ದುಬೈ: ಇಲ್ಲಿನ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಹಾಗು ಉತ್ತರ ಎಮಿರೇಟ್ಸ್, ಏಕತಾ (Unity) ಸಹಭಾಗಿತ್ವದಲ್ಲಿ ಏಮ್ ಇಂಡಿಯಾ ಫೋರಂ ಅವರ ಸಹಯೋಗದಲ್ಲಿ ಶಾರ್ಜಾದ ಪ್ಯಾನ್ ಗಲ್ಫ್ ಲೇಬರ್ ಕ್ಯಾಂಪ್‌ನಲ್ಲಿ ಆರೋಗ್ಯ ಮತ್ತು ಹಣಕಾಸು ಅರಿವು ಕುರಿತ ಜಾಗೃತಿ ಶಿಬಿರವನ್ನು ರವಿವಾರ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಬ್ಲೂ ಕಾಲರ್ ಕಾರ್ಮಿಕರಿಗೆ ಆರೋಗ್ಯ ಮತ್ತು ಹಣಕಾಸು ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Aim India Forum ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶೇಕ್ ಮುಝಫರ್ ಅವರು ಮಾತನಾಡಿ, ಬ್ಲೂ ಕಾಲರ್ ಕಾರ್ಮಿಕರ ಕಲ್ಯಾಣಕ್ಕಾಗಿ ವೇದಿಕೆ ಒದಗಿಸಿದ್ದಕ್ಕಾಗಿ ಪ್ಯಾನ್ ಗಲ್ಫ್ ಇಂಟರ್‌ನ್ಯಾಷನಲ್ ಮೆಟಲ್ಸ್ ಇಂಡಸ್ಟ್ರೀಸ್ ಯುಎಇಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅಂಶುಲ್ ಗುಪ್ತ ಅವರಿಗೆ ಮತ್ತು ಉತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿರುವ ಅಲ್ ಖಾಸಿಮಿಯಾ ಆಸ್ಪತ್ರೆ ಶಾರ್ಜಾದ ಶಸ್ತ್ರಚಿಕಿತ್ಸಕರಾದ, ಏಕತಾ ಅಧ್ಯಕ್ಷ ಡಾ. ಸತೀಶ್ ಕೃಷ್ಣನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಸಿಮ್ ಕಾರ್ಡ್ ಮೋಸದ ಕುರಿತು ವಿಶೇಷ ಮಾಹಿತಿ ನೀಡಿದರು.


ಕಾರ್ಯಕ್ರಮದ ಕೊನೆಯಲ್ಲಿ ದುಬೈಯ ಡೆಪ್ಯುಟಿ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಯತಿನ್ ಪಟೇಲ್, ಪಾಸ್‌ಪೋರ್ಟ್ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ಪಾಸ್‌ಪೋರ್ಟ್ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದು ಮತ್ತು ಗುರುತಿನ ಪ್ರಮಾಣಪತ್ರವಾಗಿ ಪಾಸ್‌ಪೋರ್ಟ್‌ನ ಸುರಕ್ಷತೆಯ ಮಹತ್ವವನ್ನು ಉಲ್ಲೇಖಿಸಿದರು. ಬ್ಲೂ ಕಾಲರ್ ಕಾರ್ಮಿಕರ ಗುರುತನ್ನು ಬಳಸಿಕೊಂಡು ಬ್ಯಾಂಕುಗಳಿಂದ ಕಾನೂನುಬಾಹ್ಯ ಸಾಲ ಪಡೆಯಲು ಮೋಸಗಾರರು ಪ್ರಯತ್ನಿಸುವ ಬಗ್ಗೆ ಎಚ್ಚರಿಕೆ ನೀಡಿದರು ಮತ್ತು ಕಾರ್ಮಿಕರು ಈ ರೀತಿಯ ತಪ್ಪುಗಳಿಂದ ದೂರವಿರಬೇಕು ಎಂದು ತಿಳಿಸಿದರು. ಭಾರತೀಯ ಕಾನ್‌ಸ್ಯುಲೇಟ್‌ನ ಕಾರ್ಮಿಕ ಮತ್ತು ಐಸಿಡಬ್ಲ್ಯೂಎಫ್ ವಿಭಾಗದ ಉಪ ಕಾನ್‌ಸ್ಯುಲ್ ದೀಪಕ್ ಡಾಗರ್ ಈ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.


