ದುಬೈ: ಬ್ಯಾರಿಗಳು ಶಾಂತಿ ಪ್ರಿಯರು, ಸೌಹಾರ್ದ ಪ್ರೇಮಿಗಳು. ಎಲ್ಲರೊಂದಿಗೆ ಬೆರೆತುಕೊಂಡು ಹೋಗುವವರು. ಬ್ಯಾರಿ ಸಮುದಾಯ ತನ್ನ ಸಂಸ್ಕೃತಿಯನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನಾವು ನಮ್ಮ ಸಮುದಾಯಕ್ಕೆ ಬೇಕಾದ ಕಾರ್ಯಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ನ ಸಿಇಓ ಝಕರಿಯ ಜೋಕಟ್ಟೆ ಅಭಿಪ್ರಾಯಪಟ್ಟರು.



ಇಲ್ಲಿನ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ರವಿವಾರ ಆಯೋಜಿಸಲಾಗಿರುವ ‘ಬ್ಯಾರಿ ಮೇಳ-2025’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದಿನ ವರ್ಷ 2026ರ ಈದ್ ಹಬ್ಬದ ಬಳಿಕ ಸೌದಿ ಅರೇಬಿಯಾದಲ್ಲಿ ಬ್ಯಾರಿ ಮೇಳವನ್ನು ಆಯೋಜಿಸುವುದಾಗಿ ಝಕರಿಯ ಜೋಕಟ್ಟೆ ಘೋಷಿಸಿದರು.
ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳವನ್ನು ಮಂಗಳೂರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಉದ್ಘಾಟಿಸಿ ಶುಭ ಹಾರೈಸಿದರು.

ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಅಧ್ಯಕ್ಷೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಗೋಳ್ತಮಜಲು ರಝಕ್ ಹಾಜಿ, ಬದ್ರುದ್ದೀನ್, ಇಮ್ತಿಯಾಜ್, ರೊನಾಲ್ಡ್ ಮಾರ್ಟಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಹಮ್ಮದ್ ಅಝ್ಫಾನ್ ಸೊಂಪಾಡಿ ಕಿರಾತ್ ಪಠಿಸಿದರು. ‘ಬ್ಯಾರಿ ಮೇಳ ಸಂಚಾಲಕ, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಷಾ ಮಂತೂರ್ ಸ್ವಾಗತಿಸಿದರು. ಅಝರ್ ಹಂಡೇಲ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕೋಶಾಧಿಕಾರಿ ಹಂಝ ವಂದಿಸಿದರು.