ದುಬೈ: ದುಬೈನ ಕಾನ್ಸುಲೇಟ್ ಕಚೇರಿಗೆ ಭೇಟಿ ನೀಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್(ಬಿಸಿಸಿಐ) ಯುಎಇ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಹಾಗು ಸದಸ್ಯರು ಕಾನ್ಸುಲ್ ಜನರಲ್ ಆಫ್ ಇಂಡಿಯಾ ಸತೀಶ್ ಶಿವನ್ ಅವರನ್ನು ಭೇಟಿ ಮಾಡಿ ಸಮುದಾಯದ ಹಾಗೂ ಅನಿವಾಸಿಗಳ ಹಲವಾರು ಸಮಸ್ಯೆ ಹಾಗು ಇನ್ನಿತರ ವಿಷಯಗಳ ಕುರಿತು ಚರ್ಚಿಸಿದರು.
ಇತ್ತೀಚೆಗೆ ನಡೆದ ಬ್ಯಾರಿ ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಸತೀಶ್ ಶಿವನ್ ಅವರ ವಿಶೇಷ ಆಹ್ವಾನದ ಮೇರೆಗೆ ಬಿಸಿಸಿಐ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಭೇಟಿ ನೀಡಿದ್ದರು.
ಕೆಲವು ಸಮಯಗಳಿಂದ ಕರ್ನಾಟಕದವರು ಎದುರಿಸುತ್ತಿರುವ ವಿಸಾ ಸಮಸ್ಯೆ ಬಗ್ಗೆ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಈ ವೇಳೆ ಗಮನಸೆಳೆದಾಗ ಉತ್ತರಿಸಿದ ಕಾನ್ಸುಲ್ ಜನರಲ್, ಕಳೆದ ವರ್ಷ ಘೋಷಿಸಿದ್ದ ಅಮ್ನೆಸ್ಟಿ ಹಾಗೂ ಅದರ ನಂತರ ಯುಎಇ ಸರ್ಕಾರದ ಕೆಲವು ಕಠಿಣ ವಿಸಾ ನಿಲುವಿನಿಂದಾಗಿ ಈ ಬದಲಾವಣೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವುದು ಕೇವಲ ಒಂದು ರಾಜ್ಯ, ಸಮುದಾಯ, ಪ್ರದೇಶದ ಜನರು ಮಾತ್ರವಲ್ಲ, ಭಾರತದ ಎಲ್ಲಾ ರಾಜ್ಯದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಹಾರ ಕಾಣಲಿದೆ ಎಂದರು.
ಯಾರೂ ಕೂಡ ಏಜೆಂಟ್ ಗಳ ಮೋಸಕ್ಕೆ ಬಲಿಯಾಗಬಾರದು, ಕೆಲಸದ ಆಮಿಷ ಒಡ್ಡಿ ವಿಸಿಟ್ ವಿಸಾದಲ್ಲಿ ಇಲ್ಲಿಗೆ ಕಾರ್ಮಿಕರನ್ನು ಕರೆತಂದು ಅತಂತ್ರ ಸ್ಥಿತಿಯಲ್ಲಿ ಸಮಸ್ಯೆಗೆ ಸಿಲುಕಿಸುವವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಬಿಸಿಸಿಐ ಹಾಗೂ ದುಬೈ ಕಾನ್ಸುಲೇಟ್ ಜಂಟಿಯಾಗಿ ಮಾಡಬೇಕು. ಯುಎಇಗೆ ಕೆಲಸ ಅರಸಿ ವಿಸಿಟ್ ವಿಸಾದಲ್ಲಿ ಬಂದವರು ವಿಸಾ ಅವಧಿ ಮುಗಿದ ನಂತರವೂ ಹಿಂತಿರುಗಿದೇ ಇದ್ದರೆ ಅವರಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು. ಕೆಲಸಕ್ಕಾಗಿ ಬರುವವರು ಕೆಲಸದ ವರ್ಕ್ ಪರ್ಮಿಟ್ ವೀಸಾ, ರೆಸಿಡೆನ್ಸ್ ವೀಸಾದಲ್ಲೇ ಬರಲಿ ಎಂಬುದೇ ನನ್ನ ನಿಲುವು ಎಂದು ಸತೀಶ್ ಶಿವನ್ ಹೇಳಿದರು.
ಇತ್ತೀಚಿಗೆ ದುಬೈಯಲ್ಲಿ ನಡೆದ ಬ್ಯಾರಿ ಮೇಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದ ಬ್ಯಾರಿ ಸಮುದಾಯದ ಜನರ ಒಗ್ಗಟ್ಟು, ಶಿಸ್ತು ಕಂಡು ಹಾಗೂ ಬ್ಯಾರಿಗಳ ಸಾಧನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಕಾನ್ಸುಲ್ ಜನರಲ್ ಸತೀಶ್, ದುಬೈ ಕಾನ್ಸುಲೇಟ್ ನಲ್ಲಿ ಮುಂದೆ ನಡೆಯುವ ಎಲ್ಲಾ ಬ್ಯುಸಿನೆಸ್ ಸಮ್ಮಿಟ್ ಗೆ ಬಿಸಿಸಿಐಗೆ ಆಹ್ವಾನ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಬಿಸಿಸಿಐ ನಡೆಸುವ ಎಲ್ಲಾ ವೃತ್ತಿಪರ, ಸಮುದಾಯದ ಪರ, ಬ್ಯಾರಿ ಕಾರ್ಯಕ್ರಮಗಳಲ್ಲಿ ತಾನು ಸಕ್ರಿಯವಾಗಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಸಿಸಿಐ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್, ಮುಶ್ತಾಕ್ ಕದ್ರಿ, ಇಮ್ರಾನ್ ಖಾನ್ ಎರ್ಮಾಳ್ ಹಾಗೂ ಏಮ್ ಇಂಡಿಯಾ ಫೋರಂ ಸ್ಥಾಪಕ ಶೇಕ್ ಮುಝಫರ್, ನಿಯಾಝ್ ಉಪಸ್ಥಿತರಿದ್ದರು.