ಯುಎಸ್‌ಎಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಡಾ.ಮಾರ್ಟಿನ್ ಲೂಥರ್ ಕಿಂಗ್ ಕೊಡುಗೆಗಳು

ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಡಾ.ಮಾರ್ಟಿನ್ ಲೂಥರ್ ಕಿಂಗ್ ಕೊಡುಗೆಗಳು

ಅಟ್ಲಾಂಟಾ ನಗರದ ನೃಪತುಂಗ ಕನ್ನಡ ಕೂಟವು 2023ರಲ್ಲಿ ತನ್ನ  50ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಅಟ್ಲಾಂಟಾ ಕನ್ನಡಿಗರಿಗೆ ಹೆಮ್ಮೆಯ ಸಂಭ್ರಮ.

ನಾನು 23 ವರ್ಷಗಳ ಹಿಂದೆ ಅಟ್ಲಾಂಟಾ ನಗರಕ್ಕೆ ಬಂದಾಗ, ಇಲ್ಲಿನ ಇತಿಹಾಸ, ಸಂಸ್ಕೃತಿ, ಸಂಗೀತ ಹಾಗೂ ಖಾದ್ಯಗಳ ಬಗ್ಗೆ ಅರಿಯಲು ಆಸಕ್ತಿ ವಹಿಸಿದೆ. ಇಲ್ಲಿನ ಇತಿಹಾಸ ಅರಿತು ಈ ದೇಶದ ಪ್ರಜೆಗಳ ಜೊತೆ ಸಮೀಕೃತಗೊಂಡಾಗ ಮಾತ್ರ ನಾವು ಅಮೆರಿಕದ ನಿಜವಾದ ಸತ್ಪ್ರಜೆಯಾಗಲು ಸಾಧ್ಯ. ಇಲ್ಲವಾದಲ್ಲಿ ನಾವು ಅಮೆರಿಕದ ಸಮಾಜದಲ್ಲಿ ಕೂಪಮಂಡೂಕದಂತೆ ಬದುಕಿದಂತಾಗುತ್ತದೆ.

ಅಟ್ಲಾಂಟಾ ಎಂದಾಕ್ಷಣ ಮೊದಲಿಗೆ ಜ್ಞಾಪಕ ಬಂದಿದ್ದು – (1) ವಿಶ್ವದ ಅತಿ ಹೆಚ್ಚು ಕಾರ್ಯನಿರತ(ಹೆಚ್ಚು ಸಂಖ್ಯೆಯ ವಿಮಾನಗಳ ಆಗಮನ/ನಿರ್ಗಮನ)(World’s Busiest Airport)ವಿಮಾನ ನಿಲ್ದಾಣ, (2) 1996ರ ಒಲಿಂಪಿಕ್ಸ್, (3) ಕೋಕಾಕೋಲಾ ಪಾನೀಯ, (4) ಅಮೆರಿಕದ ದಕ್ಷಿಣದ ಅಡುಗೆಗಳು ಹಾಗೂ ಆತಿಥ್ಯ, (5)ಮಾಜಿ ಅಧ್ಯಕ್ಷ ಜಿಮ್ಮಿಕಾರ್ಟರ್ ಹಾಗೂ (6) ನಾನು ಚಿಕ್ಕಂದಿನಲ್ಲಿ ನೋಡಿದ್ದ ಸಿನೆಮಾ (Gone with the wind) ‘ಗಾನ್ ವಿತ್ ವಿಂಡ್’. ಇವೆಲ್ಲದರ ಜೊತೆಗೆ ಅಮೆರಿಕ ದೇಶದಲ್ಲಿ ವರ್ಣಭೇದದ ಅಸಮಾನತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದ ಡಾ.ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಜನ್ಮ ಹಾಗೂ ಕರ್ಮಭೂಮಿ ಸಹ ಇದೆ ಅಟ್ಲಾಂಟಾ ನಗರವೆಂದು ಅರಿತಾಗ ಕುತೂಹಲ ಹೆಚ್ಚಾಗಿ ಅವರ ಬಗ್ಗೆ ತಿಳಿಯಲು ಡಾ.ಕಿಂಗ್ ಸ್ಮಾರಕ ನೋಡಲು ನಾನು ಕುಟುಂಬ ಸಮೇತ ಹೋದೆ. ಸ್ಮಾರಕದ ಪ್ರವೇಶ ದ್ವಾರದಲ್ಲಿ ಮೊದಲಿಗೆ ಕಂಡಿದ್ದೆ ಮಹಾತ್ಮ ಗಾಂಧಿಯವರ ಪ್ರತಿಮೆ!

ಸಪ್ತ ಸಮುದ್ರ ದಾಟಿ ಅಮೆರಿಕಗೆ ಬಂದರೂ ಸಹ, ಭಾರತವನ್ನುಗುಲಾಮಗಿರಿಯಿಂದ ಮುಕ್ತರಾಗಿಸಲು ತನ್ನ ಪ್ರಾಣ ತೆತ್ತ ಮಹಾತ್ಮನ ಪ್ರತಿಮೆಯನ್ನು ಅಟ್ಲಾಂಟಾದಲ್ಲಿ ನೋಡಿ ಭಾರತೀಯನಾಗಿ ನನ್ನ ಎದೆ ಉಬ್ಬಿ ಬಂದಿತು. ಸ್ಮಾರಕದ ಒಳಗಿನ ಆಡಿಯೋ, ವಿಡಿಯೋ, ಫೋಟೋ, ಬರಹಗಳನ್ನು ಕಂಡು ಕೇಳಿದಾಗ ಡಾ. ಕಿಂಗ್ ಅವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಚಳವಳಿ ಹಾಗೂ ಅಸಹಕಾರ ಚಳವಳಿಯನ್ನು ಆಳವಾಗಿ ಅಧ್ಯಯನ ಮಾಡಿ ಅದರಿಂದ ಎಷ್ಟು ಸ್ಫೂರ್ತಿ ಪಡೆದಿದ್ದರೆಂದು ತಿಳಿಯಿತು.   

1959 ರ ತಮ್ಮ ಭಾರತ ಭೇಟಿಯ ಸಮಯದಲ್ಲಿ ಡಾ.ಕಿಂಗ್ ಅವರು ರಾಜಘಾಟ್ ನಲ್ಲಿ ಮಹಾತ್ಮನ ಸಮಾಧಿಗೆ ಪುಷ್ಪ ನಮನ ಸಲ್ಲಿಸುತ್ತಿರುವುದು

ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (ಮೂಲ ಹೆಸರು: ಮೈಕಲ್ ಕಿಂಗ್ ಜೂನಿಯರ್) ಅವರು ಜನವರಿ 15, 1929ರಲ್ಲಿ ಅಟ್ಲಾಂಟಾ ನಗರದಲ್ಲಿ ಜನಿಸಿದರು (ತಂದೆ: ಮೈಕಲ್ ಕಿಂಗ್ ಸೀನಿಯರ್, ತಾಯಿ: ಆಲ್ಬರ್ಟಾ ಕಿಂಗ್). 1934ರಲ್ಲಿ ಇವರ ತಂದೆ ಮೈಕಲ್ ಕಿಂಗ್ ಸೀನಿಯರ್ ಜರ್ಮನಿ ಪ್ರವಾಸದಲ್ಲಿ ಕ್ರೈಸ್ತ ಧರ್ಮದ ಪ್ರೊಟೆಸ್ಟೆಂಟ್ ಸುಧಾರಕರಾದ ಮಾರ್ಟಿನ್ ಲೂಥರ್ ಅವರ ಬಗ್ಗೆ ಅಧ್ಯಯನ ಮಾಡುವಾಗ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ವಾಪಸ್ ಅಟ್ಲಾಂಟಾಗೆ ಬಂದಾಗ ತಮ್ಮ ಹೆಸರನ್ನು ಹಾಗೂ ತಮ್ಮ ಮಗನ ಹೆಸರನ್ನು ‘ಮೈಕಲ್’ನಿಂದ ‘ಮಾರ್ಟಿನ್ ಲೂಥರ್’ ಎಂದು ಬದಲಾಯಿಸಿಕೊಂಡರು. ತಮ್ಮ ಹೆಸರಿನ ಮುಂದೆ ಸೀನಿಯರ್ ಎಂದೂ ಹಾಗೂ ಮಗನ ಹೆಸರ ಮುಂದೆ ಜೂನಿಯರ್ ಎಂದೂ ಸೇರಿಸಿಕೊಂಡರು.

ಚಿಕ್ಕ ವಯಸ್ಸಿನಿಂದಲೂ ತನ್ನೊಂದಿಗೆ ಆಟವಾಡುತ್ತಿದ್ದ ಬಿಳಿಯ ಸಹಪಾಠಿಯು ತಮ್ಮ ಆರನೇ ವಯಸ್ಸಿನಲ್ಲಿ ಶಾಲೆಗೆ ಸೇರುವಾಗ ಬಿಳಿಯರ ಶಾಲೆಗೆ ಸೇರಿ, ಮಾರ್ಟಿನ್ ಕರಿಯರ ಶಾಲೆಗೆ ಸೇರಬೇಕಾಯಿತು. ಅಲ್ಲಿಂದ ಮುಂದೆ ಬಿಳಿ ಹುಡುಗನ ಪೋಷಕರು ಮಾರ್ಟಿನ್ ಗೆ ತಮ್ಮ ಮಗನ ಜೊತೆಗೆ ಆಟವಾಡಲು ತಡೆದರು. ಇದರಿಂದ ಬಾಲಕ ಮಾರ್ಟಿನ್ ಗೆ ವರ್ಣಭೇದದ ಹಾಗೂ ತಾರತಮ್ಯದ ಮೊದಲ ಅನುಭವವಾಯಿತು. ಆದರೆ, ಮಾರ್ಟಿನ್ ನ ತಂದೆ ಬೈಬಲ್ ಓದಿ ಕ್ರಿಶ್ಚಿಯನ್ ಧರ್ಮದ ಪ್ರಕಾರ ನಾವು ಯಾರನ್ನೂ ದ್ವೇಷಿಸಬಾರದೆಂದು ಬೋಧಿಸಿದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮಾರ್ಟಿನ್, ಶಬ್ದಕೋಶದ ಅಧ್ಯಯನದ ಮೂಲಕ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಸಾಧಿಸಿ ಒಳ್ಳೆಯ ವಾಗ್ಮಿ ಹಾಗೂ ಬರಹಗಾರರಾದರು.

ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಭಾರತವು ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ ಯುವಕ ಮಾರ್ಟಿನ್ ಅಟ್ಲಾಂಟಾದ ಮೋರ್ ಹೌಸ್ ಕಾಲೇಜಿನಿಂದ ಸಮಾಜ ಶಾಸ್ತ್ರದ ಡಿಗ್ರಿಯನ್ನು ತಮ್ಮ 19ನೆ ವಯಸ್ಸಿನಲ್ಲಿ ಪಡೆದು, 1955ರಲ್ಲಿ ಬಾಸ್ಟನ್  ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆಯುತ್ತಾರೆ. 1953ರಲ್ಲಿ ಬಾಸ್ಟನ್  ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಕಾರ್ಲೆಟ್ಟ (ಸ್ಕಾಟ್) ಕಿಂಗ್ ಅವರನ್ನು ವರಿಸಿ ಮದುವೆಯಾದರು. ಡಾ.ಕಿಂಗ್ ಹಾಗೂ ಕಾರ್ಲೆಟ್ಟ ಕಿಂಗ್ ಅವರಿಗೆ ಇಬ್ಬರು ಹೆಣ್ಣು ಹಾಗು ಇಬ್ಬರು ಗಂಡು ಮಕ್ಕಳು.

ತಮ್ಮ ವಿದ್ಯಾಭ್ಯಾಸದ ನಂತರ ಡಾ.ಕಿಂಗ್, ಪಕ್ಕದ ಅಲಬಾಮಾ ರಾಜ್ಯದ ಮಾಂಟ್ಗೊಮೆರಿ ನಗರದ ಚರ್ಚ್ ನಲ್ಲಿ ಪಾದ್ರಿಯಾಗಿ ಕೆಲಸ ಆರಂಭಿಸಿದರು. ಆಗ ಆ ನಗರದಲ್ಲಿ ಅತಿ ಹೆಚ್ಚು ವರ್ಣಭೇದ ತಾರತಮ್ಯದಿಂದ ಕಪ್ಪು ಜನರ ಮೇಲೆ ಹಲ್ಲೆ ಹಾಗೂ ಬಂಧನಗಳು ಆಗುತ್ತಿತ್ತು.

ಡಿಸೆಂಬರ್ 1, 1955ರಂದು ಬಸ್ಸಿನಲ್ಲಿ ತಾನು ಕುಳಿತಿದ್ದ ಸೀಟನ್ನು ಬಿಳಿಯನಿಗೆ ಬಿಟ್ಟುಕೊಡಲು ನಿರಾಕರಿಸಿದ ಆರೋಪದ ಮೇಲೆ ಕಪ್ಪು ಹೋರಾಟಗಾರ್ತಿ ರೋಸಾಪಾರ್ಕ್ಸ್ ಅವರನ್ನು ಬಂಧಿಸಲಾಯಿತು. ಡಾ.ಕಿಂಗ್ ಅವರು ಆಗ ರೋಸಾಪಾರ್ಕ್ಸ್ ಅವರ ಬೆಂಬಲವಾಗಿ ನಿಂತು ಸರ್ಕಾರಿ ಬಸ್ಸುಗಳನ್ನು ಕಪ್ಪು ಜನರು ಬಹಿಷ್ಕರಿಸಬೇಕೆಂದು ಕರೆ ನೀಡಿದರು. ಈಬಹಿಷ್ಕಾರವು 381 ದಿವಸ ನಡೆಯಿತು. ಕೊನೆಗೆ ನ್ಯಾಯಾಲಯವು, ಮಾಂಟ್ಗೊಮೆರಿ ನಗರದ ಸಾರ್ವಜನಿಕ ಬಸ್ಸುಗಳಲ್ಲಿ ವರ್ಣಭೇದವನ್ನು ಕೊನೆಗೊಳಿಸುವ ತೀರ್ಪು ಜಾರಿ ಮಾಡಿ ಕಪ್ಪು ಜನರು ಮುಂದಿನ ಸೀಟುಗಳಲ್ಲಿ ಗೌರವ, ಸಮಾನತೆಯಿಂದ ಬಿಳಿಯರೊಂದಿಗೆ ಕುಳಿತುಕೊಳ್ಳುವ ಜಯ ಸಿಕ್ಕಿತು. ಈ ಹೋರಾಟದ ಸಮಯದಲ್ಲಿ ಉದ್ವಿಗ್ನ ಸ್ಥಿತಿ ತಾರಕಕ್ಕೆ ಏರಿ ಡಾ.ಕಿಂಗ್ ಅವರನ್ನು ಒಮ್ಮೆ ಬಂಧಿಸಲಾಯಿತು ಹಾಗೂ ಅವರ ಮನೆಯ ಮೇಲೆ ಬಾಂಬ್ಎಸೆಯಲಾಯಿತು. ಈ ಹೋರಾಟವುಡಾ.ಕಿಂಗ್ ಅವರ ಮುಂದಿನ ಹೋರಾಟಗಳಿಗೆ ಅವರನ್ನು ಮುಂಚೂಣಿಗೆ ತರಲು ನಾಂದಿಯಾಯಿತು.

ಡಾ.ಕಿಂಗ್ ಅವರ ನಂತರದ ಹೋರಾಟವು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಜುಲೈ2, 1964ರಲ್ಲಿ ನಾಗರಿಕ ಹಕ್ಕುಗಳ ಕಾಯಿದೆಯು (Civil RightsAct) ಅಧ್ಯಕ್ಷ ಲಿಂಡನ್ ಜಾನ್ಸನ್ ಅವರು ಸಹಿ ಹಾಕುವ ಮೂಲಕ ಅಮೆರಿಕದ ಪ್ರತಿಯೊಬ್ಬ ಪ್ರಜೆಗೂ ವರ್ಣಭೇದವಿಲ್ಲದೆ ಸಮಾನತೆಯನ್ನು ನೀಡಿತು. ಭಾರತೀಯ ಮೂಲದ ನಾವೆಲ್ಲರೂ ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರ ಹೋರಾಟದ ಇತಿಹಾಸವನ್ನು ಎಂದೆಂದೂ ನೆನಪಿಸಿಕೊಳ್ಳಬೇಕು ಹಾಗೂ ನಮ್ಮ ಮಕ್ಕಳಿಗೆ ಇದರ ಮಹತ್ವವನ್ನು ತಿಳಿಹೇಳಬೇಕು. ಡಾ.ಕಿಂಗ್ ಅವರ ಹೋರಾಟದ ಫಲವಾಗಿ ಭಾರತೀಯ ಮೂಲದ ನಾವೆಲ್ಲರೂ ವರ್ಣಭೇದದ ತಾರತಮ್ಯವಿಲ್ಲದೆ ಇಂದು ಗೌರವ ಹಾಗೂ ಸಮಾನತೆಯಿಂದ ಅಮೆರಿಕದಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಭಾರತದಲ್ಲಿ ಹೇಗೆ ಮಹಾತ್ಮ ಗಾಂಧೀ ಸ್ವಾತಂತ್ರ್ಯಕ್ಕೋಸ್ಕರ ತಮ್ಮ ಜೀವ ತೆತ್ತರೋ, ಅದೇ ರೀತಿ ಅಮೆರಿಕದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ ಡಾ.ಕಿಂಗ್ ಅವರನ್ನು ಸಹ ಎಪ್ರಿಲ್ 4, 1968ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆಗ ಡಾ.ಕಿಂಗ್ ಅವರ ವಯಸ್ಸು ಕೇವಲ 39 ವರ್ಷ.

1959 ರ ತಮ್ಮ ಭಾರತ ಭೇಟಿಯ ಸಮಯದಲ್ಲಿ ಡಾ.ಮಾರ್ಟಿನ್ ಲೂಥರ್ ಕಿಂಗ್ ಅವರು ರಾಜಘಾಟ್ ನಲ್ಲಿ ಮಹಾತ್ಮನ ಸಮಾಧಿಗೆ ಪುಷ್ಪ ನಮನ ಸಲ್ಲಿಸುತ್ತಿರುವುದು.

ನಾನು ಇಲ್ಲಿ ಡಾ. ಕಿಂಗ್ ಅವರ 1959ರ ಭಾರತ ಭೇಟಿಯ ಬಗ್ಗೆ ತಿಳಿಸಲೇಬೇಕು. ಫೆಬ್ರವರಿ 10, 1959ರಂದು ತಮ್ಮ ಆದರ್ಶಪ್ರಿಯರಾದ ಮಹಾತ್ಮನ ದೇಶಕ್ಕೆ ಕಾಲಿಡುತ್ತಿದ್ದಂತೆ ಡಾ. ಕಿಂಗ್ ಹೇಳಿದ ಮಾತು“To other countries I may go as a tourist, but to India I come as a pilgrim. This is because India means to me Mahatma Gandhi, a truly great personality of the ages. India also means to me Pandit Nehru and his wise statesmanship and intellectuality that are recognised the world over.” – “ಬೇರೆ ದೇಶಗಳಿಗೆ ನಾನು ಪ್ರವಾಸಿಯಾಗಿ ಹೋಗಬಹುದು, ಆದರೆ ಭಾರತಕ್ಕೆ ಒಬ್ಬ ತೀರ್ಥಯಾತ್ರಿಯಾಗಿ ಬಂದಿದ್ದೇನೆ. ಇದು ಏಕೆಂದರೆ ಮಹಾತ್ಮಾ ಗಾಂಧಿಯನ್ನು ಸಾರ್ವಕಾಲಿಕ ಅದ್ಭುತ ವ್ಯಕ್ತಿಯೆಂದು ನಾನು ನಂಬಿದ್ದೇನೆ. ಅದೇ ರೀತಿ ಭಾರತವೆಂದರೆ, ಪಂಡಿತ್ ನೆಹರು ಮತ್ತು ಅವರ ವಿವೇಕತೆಯ ರಾಜನೀತಿ ಹಾಗೂ ಭೌದ್ಧಿಕತೆಯನ್ನು ಇಡೀ ವಿಶ್ವವು ಗುರುತಿಸಿದೆ.”

ಡಾ.ಕಿಂಗ್ ಅವರು ಭಾರತದ ದಲಿತರು ಅನುಭವಿಸುತ್ತಿರುವ ಅಸ್ಪೃಶ್ಯತೆ ಹಾಗೂ ಜಾತಿಭೇದವನ್ನುಅಮೆರಿಕದ ಕಪ್ಪು ಜನರು ಅನುಭವಿಸುತ್ತಿದ್ದ ವರ್ಣಭೇದಕ್ಕೆಸಾಮ್ಯತೆಯೆಂದು ಹೋಲಿಸಿದರು. ಡಾ.ಕಿಂಗ್ ಅವರು ಆಗ ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಹಾಗೂ ಅವರ ಕೆಲಸಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಇಲ್ಲವಾದಲ್ಲಿ ಡಾ.ಕಿಂಗ್ ಅವರು, ಆಗಿನ ಅಮೆರಿಕದ ಸಂವಿಧಾನಕ್ಕೆಹೋಲಿಸಿದಾಗ ನವಭಾರತದ ಸಂವಿಧಾನವು ಎಂಥಹ ಮಹತ್ವದ ಹಕ್ಕುಗಳನ್ನು ತನ್ನ ಪ್ರಜೆಗಳಿಗೆ ನೀಡಿದೆಯೆಂದು ಹೇಳುತ್ತಿದ್ದರು..

ಅಮೆರಿಕ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದದ್ದು ಜೂಲೈ 4, 1776ರಂದು. ಆದರೆ ಆ ಸ್ವಾತಂತ್ರ್ಯದಿಂದ ಸೃಷ್ಟಿಯಾದ ಸಂವಿಧಾನವು ಕೇವಲ ಬಿಳಿ ಜನರಿಗೆ ಹಕ್ಕುಗಳನ್ನುನೀಡಿತ್ತು. ಕಪ್ಪು ಜನರು ಬಿಳಿಯರ(slaves) ಗುಲಾಮರಾಗಿ ದುಡಿಯಬೇಕಿತ್ತು. ಡಿಸೆಂಬರ್ 18, 1865ರಂದು ಅಂಗೀಕರಿಸಿದ13ನೇ ತಿದ್ದುಪಡಿಯಿಂದ ಕಪ್ಪು ಜನರ ಈ ಗುಲಾಮಗಿರಿಯನ್ನು (Abolition of Slavery)ರದ್ದುಪಡಿಸಲಾಯಿತು. ಇದರ ನಂತರವೂ ಸಹ ಅಮೆರಿಕದ ಸಂವಿಧಾನದಲ್ಲಿ ಕಪ್ಪು ಜನರಿಗೆ ಸಮಾನತೆಯಿರಲಿಲ್ಲ. ಸಂವಿಧಾನದ 14ನೇ ಹಾಗೂ 15ನೇ ತಿದ್ದುಪಡಿಗಳು ಮತ್ತಷ್ಟು (ಪೌರತ್ವ, ಮತದಾನ) ಹಕ್ಕುಗಳನ್ನು ಕಪ್ಪು ಜನರಿಗೆ ನೀಡಿದವು. ಆದರೂ ಸಹ ಕಪ್ಪು ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಇರಲಿಲ್ಲ. ಆಗಸ್ಟ್ 18, 1920ರಲ್ಲಿ ಅಂಗೀಕರಿಸಿದ ಸಂವಿಧಾನದ 19ನೇ ತಿದ್ದುಪಡಿಯ ನಂತರವೇ ಲಿಂಗಭೇದವಿಲ್ಲದೆ, ವರ್ಣಭೇದವಿಲ್ಲದೆ ಎಲ್ಲ ಪ್ರಜೆಗೂ ಅಮೆರಿಕದಲ್ಲಿ ಮತ ಚಲಾಯಿಸುವ ಹಕ್ಕು ದಕ್ಕಿತು. ಈ ಎಲ್ಲ ಬದಲಾವಣೆಗಳಾದರು ಸಹ ಅಮೆರಿಕದ ಕಪ್ಪು ಜನರಿಗೆ ಸಮಾನತೆಯಿರಲಿಲ್ಲ.

ಬಸ್ಸುಗಳಲ್ಲಿ ಹಿಂದಿನ ಸೀಟುಗಳಲ್ಲಿ ಕುಳಿತುಕೊಂಡು,ಯಾರಾದರೂ ಬಿಳಿಯರು ಬಂದರೆ ತಮ್ಮ ಸೀಟು ಬಿಟ್ಟುಕೊಡಬೇಕಿತ್ತು. ತಮ್ಮ ಮಕ್ಕಳನ್ನು ಕೇವಲ ಕಪ್ಪು ಮಕ್ಕಳ ಶಾಲೆಗೇ ಕಳುಹಿಸಬೇಕಿತ್ತು, ಕುಡಿಯುವ ನೀರಿಗೆ ಹಾಗೂ ಮಲಮೂತ್ರ ವಿಸರ್ಜನೆಗೆ ಕಪ್ಪು ಜನರಿಗೆ ಪ್ರತ್ಯೇಕ ಸ್ಥಳಗಳಿದ್ದವು. ಅಮೆರಿಕದ ದಕ್ಷಿಣ(ಮಿಸಿಸಿಪ್ಪಿ,ಲೂಯಿಜಿಯಾನ, ಜಾರ್ಜಿಯಾ) ರಾಜ್ಯಗಳಲ್ಲಿ ಕಪ್ಪು ಜನರಿಗೆ ಸಾರ್ವಜನಿಕವಾಗಿ ಛಡಿ ಏಟು ನೀಡಲಾಗುತ್ತಿತ್ತು, ಮರಗಳಿಗೆ ನೇಣು ಹಾಕಲಾಗುತ್ತಿತ್ತು. ಇಂತಹ ಅಮಾನವೀಯ ಕಾನೂನಿನ ವಿರುದ್ಧ ಡಾ.ಕಿಂಗ್ ಮಾಡಿದ ಹೋರಾಟದ ಫಲವಾಗಿ ಜುಲೈ 2, 1964ರಂದು ಸಮಾನ ನಾಗರಿಕ ಕಾನೂನು ಜಾರಿಯಾಯಿತು – ಅಂದರೆ, ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕ 188 ವರ್ಷಗಳ ನಂತರ ಈ ದೇಶದ ಎಲ್ಲಾ ಪ್ರಜೆಗಳಿಗೂ ನಿಜವಾದ ಸಮಾನತೆಯ ಸ್ವಾತಂತ್ರ್ಯ ಸಿಕ್ಕಂತಾಯಿತು. ಆ ಸ್ವಾತಂತ್ರ್ಯದ ಫಲವನ್ನು ಎಲ್ಲ ಪ್ರಜೆಗಳೂ ಅನುಭವಿಸುವಂತಾಯಿತು.  

ಈ ಹಿನ್ನಲೆಯನ್ನು ಇಟ್ಟುಕೊಂಡು ನಾವು ಭಾರತಕ್ಕೆ ಸಿಕ್ಕ 1947ರ ಸ್ವಾತಂತ್ರ್ಯವನ್ನು ಹೋಲಿಸಿದಾಗ, ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಮಹತ್ವವು ಅರ್ಥವಾಗುತ್ತದೆ. ಮಹಾತ್ಮಾ ಗಾಂಧಿಯವರೇನೋ ತಮ್ಮ ಹೋರಾಟದ ಮೂಲಕ ಬ್ರಿಟಿಷರಿಂದ ಭಾರತದ ಗುಲಾಮಗಿರಿಯನ್ನು ಓಡಿಸಿದರು. ಆದರೆ, ಜಾತಿ, ಭಾಷೆ, ಪ್ರಾಂತ್ಯ, ಧರ್ಮ, ಆರ್ಥಿಕ ಅಸಾಮಾನತೆಯಿಂದ ತುಂಬಿ ತುಳುಕುತ್ತಿದ್ದ ಭಾರತದ ಸ್ವತಂತ್ರ ಪ್ರಜೆಗಳಿಗೆ ‘ಭಾರತೀಯತೆ’ಯನ್ನು ಹಾಗೂ ಸಮಾನ ಗೌರವವನ್ನು ನೀಡುವುದರಲ್ಲಿ ಡಾ.ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸ್ವತಃ ಅತಿ ಮೇಧಾವಿ ಚಿಂತಕರಾಗಿದ್ದ ಡಾ.ಅಂಬೇಡ್ಕರ್, ವಿಶ್ವದ ಅನೇಕ ದೇಶಗಳ ಸಂವಿಧಾನಗಳ ಆಳ ಅಧ್ಯಯನ ನಡೆಸಿ ರಚಿಸಿದ ಭಾರತದ ಸಂವಿಧಾನವು ಎಷ್ಟು ದೂರಗಾಮಿಯೆಂದು ಇಂದಿಗೂ ಗೌರವಿಸಲ್ಪಡುತ್ತಿದೆ.

ಅಮೆರಿಕದ ರಿಪಬ್ಲಿಕ್ (we the people ) ‘ವೀ ದಿ ಪೀಪಲ್’ ನಿಂದ ಹಿಡಿದು ಅನೇಕ ಸಂವಿಧಾನದ ಭಾಗಗಳನ್ನು ಆಯ್ದುಕೊಂಡು ರಚಿಸಿದ ಭಾರತದ ಸಂವಿಧಾನವು,ಅಮೆರಿಕದಲ್ಲಿದ್ದ ವರ್ಣಭೇದದಂತಹ ತಾರತಮ್ಯಗಳನ್ನು ಆಗಲೇ ಗುರುತಿಸಿದ್ದ ಅಂಬೇಡ್ಕರ್ ಅವರು, ಭಾರತದಲ್ಲಿದ್ದ ದಲಿತರ ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯ ತಾರತಮ್ಯಗಳನ್ನು ನಿವಾರಿಸಿ ಸಮಾನತೆಯ ಸಂವಿಧಾನ ರಚಿಸುವಲ್ಲಿ ಯಶಸ್ವಿಯಾದರು. ಭಾರತದ ಸಂವಿಧಾನ ಅಂಗೀಕಾರವಾಗಿದ್ದು ಜನವರಿ 26, 1950ರಂದು -ಸ್ವಾತಂತ್ರ್ಯ ಸಿಕ್ಕ ಕೇವಲ 2.5 ವರ್ಷಗಳಲ್ಲಿ!

ಅಮೆರಿಕದ ಕಪ್ಪು ಜನರಿಗೆ ಸಮಾನತೆಯು ದೀರ್ಘ ಹೋರಾಟದ ಮೂಲಕ,ಹಲವಾರು ಸಂವಿಧಾನದ ತಿದ್ದುಪಡಿನಂತರ ಹಂತ ಹಂತವಾಗಿ ದಕ್ಕಿದರೆ, ಭಾರತದ ದಲಿತರಿಗೆಹಾಗೂ ಶೋಷಿತರಿಗೆ, ಜಾತಿಭೇದವನ್ನು ದೂರ ಮಾಡಿ ಸಮಾನತೆಯನ್ನು ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲಕ ಪ್ರಾರಂಭದಲ್ಲಿಯೇ ನೇರವಾಗಿ ದಕ್ಕಿದ್ದು ಭಾರತದ ಸಂವಿಧಾನ ರಚಕರವಿಶೇಷತೆ ಹಾಗೂ ಹೆಮ್ಮೆಯ ವಿಷಯ. ಸಮಾನತೆಯನ್ನು ಕಾಣಲು ಅಮೆರಿಕದ ಕಪ್ಪು ಜನರು ದೀರ್ಘ188 ವರ್ಷಗಳ ಕಾಯುವಿಕೆಯೆಲ್ಲಿ, ಭಾರತದ ದಲಿತರ 2.5 ವರ್ಷದ ಕಾಯುವಿಕೆ ಎಲ್ಲಿ! ಅಂಬೇಡ್ಕರ್ ಅವರು ನೀಡಿದ ಭಾರತದ ಸಂವಿಧಾನದ ಮಹತ್ವ, ಅವರು ಪಟ್ಟಂತಹ ಶ್ರಮ ಇದರಿಂದ ನಮಗೆ ಅರಿವಾಗುತ್ತದೆ.

ಮತ ಚಲಾಯಿಸುವ ಹಕ್ಕು, ಆಸ್ತಿ ಹೊಂದುವ ಹಕ್ಕು, ಸಮಾನ ನ್ಯಾಯ, ಮಹಿಳೆಯರಿಗೆ ಲಿಂಗಭೇದವಿಲ್ಲದ ಸಮಾನತೆ, ಹೀಗೆ ಬೇರೆ ದೇಶಗಳ ಸಂವಿಧಾನಗಳಲ್ಲಿದ್ದ ನ್ಯೂನತೆಗಳನ್ನು ಅಧ್ಯಯನ ಮಾಡಿ ಭಾರತದ ಪ್ರಜೆಗಳಿಗೆ ಗಾಂಧಿ ತಂದುಕೊಟ್ಟ ಸ್ವಾತಂತ್ರ್ಯದ ನಿಜವಾದ ಫಲವನ್ನು ಅನುಭವಿಸುವ ಸಂವಿಧಾನ ಗ್ರಂಥವನ್ನು ಅಂಬೇಡ್ಕರ್ ನೀಡಿದರು. ಅಂಬೇಡ್ಕರ್ ಅವರು ಭಾರತದ ಹೊರಗಿನ ದೇಶಗಳ ಸಂವಿಧಾನಗಳಿಂದ ಎಷ್ಟು ವಿಷಯ ಗ್ರಹಿಸಿದರೋ ಅಷ್ಟೇ ಭಾರತದ ಒಳಗಿನ ಇತಿಹಾಸದಿಂದಲೂ ಸಂಗ್ರಹಿಸಿದರು. ಬುದ್ಧ, ಬಸವ, ನಾರಾಯಣ ಗುರು, ಕಬೀರರಂಥಹ ಮಹನೀಯರು ಹಲವಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಬೋಧಿಸಿದ ಸಮಾನತೆ, ತುಳಿತಕ್ಕೆಒಳಗಾದವರಿಗೆ ಸಹಾಯ, ಅಂತರ್ವೇಶನ (inclusion ), ಭ್ರಾತೃತ್ವ ಇವೆಲ್ಲವುಗಳನ್ನೂ ಸಂವಿಧಾನದಲ್ಲಿ ಅಳವಡಿಸಿದರು. ಇಲ್ಲಿ ಏಕೆ ಈ ವಿಷಯಗಳು ಪ್ರಮುಖವಾಗುತ್ತವೆಂದರೆ, ಹೇಗೆ ಭಾರತದಲ್ಲಿ ಈ ಸಮಾಜ ಸುಧಾರಕರ ಅನುಭವ ಹಾಗೂ ಇತಿಹಾಸ ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸುವಲ್ಲಿ ಸಹಾಯವಾಯಿತೋ, ಹಾಗೆಯೇ, ಅಮೆರಿಕದ ಸಂವಿಧಾನ ರಚನೆಕಾರರಿಗೆ ಆ ದೇಶದ ಇತಿಹಾಸದಲ್ಲಿ ಅನುಭವ ಜ್ಞಾನ ಹಂಚಲು ಇಂತಹ ಭೋಧನೆ ಮಾಡಿದಂತಹ ಮಹಾನುಭಾವರೇ ಇರಲಿಲ್ಲ. ಆದ್ದರಿಂದಲೇ, ಅಮೆರಿಕದ ಪ್ರಾರಂಭಿಕ ಸಂವಿಧಾನದಲ್ಲಿ ಪ್ರಜೆಗಳು ಅಸಮಾನತೆ, ವರ್ಣಭೇದ ಎದುರಿಸಬೇಕಾಯಿತು. ಈ ನಿಟ್ಟಿನಲ್ಲಿ ನೋಡಿದಾಗ ಡಾ, ಕಿಂಗ್ ಅವರು ಅಮೆರಿಕ ದಸ್ವಾತಂತ್ರ್ಯಾ ನಂತರದ ಪ್ರಮುಖ ಸಮಾಜ ಸುಧಾರಕರಾಗಿ ನಮಗೆ ಕಾಣುತ್ತಾರೆ. ಮೂಲಭೂತವಾದಿಗಳು ತಮ್ಮ ಅಸ್ತಿತ್ವ ಹಾಗೂ ಬಲಾಢ್ಯತೆಯನ್ನು ಅಲ್ಲಾಡಿಸುವಂಥಹ ಈ ಬದಲಾವಣೆಗಳನ್ನು ಆಗಲೂ ವಿರೋಧಿಸಿದರು, ಈಗಲೂ ವಿರೋಧಿಸುತ್ತಿದ್ದಾರೆ. ಆದರೆ, ಭಾರತದ ಹಾಗೂ ಅಮೆರಿಕದ ಸಂವಿಧಾನಗಳು, ಈ ಬಲಾಢ್ಯರಿಗೆ ತಡೆಗೋಡೆಗಳಾಗಿ ಭದ್ರವಾಗಿ ನಿಂತಿವೆ.

ಈ ಸಮಾನತೆ, ಭ್ರಾತೃತ್ವತೆಗಳು ಭಾರತೀಯ ಸಂಸ್ಕೃತಿಗೆ ಹೊಸತೇನಲ್ಲ. ಸಮಾನತೆಗಾಗಿ ಶಾಂತಿಯುತ ಅಹಿಂಸಾತ್ಮಕ ಹೋರಾಟವು, ಶತಮಾನಗಳ ಮೊದಲಿಗೆ ಭಾರತದಲ್ಲಿ ಹುಟ್ಟಿಕೊಂಡು, ವಿಶ್ವದ ಇತರೆಡೆಗಳಿಗೆ ಪಸರಿಸಿತು. ಬುದ್ಧನ ನಂತರ, 12 ನೇಶತಮಾನದಲ್ಲಿಯೇ ಬಸವಣ್ಣ, ಅಕ್ಕ ಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಹಾಗೂ ಇತರ ಸಮಾಜ ಸುಧಾಕರರು ಸಮಾನತೆಯನ್ನು, ಅಸ್ಪೃಶ್ಯತೆಯ ವಿರೋಧವನ್ನು, ಮಹಿಳಾ ಸಬಲೀಕರಣವನ್ನು ತಮ್ಮ ವಚನಗಳ ಮೂಲಕ ಭೋದಿಸಿದರು. ಆಗ ಪಟ್ಟಬದ್ಧ ಮೂಲಭೂತವಾದಿಗಳು ಹೇಗೆ ಜಾತಿ ವ್ಯವಸ್ಥೆಯ ಮೂಲಕ ಇಂತಹ ಸುಧಾರಣೆಗಳನ್ನು ತಡೆದರೋ, ಅದೇ ಮಾರ್ಗವನ್ನು ನಂತರದ ಬ್ರಿಟಿಷರೂ ಸಹ ಅನುಸರಿಸಿ ಪ್ರಾಂತ್ಯ, ಧರ್ಮ, ಜಾತಿ, ವರ್ಗಭೇದಗಳ ಮೂಲಕ ಭಾರತವನ್ನು ಒಡೆದು ಆಳಿದರು. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹೊಸ ಚಿಂತನೆಯ ಹೋರಾಟ ಮಾರ್ಗ ಬೇಕಿದ್ದಿತ್ತು. ಈ ಹೋರಾಟ ಮಾರ್ಗದಲ್ಲಿ ವರ್ಗ, ಅಸ್ಪೃಶ್ಯತೆ, ಪ್ರಾಂತ್ಯ, ಭಾಷೆ, ಧರ್ಮ, ಜಾತಿಗಳಿಂದ ಹಂಚಿ ಚೂರಾಗಿದ್ದ ಇಡೀ ಭಾರತ ದೇಶವನ್ನುಒಗ್ಗೂಡಿಸಬೇಕಿತ್ತು.

ಇದನ್ನು ಅರಿತ ಮಹಾತ್ಮಾ ಗಾಂಧಿಯವರು, ಅಲ್ಲಿಯವರೆಗೂ ಬ್ರಿಟಿಷರ ವಿರುದ್ಧ ಯಾರೂ ಉಪಯೋಗಿಸದಂತಹ ಅಹಿಂಸಾತ್ಮಕ ಹಾಗೂ ಅಸಹಕಾರ ಚಳವಳಿಯ ಮಾರ್ಗವನ್ನು ಭಾರತೀಯರಿಗೆ ಪರಿಚಯಿಸಿ ಒಗ್ಗೂಡಿಸಿದರು. ಗಾಂಧೀಜಿಯವರ ತಂದೆ ಆಗಿನ ಪೋರ್ ಬಂದರ್ ರಾಜ್ಯದ ದೀವಾನರಾಗಿದ್ದರು ಹಾಗೂ ಹಣವಂತ ಕುಟುಂಬದವರಾಗಿದ್ದರು. ನಂತರದ ದಿನಗಳಲ್ಲಿ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಸ್ವತಃ ತಾವೇ ಯಶಸ್ವಿ ಬ್ಯಾರಿಸ್ಟರ್ ಆಗಿದ್ದರೂ ಸಹ, ಇವೆಲ್ಲವನ್ನೂ ತ್ಯಜಿಸಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ತಮ್ಮನ್ನೇ ಮುಡುಪಾಗಿಸಿಕೊಂಡರು. ಅಲ್ಲಿಯವರೆಗೆ ವಿಶ್ವದಲ್ಲಿಯೇ ಸ್ವಾತಂತ್ರ್ಯಕ್ಕೋಸ್ಕರ ಅಹಿಂಸಾತ್ಮಕ ಮಾರ್ಗ ಬಳಸಿದ ಇತಿಹಾಸವಿರಲಿಲ್ಲ. ಅಂದರೆ, ಅಮೆರಿಕದ ಕಪ್ಪು ಜನರು ಸಮಾನತೆಗಾಗಿ 1960ರ ದಶಕದಲ್ಲಿ ಡಾ.ಕಿಂಗ್ ಅವರ ನೇತೃತ್ವದಲ್ಲಿ ಅಳವಡಿಸಿದ ಹೋರಾಟ ಮಾರ್ಗವನ್ನು ಗಾಂಧಿ ಹಾಗೂ ಅಂಬೇಡ್ಕರ್ 1920ರ ದಶಕದಲ್ಲೇ ಮೊದಲಿಗೆ ಭಾರತದಲ್ಲಿ ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮುಂಚಿನಿಂದಲೂ, 1857ರಿಂದಲೂ ಸಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಳು ನಡೆಯುತ್ತಲೇ ಇದ್ದವು. ಆದರೆ ಅವು ಯಾವುವೂ ಇಡೀ ಭಾರತದ ಪ್ರಜೆಗಳನ್ನು ಹಾಗೂ ಪ್ರಾಂತ್ಯಗಳನ್ನು ಒಗ್ಗೂಡಿಸಿ ಶಕ್ತಿಯುತವಾಗಿ ಬ್ರಿಟಿಷರಿಗೆ ಸವಾಲಾಗಿರಲಿಲ್ಲ. ಇಲ್ಲಿ , ಗಾಂಧೀಜಿ ನೀಡಿದ ಹೊಸ ಚಿಂತನೆಗಳು ಹಾಗೂ ಅವರು ದೇಶಕ್ಕಾಗಿ ತನ್ನ ಆಸ್ತಿ, ಅಂತಸ್ತು, ಸರ್ವಸ್ವದ ತ್ಯಾಗವನ್ನು ಭಾರತದ ಪ್ರಜೆಗಳು ಅರಿಯಬೇಕು. ಗಾಂಧೀಜಿಯವರ ಈ ಹೊಸ ಚಿಂತನೆಗಳು ಬ್ರಿಟಿಷರಿಗೆ ಸವಾಲಾಗಿ, ಅವರು ಕೊನೆಗೆ ದೇಶ ಬಿಟ್ಟು ಹೋಗುವಂತಹ ಸ್ಥಿತಿ ಸೃಷ್ಟಿಯಾಯಿತು. ಡಾ.ಕಿಂಗ್ ಸಹ ಅಮೆರಿಕದ ಕಪ್ಪು ಜನರ ಸಮಾನತೆಗೆ ಇದೆ ಮಾರ್ಗವನ್ನು ಅನುಸರಿಸಿದರು

ಭಾರತದ ಭೇಟಿಯಲ್ಲಿದ್ದಾಗ ಕೇರಳ ರಾಜ್ಯದಲ್ಲಿ ಕಿಂಗ್ ಅವರ ಮನಸ್ಸಿಗೆ ಘಾಸಿಗೊಳಿಸುವಂತಹ ಒಂದು ಘಟನೆಯು ನಡೆದು, ಮುಂದೆ ಡಾ.ಕಿಂಗ್ ಅವರ ಜೀವನದ ದಿಕ್ಕನ್ನೇ ಬದಲಿಸಿತೆಂದು ಅವರೇ ಹೇಳಿದ್ದಾರೆ. ಕೇರಳದ ಆಗಿನ ಮುಖ್ಯಮಂತ್ರಿ ಶ್ರೀ. ನಂಬೂದ್ರಿಪಾದ್ ಅವರು ನೀಡಿದ ಕೆಂಪು ಕಂಬಳಿಯ ಸ್ವಾಗತ ಸ್ವೀಕರಿಸಿ, ಭರ್ಜರಿ ಭೋಜನವನ್ನು ಮುಗಿಸಿ ಡಾ. ಕಿಂಗ್ ಅವರು ತಿರುವಂತಪುರದ ಹೆಚ್ಚಿನ ಸಂಖ್ಯೆಯ ದಲಿತ ಮಕ್ಕಳು ಕಲಿಯುತ್ತಿದ್ದ ಸರಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದರು. ಆಶಾಲೆಯ ಪ್ರಿನ್ಸಿಪಾಲರು, ಡಾ.ಕಿಂಗ್ ಅವರನ್ನು ಪರಿಚಯಿಸುತ್ತಾ “ಮಕ್ಕಳೇ, ಅಮೆರಿಕದಿಂದ ಬಂದಿರುವ ಒಬ್ಬ ಸಹ ದಲಿತನನ್ನು ತಮಗೆ ಪರಿಚಯಿಸುತ್ತಿದ್ದೇನೆ” ಎಂದರು. ಈ ಘಟನೆಯನ್ನು ಆರು ವರ್ಷದ ನಂತರ 1965ರಲ್ಲಿ ವಿವರಿಸುತ್ತಾ ಡಾ.ಕಿಂಗ್ “ಆ ಪ್ರಿನ್ಸಿಪಾಲರು ನನ್ನನ್ನು ಒಬ್ಬ ಅಸ್ಪೃಶ್ಯನೆಂದು ಸಂಭೋದಿಸಿದ್ದು ಕೇಳಿ ಒಂದು ಕ್ಷಣ ನನಗೆ ಅಳುಕು ಹಾಗೂ ಆಘಾತವಾಯಿತು. ಆ ಕ್ಷಣ ನನಗೆ ವಿಶ್ವದ ಶ್ರೀಮಂತ ದೇಶವಾದ ಅಮೆರಿಕದಲ್ಲಿ ನನ್ನ 20 ಮಿಲಿಯನ್ ಕಪ್ಪು ಸಹೋದರ ಸಹೋದರಿಯರು ಎಂಥಹ ನಿರ್ಗತಿಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ಅರಿವಾಯಿತು. ಆ ಕ್ಷಣ ನಾನು ಅಂದುಕೊಂಡೆ – ಹೌದು, ನಾನು ಒಬ್ಬ ಅಸ್ಪೃಶ್ಯ ಹಾಗೂ ಅಮೆರಿಕದಲ್ಲಿರುವ ಎಲ್ಲ ಕಪ್ಪು ಪ್ರಜೆಯೂ ಅಸ್ಪೃಶ್ಯ”. ತಮ್ಮ ಭಾರತದ ಪ್ರವಾಸದ ಕೊನೆಯಲ್ಲಿ ಡಾ.ಕಿಂಗ್ ಅವರು ಬರೆಯುತ್ತಾ “ಭಾರತದಿಂದ ಒಂದು ಧೃಡ ನಿರ್ಧಾರದಿಂದ ಹೊರಡುತ್ತಿದ್ದೇನೆ – ನನ್ನ ಕಪ್ಪು ಜನರ ಸಮಾನತೆಗೆ ಹೋರಾಡಲು ಗಾಂಧಿಯವರು ತೋರಿಸಿದ ಅಹಿಂಸಾತ್ಮಕ ಚಳವಳಿಯೊಂದೇ ಮಾರ್ಗ”. ಡಾ.ಕಿಂಗ್ ಅವರು ತಮ್ಮ ಕೊನೆಯ ಉಸಿರಿರುವ ವರೆಗೂ ಅಹಿಂಸಾತ್ಮಕ ಹೋರಾಟವನ್ನು ಮುಂದುವರಿಸಿದರು.

ಆಗಸ್ಟ್ 28, 1963 ರಂದು ವಾಷಿಂಗ್ಟನ್ ನಗರದಲ್ಲಿ ಸೇರಿದ್ದ 2.5 ಲಕ್ಷ ಜನರ ಮುಂದೆ ಇದೇ ಮಾತನ್ನು ತಮ್ಮ( I have a dream ) “ಐ ಹ್ಯಾವ್ ಎ ಡ್ರೀಮ್” ಭಾಷಣದಲ್ಲೂ ಪುನರುಚ್ಚರಿಸಿದರು. 1964ರಲ್ಲಿ ನಾಗರಿಕ ಸಮಾನ ಹಕ್ಕು ಕಾನೂನು ಅಂಗೀಕಾರವಾದ ನಂತರ ಡಾ.ಕಿಂಗ್ ಅಲ್ಲಿಗೇ ಸುಮ್ಮನಾಗದೆ, ಚಿಕಾಗೊ ನಗರದ ಕಪ್ಪು ಜನರ ವಸತಿ ಸಮಸ್ಯೆ ಬಗ್ಗೆ, ವಿಯೆಟ್ನಾಂ ಯುದ್ಧದ ವಿರೋಧ ಹಾಗೂ 1968ರಲ್ಲಿ ಬಡ ಜನರ ಆರ್ಥಿಕ ನ್ಯಾಯಕ್ಕಾಗಿ (POOR PEOPLES CAMPAIGN )”ಬಡ ಜನರ ಹೋರಾಟ” ಮಾಡುತ್ತಾ ತಮ್ಮ ಕೊನೆಯ ಉಸಿರು ಇರುವವರೆಗೂ ಕಪ್ಪು ಜನರ ಪರವಾಗಿ ಹೋರಾಟ ಮುಂದುವರಿಸಿದರು. ಕಪ್ಪು ಜನರನ್ನು ಶತಮಾನಗಳಿಂದ ಗುಲಾಮಗಿರಿಯಲ್ಲಿಟ್ಟು, ಅವರ ಶಕ್ತಿ ಸಾಮರ್ಥ್ಯ ಬಳಸಿಕೊಂಡು ಬಲಿಷ್ಠ, ಶ್ರೀಮಂತ ಅಮೆರಿಕ ಕಟ್ಟಿದ ಬಿಳಿಯರ ದಬ್ಬಾಳಿಕೆಗೆ ಸವಾಲಾಗಿ ನಿಂತು ತಮ್ಮ ಪ್ರಾಣವನ್ನೇ ಬಲಿಕೊಟ್ಟರು.1964ರಲ್ಲಿ ಡಾ.ಕಿಂಗ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತವನ್ನೇ ಆಗಲಿ, ಇತರ ಯಾವುದೇ ದೇಶಗಳನ್ನೇ ಆಗಲಿ ಒಗ್ಗೂಡಿಸಿ, ಯಶಸ್ವಿ ಶಾಂತಿಯ ಹಾದಿಯಲ್ಲಿ ಮುನ್ನಡೆಸುವುದು ಭ್ರಾತೃತ್ವ, ಸಮಾನತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಮಹಿಳಾ ಗೌರವ/ಸಬಲೀಕರಣಗಳಿಂದ ಮಾತ್ರ. ಇಲ್ಲವಾದಲ್ಲಿ ಬ್ರಿಟಿಷರು ಹೇಗೆ ನಮ್ಮನ್ನು ಒಡೆದು ಆಳಿದರೋ ಅದೇ ರೀತಿಯಲ್ಲಿ ಪುನಃ ಪಟ್ಟಬದ್ಧ ಹಿತಾಶಕ್ತಿಗಳು ಹಾಗೂ ಮೂಲಭೂತವಾದಿಗಳು ನಮ್ಮನ್ನು ಜಾತಿ, ಲಿಂಗ, ವರ್ಣ, ಭಾಷೆ, ಧರ್ಮ,ವರ್ಗ, ಪ್ರಾಂತೀಯತೆ–ಹೀಗೆ ಹಲವಾರು ಅಪಾಯಕಾರಿ ಷಯಗಳ ಮೂಲಕ ಪ್ರಚೋದಿಸಿ ಸುಭಧ್ರ ದೇಶವನ್ನು ಒಡೆದು ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ.ಇಂತಹ ಒಡೆದು ಆಳುವವರ ಕ್ರಿಯೆಗಳಿಗೆ ಪ್ರಜೆಗಳು ಬಲಿಯಾಗದೆ ಸದಾ ಎಚ್ಚರದಿಂದಿರಬೇಕಾಗಿದೆ.

ಮಹತ್ತರ ಬದಲಾವಣೆಗಳ ಪ್ರೇರಕರಾದ ಗಾಂಧಿ, ಅಂಬೇಡ್ಕರ್, ಮಂಡೇಲಾ, ಡಾ.ಕಿಂಗ್ ಅವರ ತ್ಯಾಗ, ದೂರದೃಷ್ಠಿತ್ವವನ್ನು ಇಂದಿನ ಜನಾಂಗ ಅರಿತು, ಅಧ್ಯಯನ ಮಾಡಿ ಚಿಂತನೆ ಮಾಡಬೇಕಿದೆ.
ಅಟ್ಲಾಂಟಾ ನಗರದಲ್ಲಿರುವ ಪ್ರತಿಯೊಬ್ಬ ಕನ್ನಡಿಗನೂ ಒಮ್ಮೆಯಾದರೂ ತಮ್ಮ ಕುಟುಂಬ ಸಮೇತ ಡಾ.ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಸ್ಮಾರಕವನ್ನು ನೋಡಿಬಂದರೆ ಅವರ ಹೋರಾಟ ಹಾಗೂ ಆ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರ ಜೀವನ ಸ್ಫೂರ್ತಿಯ ಮಹತ್ವದ ಅರಿವಾಗುತ್ತದೆ.ಅಮೆರಿಕದ ನಿವಾಸಿಗಳಾದ ನಮಗೆ ಈಗ ಸಿಕ್ಕಿರುವ ಸಮಾನತೆ, ಗೌರವಕ್ಕೆ ಡಾ.ಮಾರ್ಟಿನ್ ಲೂಥರ್ ಕಿಂಗ್ ಅವರ ತ್ಯಾಗ, ಹೋರಾಟವೇ ಕಾರಣವೆಂದು ಅರಿವಾಗುತ್ತದೆ.

ಬರಹಗಾರರ ಕಿರು ಪರಿಚಯ:

ಕೆ.ಆರ್.ಶ್ರೀನಾಥ್ ತಮ್ಮ ಪತ್ನಿ ಸುಮನ್ ಹಾಗೂ ಪುತ್ರ ಶ್ರೇಯಸ್ ಜೊತೆ  ಅಟ್ಲಾಂಟಾ ನಗರದಲ್ಲಿ ಕಳೆದ 23 ವರ್ಷಗಳಿಂದ ವಾಸವಿದ್ದು, ಕನ್ನಡದ ಪತ್ರಿಕೆಗಳಲ್ಲಿ ಇವರ ವರದಿ ಹಾಗೂ ಬರಹಗಳು ಪ್ರಕಟಗೊಂಡಿವೆ. ಅರೆನಿವೃತ್ತಿ ಜೀವನ ಸಾಗಿಸುತ್ತಿರುವ ಶ್ರೀನಾಥ್, ಅಟ್ಲಾಂಟಾ ನಗರದ ಕನ್ನಡಿಗ ರಿಯಾಲ್ಟರ್ (REALTOR) ಆಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. (Email:[email protected])(Cell: 678-772-3208)

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories