ದುಬೈ: ರವಿವಾರ ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ‘ಬ್ಯಾರಿ ಮೇಳ-2025’ಕ್ಕೆ ಕ್ಷಣಗಣನೆ ಆರಂಭವಾಗಿದೆ.
ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳಕ್ಕೆ ಭರ್ಜರಿ ಸಿದ್ಧತೆ ಪೂರ್ಣಗೊಂಡಿದ್ದು, ಸುಮಾರು 10 ಸಾವಿರಕ್ಕೂ ಮಿಕ್ಕಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಆಯೋಜಕರು ಕೈಗೊಂಡಿದ್ದಾರೆ.




ಫೆಬ್ರವರಿ 9ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ, ಬಿಸಿನೆಸ್ ಸೆಮಿನಾರ್, ಪ್ರಶಸ್ತಿ ಪ್ರದಾನ, ಮಹಿಳೆಯರು-ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಖಾದ್ಯ ಪ್ರಿಯರಿಗೆ ಕರ್ನಾಟಕ ಕರಾವಳಿಯ ವಿವಿಧ ತಿಂಡಿ ತಿನಸುಗಳ, ಹಲವು ಬಗೆಯ ವಸ್ತುಗಳ ಸುಮಾರು 70 ಮಳಿಗೆಗಳು ಈ ಮೇಳಕ್ಕೆ ಇನ್ನಷ್ಟು ಮೆರುಗು ತರಲಿದೆ.
ಬ್ಯಾರಿ ಮೇಳದಲ್ಲಿ ಪಾಲ್ಗೊಳ್ಳುವುದಕ್ಕೆ ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬೆಂಗಳೂರು ಶಾಂತಿ ನಗರ ಶಾಸಕ N.A ಹಾರಿಸ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಕರ್ನಾಟಕ ರಾಜ್ಯ ಆಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್‌ನ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ ಸೇರಿದಂತೆ ಹಲವು ಗಣ್ಯರು ದುಬೈಗೆ ಆಗಮಿಸದ್ದಾರೆ. ಅವರನ್ನು ಸಂಘಟಕರು ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ.


ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರ ನೇತೃಯ್ವದಲ್ಲಿ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಅಡ್ಡೂರು, ‘ಬ್ಯಾರಿ ಮೇಳ ಸಂಚಾಲಕ, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಷಾ ಮಂತೂರ್ ಹಾಗು ಸಹ ಸಂಚಾಲಕ ಮುಶ್ತಾಕ್ ಕದ್ರಿ(ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ), ಬಿಸಿಸಿ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಬ್ಯಾರಿ ಮೇಳ ಪ್ರಧಾನ ಸಂಚಾಲಕ(ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ) ಇಮ್ರಾನ್ ಖಾನ್ ಎರ್ಮಾಳ್, ಕೋಶಾಧಿಕಾರಿ ಹಂಝ ಅಬ್ದುಲ್ ಖಾದರ್ ಅವರು ಬ್ಯಾರಿ ಮೇಳಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಈ ತಂಡ ಈಗಾಗಲೇ ಮಾಡಿಕೊಂಡಿದೆ.
ಯುಎಇಯಲ್ಲಿ ಸುಮಾರು 1,80,000 ಕನ್ನಡಿಗರಿದ್ದು, ಅದರಲ್ಲಿ ಸುಮಾರು 45,000 ಬ್ಯಾರಿ ಸಮುದಾಯದವರಿದ್ದಾರೆ. ಈ ಮೇಳದಲ್ಲಿ ಕನ್ನಡಿಗರೂ ಒಳಗೊಂಡಂತೆ ಬ್ಯಾರಿ ಕುಟುಂಬಗಳನ್ನು ಒಂದೆಡೆ ಸೇರಿಸುವ ಮೂಲಕ ಈ ‘ಬ್ಯಾರಿ ಮೇಳ – 2025ʼವನ್ನು ಅದ್ದೂರಿಯಾಗಿ ನಡೆಸಲು ಹಿದಾಯತ್ ಅಡ್ಡೂರು ಮುಂದಾಗಿದ್ದಾರೆ.
ಜಗತ್ತಿನಾದ್ಯಂತ ಇರುವ ಬ್ಯಾರಿ ಉದ್ಯಮಿಗಳು ರವಿವಾರ ನಡೆಯುವ ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯುಎಇನಲ್ಲಿರುವ ಬ್ಯಾರಿ ಉದ್ಯಮಿಗಳಲ್ಲದೆ, ಸೌದಿ ಅರೇಬಿಯಾ, ಕುವೈತ್, ಖತಾರ್, ಬಹರೈನ್, ಒಮಾನ್ ಸೇರಿದಂತೆ ಜಿಸಿಸಿ(ಗಲ್ಫ್) ದೇಶಗಳು ಮತ್ತು ಭಾರತದ ಉದ್ಯಮಿಗಳು ಬ್ಯಾರಿ ಮೇಳದಲ್ಲಿ ಭಾಗವಹಿಸುವುದಕ್ಕಾಗಿ ಈಗಾಗಲೇ ದುಬೈಗೆ ಬಂದಿಳಿದಿದ್ದಾರೆ.
ಮೇಳದಲ್ಲಿ ಮಹಿಳೆಯರ ಅಡುಗೆ ಸ್ಪರ್ಧೆ, ಉದ್ಯೋಗ ಮೇಳ, ಬ್ಯುಸಿನೆಸ್ ಸೆಮಿನಾರ್, ಬ್ಯುಸಿನೆಸ್ ಅವಾರ್ಡ್, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾರಿ ಜಾನಪದ ಕಲೆಗಳಾದ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್, ಅರೆಬಿಕ್ ಸಾಂಸ್ಕೃತಿಕ ನೃತ್ಯ, ‘ಪೋಕರಾಕ BA -LLB’ ಹಾಸ್ಯಮಯ ನಾಟಕ, ಕಾಮಿಡಿ ಕಾರ್ಯಕ್ರಮ, ಮಕ್ಕಳ ಮನೋರಂಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ.