮ್ಮೆಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ನಮ್ಮನ್ನು ಅಗಲಿದ ಅಬೂಬಕರ್ ಕೋಯಾ ಹಾಗು ಅಬೂಬಕರ್ ಖಾದರ್ ಹೊಳೆಬದಿಯವರನ್ನು ಈ ಕಬಡ್ಡಿ ಪಂದ್ಯಾಟದ ಮೂಲಕ ಸ್ಮರಿಸುವ ಜೊತೆಗೆ ಎಲ್ಲಾ ಜಾತಿ, ಧರ್ಮಗಳನ್ನು ಮೀರಿ ನಾವೆಲ್ಲರೂ ಒಂದು ಎನ್ನುವ ಸಂದೇಶವನ್ನು ಸಾರುವುದೇ ಈ ಪಂದ್ಯಾಟದ ಉದ್ದೇಶ ಎಂದರು.

ಇದೇ ಸಂದರ್ಭದಲ್ಲಿ ಕಬಡ್ಡಿ ಫೆಡರೇಷನ್ ನ ಅಧಿಕಾರಿಗಳಿಗೆ ಪ್ರಶಂಸಾ ಪತ್ರಗಳೊಂದಿಗೆ ಉಡುಗೊರೆಗಳನ್ನು ನೀಡಲಾಯಿತು. ಅಲ್ಲದೆ ಕಬಡಿ ಫೆಡರೇಷನ್ ನ ಅಧ್ಯಕ್ಷರಾದ ಸಾಮಿ ಅಲಿ, ಮುಖ್ಯ ಅತಿಥಿ ಜಯಶಂಕರ್, ಗೌರವಾನ್ವಿತ ಅತಿಥಿ ಮುಬಾರಕ್, ಕಾರ್ಯಕ್ರಮದ ನಿರೂಪಕರಾದ ಕಮಲಾಕ್ಷ ಅಮೀನ್ ರವರಿಗೆ ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು.

ವಿಜೇತ ಹಾಗು ದ್ವಿತೀಯ ಸ್ಥಾನದ ತಂಡಗಳಿಗೆ ಟ್ರೋಫಿಗಳನೊಂದಿಗೆ ನಗದು ಬಹುಮಾನ, ಸೆಮಿಫೈನಲ್ ತಲುಪಿರುವ ತಂಡಗಳಿಗೆ ಟ್ರೋಫಿಗಳು ಹಾಗು ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಪಂದ್ಯಾಟದ ಉದಯೋನ್ಮುಖ ಆಟಗಾರ, ಅತ್ಯುತ್ತಮ ಸವ್ಯಸಾಚಿ ಹೀಗೆ ವೈಯಕ್ತಿಕ ವಿಭಾಗದಲ್ಲೂ ಟ್ರೋಫಿಗಳನ್ನು ನೀಡಲಾಯಿತು.

ವರದಿ: ಕಮಲಾಕ್ಷ ಅಮೀನ್

Hot this week

ಖತರ್‌ನಲ್ಲಿ ಕನ್ನಡಿಗ ಶಿಕ್ಷಕರಿಗೆ ಸನ್ಮಾನ; ಕರ್ನಾಟಕ ಸಂಘ ಖತರ್‌ನಿಂದ ವಿಜೃಂಭಣೆಯ ಶಿಕ್ಷಕರ ದಿನಾಚರಣೆ

ದೋಹಾ: ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಹಾಗೂ ಶಿಕ್ಷಣತಜ್ಞರ ಪಾತ್ರವನ್ನು ಸ್ಮರಿಸುವ ನಿಟ್ಟಿನಲ್ಲಿ...

ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ: ಸೆ.25ರಂದು ‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ -2026’

ಬಹರೈನ್: ಯಕ್ಷಗಾನಕ್ಕೂ ಹಾಗು ಬಹರೈನ್ ಕನ್ನಡ ಸಂಘಕ್ಕೂ ಸುಮಾರು ನಾಲ್ಕೂವರೆ ದಶಕಗಳ...

ಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಆಲ್ಬನಿ, ನ್ಯೂಯಾರ್ಕ್: ಭಾರತದ ಹೋಟೆಲ್ ಅಥವಾ ಆಹಾರ ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡರೆ,...

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೇರಿಕದ ತುಳುವರಲ್ಲಿ ಸಂಭ್ರಮ!

ಅಮೇರಿಕ: ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ...

Related Articles

Popular Categories